ವಾಸು ನಾನು ಪಕ್ಕಾ ಕಮರ್ಷಿಯಲ್ ಚಿತ್ರವನ್ನು ಸ್ವತಃ ನಿರ್ಮಾಣ ಮಾಡಿ ನಟಿಸಿದ್ದವರು ಅನೀಶ್ ತೇಜೇಶ್ವರ್. ಈ ಚಿತ್ರ ನಿರೀಕ್ಷೆಯಂತೆಯೇ ಒಂದು ಮಟ್ಟಕ್ಕೆ ಗೆದ್ದಿದೆ. ಅದಾಗಲೇ ಅನೀಶ್ ಹೊಸಾ ಚಿತ್ರವೊಂದಕ್ಕೆ ರೆಡಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಅವರು ಶುದ್ಧ ಹಳ್ಳಿ ಸೀಮೆಯ ಕಥೆಯೊಂದರ ನಾಯಕನಾಗ ಹೊರಟಿದ್ದಾರೆ!
ಅಂದಹಾಗೆ ಅನೀಶ್ ತೇಜೇಶ್ವರ್ ಅವರ ಹೊಸಾ ಚಿತ್ರದ ನಿರ್ದೇಶಕರ್ಯಾರೆಂಬುದೂ ಕೂಡಾ ಕುತೂಹಲದ ವಿಚಾರವೇ. ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ರೈಟರ್ ಅನ್ನಿಸಿಕೊಂಡಿರೋ ಪ್ರತಿಭಾವಂತ ಸಂಭಾಷಣೆಕಾರ ಪ್ರಶಾಂತ್ ರಾಜಪ್ಪ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಶರಣ್ ಅಭಿನಯದ ಚಿತ್ರಗಳಿಗೆ ಸಂಭಾಷಣೆಯ ಮೂಲಕವೇ ಕಾಮಿಡಿ ಕಿಕ್ ನೀಡಿದ್ದ ಪ್ರಶಾಂತ್ ರಾಜಪ್ಪ ಅವರಿಗಿರೋ ಸಿನಿಮಾ ಧ್ಯಾನ, ಶ್ರದ್ಧೆಯ ಬಗ್ಗೆ ಎಲ್ಲರಲ್ಲೂ ಮೆಚ್ಚುಗೆಯಿದೆ. ಅದು ಅವರ ಶಕ್ತಿಯೂ ಹೌದು.
ನಿರ್ದೇಶಕನಾಗೋ ಕನಸು ಹೊತ್ತು ಬಂದು ಸಂಭಾಷಣೆಕಾರರಾಗಿ ನೆಲೆ ನಿಂತಿರುವ ಪ್ರಶಾಂತ್ ಪಕ್ಕಾ ಹಳ್ಳ್ಳಿ ಘಮಲಿನ ಕಥೆಯೊಂದರ ಮೂಲಕ ತಮ್ಮ ಮೊದಲ ಚಿತ್ರ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಅದಕ್ಕೆ ಯಾವ ಪಾತ್ರಕ್ಕಾದರೂ ಒಗ್ಗಿಕೊಳ್ಳಬಲ್ಲ ಛಾತಿ ಹೊಂದಿರೋ ಅನೀಶ್ ತೇಜೇಶ್ವರ್ ಅವರು ನಾಯಕನಾಗಿಯೂ ಆಯ್ಕೆಯಾಗಿದ್ದಾರೆ.
ಹಳ್ಳಿಯ ಒಂದಿಡೀ ಚಿತ್ರಣದೊಂದಿಗೇ ಅದರ ಆಸುಪಾಸಿನ ಪೇಟೆಗಳನ್ನು ಬಿಟ್ಟರೆ ಮತ್ಯಾವುದರತ್ತಲೂ ಹೊರಳಿಕೊಳ್ಳದಂತೆ ಈ ಚಿತ್ರ ರೂಪುಗೊಳ್ಳಲಿದೆಯಂತೆ. ಹಾಡುಗಳಲ್ಲಿಯೂ ಕೂಡಾ ನಗರಗಳ ನೆರಳು ಸೋಕೋದಿಲ್ಲ ಎಂಬುದು ಮತ್ತೊಂದು ವಿಶೇಷ. ಇದೀಗ ಈ ಚಿತ್ರದ ಸ್ಕ್ರಿಫ್ಟ್ ಕೆಲಸ ನಡೆಯುತ್ತಿದೆ. ತಾಂತ್ರಿಕ ವರ್ಗದ ಆಯ್ಕೆಯೂ ಆಗಿದೆ. ನಾಯಕಿಗಾಗಿ ಹುಡುಕಾಟ ನಡೆಯುತ್ತಿದೆ.
ಗಣೇಶನ ಹಬ್ಬದಂದು ಈ ಚಿತ್ರದ ಟೈಟಲ್ ಲಾಂಚ್ ಮಾಡಲು ಪ್ರಶಾಂತ್ ರಾಜಪ್ಪ ಮತ್ತು ಅನೀಶ್ ತೇಜೇಶ್ವರ್ ತಯಾರಿ ನಡೆಸುತ್ತಿದ್ದಾರೆ.
#
No Comment! Be the first one.