ಅನಿಲ್ ಕಪೂರ್ ಬೆಳ್ಳಿತೆರೆಗೆ ಪರಿಚಯವಾಗಿ 40 ವರ್ಷಗಳಾಗಿವೆ. ಅವರ ಪುತ್ರಿ ಸೋನಂ ಕಪೂರ್ ತೆರೆಗೆ ಬಂದು ೧೩ ವರ್ಷ. ಇಬ್ಬರೂ ಒಟ್ಟಿಗೆ ತೆರೆಹಂಚಿಕೊಳ್ಳಬೇಕೆನ್ನುವ ಆಸೆ ಕೈಗೂಡಿದ್ದು ಮಾತ್ರ ತಡವಾಗಿ. ಅಂತೂ ತಂದೆ-ಮಗಳ ಸಿನಿಮಾ ’ಏಕ್ ಲಡ್ಕೀ ಕೊ ದೇಖಾ ತೋ ಐಸಾ ಲಗಾ’ ಇದೇ ಫೆಬ್ರವರಿ ೧ರಂದು ತೆರೆಕಾಣುತ್ತಿದೆ. ಗಜಲ್ ಧಾಲಿವಾಲ್ ಚಿತ್ರಕಥೆ ರಚಿಸಿದ್ದು, ಶೆಲ್ಲಿ ಚೋಪ್ರಾ ಧರ್ ನಿರ್ದೇಶಿಸಿದ್ದಾರೆ. ಮೊದಲ ಟ್ರೈಲರ್ ಬಿಡುಗಡೆಯಾದಾಗಲೇ ಚಿತ್ರದ ಕತೆಯ ಬಗ್ಗೆ ಚರ್ಚೆಯಾಗಿತ್ತು. ಸಲಿಂಗ ಪ್ರೇಮದ ಕತೆಯ ಚಿತ್ರವಿದು ಎನ್ನುವುದು ವಿಶೇಷ. ಜ್ಯೂಹಿ ಚಾವ್ಲಾ, ರಾಜಕುಮಾರ್ ರಾವ್, ಅಕ್ಷಯ್ ಒಬೆರಾಯ್ ಇತರೆ ಪ್ರಮುಖ ಕಲಾವಿದರು.
ಭಾರತದಲ್ಲಿ ಪೋಷಕರು ತಮ್ಮ ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರಿ ಬೆಳೆಸುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಮಕ್ಕಳಿಗೆ ತಾವು ಅಂದುಕೊಂಡಂತೆ ಬದುಕುವ ಸ್ವಾತಂತ್ರ್ಯವೇ ಸಿಗುವುದಿಲ್ಲ. ವಿದ್ಯಾಭ್ಯಾಸ, ಸಂಗಾತಿಯ ಆಯ್ಕೆ ವಿಚಾರದಲ್ಲೂ ಹೀಗಾಗುತ್ತದೆ. ಈ ಬೆಳವಣಿಗೆಯಿಂದ ಪೋಷಕರು ಮತ್ತು ಮಕ್ಕಳ ಮಧ್ಯೆ ಎದುರಾಗುವ ತೊಡಕು, ಸಂಕಷ್ಟಗಳೇ ನಮ್ಮ ಚಿತ್ರದ ಕಥಾವಸ್ತು ಎಂದು ತಮ್ಮ ಚಿತ್ರದ ಬಗ್ಗೆ ಹೇಳುತ್ತಾರೆ ಸೋನಂ. ನಟಿಯಾಗಿ ಹದಿಮೂರು ವರ್ಷಗಳ ನಂತರ ಕೊನೆಗೂ ತಂದೆಯೊಂದಿಗೆ ತೆರೆ ಹಂಚಿಕೊಳ್ಳುತ್ತಿರುವುದು ಅವರನ್ನು ಎಕ್ಸೈಟ್ ಮಾಡಿದೆ.
’ಸಾವರಿಯಾ’ ಹಿಂದಿ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಸೋನಂಗೆ ಬಾಲಿವುಡ್ನಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಯಶಸ್ಸು ಸಿಗಲಿಲ್ಲ. ’ದೆಲ್ಲಿ ೬’ ಚಿತ್ರದ ಉತ್ತಮ ನಟನೆಗೆ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾದರೂ ನಾಯಕನಟಿಯಾಗಿ ಅವರಿಗೆ ಸ್ಟಾರ್ ಪಟ್ಟ ಸಿಗಲೇ ಇಲ್ಲ. ತಾರಾಕುಟುಂಬದ ಹಿನ್ನೆಲೆ ಅವರ ನೆರವಿಗೆ ಬರಲಿಲ್ಲ. ಕಳೆದ ವರ್ಷ ಆಕೆಯ ವಿವಾಹವೂ ನೆರವೇರಿತು. ಪ್ರತಿಭೆ ಮತ್ತು ಪರಿಶ್ರಮವಿದ್ದರೆ ಮಾತ್ರ ಯಶಸ್ಸು ಸಾಧ್ಯ. ನಾವು ಸಾಗಿಬಂದ ದಿನಗಳಲ್ಲಿ ಒಂದು ಮುಗ್ಧತೆ ಇರುತ್ತಿತ್ತು. ಈಗ ಸೋಷಿಯಲ್ ಮೀಡಿಯಾಗಳ ಭರಾಟೆಯಲ್ಲಿ ಅಚ್ಚರಿಗಳಿಗೆ ಜಾಗವೇ ಇಲ್ಲದಂತಾಗಿದೆ ಎನ್ನುವ ಅವರಿಗೆ ಮಗಳ ಸಿನಿಬದುಕಿನ ಬಗ್ಗೆ ಕೊಂಚ ಬೇಸರವಿದೆ ಎಂದು ಕಾಣಿಸುತ್ತದೆ.
#
No Comment! Be the first one.