ಎಂ ಪ್ರಸನ್ನ ಕುಮಾರ್ ನಿರ್ಮಾಣ ಮಾಡಿ ನಿರ್ದೇಶನವನ್ನೂ ಮಾಡಿರುವ ಚಿತ್ರ ಮನೋರಥ. ನಾಳೆ ರಾಜ್ಯಾಧ್ಯಂತ ಬಿಡುಗಡೆಯಾಗಲಿರುವ ಈ ಚಿತ್ರ ಮೂಲಕ ಅಂಜಲಿ ಎಂಬ ಬಹುಮುಖ ಪ್ರತಿಭೆ ನಾಯಕಿಯಾಗಿ ಪಾದಾರ್ಪಣೆ ಮಾಡಲಿದ್ದಾರೆ. ಮಾಮೂಲಿಯಾದ ಪಾತ್ರಗಳಿಗಿಂತಲೂ ನಟಿಸಲು ಅವಕಾಶವಿರುವ ಭಿನ್ನ ಜಾಡಿನ ಪಾತ್ರಗಳನ್ನು ಬಯಸುತ್ತಾ ಬಂದಿರೋ ಅಂಜಲಿ ಮನೋರಥ ಚಿತ್ರದ ಒಟ್ಟಾರೆ ಕಥೆ ಮತ್ತು ತಮ್ಮ ಪಾತ್ರದ ಬಗ್ಗೆ ತುಂಬು ಅಭಿಮಾನ ಹೊಂದಿದ್ದಾರೆ. ತನ್ನ ಇಂಗಿತಕ್ಕೆ ತಕ್ಕುದಾಗಿಯೇ ಮನೋರಥ ಚಿತ್ರದ ಮೂಡಿ ಬಂದಿದೆ ಎಂಬ ಖುಷಿಯನ್ನೂ ಹೊಂದಿದ್ದಾರೆ.
ಅಂಜಲಿ ನಟನೆಯ ಗುಂಗಿನಿಂದ ತಪ್ಪಿಸಿಕೊಳ್ಳಲಾರದೆ ಇದ್ದ ಕೆಲಸವನ್ನೂ ಬಿಟ್ಟು ಹೊರ ಬಂದವರ ಸಾಲಿಗೆ ಸಲೀಸಾಗಿ ಸೇರಿಕೊಳ್ಳ್ಳುವವರು. ಅವರನ್ನು ಅಪ್ಪಟ ಬೆಂಗಳೂರಿನ ಹುಡುಗಿ ಅನ್ನಲು ಯಾವ ಅಡ್ಡಿಯೂ ಇಲ್ಲ. ಈ ನಗರದಲ್ಲಿಯೇ ಹುಟ್ಟಿ ಬೆಳೆದ ಅಂಜಲಿಗೆ ಆರಂಭದಿಂದಲೂ ಮನೆಯಿಂದಲೇ ಕಲಾಸಕ್ತಿಗೆ ಪ್ರೋತ್ಸಾಹ ಸಿಗಲಾರಂಭಿಸಿತ್ತು. ತಂದೆ ರಾಮಚಂದ್ರ ರಾವ್ ಅವರು ಬೆಮೆಲ್ ಉದ್ಯೋಗಿ. ತಾಯಿ ಗೃಹಿಣಿ. ತಮ್ಮ ಈಗ ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಮೂರ್ನಾಲಕ್ಕು ವರ್ಷದ ಹೊತ್ತಿಗೆಲ್ಲ ಅಂಜಲಿಯನ್ನು ನೃತ್ಯಾಭ್ಯಾಸಕ್ಕೆ ಸೇರಿಸುವ ಮೂಲಕ ಹೆತ್ತವರೇ ಕಲೆಯ ತೆಕ್ಕೆಗಿಟ್ಟಿದ್ದರು. ಹೀಗೆ ಬಾಲ್ಯದಿಂದಲೇ ಕಲೆಯ ಜಾಡಿನಲ್ಲಿ ಬೆಳೆದು ಬಂದಿದ್ದ ಅಂಜಲಿ ಓದಿದ್ದು ಅದಕ್ಕೆ ತದ್ವಿರುದ್ಧವಾದುದನ್ನೇ. ಸಪ್ತಗಿರಿ ಕಾಲೇಜಿನಲ್ಲಿ ಬಯೋಟೆಕ್ ಇಂಜಿನೀರಿಂಗ್ ಮುಗಿಸಿದ್ದ ಅಂಜಲಿಗೆ ಸಾಫ್ಟ್ವೇರ್ ಕಂಪೆನಿ ಒಂದರಲ್ಲಿ ಕೆಲಸವೂ ಸಿಕ್ಕಿತ್ತು.
ಸೆಟಲ್ ಆಗೋದು ಮಾತ್ರವೇ ಬದುಕಿನ ಪರಮ ಗುರಿ ಅಂದುಕೊಂಡವರಿಗೆ ಯಾವ ತೊಂದರೆಯೂ ಇಲ್ಲದ ಕೆಲಸವದು. ಕೈ ತುಂಬಾ ಸಂಬಳ, ಅದಕ್ಕೆ ಪೂರಕವಾದ ಕೆಲಸ… ಆದರೆ ಅಂಜಲಿಗೆ ಈ ಕೆಲಸದಲ್ಲಿ ಒಂದೂವರೆ ವರ್ಷ ಕಳೆಯುವ ಮುನ್ನವೇ ಆಸಕ್ತಿ ಹೋಗಲಾರಂಭಿಸಿತ್ತು. ತಾನು ಈ ವಲಯದಲ್ಲಿಯೇ ಎಲ್ಲಿ ಕಳೆದು ಹೋಗುತ್ತೀನೋ ಅಂತ ಕಸಿವಿಸಿಗೊಳಗಾದ ಅವರು ಕಡೆಗೂ ಒಂದು ಗಟ್ಟಿ ನಿರ್ಧಾರ ತೆಗೆದುಕೊಂಡು ನಟನೆಯೇ ತನ್ನ ಗುರಿ ಅಂದುಕೊಂಡ ಅಂಜಲಿ ಆ ಕೆಲಸ ಬಿಟ್ಟು ಬಂದಿದ್ದರಂತೆ!
ಹಾಗಂತ ಇದ್ದ ಕೆಲಸ ಬಿಟ್ಟು ಬಂದ ಅಂಜಲಿ ಏಕಾಏಕಿ ನಾಯಕಿಯಾಗಲು ಪ್ರಯತ್ನಿಸಲಿಲ್ಲ. ಬದಲಾಗಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಲಾರಂಭಿಸಿದ್ದರು. ಏರೋ ಇಂಡಿಯಾ ಇಂಟರ್ ನ್ಯಾಷನಲ್ ಸೆಮಿನಾರ್ ಜೊತೆಗೆ ದೊಡ್ಡ ದೊಡ್ಡ ಈವೆಂಟುಗಳಿಗೂ ಆಂಕರಿಂಗ್ ಮಾಡೋ ಮೂಲಕ ಎಲ್ಲರನ್ನೂ ಸೆಳೆದುಕೊಂಡಿದ್ದರು.
ಅಂಜಲಿ ಮೂಲತಃ ಭರತನಾಟ್ಯ ಕಲಾವಿದೆ. ಭರತನಾಟ್ಯದಲ್ಲಿ ವಿದ್ವತ್ತನ್ನೂ ಪಡೆದುಕೊಂಡಿದ್ದಾರೆ. ವಿಧುಶಿ ಭಾನುಮತಿ, ಶೋಭಾ ಧನಂಜಯ್ ಮುಂತಾದವರಿಂದ ಭರತನಾಟ್ಯ ಕಲಿತಿದ್ದ ಅಂಜಲಿ ಪಾಲಿಗೆ ಮಯೂರಿ ಉಪಾಧ್ಯಾಯ ಕೂಡಾ ಗುರು. ದೇಶಾದಂತ ಸಾಕಷ್ಟು ನೃತ್ಯ ಪ್ರದರ್ಶನಗಳನ್ನು ನೀಡಿರುವ ಅಂಜಲಿ `ಅಂಜಲಿ ಸ್ಕೂಲ್ ಆಫ್ ಡ್ಯಾನ್ಸ್’ ಮೂಲಕ ನೃತ್ಯ ತರಬೇತಿಯನ್ನೂ ನೀಡುತ್ತಿದ್ದಾರೆ.
ಇದರ ನಡುವೆಯೇ ನಟನೆಯ ಅವಕಾಶಗಳತ್ತಲೂ ಗಮನ ಹರಿಸಿದ್ದ ಅಂಜಲಿಗೆ ಮೊದಲು ಅವಕಾಶ ಸಿಕ್ಕಿದ್ದ ವಿನಯ್ ರಾಜ್ ಕುಮಾರ್ ಅಭಿನಯದ ರನ್ ಆಂಟನಿ ಚಿತ್ರದಲ್ಲಿ. ಅದರಲ್ಲವರು ನಾಯಕನ ಸ್ನೇಹಿತೆಯ ಪಾತ್ರವನ್ನು ನಿರ್ವಹಿಸಿದ್ದರು. ಆ ನಂತರ್ ಕಿರಗೂರಿನ ಗಯ್ಯಾಳಿಗಳು ಚಿತ್ರದಲ್ಲಿಯೂ ಸಣ್ಣದೊಂದು ಪಾತ್ರ ಅವರಿಗೆ ಸಿಕ್ಕಿತ್ತು. ತಾನು ನಾಯಕಿಯಾಗೋದಾದರೆ ಭಿನ್ನ ಪಾತ್ರದಿಂದಲೇ ಲಂಚ್ ಆಗಬೇಕೆಂದು ಅಂದುಕೊಂಡಿದ್ದ ಅವರಿಗೆ ಸಿಕ್ಕಿದ್ದು ಮನೋರಥ ಚಿತ್ರದಲ್ಲಿ ನಾಯಕಿಯಾಗೋ ಅವಕಾಶ.
ಸೈಕಾಲಾಜಿಕಲ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ, ರಾಜ್ ಚರಣ್ ಹೀರೋ ಆಗಿರುವ ಮನೋರಥ ಚಿತ್ರ ಮನುಷ್ಯನ ಮನೋ ಲೋಕದ ಸುತ್ತಾ ಹೆಣೆದಿರೋ ಕಥೆ ಹೊಂದಿದೆಯಂತೆ. ಈ ಕಥೆ ಮತ್ತು ತನ್ನ ಪಾತ್ರ ಇಷ್ಟವಾದ ಕಾರಣದಿಂದಲೇ ಅಂಜಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಈಗಾಗಲೇ ಒಂದಷ್ಟು ಅವಕಾಶಗಳನ್ನು ಹೊಂದಿರೋ ಅಂಜಲಿ ಮನೋರಥ ಚಿತ್ರ ತನಗೆ ದಿಕ್ಕು ತೋರುತ್ತದೆ ಎಂಬ ನಂಬಿಕೆ ಹೊಂದಿದ್ದಾರೆ.
#
No Comment! Be the first one.