ಮುಚ್ಚಿ ಹೋದಂತಿದ್ದ ಕರಾವಳಿಯ ಹೆಣ್ಣು ಮಗಳೊಬ್ಬಳ ಕೊಲೆ, ಈ ರಹಸ್ಯ ಬೇಧಿಸಲು ಬಂದ ಅಧಿಕಾರಿಯನ್ನೇ ಆವರಿಸಿಕೊಳ್ಳೋ ಸೂಕ್ಷ್ಮ ಸಂಬಂಧದ ಸಿಕ್ಕು ಮತ್ತು ಪ್ರೇಕ್ಷಕನನ್ನು ಒಂದಿನಿತೂ ಕದಲದಂತೆ ಹಿಡಿದಿಡೋ ಥ್ರಿಲ್ಲರ್ ಜಾಡು… ಇಂಥಾದ್ದೊಂದು ಗಟ್ಟಿತನದೊಂದಿಗೆ ಅನುಕ್ತ ಚಿತ್ರ ಬಿಡುಗಡೆಯಾಗಿದೆ. ಈ ವರೆಗೂ ಈ ಸಿನಿಮಾದಲ್ಲಿ ಹೇಳಲಾಗದ ನಿಗೂಢವೇನಿದೆ ಅನ್ನೋ ಕುತೂಹಲವಿಟ್ಟುಕೊಂಡು ಥೇಟರು ಹೊಕ್ಕವರಿಗೆ ಬಹು ಕಾಲದ ನಂತರ ಮಜವಾದೊಂದು ಥ್ರಿಲ್ಲರ್ ಕಥೆ ಕಣ್ತುಂಬಿಕೊಂಡ ಖುಷಿಯನ್ನೂ ಕೊಟ್ಟಿದೆ!
ಅಶ್ವತ್ಥ್ ಸ್ಯಾಮುಯಲ್ ನಿರ್ದೇಶನದ ಅನುಕ್ತ ಚಿತ್ರದ ಬಗ್ಗೆ ಹುಟ್ಟಿಕೊಂಡಿದ್ದ ಕಡೇ ಘಳಿಗೆಯ ಕ್ರೇಜ್ ಸಾಮಾನ್ಯವಾದುದಲ್ಲ. ಅದುವೇ ಚಿತ್ರ ಮಂದಿರಗಳನ್ನು ತುಂಬಿಸಿದೆ. ಹಾಗೊಂದು ಗಾಢ ಕುತೂಹಲ ಹೊತ್ತು ಬಂದ ಮನಸುಗಳೆಲ್ಲ ಬಯಸಿದ್ದನ್ನು ಮೀರಿ ಮತ್ತೇನೋ ಸಿಕ್ಕ ಸಂತಸದಲ್ಲಿವೆ. ಅಂದುಕೊಂಡದ್ದಕ್ಕೆ ವಿರುದ್ಧವಾಗಿ ಘಟಿಸೋ ಸನ್ನಿವೇಶಗಳು, ಫ್ರೆಶ್ ಆದ ಕಥೆ ಮತ್ತು ಅದಕ್ಕೆ ಪೂರಕವಾದ ಪಾತ್ರವರ್ಗವೇ ಅನುಕ್ತದ ನಿಜವಾದ ತಾಕತ್ತು.
ಇಲ್ಲಿ ಕಾರ್ತಿಕ್ ಅತ್ತಾವರ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಸಂಗೀತ ಭಟ್ ನಾಯಕನ ಮಡದಿಯ ಪಾತ್ರವನ್ನ ನಿರ್ವಹಿಸಿದ್ದಾರೆ. ತನ್ನ ಮಡದಿಯ ಡಿಫ್ರೆಷನ್ ದೂರ ಮಾಡಲು ಬರೋ ಪೊಲೀಸ್ ಅಧಿಕಾರಿ ಸೇರಿಕೊಳ್ಳೋದು ಪುರಾತ ಕಾಲದ್ದೊಂದು ಮನೆಗೆ. ಅದೇನು ಅಂತಿಂಥಾ ಮನೆಯಲ್ಲ. ಆ ಪ್ರದೇಶದ ಜನರ ಪಾಲಿಗೆ ಅದೊಂದು ಭೂತ ಬಂಗಲೆ. ಅಲ್ಲಿ ದೆವ್ವ ಭೂತಗಳ ಸಂಚಾರವಿದೆ ಅಂತ ಭಾರೀ ಭಯ ಹುಟ್ಟಿಕೊಂಡಿರುತ್ತೆ. ಅಂಥಾ ಮನೆಗೆ ಬಂದಿಳಿಯೋ ಪೊಲೀಸ್ ಅಧಿಕಾರಿ ನಾಯಕ ಎಷ್ಟೋ ವರ್ಷಗಳ ಹಿಂದೆ ನಡೆದಿದ್ದ ಹೆಣ್ಣೊಬ್ಬಳ ಕೊಲೆ ಪ್ರಕರಣವನ್ನು ಭೇದಿಸಲು ಮುಂದಾಗುತ್ತಾನೆ.
ಆ ಕೊಲೆಗೂ ನಾಯಕನ ಬದುಕಿಗೂ ಇರುವ ಲಿಂಕ್ ಎಂಥಾದ್ದು, ಕೊಲೆಗೆ ಕಾರಣವೇನು ಅನ್ನೋ ಥ್ರಿಲ್ಲು ಥೇಟರಿನಲ್ಲಿಯಷ್ಟೇ ಪರಿಣಾಮಕಾರಿಯಾಗಿ ಸಿಗಲು ಸಾಧ್ಯ. ಈ ಮೂಲಕ ಕನ್ನಡಕ್ಕೆ ಬೇರೆಯದ್ದೇ ದೃಷ್ಟಿಕೋನದ, ಥ್ರಿಲ್ಲರ್ ಚಿತ್ರ ಕೊಡಬಲ್ಲ ನಿರ್ದೇಶಕರೊಬ್ಬರ ಆಗಮನವಾಗಿದೆ. ಮೊದಲಾರ್ಧ ದ್ವಿತೀಯಾರ್ಧದಷ್ಟು ಸ್ಪೀಡ್ ಆಗಿ ಚಲಿಸೋದಿಲ್ಲ ಅನ್ನೋದನ್ನು ಬಿಟ್ಟರೆ ನಿರ್ದೇಶಕರಾಗಿ ಅಶ್ವತ್ಥ್ ಸ್ಯಾಮುಯಲ್ ಭರವಸೆ ಹುಟ್ಟಿಸುತ್ತಾರೆ. ಇನ್ನು ಸೀರಿಯಲ್ ಲೋಕದಲ್ಲಿ ಮಿಂಚಿದ್ದ ನಾಯಕ ಕಾರ್ತಿಕ್ ಅತ್ತಾವರ್ ಹಿರಿತೆರೆಗೂ ಸೈ ಅಂತ ನಿರೂಪಿಸಿದ್ದಾರೆ. ಎಕ್ಸ್ಪ್ರೆಷನ್ನಿನಲ್ಲಿಯೇ ಎಲ್ಲವನ್ನೂ ಹೇಳುವಷ್ಟು ಪರಿಣಾವಕಾರಿ ನಟನೆ ಅವರ ಕಡೆಯಿಂದ ಸಿಕ್ಕಿದೆ. ಇನ್ನು ನಾಯಕಿಯಾಗಿ ಸಂಗೀತಾ ಭಟ್ ಕೂಡಾ ಪೈಪೋಟಿಗೆ ಬಿದ್ದಂತೆ ನಟಿಸಿದ್ದಾರೆ.
ಉಳಿದಂತೆ ಕೊಲೆಯಾದ ಹೆಣ್ಣುನ ಪಾತ್ರದಲ್ಲಿ ಅನು ಪ್ರಭಾಕರ್ ನಟಿಸಿದ್ದಾರೆ. ಉಷಾ ಭಂಡಾರಿ ಮೇರಿ ಎಂಬ ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ. ಸಂಪತ್ ರಾಜ್ ಮುಂತಾದವರ ಪಾತ್ರವೂ ಭಿನ್ನವಾಗಿದೆ. ನೊಬಿನ್ ಪೌಲ್ ಸಂಗೀತ ಮತ್ತು ಮನೋಹರ್ ಜೋಷಿ ಛಾಯಾಗ್ರಹಣವೂ ಅನುಕ್ತದ ನಿಜವಾದ ಶಕ್ತಿ. ತಾಂತ್ರಿಕವಾಗಿಯೂ ಸಂಪನ್ನವಾಗಿರೋ ಅನುಕ್ತದಲ್ಲಿ ಭೂತ ಕೋಲದ ಸೊಗಸೂ ಇದೆ. ಆದರೆ ನಿರೀಕ್ಷೆಯಂತೆ ಅದನ್ನು ಭಯ ಬೀಳಿಸಲು ಬಳಸಿಕೊಂಡಿಲ್ಲ. ಆದರೆ ಅದರ ಬಳಕೆ ವಿಶೇಷವಾಗಿದೆ ಅನ್ನೋದು ಇಡೀ ಚಿತ್ರದ ಪ್ಲಸ್ ಪಾಯಿಂಟ್.
ಒಟ್ಟಾರೆಯಾಗಿ ಅನುಕ್ತ ಹೊಸಾ ಪ್ರಯೋಗಗಳ ವಿಭಿನ್ನ ಚಿತ್ರ. ಪ್ರೇಕ್ಷಕರನ್ನ ಬೇರೆಯದ್ದೇ ಜಗತ್ತಿನಲ್ಲಿ ಕಳೆದು ಹೋಗುವಂತೆ ಮಾಡುವಲ್ಲಿ ಈ ಸಿನಿಮಾ ಶಕ್ತವಾಗಿದೆ. ಇಲ್ಲಿನ ಅಸಲೀ ಮಜವೇ ಅವ್ಯಕ್ತ ಘಟನಾವಳಿಗಳಾದ್ದರಿಂದ ಎಲ್ಲರೂ ಚಿತ್ರಮಂದಿರದಲ್ಲಿಯೇ ಅದನ್ನು ಅನುಭವಿಸಬೇಕಿದೆ.
ನಮ್ಮ ರೇಟಿಂಗ್ : 3.5/5 #
No Comment! Be the first one.