ರೂಪೇಶ್ ಶೆಟ್ಟಿ ಮತ್ತು ಅಮೃತಾ ಅಯ್ಯಂಗಾರ್ ನಟನೆಯ ಬಹುಭಾಷಾ ಚಿತ್ರ `ಅನುಷ್ಕ’. ಏಕ ಕಾಲದಲ್ಲಿಯೇ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರೋ ಇದರ ಟೀಸರ್ ಅನ್ನು ತಾರೆಯೊಬ್ಬರು ಬಿಡುಗಡೆ ಮಾಡಲಿದ್ದಾರೆಂಬ ಬಗ್ಗೆ ಸುದ್ದಿಯಾಗಿತ್ತು. ಇದೀಗ ಆ ತಾರೆ ಅನುಷ್ಕಾ ಶೆಟ್ಟಿ ಎಂಬುದನ್ನು ಚಿತ್ರತಂಡ ಸ್ಪಷ್ಟಪಡಿಸಿದೆ. ಈ ನಿಟ್ಟಿನಲ್ಲಿ ಹೇಳೋದಾದರೆ ಅನುಷ್ಕಾ ಶೆಟ್ಟಿ ತಮ್ಮದೇ ಹೆಸರನ್ನು ಶೀರ್ಷಿಕೆಯಾಗಿಟ್ಟುಕೊಂಡಿರುವ ಈ ಚಿತ್ರದ ಟೀಸರ್ ಅನ್ನು ಅನಾವರಣಗೊಳಿಸಲಿದ್ದಾರೆ!
ಎಸ್. ಕೆ ಗಂಗಾಧರ್ ನಿರ್ಮಾಣದ ಈ ಚಿತ್ರವನ್ನು ದೇವರಾಜಕುಮಾರ್ ನಿರ್ದೇಶನ ಮಾಡಿದ್ದಾರೆ. ಅನುಷ್ಕಾ ಶೆಟ್ಟಿಯವರ ಕೈಯಿಂದಲೇ ಟೀಸರ್ ಅನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದ ಚಿತ್ರತಂಡ ಈಗಾಗಲೇ ಅವರನ್ನು ಸಂಪರ್ಕಿಸಿದೆಯಂತೆ. ಬಿಡುಗಡೆಯ ದಿನಾಂಕ ಇನ್ನಷ್ಟೇ ನಿಕ್ಕಿಯಾಗಬೇಕಿದೆಯಾದರೂ ಹೈದ್ರಾಬಾದ್ ಅಥವಾ ಬೆಂಗಳೂರಿನಲ್ಲಿ ಟೀಸರ್ ರಿಲೀಸ್ ಕಾರ್ಯಕ್ರಮ ನಡೆಸಲು ತಯಾರಿ ನಡೆಯುತ್ತಿದೆ.
ಮೂರು ಆಯಾಮಗಳಲ್ಲಿ ನಡೆಯೋ ಕಥೆ ಹೊಂದಿರೋ ಈ ಚಿತ್ರದಲ್ಲಿ ರಾಜವೈಭವವೂ ಇರಲಿದೆ. ಧರ್ಮದುರ್ಗದ ರಾಣಿ ತನ್ನ ಪ್ರಜೆಗಳ ರಕ್ಷಣೆಗಾಗಿ ಯಾವ ರೀತಿ ಹೋರಾಡಿ ಏನೇನು ತ್ಯಾಗ ಮಾಡುತ್ತಾಳೆಂದ ಕಥೆಯನ್ನೂ ಈ ಚಿತ್ರ ಹೊಂದಿದೆ. ಇದರ ಜೊತೆಗೇ ಪ್ರಸ್ತುತ ಸಮಾಜದಲ್ಲಿ ಮಹಿಳೆಯರ ಮೇಲಾಗುತ್ತಿರೋ ದೌರ್ಜನ್ಯದ ವಿರುದ್ಧವೂ ಧ್ವನಿಯೆತ್ತುವ ದಿಟ್ಟ ಹೆಣ್ಣುಮಗಳ ಕಥೆಯೂ ಇದರಲ್ಲಿರಲಿದೆಯಂತೆ. ಮೈಸೂರು ಮೂಲದ ಅಮೃತ ಅಯ್ಯಂಗಾರ್ ಈ ಚಿತ್ರದಲ್ಲಿ ಮೂರು ಪಾತ್ರಗಳಲ್ಲಿ ನಟಿಸಿ ರಾಣಿಯಾಗಿ ಅಬ್ಬರಿಸಿದ್ದಾರಂತೆ.
ಈ ಚಿತ್ರಕ್ಕೆ ಚಿತ್ರಕಥೆ ಬರೆದಿರುವವರು ಕಡ್ಡಿಪುಡಿ ಶಾಂತರಾಜು. ಅವರು ಈ ಚಿತ್ರದಲ್ಲಿ ಅರವತ್ತು ವರ್ಷದ ವ್ಯಕ್ತಿಯಾಗಿ ನಟಿಸಿರೋದು ವಿಶೇಷ. ಅರಸಿಕೆರೆ, ತಾವರೆಕೆರೆ, ಬೆಂಗಳೂರು ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆಸಿರೋ ಈ ಚಿತ್ರಕ್ಕೆ ನವೀನ್ ನಾಯಕ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ವಿಕ್ರಂ ಸೆಲ್ವ ಸಂಗೀತ, ವೈಎಸ್ ಶ್ರೀಧರ್ ಸಂಕಲನ, ವೀನಸ್ ಮೂರ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ.
#