ತಾಯ್ತನ ಅನ್ನೋದೇ ಒಂದು ಧಿವ್ಯ ಅನುಭೂತಿ. ಮದುವೆಯಾದವರಲ್ಲೂ ಎಷ್ಟೋ ಜನಕ್ಕೆ ಈ ಅದೃಷ್ಟ ಒಲಿದಿರುವುದಿಲ್ಲ. ಮಗುವೊಂದಕ್ಕೆ ಜನ್ಮ ನೀಡಲು ಪರಿತಪಿಸೋದು ಹೆಣ್ಣಾಗಿ ಹುಟ್ಟಿದ ಎಲ್ಲರ ಬಯಕೆಯಾಗಿರುತ್ತದೆ. ಮನುಷ್ಯರಲ್ಲಿ ಮಾತ್ರವಲ್ಲ, ಜಗತ್ತಿನ ಎಲ್ಲ ಪ್ರಾಣಿ, ಪಕ್ಷಿಗಳಿಗೂ ಸಂತಾನೋತ್ಪತ್ತಿ ಅನ್ನೋದು ಸಂಭ್ರಮದ ವಿಚಾರವೇ ಆಗಿದೆ.
ಆದರೆ ಈ ಸಿನಿಮಾ ನಟಿಯರಿಗೆ ಅದೇನು ಬಂದಿದೆಯೋ ಗೊತ್ತಿಲ್ಲ. ಮಕ್ಕಳನ್ನು ಹೆತ್ತರೆ ಎಲ್ಲಿ ತಮ್ಮ ಗ್ಲಾಮರು ಹಾಳಾಗಿಬಿಟ್ಟರೆ? ಸ್ಕಿನ್ನು ಸುಕ್ಕುಗಟ್ಟಿಬಿಟ್ಟರೆ? ದೇಹ ದಪ್ಪವಾಗಿಬಿಟ್ಟರೆ, ಉಬ್ಬಿನಿಂತ ಕುಚಗಳು ಸಡಿಲವಾಗಿಬಿಟ್ಟರೆ… – ಹೀಗೆ ಅಪನಂಬಿಕೆಗಳನ್ನು ಹೊಂದಿ, ಅಮಾನವೀಯವಾಗಿ ಚಿಂತಿಸುತ್ತಿರುತ್ತಾರೆ.
ಬಾಲಿವುಡ್ ನಟಿ ಕಂ ಕ್ರಿಕೆಟರ್ ವಿರಾಟ್ ಕೊಹ್ಲಿಯ ಹೆಂಡತಿ ಅನುಷ್ಕಾ ಶರ್ಮಾ ಕಳೆದ ಜನವರಿಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಲಂಡನ್ ನಿಂದ ಪ್ರಕಟಗೊಳ್ಳುವ ʻಗ್ರಾಜಿಯಾʼ ಪತ್ರಿಕೆ ಇತ್ತೀಚೆಗೆ ಅನುಷ್ಕಾ ಶರ್ಮಾಳ ಸಂದರ್ಶನವನ್ನು ಪ್ರಕಟಿಸಿದೆ. ಅದರಲ್ಲಿ ಅನುಷ್ಕಾ ತನ್ನ ಖಾಸಗೀ ವಿಚಾರಗಳನ್ನು ಹಂಚಿಕೊಂಡಿದ್ದಾಳೆ.
ಯಾವುದೇ ಗರ್ಭಿಣಿ ಹೆಣ್ಣುಮಕ್ಕಳಿಗೆ ಒಳಗಿರುವ ಜೀವವನ್ನು ಜಗತ್ತಿಗೆ ಪರಿಚಯಿಸುವ ತನಕ ನೂರೆಂಟು ತಳಮಳಗಳಿರುತ್ತವೆ. ಆರೋಗ್ಯಪೂರ್ಣವಾಗಿ ಮಡಿಲು ಸೇರಿದರೆ ಸಾಕು ಎನ್ನುವ ಬಯಕೆಯಿರುತ್ತದೆ. ಆದರೆ ಈ ನಟಿಯ ಟೆನ್ಷನ್ನೇ ಬೇರೆಯದ್ದಾಗಿತ್ತು. ಆ ಪ್ರಕಾರ, ಗರ್ಭಿಣಿಯಾಗುವ ಮೊದಲು ಮತ್ತು ನಂತರ ಆನುಷ್ಕಾಗೆ ಚಿಂತೆಯೊಂದು ಶುರುವಾಗಿತ್ತಂತೆ. ಅದೇನೆಂದರೆ, ಹೆರಿಗೆ ನಂತರ ತನ್ನ ದೇಹ ಎಲ್ಲಿ ಅಂದಗೆಡುತ್ತದೋ? ಆ ಕಾರಣಕ್ಕೆ ತನ್ನನ್ನು ತಾನೆ ದ್ವೇಷಿಸುವಂತಾಗುತ್ತದೋ ಅಂತೆಲ್ಲಾ ಅಂದುಕೊಂಡಿದ್ದಳಂತೆ. ಆದರೆ ಅನುಷ್ಕಾ ಕಲ್ಪನೆಗೆ ವಿರುದ್ಧವಾಗಿ ಮಗುವಾದ ನಂತರ ಈಕೆಯ ತ್ವಚೆಯ ಕಾಂತಿ ಹೆಚ್ಚಿದೆಯಂತೆ. ದೇಹ ಹೆಚ್ಚು ಆಕರ್ಷಕಗೊಂಡಿದೆಯಂತೆ. ಹೀಗಾಗಿ ಇನ್ಮುಂದೆ ದೇಹದ ಬಗ್ಗೆ ಚಿಂತೆ ಮಾಡೋದಿಲ್ಲವಂತೆ!
ನಿಜಕ್ಕೂ ವಿಪರ್ಯಾಸ. ಕನ್ನಡ ಸೇರಿದಂತೆ ಎಷ್ಟೋ ಇತರೆ ಭಾಷೆಗಳ ಎಷ್ಟೋ ಜನ ಸಿನಿಮಾ ನಟಿಯರು ಎಲ್ಲಿ ತಮಗೆ ಮದುವೆ, ಮಕ್ಕಳಿರೋದು ಗೊತ್ತಾದರೆ ನಟಿಸುವ ಅವಕಾಶ ಸಿಗುವುದಿಲ್ಲವೋ ಅಂತಾ ಮುಚ್ಚಿಟ್ಟಿರುವ ನಿದರ್ಶನಗಳಿವೆ. ಅಕ್ಷರಶಃ ಹೆತ್ತ ಮಕ್ಕಳನ್ನು ಬಚ್ಚಿಟ್ಟವರಿದ್ದಾರೆ.
ಯಾಕೆ ಹೀಗೆಲ್ಲಾ ತಪ್ಪು ತಪ್ಪಾಗಿ ಭಾವಿಸುತ್ತಾರೋ? ಮದುವೆ, ಮಕ್ಕಳೆನ್ನುವ ಖಾಸಗೀ ವಿಚಾರಕ್ಕೂ ಸಿನಿಮಾದಲ್ಲಿ ಅವಕಾಶ ಪಡೆಯುವುದಕ್ಕೂ ಎಲ್ಲಿಂದೆಲ್ಲಿಯ ಸಂಬಂಧವೋ ಗೊತ್ತಿಲ್ಲ. ಪ್ರತಿಭೆ ಅನ್ನೋದಿದ್ದರೆ ಅವಕಾಶ ಸಿಕ್ಕೇ ಸಿಗುತ್ತದೆ. ಗಂಡ, ಮಕ್ಕಳು ಯಾರೇ ಇದ್ದರು ತೆರೆ ಮೇಲೆ ಅದು ಕಾಣೋದಿಲ್ಲ. ಜನ ಸಿನಿಮಾ ನೋಡೋದನ್ನು ನಿಲ್ಲಿಸೋದಿಲ್ಲ.
ಇವೆಲ್ಲದರ ಜೊತೆ ಮಕ್ಕಳಾದರೆ ಎಲ್ಲಿ ಬ್ಯೂಟಿ ಹಾಳಾಗತ್ತೋ ಎನ್ನುವ ಚಿಂತನೆ ಬೇರೆ… ಈ ಸಿನಿಮಾ ಮಂದಿ ಪ್ರಕೃತಿಗೆ ವಿರೋಧವಾಗಿ ನಡೆದುಕೊಳ್ಳುವುದನ್ನು ಯಾವಾಗ ನಿಲ್ಲಿಸುತ್ತಾರೋ….
Comments