ಕರ್ನಾಟಕ ಮೂಲದ ದಕ್ಷಿಣದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಒಂದಷ್ಟು ದಿನ ಸುದ್ದಿಯಲ್ಲಿರಲಿಲ್ಲ. ಇದೀಗ ಮೇಕ್ಓವರ್ನೊಂದಿಗೆ ಪ್ರತ್ಯಕ್ಷವಾಗಿದ್ದಾರೆ. ಬಳಕುವ ಬಳ್ಳಿಯಂತಾಗಿರುವ ಅವರ ಹೊಸ ರೂಪು ಅಭಿಮಾನಿಗಳನ್ನು ಅಚ್ಚರಿಗೆ ದೂಡಿದೆ. ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಮೆಚ್ಚುಗೆ ಪಡೆದಿವೆ. ಫೋಟೋದಲ್ಲಿ ಅನುಷ್ಕಾ ಜೊತೆಗಿರುವ ವ್ಯಕ್ತಿ ನಟಿಯ ಪರ್ಸನಲ್ ನ್ಯೂಟ್ರಿಷನಿಸ್ಟ್ ಲ್ಯೂಕ್ ಕೌಟಿನ್ಹೋ. ಈ ಫೋಟೋಗಳನ್ನು ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ ಹಾಕಿರುವ ಲ್ಯೂಕ್, “ಮುಂದಿನ ದಿನಗಳಲ್ಲಿ ನಿಮಗೊಂದು ವಿಷಯ ಹೇಳುವುದಿದೆ. ಆರೋಗ್ಯ, ಲೈಫ್ಸ್ಟೈಲ್, ಫಿಟ್ನೆಸ್ಗೆ ಸಂಬಂಧಿಸಿದಂತೆ ಅನುಷ್ಕಾ ಜೊತೆಗೂಡಿ ಹೊಸತೊಂದು ಯೋಜನೆ ರೂಪಿಸಲಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
’ಬಾಹುಬಲಿ’ ಸರಣಿ ಸಿನಿಮಾಗಳ ದೊಡ್ಡ ಯಶಸ್ಸಿನ ನಂತರ ಅನುಷ್ಕಾ ಶೆಟ್ಟಿ ’ಭಾಗ್ಮತಿ’ ತೆಲುಗು ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಇದೀಗ ಅವರ ಹೊಸ ಸಿನಿಮಾ ’ಸೈಲೆನ್ಸ್’ ಘೋಷಣೆಯಾಗಿದೆ. ಹೇಮಂತ್ ಮಧುಕರ್ ಚೊಚ್ಚಲ ನಿರ್ದೇಶನದ ಈ ಚಿತ್ರದ ಹೀರೋ ಮಾಧವನ್. ಕೋನಾ ವೆಂಕಟ್ ನಿರ್ಮಿಸಲಿರುವ ಚಿತ್ರ ಅನುಷ್ಕಾ ವೃತ್ತಿ ಬದುಕಿನ ಮಹತ್ವದ ಪ್ರಯೋಗವಾಗಲಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಗೌತಮ್ ಮೆನನ್ ನಿರ್ದೇಶನದ ’ವಿನ್ನೈಥಾಂಡಿ ವರುವಾಯ ೨’ ತಮಿಳು ಚಿತ್ರದ ನಾಯಕಿಯಾಗಲು ಅನುಷ್ಕಾಗೆ ಕರೆಬಂದಿದೆ. ಚಿತ್ರದ ಬಗ್ಗೆ ಅನುಷ್ಕಾ ಕಡೆಯಿಂದ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಹೊಸ ಲುಕ್ನೊಂದಿಗೆ ಅನುಷ್ಕಾ ಸಿನಿಬದುಕಿನಲ್ಲಿ ಮತ್ತೊಂದು ಇನ್ನಿಂಗ್ಸ್ ಶುರು ಮಾಡಿದ್ದಾರೆ.
#