ಬದುಕೇ ಹಾಗೆ… ಅದು ಯಾರನ್ನು, ಯಾವಾಗ, ಎಲ್ಲಿಗೆ ಬೇಕಾದರೂ ಕರೆದುಕೊಂಡು ಬಂದು ನಿಲ್ಲಿಸುತ್ತದೆ. ನಾನು ಅಂತಾ ಮೆರೆಯುವವರನ್ನು ನಡುಬೀದಿಗೆ ಬಿಡಬಹುದು; ನಾನೇನೂ ಅಲ್ಲ ಅಂದುಕೊಂಡೇ ಕುಂತರೆ ಇದ್ದಲ್ಲೇ ಇರಬಹುದು. ಅಥವಾ, ನನ್ನಲ್ಲೇನೋ ಇದೆ ಅಂದುಕೊಳ್ಳುವುದರ ಜೊತೆಗೆ ತನ್ನ ಶಕ್ತಿ ಸಾಮರ್ಥ್ಯಗಳನ್ನು ಗುರುತಿಸಿಕೊಂಡವನು, ಮತ್ತದನ್ನು ಹೊರತೆಗೆಯುವಲ್ಲಿ ಶ್ರಮಿಸಿದವನು ಎಂಥ ಎತ್ತರಕ್ಕೆ ಬೇಕಾದರೂ ಏರಿ ನಿಲ್ಲಬಹುದು.
ಒಂದು ಕಾಲಕ್ಕೆ ಎಸ್ಸೆಸ್ಸೆಲ್ಸಿ ಫೇಲಾಗಿ ಪರಮ ಪೋಲಿಯಾಗಿದ್ದುಕೊಂಡು, ತನ್ನ ಮಾತಿನ ಮೂಲಕ ಅವರಿವರನ್ನು ರಂಜಿಸುತ್ತಿದ್ದ ಹುಡುಗನೊಬ್ಬ ಆ ಮಾತೇ ತನ್ನ ಶಕ್ತಿ ಅನ್ನೋದನ್ನ ಅರಿತ. ಅದನ್ನೇ ಯಾಕೆ ಬಂಡವಾಳ ಮಾಡಿಕೊಳ್ಳಬಾರದು ಅಂತಾ ನಿರ್ಧರಿಸಿದ. ಹಾಗೆ ತೀರ್ಮಾನಿಸಿದವನು ಗಮ್ಯ ತಲುಪುವ ಕಡೆ ನಡೆದ. ಕಡೆಗೆ ತಾನೇ ನಂಬಲಾರದ ಜಾಗದಲ್ಲಿ ಬಂದು ನಿಂತ; ಅದು ಹಾಸ್ಯ ಕಲಾವಿದ ಅಪ್ಪಣ್ಣ ರಾಮದುರ್ಗ!
ಈಗಷ್ಟೇ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿರುವ ಕೃಷ್ಣ ನಿರ್ದೇಶನದ, ಕಿಚ್ಚ ಸುದೀಪ ಅಭಿನಯದ ‘ಪೈಲ್ವಾನ್’ ಚಿತ್ರದಲ್ಲಿ ಸುದೀಪ್ ಜೊತೆಗೆ ಚುರುಕಾಗಿ ಓಡಾಡಿಕೊಂಡು ನೋಡುಗರನ್ನು ನಕ್ಕುನಲಿಸುವ ಪಾತ್ರದಲ್ಲಿ ಅಪ್ಪಣ್ಣ ನಟಿಸಿದ್ದಾರೆ. ಅಪ್ಪಣ್ಣನ ನಟನೆ, ಟೈಮಿಂಗು ನೋಡಿದವರೆಲ್ಲಾ ‘ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಪ್ರತಿಭಾವಂತ ಹಾಸ್ಯ ಕಲಾವಿದ ಸಿಕ್ಕ’ ಅಂತಾ ಮಾತಾಡಿಕೊಳ್ಳುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗವೆಂಬ ಜಾಗದಲ್ಲಿ ಹುಟ್ಟಿ ಬೆಳೆದವರು ಅಪ್ಪಣ್ಣ. ಮನೆ ಕಡೆ ಕಡುಬಡತನ. ತಂದೆ ಕುಡಿದುಕುಡಿದೇ ಸಂಸಾರವನ್ನು ಬೀದಿಗೆ ತಂದಿದ್ದರು. ಊಟಕ್ಕೂ ಕಷ್ಟ ಅನ್ನೋ ಸ್ಥಿತಿ. ಊರಲ್ಲಿ ಇವರಿಗೆ ಸಿಗುತ್ತಿದ್ದ ಮೊದಲ ಗೌರವವೆಂದರೆ ಅವಮಾನ. ಜೊತೆಗೆ ಪುಂಡರ ಸಹವಾಸ. ಮದುವೆ, ಸಮಾರಂಭ, ಪ್ರವಾಸಕ್ಕೆ ಹೋದಾಗ ಅಪ್ಪಣ್ಣನಿಗೆ ಒಂದಿಷ್ಟು ಪುಡಿಗಾಸು ಕೊಟ್ಟು ಕರೆದೊಯ್ಯುತ್ತಿದ್ದರು. ಅಲ್ಲೆಲ್ಲಾ ಜೋಕರ್ ಥರಾ ಮಾತಾಡಿ ಎಲ್ಲರನ್ನೂ ರಂಜಿಸಬೇಕಿದ್ದುದು ಅಪ್ಪಣ್ಣನ ಜವಾಬ್ದಾರಿ. ಒಂದು ಹೊತ್ತಿನ ಊಟ, ಖರ್ಚಿಗೆ ಕಾಸು ಹೊಂಚಿಕೊಳ್ಳಲು ಅಪ್ಪಣ್ಣ ಅಕ್ಷರಶಃ ಬಫೂನ್ ರೀತಿ ಆಡಬೇಕಿತ್ತು!
ಇವರ ಕಾಲು ಎಳೆದು ಅವರನ್ನು ಖುಷಿ ಪಡಿಸೋದು, ಅವರ ಬಗ್ಗೆ ಮಾತಾಡಿ ಇವರನ್ನು ರಂಜಿಸೋದು. ಇಂಥಾ ಸಂದರ್ಭದಲ್ಲಿ ಎಷ್ಟೋ ಬಾರಿ ಕೆಲವರು ಅಪ್ಪಣ್ಣನ ಕೆನ್ನೆಕೆನ್ನೆಗೇ ಬಾರಿಸುತಿದ್ದ, ರಕ್ತ ಸುರಿಯುವ ಹಾಗೆ ಬಡಿದಿದ್ದ ಸಂದರ್ಭಗಳೂ ಇವೆ. ಪ್ರಾಣ ಹೋಗುವಂಥ ಬಾಧೆಯಿದ್ದರೂ ನಗಿಸಬೇಕಿತ್ತಷ್ಟೇ. ಕಾಸು ಕೊಟ್ಟು ಕರೆದುಕೊಂಡು ಬಂದಿದ್ದೀವಿ ತಾನೆ ನಗಿಸು ಅನ್ನುತ್ತಿದ್ದರು.
ಇವರ ತಾಯಿ ಅವರಿವರ ಮನೆ ಮುಸುರೆ ತಿಕ್ಕಿ ಅಲ್ಲಿ ಉಳಿದ ಆಹಾರವನ್ನು ಮನೆಗೆ ತರುತ್ತಿದ್ದರು. ಅಪ್ಪಣ್ಣನ ಮನೆಯಲ್ಲಿ ಅನ್ನ ಅಂತಾ ಬೇಯುತ್ತಿದ್ದದ್ದೇ ಹಬ್ಬದ ದಿನಗಳಲ್ಲಿ ಮಾತ್ರ!
ಇದರ ನಡುವೆ ಸಾಧನೆ ಮಾಡುವ ಮಾತೆಲ್ಲಿ? ಕಲಾವಿದನಾಗಿಲ್ಲದಿದ್ದರೆ ಗಾರೆ ಕೆಲಸವೋ, ಹೊಟೇಲಿನಲ್ಲಿ ಕ್ಲೀನರ್ ಕೆಲಸವನ್ನೋ ಮಾಡಬೇಕಿತ್ತು. ಆದರೆ ಅಪ್ಪಣ್ಣನನ್ನು ಬಲ್ಲ ಜನ ಮಾತ್ರ ‘ನೀನು ಏನೋ ಒಂದು ಆಗುತ್ತೀಯ ಕಣೋ’ ಅನ್ನುತ್ತಿದ್ದರು. ಗಣೇಶ ಹಬ್ಬದಲ್ಲಿ ರಾಮಾಯಣ ಮಹಾಭಾರತದ ಕತೆಗಳನ್ನು ಬೊಂಬೆಗಳ ಮುಖಾಂತರ ಪ್ರರ್ಶಿಸುತ್ತಿದ್ದರು. ಆ ಟ್ರೆಂಡ್ ಮುಗಿದು ಅದನ್ನು ಮನುಷ್ಯರ ಮೂಲಕ ಹೇಳುವ ‘ಲೈಟ್ ಅಂಡ್ ಸೌಂಡ್’ ಕಾರ್ಯಕ್ರಮ ಪರಿಚಯವಾಗಿತ್ತು. ಅದನ್ನು ನಡೆಸುತ್ತಿದ್ದ ಸಹೃದಯೀ ಗುರು ಅಶೋಕ್ ಗೋನಬಾಳ್ ಎನ್ನುವವರು ಅಪ್ಪಣ್ಣನಲ್ಲಿನ ನಿಜವಾದ ಸಾಮರ್ಥ್ಯ ಏನನ್ನೋದನ್ನು ಕಂಡಿದ್ದರೋ ಏನೋ? ಅದೊಂದು ದಿನ ಕರೆದು ‘ಶಬರಿ ಪಾರ್ಟು ಮಾಡು’ ಅಂದಿದ್ದರು.
ನಾಟಕಗಳಿಗೆ ಸ್ಟೇಜು ಹಾಕುವುದು, ಸೆಟ್ ಡಿಸೈನ್ ಮಾಡೋದು ಸೇರಿದಂತೆ ರಂಗಭೂಮಿಯ ನಾನಾ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ಪ್ರತಿಭೆ ಅಶೋಕ್ ಗೋನಬಾಳ್. ಅವರು ತಾವು ಹೋದ ಜಾಗಗಳಿಗೆಲ್ಲಾ ಅಪ್ಪಣ್ಣನನ್ನೂ ಕರೆದೊಯ್ಯುತ್ತಿದ್ದರು. ಜೊತೆಗೆ ನಾಟಕದ ಪಟ್ಟುಗಳನ್ನು ಕಲಿಸುತ್ತಿದ್ದರು. ಅದೊಂದು ದಿನ ‘ನಿನ್ನಲ್ಲಿ ಅಸಾಧಾರಣ ಪ್ರತಿಭೆಯಿದೆ. ಯಾವುದಾದರೂ ನಾಟಕದ ಕಂಪೆನಿಗೆ ಸೇರಿಬಿಡು ಇನ್ನಷ್ಟು ಕಲಿಯಬಹುದು ಅಥವಾ ನೀನಾಸಂಗೆ ಸೇರಿಬಿಡು ಅಂದಿದ್ದರು’. ಅಪ್ಪಣ್ಣನ ನಾಲಿಗೆಯಲ್ಲಿ ‘ನೀನಾಸಂ’ ಅನ್ನೋ ಪದ ತಿರುಗದೆ ‘ಲೀಲಾಸಂ’ ಅನ್ನುತ್ತಿದ್ದರು. ‘ಲೇ ದಡ್ಡ ಅದು ಲೀಲಾಸಂ ಅಲ್ಲ, ನೀನಾಸಂ ಅಂತಾ. ಎಂ.ಎ. ಪರೀಕ್ಷೆ ಬರೆಯೋರಿಗೆ ನೀನಾಸಂ ವಿಸ್ತೃತ ಹೆಸರೇನು ಎನ್ನುವ ಪ್ರಶ್ನೆಯೇ ಇರತ್ತೆ. ನೀನೂ ತಿಳಿದುಕೋ ; ನೀಲಕಂಠೇಶ್ವರ ನಾಟ್ಯಸೇವಾಸಂಘ ಅಂತಾ..’ ಎನ್ನುತ್ತಾ ಮೊಟ್ಟ ಮೊದಲ ಬಾರಿಗೆ ನೀನಾಸಂನ ಪರಿಚಯ ಮಾಡಿಸಿದ್ದರು. ಆದರೆ ಅಪ್ಪಣ್ಣ ನೀನಾಸಂ ಕಡೆ ಹೋಗುವುದಿಲ್ಲ. ಸೀದಾ ಗದುಗಿನ ಅಜ್ಜರ ಕಂಪೆನಿಗೆ ಹೋಗಿ ಸೇರಿಕೊಳ್ಳುತ್ತಾರೆ. ಮೊದಲಿಗೆ ಅಲ್ಲಿ ಹೋಗಿ ಮಾಡಿದ್ದಾದರೂ ಯಾವ ಕೆಲಸವನ್ನ? ಕಸ ಗುಡಿಸೋದು, ಅನೌನ್ಸ್ ಮಾಡುವುದು, ಶೋ ಮುಗಿದ ಮೇಲೆ ಅಲ್ಲಿದ್ದ ಕಲಾವಿದರ ಬಿಚ್ಚಿಟ್ಟು ಹೋದ ಬಟ್ಟೆಗಳನ್ನು ಮಡಚಿಡುವ ಕಾಯಕವನ್ನು. ಈ ಎಲ್ಲಾ ಕೆಲಸಗಳನ್ನು ಮಾಡುತ್ತಾ ಅಲ್ಲಿ ವೃತ್ತಿರಂಗಭೂಮಿಯ ಪ್ರೊಫೆಷನಲ್ ನಟರು ಹೇಗೆ ಅಭಿನಯಿಸುತ್ತಾರೆ ಅನ್ನೋದನ್ನು ಗಮನಿಸುತ್ತಿದ್ದರು.
ಜೊತೆ ಜೊತೆಗೆ ಸಣ್ಣ ಪುಟ್ಟ ಪಾತ್ರಗಳೂ ಸಿಗುತ್ತಾ ಹೋಯಿತು. ಅಜ್ಜರ ಕಂಪೆನಿಯಲ್ಲಿ ಆರಾಮಾಗಿದ್ದುಬಿಟ್ಟಿದ್ದ ಅಪ್ಪಣ್ಣನಿಗೆ ಆವತ್ತೊಂದು ಕರೆ ಬರುತ್ತದೆ. ಮತ್ತದೇ ಅಶೋಕ್ ಗೊನಬಾಳ್ ಗುರುಗಳು. “ಲೇ ಅಪ್ಪಣ್ಣ ಮೊದಲು ಅಲ್ಲಿಂದ ಹೊರಟು ಸೀದಾ ನೀನಾಸಂಗೆ ಹೋಗು. ಇಲ್ಲದಿದ್ದರೆ ಇದ್ದಲ್ಲೇ ಇರಬೇಕಾಗುತ್ತದೆ. ಲೈಫಲ್ಲಿ ತಲೆ ಎತ್ತಿ ನಿಲ್ಲೋದಕ್ಕೆ ಆಗಲ್ಲ” ಎಂದು ಗದರುತ್ತಾರೆ. ಅಪ್ಪಣ್ಣ ತಕ್ಷಣ ಲಗೇಜು ಪ್ಯಾಕ್ ಮಾಡಿಕೊಂಡು ಹೊರಡುತ್ತಾರೆ; ನೀನಾಸಂ ಕಡೆಗಲ್ಲ, ಬೆಂಗಳೂರಿನತ್ತ. ಇಲ್ಲಿ ಬಂದವರು ಮೊದಲಿಗೆ ಕೊರಿಯರ್ ಬಾಯ್, ಪೇಪರ್ ಹಾಕುವ ಕೆಲಸ ಸೇರಿದಂತೆ, ಸಾಮಾನ್ಯಕ್ಕೆ ಕಲಾವಿದರಾಗಬಯಸುವವರು ಪಡುವ ಪಡಿಪಾಟಲುಗಳನ್ನೆಲ್ಲಾ ಅನುಭವಿಸುತ್ತಾರೆ. ಇದರ ಜೊತೆಗೆ ನೀನಾಸಂಗೆ ಹೋಗಿ ಕಲಿಯುವಷ್ಟು ಹಣವನ್ನು ಜೋಡಿಸಿಟ್ಟುಕೊಳ್ಳುತ್ತಾರೆ. ಒಂದಿಷ್ಟು ತಯಾರಿ ಮುಗಿಸಿಕೊಂಡು ನೀನಾಸಂಗೆ ಹೋಗಿ ನಿಲ್ಲುತ್ತಾರೆ. ಅಲ್ಲಿ ಸೀಟು ಗಿಟ್ಟಿಸಿಕೊಳ್ಳುವುದೆಂದರೆ ಸುಮ್ಮನೆ ಮಾತಾ? ಹನ್ನೆರಡು ಜನರ ಆಯ್ಕೆಗೆ ನಾನ್ನೂರು ಜನ ಎಲ್ಲೆಲ್ಲಿಂದಲೋ ಬಂದಿರುತ್ತಾರೆ. ಎರಡು ದಿನದ ಆಯ್ಕೆ ಪ್ರಕ್ರಿಯೆಯಲ್ಲಿ ಒಬ್ಬರಿಗಿಂತಾ ಒಬ್ಬರು ಪ್ರತಿಭಾವಂತರು ಹಾಜರಿರುತ್ತಾರೆ. ಅದಾಗಲೇ ಆರೇಳು ವರ್ಷಗಳಿಂದ ಪ್ರಯತ್ನಿಸುತ್ತಿರುವವರೂ ಕ್ಯೂನಲ್ಲಿರುತ್ತಾರೆ. ಇಂಥವರ ಮಧ್ಯೆ ಅಪ್ಪಣ್ಣ ಒಂದೇ ಏಟಿಗೆ ಸೆಲೆಕ್ಟ್ ಆಗಿ ನೀನಾಸಂನ ವಿದ್ಯಾರ್ಥಿಯಾಗಿಬಿಟ್ಟರು. ಅಲ್ಲಿಂದ ಅಪ್ಪಣ್ಣನ ಬದುಕಿಗೊಂದು ತಿರುವೂ ಸಿಕ್ಕಿತ್ತು!
ನೀನಾಸಂನಲ್ಲಿ ಒಂದು ವರ್ಷದ ಕೋರ್ಸು ಮುಗಿಸಿಕೊಳ್ಳುವ ಹೊತ್ತಿಗೆ ಅಲ್ಲೀತನಕ ಇದ್ದ ಅಪ್ಪಣ್ಣನ ನಡೆ, ನುಡಿ, ಬದುಕಿನ ರೀತಿ ಎಲ್ಲವೂ ಬದಲಾಗುತ್ತಾ ಬರುತ್ತದೆ. ಆ ನಂತರ ಎಂಪಿ. ಪ್ರಕಾಶ್ ಅವರ ರಂಗಭಾರತಿ ರೆಪರ್ಟರಿ, ಜನಮನ, ಆಟ ಮಾಟ ಸಂಸ್ಥೆ ಸೇರಿದಂತೆ ಒಂದಷ್ಟು ರಂಗ ತಂಡಗಳೊಂದಿಗೆ ತಿರುಗಾಟ ನಡೆಸುತ್ತಾರೆ. ಶಾಲೆಗಳಲ್ಲಿ ನಾಟಕ ಕಲಿಸುವ ವೃತ್ತಿ ಆರಂಭಿಸಿದ್ದ ಅಪ್ಪಣ್ಣನ ಎದುರು ಕಿರುತೆರೆಯಲ್ಲಿ ನಟಿಸುವ ಅವಕಾಶವೊಂದು ಬಂದೊದಗುತ್ತದೆ. ಬುಕ್ಕಾಪಟ್ಟಣ ವಾಸು ಅವರು ಕರೆದು ಸಾಯಿಬಾಬಾ ಸೀರಿಯಲ್ಲಿನಲ್ಲಿ ನಟಿಸುವ ಅವಕಾಶ ಕೊಡುತ್ತಾರೆ. ನಂತರ ಅರಸಿ ಧಾರಾವಾಹಿಯಲ್ಲೂ ಒಂದು ಕ್ಯಾರೆಕ್ಟರು ಸಿಗುತ್ತದೆ. ಜೊತೆಗೆ ಇನ್ನಿತರೆ ಧಾರಾವಾಹಿಗಳಲ್ಲೂ ಪೋಷಕ ಪಾತ್ರಗಳು ಗಿಟ್ಟುತ್ತವೆ. ಅದೇ ಹೊತ್ತಿಗೆ ಸಕ್ರೆಬೈಲು ಶ್ರೀನಿವಾಸ್ ಅವರು ಕರೆದು ಆಕಾಶ ದೀಪ ಅನ್ನೋ ಸೀರಿಯಲ್ಲಿನ ಎರಡನೇ ಹೀರೋ ಪಾತ್ರ ಕೊಡುತ್ತಾರೆ. ಅದು ಮುಗಿಯುತ್ತಿದ್ದಂತೇ ಸಿಹಿಕಹಿ ಚಂದ್ರು ಅವರ ಪಾರ್ವತಿ ಪರಮೇಶ್ವರ ಧಾರಾವಾಹಿಯ ಹೀರೋ ರವಿತೇಜ ಅವರು ಬಿಟ್ಟುಹೋಗಿದ್ದ ಮೇನ್ ಲೀಡ್ ಪಾತ್ರಕ್ಕೆ ಅಪ್ಪಣ್ಣ ರೀಪ್ಲೇಸ್ ಆಗುತ್ತಾರೆ. ಆ ಧಾರಾವಾಹಿ ಅಪ್ಪಣ್ಣ ಬಂದಮೇಲೆ ಒಂದೂವರೆ ವರ್ಷ ಪ್ರದರ್ಶನಗೊಳ್ಳುತ್ತದೆ.
ರಂಭೂಮಿ, ಕಿರುತೆರೆ ನೋಡಿದ್ದಾಯಿತು. ಇನ್ನು ಸಿನಿಮಾರಂಗದಲ್ಲಿ ದುಡಿದು, ಗುರುತಿಸಿಕೊಳ್ಳಬೇಕು ಎನ್ನುವ ಹೊಸಾ ಕನಸು ಅಪ್ಪಣ್ಣನ ಅಂತರಾಳದಲ್ಲಿ ಹುಟ್ಟಿಕೊಳ್ಳುತ್ತದೆ. ಇನ್ನು ಸೀರಿಯಲ್ಲುಗಳಲ್ಲಿ ನಟಿಸಬಾರದು ಅಂತಲೂ ತೀರ್ಮಾನಿಸಿಬಿಡುತ್ತಾರೆ. ಫನ್ ಮತ್ತು ಧ್ವಜ ಎನ್ನುವ ಎರಡು ಸಿನಿಮಾಗಳಲ್ಲಿ ನಟಿಸುತ್ತಾರೆ. ಆ ಎರಡೂ ಸಿನಿಮಾಗಳೂ ಅಪ್ಪಣ್ಣನ ಕೈ ಹಿಡಿಯೋದಿಲ್ಲ. ಇದ್ದ ಕೆಲಸ ಮಾಡೋದಿಲ್ಲ ಅಂತಾ ತೀರ್ಮಾನಿಸಿದ್ದಾಯಿತು. ಸಿನಿಮಾಗಳಲ್ಲಿ ಅವಕಾಶವಿಲ್ಲ. ಮುಂದೇನು ಅನ್ನೋ ದಾರಿಯೂ ಕಾಣುವುದಿಲ್ಲ. ಎರಡು ವರ್ಷಗಳ ಕಾಲ ಖಿನ್ನತೆ, ಕಾಸಿಲ್ಲದೆ ಕಂಗಾಲಾಗುವಂಥ ಪರಿಸ್ಥಿತಿ, ಯಾತನೆ ತಡೆಯಲಾರದೆ ಪತ್ನಿಯ ಮುಂದೆ ಕುಳಿತು ಕಣ್ಣೀರು ಸುರಿಸುತ್ತಿದ್ದ ಸಂದರ್ಭದಲ್ಲೇ ಅಪ್ಪಣ್ಣನ ಬದುಕಿಗೆ ಮತ್ತೊಬ್ಬ ಗುರುವಿನ ಎಂಟ್ರಿಯಾಗುತ್ತದೆ. ಇವತ್ತು ಕಾಮಿಡಿ ಕಿಲಾಡಿಗಳು ಎನ್ನುವ ಕಾರ್ಯಕ್ರಮದ ಮೂಲಕ ಅದೆಷ್ಟೋ ಗುಪ್ತ ಪ್ರತಿಭೆಗಳ ಉತ್ಖನನ ಮಾಡುತ್ತಿರುವ ಶರಣಯ್ಯರದ್ದು. ಅವರು ಕಾಲ್ ಮಾಡಿ ಡ್ರಾಮಾ ಜ್ಯೂನಿರ್‌ಗೆ ಮೆಂಟರ್ ಆಗಿ ಬಾ ಅಂತಾ ಕರೆಯುತ್ತಾರೆ. ಕಾಮಿಡಿ ಕಿಲಾಡಿಗಳು ಸೀಸನ್ ಎರಡರಲ್ಲಿ ಕೂಡಾ ಅವಕಾಶ ಸಿಗುತ್ತದೆ. ಅದರಲ್ಲಿ ರನ್ನರ್ ಆಗಿ ಹೊರಬರುತ್ತಾರೆ. ಚಾಂಪಿಯನ್ ಶಿಪ್ ಕೂಡಾ ಇವರದ್ದೇ ಆಗುತ್ತದೆ. ಇದರ ಜೊತೆಜೊತೆಗೇ ಯಾರಿಗುಂಟು ಯಾರಿಗಿಲ್ಲ ಅನ್ನೋ ಕಾರ್ಯಕ್ರಮವನ್ನು ಸೂರಜ್ ಜೊತೆಗೂಡಿ ನಿರೂಪಿಸುವ ಛಾನ್ಸೂ ಸಿಗುತ್ತದೆ. ಈ ಕಾರ್ಯಕ್ರಮಗಳಲ್ಲಿ ಮುಳುಗಿಹೋಗಿದ್ದ ಅಪ್ಪಣ್ಣನ ಮೊಬೈಲಿಗೆ ಅದೊಂದು ದಿನ ಹತ್ತಾರು ಮಿಸ್ಡ್ ಕಾಲ್‌ಗಳು ಬಂದಿರುತ್ತವೆ. ಯಾರು ಅಂತಾ ವಿಚಾರಿಸಿದರೆ ಅದು ಎಸ್ ಕೃಷ್ಣ ಮತ್ತು ಸ್ವಪ್ನಾ ಕೃಷ್ಣ ಅವರ ನಿರ್ಮಾಣ ಸಂಸ್ಥೆಯಿಂದ. ಯಾವುದೋ ಸಣ್ಣ ಪಾತ್ರವಿರಬೇಕು ಅಂತಾ ಹೋದರೆ, ಅಲ್ಲಿ ದೊಡ್ಡ ಕಾಮಿಡಿ ನಟನೊಬ್ಬ ಮಾಡಬೇಕಿದ್ದ ಕ್ಯಾರೆಕ್ಟರ್ರು  ಕಾರಣಾಂತರಗಳಿಂದ ಅಪ್ಪಣ್ಣನ ಪಾಲಾಗಿತ್ತು.; ಒಂದು ಕಡೆ ಕಾಮಿಡಿ ಕಿಲಾಡಿ ಅಂತಿಮ ಘಟ್ಟ, ಹೊಸಾ ಕಾರ್ಯಕ್ರಮದ ನಿರೂಪಣೆ ಇದರ ಜೊತೆಗೆ ಕಿಚ್ಚ ಸುದೀಪ ಅವರ ಸಿನಿಮಾದಲ್ಲಿ ನಟಿಸುವ ಅವಕಾಶ. ಕಷ್ಟ ಅನ್ನಿಸಿದರೂ ಎಲ್ಲವನ್ನೂ ನಿಭಾಯಿಸುತ್ತಾರೆ ಅಪ್ಪಣ್ಣ.
“ನಿರ್ದೇಶಕ ಕೃಷ್ಣ ಅವರು ನನಗೆ ಅವಕಾಶ ಕೊಟ್ಟು ಬೆನ್ನು ತಟ್ಟಿದ್ದು, ಸುದೀಪ್ ಸರ್, ಸುನೀಲ್ ಶೆಟ್ಟಿ, ಶರತ್ ಲೋಹಿತಾಶ್ವ ಸೇರಿದಂತೆ ಅನೇಕ ನಟರೊಂದಿಗೆ ನಟಿಸಿದ್ದು ನನ್ನ ಬದುಕಿನ ಸಾರ್ಥಕತೆ ಅಂತಾ ಭಾವಿಸುತ್ತೇನೆ’ ಅನ್ನೋದು ಅಪ್ಪಣ್ಣನ ಮಾತು. ಚಿತ್ರೀಕರಣದ ಸಂದರ್ಭದಲ್ಲೂ ಸುದೀಪ್ ಅವರು ಅಪ್ಪಣ್ಣನಿಗೆ ಅದ್ಭುತವಾಗಿ ಸಹಕರಿಸಿದರಂತೆ. ಖಾಸಗೀ ವಾಹಿನಿಯ ಸಂದರ್ಶನದ ಸಮಯವೂ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಖುದ್ದು ಕಿಚ್ಚ ತನ್ನ ಬಗ್ಗೆ ಹೊಗಳಿರೋ ವಿಚಾರ ಕೇಳಿ ಅಪ್ಪಣ್ಣ ನಿಜಕ್ಕೂ ಥ್ರಿಲ್ ಆಗಿದ್ದಾರೆ. ಈ ನಡುವೆ ಪೈಲ್ವಾನ್ ಬಿಡುಗಡೆಯಾಗಿದೆ. ಎಲ್ಲೆಡೆ ಅಪ್ಪಣ್ಣನ ಬಗ್ಗೆ ಒಳ್ಳೆ ವಿಮರ್ಶೆ, ಮಾತುಗಳು ಕೇಳಿಬರುತ್ತಿದೆ. ಸಿನಿಮಾ ಥೇಟರಿಗೇ ಕಾಲಿಡದ ಅಪ್ಪಣ್ಣನ ಅಮ್ಮ ಮಗನ ಸಿನಿಮಾ ನೋಡಿ ಮೆಚ್ಚಿದ್ದಾರೆ.
ಒಂದು ಕಾಲಕ್ಕೆ ರಾಮದುರ್ಗವೆಂಬ ಊರಿನಲ್ಲಿ, ಕೆಲಸಕ್ಕೆ ಬಾರದ ಮಾತಾಡಿಕೊಂಡಿದ್ದ ಅಪ್ಪಣ್ಣ ಆ ಮಾತೇ ತನ್ನ ಬಂಡವಾಳ ಅಂತಾ ತಿಳಿಯದಿದ್ದರೆ ಇಷ್ಟು ದೂರ ಸಾಗಿಬರಲು ಸಾಧ್ಯವಾಗುತ್ತಿರಲಿಲ್ಲ. ಅಪ್ಪಣ್ಣನ ಬದುಕು ನಿಜಕ್ಕೂ ನಾಲ್ಕಾರು ಜನಕ್ಕೆ ಮಾದರಿಯಾಗಬಲ್ಲದು. ಅವಧಿ ಕಡಿಮೆಯಾದರೂ ಅಪ್ಪಣ್ಣ ಸಾಗಿಬಂದಿರುವ ದಾರಿ ಬಲು ದೊಡ್ಡದು. ಹೀಗೇ ಮುಂದುವರಿದು ಅಪ್ಪಣ್ಣ ಕನ್ನಡದ ಪ್ರಮುಖ ಕಾಮಿಡಿ ನಟನಾಗಿ ಮಿಂಚಲಿ ಅಂತಾ ಆಶಿಸೋಣ…
ಅಪ್ಪಣ್ಣನ ಕೈ ಹಿಡಿದ ಸೂರ್ಯಕಲಾ!
ಅಪ್ಪಣ್ಣನ ಪತ್ನಿ ಸೂರ್ಯಕಲಾ ಕೂಡಾ ನೀನಾಸಂನಲ್ಲಿ ಓದಿಬಂದವರು. ಇಷ್ಟಪಟ್ಟು ಮದುವೆಯಾಗಿದ್ದಾರೆ. ಕಷ್ಟದ ದಿನಗಳಲ್ಲೂ ಕೈ ಹಿಡಿದು ನಡೆದಿದ್ದಾರೆ. ಸೂರ್ಯಕಲಾ ವೃತ್ತಿಯಿಂದ ಅಡ್ವೋಕೇಟ್. 
ಸೂರ್ಯಕಲಾ ಅವರ ಕುಟುಂಬದವರಿಗೂ ಅಪ್ಪಣ್ಣನೆಂದರೆ ಬಲು ಪ್ರೀತಿ. ದುಡಿಮೆ ಇಲ್ಲದ ದಿನಗಳಲ್ಲೂ ಯಾವುದಕ್ಕೂ ತತ್ವಾರವಾಗದಂತೆ ನೋಡಿಕೊಂಡಿದ್ದಾರೆ. ರಂಗಭೂಮಿಯ ಮೇಲಿನ ಪ್ರೀತಿಯ ಕಾರಣಕ್ಕೆ ಅಪ್ಪಣ್ಣ ಮತ್ತು ಸೂರ್ಯಕಲಾ ತಮ್ಮ ಮಗಳಿಗೆ ‘ನಾಟ್ಯಸಿರಿ’ ಅಂತಾ ಹೆಸರಿಟ್ಟಿದ್ದಾರೆ. ಇವೆಲ್ಲದರ ನಡುವೆ ಇವತ್ತು ಅಪ್ಪಣ್ಣನನ್ನು ಜನ ಗುರುತಿಸುತ್ತಿದ್ದಾರೆ. ಭವಿಷ್ಯದಲ್ಲಿ ನೂರಾರು ಸಿನಿಮಾಗಳಲ್ಲಿನ ನಟಿಸುವ ಅವಕಾಶವೂ ಎದುರಾಗುತ್ತದೆ. ಅಪ್ಪಣ್ಣ ಎಷ್ಟೇ ಎತ್ತರಕ್ಕೆ ಬೆಳೆದರೂ ಅಪ್ಪಣ್ಣನಾಗಿಯೇ ಉಳಿಯಲಿ. ಪತ್ನಿ ಕಲಾ ಬದುಕಿನಲ್ಲಿ ಸೂರ್ಯನಂತೆಯೇ ಬೆಳಗಲಿ…
ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಅರ್ಜುನ ಉವಾಚ!

Previous article

ಗೋಲ್ಡನ್ ಸ್ಟಾರ್ ವಾರ್ನಿಂಗ್!

Next article

You may also like

Comments

Leave a reply

Your email address will not be published.