ಹೀರೋಯಿಸಮ್ಮು, ಬಿಲ್ಡಪ್ಪುಗಳೆಲ್ಲಾ ಏನಿದ್ದರೂ ತೆರೆ ಮೇಲೆ ಮಾತ್ರ ಅನ್ನೋದು ಪುನೀತ್ ರಾಜ್ ಕುಮಾರ್ ಅವರಿಗೆ ಯಾವತ್ತೋ ಗೊತ್ತಾಗಿತ್ತು. ಸಿನಿಮಾ, ಅಭಿಮಾನಗಳನ್ನೆಲ್ಲಾ ನೋಡಿಕೊಂಡೇ ಬೆಳೆದವರಲ್ಲವಾ? ನಾನು ಮನುಷ್ಯ. ಎಲ್ಲರಂತೇ ಸಹಜವಾಗಿ ಜೀವಿಸಬೇಕು ಎನ್ನುವುದನ್ನು ಕೂಡಾ ಅಪ್ಪು ಸ್ಪಷ್ಟವಾಗಿ ಅರಿತಿದ್ದರು. ಹೀಗಾಗಿ ಸಿನಿಮಾ, ಶೂಟಿಂಗು, ಪಬ್ಲಿಸಿಟಿ, ಅಭಿಮಾನಿಗಳು, ಆಟೋಗ್ರಾಫು, ಸೆಲ್ಫಿಗಳೆಲ್ಲದರ ಹೊರತಾಗಿ ಪುನೀತ್ ಖಾಸಗೀ ಬದುಕನ್ನು ವಿಪರೀತ ಎಂಜಾಯ್ ಮಾಡುತ್ತಿದ್ದರು.
ಹೊರಗೆ ತಿರುಗಾಡಬೇಕು ಅಂತಾ ಅನ್ನಿಸಿದರೆ, ಯಾವತ್ತೂ ದಂಡು ದಾಳಿಗಳನ್ನು ಹಿಂದಿಕ್ಕಿಕೊಳ್ಳುತ್ತಿರಲಿಲ್ಲ. ಮುಖ ಗೊತ್ತಾಗದಂತೆ ಕ್ಯಾಪ್ ತೊಟ್ಟು ತಮ್ಮ ಪಾಡಿಗೆ ತಾವು ಓಡಾಡುತ್ತಿದ್ದರು. ಸಿನಿಮಾವನ್ನು ಹೊರತುಪಡಿಸಿದ ಅವರದ್ದೇ ಆದ ಸ್ನೇಹಿತರ ವಲಯವಿದೆ. ಅವರೊಂದಿಗೆ ತಾವೂ ಸೈಕಲ್ ಏರಿ, ನಂದಿಬೆಟ್ಟದ ತನಕ ಸೈಕ್ಲಿಂಗ್ ಮಾಡಿಬರುತ್ತಿದ್ದರು. ಬಿಡುವಿದ್ದಾಗಲೆಲ್ಲಾ, ಬೆಳಿಗ್ಗೆ ಎದ್ದು, ಸದಾಶಿವನಗರದಿಂದ ಆರಂಭಿಸಿ ವಿಧಾನಸೌಧವನ್ನು ಒಂದು ಸುತ್ತು ಹಾಕಿ ಸೈಕಲ್ಲಿನಲ್ಲಿ ರೌಂಡು ಹೊಡೆಯೋದು ಅವರಿಗೆ ಬಲು ಖುಷಿ. ತಾವು ಫಿಟ್ ಆಗಿರುವುದರೊಂದಿಗೆ ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳಲಿ ಅನ್ನೋ ಕಾರಣಕ್ಕೆ ʻಸೈಕಲ್ ತುಳಿದು, ಆರೋಗ್ಯ ಉಳಿಸಿಕೊಳ್ಳಿʼ ಎಂಬಂತಾ ಬರಹದೊಂದಿಗೆ ತಮ್ಮ ಸೈಕಲ್ ಪ್ರಯಾಣದ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಿದ್ದರು.
ಪಾರ್ವತಮ್ಮನವರು ಇದ್ದಾಗ ಎಲ್ಲಾದರೂ ಸಭೆ ಸಮಾರಂಭಗಳಿಗೆ ಹೋಗಬೇಕಿದ್ದ ಸಂದರ್ಭದಲ್ಲಿ, ಬಿಡುವಿದ್ದರೆ ಸ್ವತಃ ತಾವೇ ಕಾರ್ ಡ್ರೈವ್ ಮಾಡಿಕೊಂಡು ಕರೆದುಕೊಂಡು ಹೋಗುತ್ತಿದ್ದರು. ಬೆಂಗಳೂರಿನ ಪ್ರತಿಯೊಂದು ಏರಿಯಾದ ಪರಿಚಯ ಪವರ್ ಸ್ಟಾರ್ ಗಿತ್ತು. ಯಾವುದೇ ಜಾಗಕ್ಕೂ ಸಲೀಸಾಗಿ ಹೋಗಿಬಿಡುತ್ತಿದ್ದರು. ಇತ್ತೀಚೆಗೆ ನಾಗರಬಾವಿ ಅಪ್ಪುವನ್ನು ಅಪಾರವಾಗಿ ಸೆಳೆದಿತ್ತು. ರಾಷ್ಟ್ರಕೂಟ ಡೆವಲಪರ್ಸ್ ಮಾಲೀಕ ಹಾಗೂ ಕಿಸ್ ಸಿನಿಮಾದ ಮೂಲಕ ಸಿನಿಮಾ ನಿರ್ಮಾಣವನ್ನೂ ಮಾಡಿದ್ದ ರವಿಕುಮಾರ್ ಅವರ ಪಾಲುದಾರಿಕೆಯಲ್ಲಿ ʻಕಿಂಗ್ಸ್ ಕ್ಲಬ್ʼ ಹೆಸರಿನ ಐಶಾರಾಮಿ ಕ್ಲಬ್ ನಾಗರಬಾವಿ ಬಳಿ ಆರಂಭಗೊಂಡಿದೆ. ಈ ಜಾಗದಲ್ಲಿ ಅಪ್ಪು ಈತ್ತೀಚೆಗೆ ಹೆಚ್ಚು ಕಾಲ ಕಳೆಯುತ್ತಿದ್ದರು. ಕಥೆಗಳ ಡಿಸ್ಕಷನ್, ಸಿನಿಮಾ ಸಂಬಂಧಪಟ್ಟ ಚರ್ಚೆಗಳನ್ನು ನಡೆಸಲು ಪುನೀತ್ ಇದೇ ಸ್ಥಳವನ್ನು ಬಯಸುತ್ತಿದ್ದರು. ಪುನೀತ್ ಪಾಲ್ಗೊಳ್ಳುತ್ತಿದ್ದ ಕೋಟ್ಯಾಧಿಪತಿಯಂತಾ ರಿಯಾಲಿಟಿ ಶೋ ಕೂಡಾ ನಾಗರಬಾವಿಯಲ್ಲೇ ಚಿತ್ರೀಕರಣಗೊಳ್ಳುತ್ತಿತ್ತು.
ಪುನೀತ್ ಎಷ್ಟು ಸರಳ ಮತ್ತು ಸ್ವತಂತ್ರಪ್ರಿಯರೆಂದರೆ, ಮಲ್ಲೇಶ್ವರ ಸದಾಶಿವನಗರ ಏರಿಯಾಗಳು ಬೋರು ಹಿಡಿಸಿದಾಗ ಸೀದಾ ಬಸವನಗುಡಿ ಕಡೆ ಬಂದು ಎಂದಿನಂತೆ ತಲೆಗೊಂದು ಹ್ಯಾಟು ಹಾಕಿಕೊಂಡು ಗಾಂಧಿಬಜ಼ಾರಿನ ಬೀದಿಗಳಲ್ಲಿ ಅಡ್ಡಾಡಿದ್ದಿದೆ. ಇಷ್ಟರ ನಡುವೆಯೂ ಕೆಲವು ಅಭಿಮಾನಿಗಳು ಅವರನ್ನು ಗುರುತು ಹಿಡಿದು, ಫೋಟೋ ತೆಗೆದು ವೈರಲ್ ಆಗಿದ್ದೂ ನಡೆದಿದೆ.
ಇನ್ನು, ಸಿನಿಮಾ ಕೆಲಸಗಳೆಷ್ಟೇ ಇದ್ದರೂ ವರ್ಷಕ್ಕೊಮ್ಮೆಯಾದರೂ ಬಿಡುವು ಮಾಡಿಕೊಂಡು, ಮಡದಿ, ಮಕ್ಕಳನ್ನು ವಿದೇಶ ಪ್ರವಾಸಕ್ಕೆ ಕರೆದೊಯ್ಯುವ ಅಭ್ಯಾಸ ಅಪ್ಪುಗಿತ್ತು.
ತಾನೊಬ್ಬ ಸೂಪರ್ ಸ್ಟಾರ್ ಆಗಿದ್ದರೂ ಯಾವ ಅಹಮ್ಮಿಗೂ ಜಾಗ ಕೊಡದೆ, ತನ್ನನ್ನು ತಾನು ಸಿನಿಮಾದ ಇಮೇಜಿನೊಳಗೆ ಬಂಧಿಸಿಟ್ಟುಕೊಳ್ಳದ ಪುನೀತ್ ಇಲ್ಲಿ ಉಳಿದ ಅವಧಿ ಕಡಿಮೆಯಾದರೂ ಸಾರ್ಥಕ ಬದುಕು ಸಾಗಿಸಿ ಹೋಗಿದ್ದಾರೆ ಅನ್ನೋದು ನಿಜ.
Comments