ನಮ್ ಏರಿಯಾಲ್ ಒಂದಿನ ಎನ್ನುವ ಸಿನಿಮಾ ರಿಲೀಸಾದಾಗ ‘ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಕ್ರಿಯೇಟೀವ್ ಡೈರೆಕ್ಟರ್ ಸಿಕ್ಕರು ಅಂತಾ ಗಾಂಧಿನಗರಕ್ಕೆ ಗಾಂಧೀನಗರವೇ ಮಾತಾಡಿಕೊಂಡಿತ್ತು. ಹಾಗೆ ಮೊದಲ ಸಿನಿಮಾದಲ್ಲೇ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದ ನಿರ್ದೇಶಕ ಅರವಿಂದ್ ಕೌಶಿಕ್. ನಂತರ ತುಘ್ಲಕ್ ಚಿತ್ರ ತೆರೆಗೆ ಬಂತು. ಬಾಕ್ಸಾಫೀಸಲ್ಲಿ ಸೌಂಡು ಮಾಡದಿದ್ದರೂ ಹೊಸ ಥರದ ಸಿನಿಮಾ ಅನ್ನಿಸಿಕೊಂಡಿತ್ತು. ಇದಾದ ಮೇಲೆ ಅರವಿಂದ್ ಕೌಶಿಕ್ ಗಲ್ಬಸ್ಕಿ ಅನ್ನೋ ಚಿತ್ರವನ್ನು ಕೂಡಾ ನಿರ್ದೇಶನ ಮಾಡಿದ್ದರು. ಆದರದು ನಿರ್ಮಾಪಕರ ಕಾರಣದಿಂದ ರಿಲೀಸೇ ಆಗಲಿಲ್ಲ.
ನಿರ್ದೇಶನದ ಕೆಲಸ ಶುರು ಮಾಡುವ ಮುಂಚೆ ಅರವಿಂದ್ ಕೌಶಿಕ್ ಧಾರಾವಾಹಿಗಳಲ್ಲಿ ನಟಿಸುತ್ತಾ, ಸಿನಿಮಾಗಳಲ್ಲಿ ಕಂಠದಾನ ಕಲಾವಿದರಾಗಿಯೂ ಕೆಲಸ ಮಾಡಿದ್ದರು. ಇಷ್ಟೆಲ್ಲಾ ಸಿನಿಮಾ ಕೃಷಿಯ ನಡುವೆಯೇ ಅರವಿಂದ್ ಸಾಗುತ ದೂರ ದೂರ, ಅರಸಿ ಮತ್ತು ಶ್ರೀನಿವಾಸ ಕಲ್ಯಾಣ ಎಂಬ ಧಾರಾವಾಹಿಗಳನ್ನೂ ನಿರ್ದೇಶಿಸಿದ್ದರು. ಎರಡು ವರ್ಷಗಳ ಮುಂಚೆ ತೆರೆಗೆ ಬಂದು, ಅತ್ಯುತ್ತಮ ಹೆಸರು ಮಾಡಿದ ಹುಲಿರಾಯ ಚಿತ್ರವನ್ನು ಡೈರೆಕ್ಟ್ ಮಾಡಿದ್ದು ಸಹಾ ಇದೇ ಅರವಿಂದ್ ಕೌಶಿಕ್. ಹುಲಿರಾಯ ನಂತರ ಮತ್ತೆ ಧಾರಾವಾಹಿ ಕ್ಷೇತ್ರಕ್ಕೆ ವಾಪಾಸಾಗಿದ್ದ ಕೌಶಿಕ್ ಕಮಲಿ ಅನ್ನೋ ಸೂಪರ್ ಹಿಟ್ ಧಾರಾವಾಹಿ ಕೊಟ್ಟು ಮ್ಯಾಜಿಕ್ ಮಾಡಿದರು. ಇವತ್ತಿಗೂ ಕಮಲಿ ಅಪಾರ ಜನರನ್ನು ಹಿಡಿದಿಟ್ಟುಕೊಂಡು ಪ್ರದರ್ಶನ ಕಾಣುತ್ತಿದೆ. ಕಮಲಿ ಕೆಲಸದ ಜೊತೆ ಜೊತೆಗೇ ಶಾರ್ದೂಲ ಮತ್ತು ಸ್ಟೀಲ್ ಪಾತ್ರೆ ಸಾಮಾನ್ ಎನ್ನುವ ಸಿನಿಮಾಗಳನ್ನೂ, ಬಿಸಿಬೇಳೆಬಾತ್ ಎನ್ನುವ ಕಿರುಚಿತ್ರದ ನಿರ್ದೇಶನ ಕೆಲಸವನ್ನೂ ಮುಗಿಸಿದ್ದಾರೆ ಅರವಿಂದ್ ಕೌಶಿಕ್.
ಅರವಿಂದ್ ನಿರ್ದೇಶಿಸಿದ ಸಿನಿಮಾ ಮತ್ತು ಸೀರಿಯಲ್ಲುಗಳಿಂದ ಕನ್ನಡ ಚಿತ್ರರಂಗದಲ್ಲಿ ಉದಯಿಸಿರುವ ಸ್ಟಾರ್ಗಳು ಒಬ್ಬಿಬ್ಬರಲ್ಲ. ರಕ್ಷಿತ್ ಶೆಟ್ಟಿ, ಅನೀಶ್ ತೇಜೇಶ್ವರ್, ರಿಷಬ್ ಶೆಟ್ಟಿ ಯಂತಾ ಹೀರೋ ಕಂ ಡೈರೆಕ್ಟರುಗಳು, ಅರಸಿ ಧಾರಾವಾಹಿಯ ಮೂಲಕ ರಚಿತಾ ರಾಮ್ ಎನ್ನುವ ಲೇಡಿ ಸೂಪರ್ ಸ್ಟಾರ್, ನಮ್ ಏರಿಯಾಲ್ ಒಂದಿನ ಚಿತ್ರದಿಂದ ನಟಿ ಮೇಘನಾ ಗಾಂವ್ಕರ್ ಜನ್ಮವೆತ್ತಿದರು. ಇದಲ್ಲದೇ, ಬಾಲು ನಾಗೇಂದ್ರ ಎಂಬ ಅದ್ಭುತ ನಟ ಹೀರೋ ಆಗಿ ಹೆಸರು ಮಾಡಿದ್ದು ಹುಲಿರಾಯ ಸಿನಿಮಾದಲ್ಲಿ. ಅಷ್ಟೇ ಅಲ್ಲ ಇವತ್ತು ಕನ್ನಡ ಚಿತ್ರರಂಗದಲ್ಲಿ ಆಳ್ವಿಕೆ ನಡೆಸುತ್ತಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಲೈಮ್ ಲೈಟಿಗೆ ಬಂದಿದ್ದು ಇದೇ ಅರವಿಂದ್ ಕೌಶಿಕ್ ನಿರ್ದೇಶನದ ನಮ್ ಏರಿಯಾಲ್ ಒಂದಿನ ಮತ್ತು ತುಘ್ಲಕ್ ಚಿತ್ರಗಳಿಂದ.
ಒಬ್ಬ ವ್ಯಕ್ತಿ ಇಷ್ಟೆಲ್ಲಾ ಸಾಧನೆ ಮಾಡಿದ್ದಾರೆ, ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ಏಕಕಾಲಕ್ಕೆ ಪವಾಡಗಳನ್ನು ಸೃಷ್ಟಿಸುತ್ತಿದ್ದಾರೆಂದರೆ ಅದು ಅವರ ಪ್ರತಿಭೆಗೆ ಸಾಕ್ಷಿ. ಸಾಕಷ್ಟು ಕಲಾವಿದರು ತಂತ್ರಜ್ಞರು ಅರವಿಂದ್ ಅವರ ಗರಡಿಯಿಂದ ಎದ್ದುಬಂದಿದ್ದಾರೆ. ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ಮಾತ್ರವಲ್ಲದೆ, ಸಂಕಲನಕಾರರಾಗಿ, ಗೀತರಚನೆಕಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇಷ್ಟೆಲ್ಲಾ ಟ್ಯಾಲೆಂಟು ಹೊಂದಿರುವ ಅರವಿಂದ್ ಈಗ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಅದು ಸ್ವತಃ ಅವರೇ ಹೀರೋ ಆಗುವುದು. ಹಾಗೆ ನೋಡಿದರೆ, ನಟನಾಗಿಯೇ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದ ಅರವಿಂದ್ ಕಾಲಕ್ರಮೇಣ ನಿರ್ದೇಶನ ವಿಭಾಗದಲ್ಲೇ ಹೆಚ್ಚು ಗುರುತಿಸಿಕೊಳ್ಳುವಂತಾಗಿತ್ತು. ಈಗ ಸ್ವತಃ ಅವರೇ ಬರೆದುಕೊಂಡಿರುವ ಗಂಭೀರ ಕಥಾವಸ್ತು ಮತ್ತು ನವಿರು ಹಾಸ್ಯದ ಲೇಪನವಿರುವ ಸಿನಿಮಾದ ಮೂಲಕ ಅರವಿಂದ್ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಪ್ರಧಾನ ಪಾತ್ರವನ್ನು ನಿರ್ವಹಿಸಬಲ್ಲ ಎಲ್ಲ ಅರ್ಹತೆಯೂ ಅರವಿಂದ್ ಅವರಿಗಿದೆ. ಕೈ ಇಟ್ಟಲ್ಲೆಲ್ಲಾ ತಮ್ಮ ತನವನ್ನು ಋಜುವಾತು ಪಡಿಸಿರುವ ಅರವಿಂದ್ ನಟನಾಗಿಯೂ ಛಾಪು ಮೂಡಿಸಬಲ್ಲರು. ಅದಕ್ಕೆ ಅವರೇ ನಿರ್ದೇಶಿಸಿ, ನಟಿಸಲಿರುವ ಚಿತ್ರ ಸಾಕ್ಷಿಯಾಗಲಿ.
ಅಂದಹಾಗೆ, ಅರವಿಂದ್ ಕೌಶಿಕ್ ಹೀರೋ ಆಗಿ ನಟಿಸಲಿರುವ ಚಿತ್ರದ ಹೆಸರು, ಇತ್ಯಾದಿ ವಿವರಗಳು ಇಷ್ಟರಲ್ಲೇ ಜಾಹೀರಾಗಲಿದೆ…