ನಟಿ ಅರ್ಚನಾ ವೇದಾ ಗೊತ್ತಲ್ಲ?
ಕನ್ನಡದಲ್ಲಿ ‘ಆ ದಿನಗಳು ಸಿನಿಮಾದ ಮೂಲಕ ಹೆಸರು ಮಾಡಿದವಳು. ತೆಲುಗು ಮೂಲದ ಈ ಹುಡುಗಿಗೆ ಅಲ್ಲಿ ಅಂತಾ ಅವಕಾಶಗಳು ಸಿಕ್ಕಿರಲಿಲ್ಲ. ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಗಾಡ್ ಫಾದರ್ಗಳಿಲ್ಲದೇ ಬೆಳೆಯೋದು ತುಂಬಾನೇ ಕಷ್ಟ. ಛಾನ್ಸು ಕೊಡ್ತೀವಿ ಅಂತಾ ಮಂಚಕ್ಕೆ ಕರೆಯುತ್ತಿದ್ದ ನಿರ್ದೇಶಕರು, ಪ್ರೊಡಕ್ಷನ್ ಮ್ಯಾನೇಜರುಗಳಿಂದ ಬೇಸತ್ತಿದ್ದ ಅರ್ಚನಾಳ ಬದುಕು ಬದಲಿಸಿದ್ದು ‘ಆ ದಿನಗಳು. ಅಗ್ನಿ ಶ್ರೀಧರ್ ತಂಡ ರೂಪಿಸಿದ ಈ ಸಿನಿಮಾ ಹತ್ತು ವರ್ಷಗಳ ಹಿಂದೆ ಸೃಷ್ಟಿಸಿದ್ದ ಸಂಚಲನ ದೊಡ್ಡದು. ನಟ ಚೇತನ್, ಸರ್ದಾರ್ ಸತ್ಯ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಿಂದ ಹೊರಹೊಮ್ಮಿದ್ದರು. ಅರ್ಚನಾ ಕೂಡಾ ಪ್ರೇಕ್ಷಕರ ಮನಸ್ಸಿನಲ್ಲಿ ಸಿಹಿ ಗಾಳಿಯ ಸಹಿ ಹಾಕಿದ್ದಳು. ನಂತರ ವಿಶಾಲ್ ರಾಜ್ ನಿರ್ದೇಶನದ ಮಿಂಚು, ಮೇಘವರ್ಷಿಣಿ, ಮತ್ತು ಬಿ.ಎಂ. ಗಿರಿರಾಜ್ ನಿರ್ದೇಶನದ ಮೈತ್ರಿ ಸಿನಿಮಾಗಳಲ್ಲಿ ಅರ್ಚನಾ ನಟಿಸಿದ್ದಳು.

ಇದಾಗುತ್ತಿದ್ದಂತೇ ಅರ್ಚನಾಗೆ ದಕ್ಷಿಣ ಭಾರತದಲ್ಲಿ ಅವಕಾಶಗಳು ಹೆಚ್ಚಾದವು. ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ ಅರ್ಚನಾ ಆಯಾ ರಾಜ್ಯಗಳಲ್ಲಿ ಸಾಕಷ್ಟು ಪ್ರಶಸ್ತಿಗಳನ್ನೂ ಪಡೆದಳು. ಹೀಗೇ ಮುಂದುವರಿದಿದ್ದರೆ ಅರ್ಚನಾ ಇನ್ನಷ್ಟು ಎತ್ತರಕ್ಕೆ ಏರಬಹುದಿತ್ತೇನೋ? ಈಕೆಗೆ ಹಿಂದಿ ಸಿನಿಮಾರಂಗದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ ಬಯಕೆ ಶುರುವಾಗಿತ್ತು. ಈ ಕಾರಣಕ್ಕಾಗಿ ಬಾಂಬೆಗೆ ಹೋದ ಅರ್ಚನಾ ಅವಕಾಶಕ್ಕಾಗಿ ಅಲೆದಾಡಿಬಿಟ್ಟಳು. ನಟ ಜಾಕೀಶ್ರಾಫ್ ಜೊತೆ ಮೇಲಿಂದ ಮೇಲೆ ಕಾಣಿಸಿಕೊಂಡಳು. ಇದು ನೋಡುಗರಿಗೆ ಬೇರೆಯದ್ದೇ ರೀತಿಯ ಸಂದೇಶ ರವಾನಿಸಿತು. ಗಾಸಿಪ್ಪುಗಳಿಗೆ ಆಹಾರವಾಯಿತು. ಇಲ್ಲಿದ್ದ ಅವಕಾಶಗಳನ್ನೂ ಬಿಟ್ಟು ಮುಂಬೈಗೆ ಹೋದ ಅರ್ಚನಾಗೆ ಅಲ್ಲೊಂದು ಇಲ್ಲೊಂದು ಅವಕಾಶ ಸಿಕ್ಕಿತು ಅನ್ನೋದನ್ನು ಬಿಟ್ಟರೆ ಮಿಕ್ಕಂತೆ ದಕ್ಕಿದ್ದು ಭರ್ತಿ ಅವಮಾನ.

ವಾಪಾಸು ಹೈದರಾಬಾದಿಗೆ ಬರುವ ಹೊತ್ತಿಗೆ ಅರ್ಚನಾ ಜಾಗದಲ್ಲಿ ಬೇರೆ ನಟಿಯರು ಬಂದು ಕುಳಿತಿದ್ದರು. ಹೀಗಾಗಿ ಬಿಗ್ ಬಾಸ್ ಕಾರ್ಯಕ್ರಮದ ಸ್ಪರ್ಧಿಯಾಗುವುದರಲ್ಲೇ ಅರ್ಚನಾ ಸಮಾಧಾನ ಪಟ್ಟುಕೊಳ್ಳಬೇಕಾಯಿತು.

ಈಗ ಅರ್ಚನಾ ನಟನೆಗೆ ಟಾಟಾ ಹೇಳುವ ನಿರ್ಧಾರ ತೆಗೆದುಕೊಂಡು ಮದುವೆಯಾಗುತ್ತಿದ್ದಾಳೆ. ತನ್ನ ಬಹುಕಾಲದ ಬಾಯ್ ಫ್ರೆಂಡು ಜಗದೀಶ್ ಜೊತೆ ನೆನ್ನೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾಳೆ. ಹಳೇ ಲವ್ವು ಈಗ ಹೊಸ ಬದುಕಿಗೆ ಕಾರಣವಾಗಿದೆ!