ಸಾಕಷ್ಟು ಹಿರಿಯ ನಿರ್ದೇಶಕರೊಂದಿಗೆ ಹತ್ತಾರು ಸಿನಿಮಾಗಳಿಗೆ ಸಹಾಯಕರಾಗಿ ದುಡಿದು ನಂತರ ನಿರ್ದೇಶಕರಾಗಿ ದೊಡ್ಡ ಹೆಸರು ಮಾಡಿದವರು ರಾಜ್ ಕಿಶೋರ್. ಅಷ್ಟೊಂದು ಸಿನಿಮಾಗಳನ್ನು ನಿರ್ದೇಶಿಸಿ ಆ ಕಾಲಕ್ಕೇ ಸ್ಟಾರ್ ಡೈರೆಕ್ಟರ್ ಅನ್ನಿಸಿಕೊಂಡಿದ್ದವರು. ಈಗ ಅವರ ಮಗಳು ಕೂಡಾ ನಿರ್ದೇಶನದತ್ತ ಒಲವು ತೋರಿದ್ದಾರೆ.
ಬಂಡ ನನ್ನ ಗಂಡ, ಬೇಡ ಕೃಷ್ಣ ರಂಗಿನಾಟ, ಅಕ್ಕ, ಭೈರವ, ಆಸೆಯ ಬಲೆ, ಸಿಂಹಾದ್ರಿ, ಉತ್ತರ ಧೃವದಿಂದ ದಕ್ಷಿಣ ಧೃವಕೂ ದಿಂದ ಹಿಡಿದು ವಿಶಾಲಾಕ್ಷಮ್ಮನ ಗಂಡ, ಪುಕ್ಸಟ್ಟೆ ಗಂಡ ಹೊಟ್ಟೆ ತುಂಬ ಉಂಡ ತನಕ ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ ನಿರ್ದೇಶಕ ರಾಜ್ ಕೀಶೋರ್, ಅಂಬರೀಶ್, ದೇವರಾಜ್, ಶಶಿಕುಮಾರ್, ಜಗ್ಗೇಶ್ ಸೇರಿದಂತೆ ಆ ಕಾಲದ ಸ್ಟಾರ್ ನಟರ ಸಿನಿಮಾಗಳನ್ನು ನಿರ್ದೇಶಿಸಿದ್ದವರು ರಾಜ್ ಕಿಶೋರ್. ಕಡಿಮೆ ಅವಧಿಯಲ್ಲಿ ಬರೋಬ್ಬರಿ ಇಪ್ಪತ್ನಾಲ್ಕು ಸಿನಿಮಾಗಳನ್ನು ನಿರ್ದೇಶಿಸಿದ್ದ ರಾಜ್ ಕಿಶೋರ್ ಅಷ್ಟೇ ಬೇಗ ಕಣ್ಮರೆಯಾದವರು.
ಈಗ ರಾಜ್ ಕಿಶೋರ್ ಅವರ ಮಗಳು ಚಿತ್ರರಂಗದಲ್ಲೇ ದುಡಿಯುತ್ತಿರುವ ವಿಚಾರ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ರಾಘವೇಂದ್ರ ವೈಭವ ಧಾರಾವಾಹಿಯ ಮುಖಾಂತರ ನಟನಾ ವೃತ್ತಿಗಿಳಿದ ಸಿಂಧೂ ತೆಲುಗಿನ ಮೂಡುಮುಳ್ಳ ಬಂಧಂ, ತಮಿಳಿನ ಚಿನ್ನತೆರೆ ಸಿನಿಮಾ ಧಾರಾವಾಹಿಗಳಲ್ಲೂ ಪಾತ್ರ ನಿರ್ವಹಿಸಿದ್ದರು. ಮತ್ತೆ ಕನ್ನಡಕ್ಕೆ ಮರಳಿದ ಸಿಂಧೂ ಮುಕುಂದ ಮುರಾರಿ ಚಿತ್ರದಲ್ಲಿ ಚೆಂದದ್ದೊಂದು ಪಾತ್ರದಲ್ಲಿ ಕಾಣಿಸಿಕೊಂಡರು. ಪತ್ತೇದಾರಿ ಪ್ರತಿಭಾ ಧಾರಾವಾಹಿಯ ಮೂಲಕ ಸಿಂಧೂರನ್ನು ಕನ್ನಡಿಗರು ಗುರುತಿಸುವಂತಾಯಿತು.
ಹೀಗೆ ನಟನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಸಿಂಧೂ ರಾಜ್ ಕಿಶೋರ್ ಈಗ ಕಿರು ಚಿತ್ರವೊಂದರ ಮೂಲಕ ನಿರ್ದೇಶಕಿಯಾಗಿಯೂ ಗುರುತಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಎಂಥಾ ಉತ್ತಮನೂ ಕೂಡಾ ತನ್ನ ಮುಂದೆ ಸಮಸ್ಯೆಗಳು ಎದುರಾದಾಗ ಮೃಗೀಯವಾಗಿ ವರ್ತಿಸುತ್ತಾನೆ ಎನ್ನುವ ಹೊಸಾ ಫಿಲಾಸಫಿಯನ್ನು ಎತ್ತಿಹಿಡಿಯುವ ʻಅರಿʼ ಎನ್ನುವ ಸಬ್ಜೆಕ್ಟನ್ನು ಸಿಂಧೂ ತಮ್ಮ ಕಿರುಚಿತ್ರದ ಕಥಾವಸ್ತುವಾಗಿಸಿದ್ದಾರೆ.
ಈ ಶಾರ್ಟ್ ಮೂವಿಯಲ್ಲಿ ಆದಿತ್ಯ ಸನ್ನಿ ಗೌಡ, ಮಾಧುರ್ಯ ರಾಜ್ ಕಿಶೋರ್, ಕಿರಣ್ ಬಿರಾದಾರ್, ವಿನಯ್ ರಾಜ್, ಅಭಿಷೇಕ್ ರಾಯ್ಕರ್, ಮಾನಸ, ಮಹೇಶ್ ಮುಂತಾದವರು ಈ ಕಿರುಚಿತ್ರದ ಭಾಗವಾಗಿದ್ದಾರೆ. ರಂಗಸ್ವಾಮಿ ಛಾಯಾಗ್ರಹಣ, ಮಂಜುನಾಥ್ ಕಲ್ಮನೆ ಸಂಕಲನ ಈ ಕಿರುಚಿತ್ರಕ್ಕಿದೆ. ಯೋಗೇಶ್ ಗೌಡ ಬರೆದಿರುವ ಶೀರ್ಷಿಕೆ ಗೀತೆಯನ್ನು ವಿಜಯಶ್ರೀ ಹಾಡಿದ್ದಾರೆ. ಈಗಾಗಲೇ ಚಿತ್ರೀಕರಣ ಕಂಪ್ಲೀಟ್ ಮಾಡಿದ್ದು, ಇತರೆ ತಾಂತ್ರಿಕ ಕೆಲಸಗಳು ನಡೆಯುತ್ತಿವೆ.
ಕನ್ನಡದಲ್ಲೇ ಸಾಕಷ್ಟು ಕಿರುಚಿತ್ರಗಳು ರೂಪುಗೊಳ್ಳುತ್ತಿರುತ್ತವೆ. ಟೆಕ್ನಿಕಲ್ ವಿಚಾರದಲ್ಲಿ ಸಾಕಷ್ಟು ಶಾರ್ಟ್ ಮೂವಿಗಳು ಬಲು ವೀಕಾಗಿರುತ್ತವೆ. ಆದರೆ, ತಮ್ಮ ಸಿನಿಮಾ ಕಂಟೆಂಟ್ ಮಾತ್ರವಲ್ಲ, ತಾಂತ್ರಿಕವಾಗಿಯೂ ಶ್ರೀಮಂತವಾಗಿರಬೇಕು. ಅವಧಿ ಕಡಿಮೆಯಾದರೂ ನೋಡಿದವರಿಗೆ ಒಂದಿಡೀ ಸಿನಿಮಾವನ್ನು ನೋಡಿದ ಫೀಲ್ ಹುಟ್ಟಬೇಕು ಎನ್ನುವುದು ನಿರ್ದೇಶಕಿ ಸಿಂಧೂ ಬಯಕೆ.
No Comment! Be the first one.