ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿ ಅಭಿನಯಿಸಿರುವ ಚಿತ್ರ ಅರ್ಜುನ್ ಗೌಡ. ಪ್ರಜ್ವಲ್ ಈ ಚಿತ್ರದ ಮೂಲಕ ಮತ್ತೊಮ್ಮೆ ಆಕ್ಷನ್ ಹೀರೋ ಆಗಿ ಹೊರಹೊಮ್ಮಿದ್ದಾರೆ. 90, ದೇವ್ರಾಣೆ ಖ್ಯಾತಿಯ ಲಕ್ಕಿ ಶಂಕರ್ ಅವರ ನಿರ್ದೇಶನದಲ್ಲಿ ಹೊರಬರುತ್ತಿರುವ ಈ ಚಿತ್ರದಲ್ಲಿ ಪೂರ್ಣಪ್ರಮಾಣದ ಆಕ್ಷನ್ ಹೀರೋ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆರಂಭಕ್ಕೂ ಮೊದಲೇ ಇದು ತೆಲುಗಿನ ಸೂಪರ್ ಹಿಟ್ ಅರ್ಜುನ್ ರೆಡ್ಡಿ ಚಿತ್ರದ ರಿಮೇಕ್ ಇರಬಹುದೇನೋ ಎಂಬ ಅನುಮಾನ ಸಾಕಷ್ಟು ಸಿನಿರಸಿಕರನ್ನು ಕಾಡಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ದೇಶಕರೇ ಸ್ಪಷ್ಟನೆ ಕೊಟ್ಟಿದ್ದಾರೆ. ಇದು ಖಂಡಿತ ಆ ಚಿತ್ರದ ರಿಮೇಕ್ ಅಲ್ಲ, ಪಕ್ಕಾ ಸ್ವಮೇಕ್ ಚಿತ್ರ, ನನ್ನದೇ ಕಥೆ ಎಂದು ಅವರು ಹೇಳಿದ್ದಾರೆ.
ಕನ್ನಡದಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನಿರ್ಮಿಸಿದ ರಾಮು ಫಿಲಂಸ್ನ ನಿರ್ಮಾಪಕ ರಾಮು ಅವರು ಬಂಡವಾಳ ಹಾಕಿ ಅದ್ದೂರಿಯಾಗಿ ನಿರ್ಮಿಸಿರುವ ಈ ಚಿತ್ರದ ಟೀಸರ್ ಅನಾವರಣ ಸಮಾರಂಭ ಕಳೆದ ವಾರ ಎಸ್ಆರ್ವಿ ಥಿಯೇಟರಿನಲ್ಲಿ ನೆರವೇರಿತು. ಸಮಾಜದ ಬಗ್ಗೆ ಕಳಕಳಿ ಇರುವ ಒಬ್ಬ ಆಂಗ್ರಿ ಯಂಗ್ ಮ್ಯಾನ್ ಕಥೆಯನ್ನು ನಿರ್ದೇಶಕ ಲಕ್ಕಿ ಶಂಕರ್ ಅವರು ಈ ಚಿತ್ರದ ಮೂಲಕ ಹೇಳಹೊರಟಿದ್ದಾರೆ, ಇದೊಂದು ರೊಮ್ಯಾಂಟಿಕ್ ಆಕ್ಷನ್ ಕಥಾಹಂದರ ಹೊಂದಿರೋ ಚಿತ್ರವಾಗಿದ್ದು, ಈಗಾಗಲೇ ಮಂಗಳೂರು, ಬೆಂಗಳೂರು, ಚಿಕ್ಕಮಗಳೂರು, ಹಾಗೂ ಊಟಿ ಸುತ್ತಮುತ್ತ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದ್ದು, ಕೆಲಭಾಗದ ಚಿತ್ರೀಕರಣ ಮಾತ್ರವೇ ಬಾಕಿಯಿದೆ. ಸಾಮಾನ್ಯವಾಗಿ ಎಲ್ಲರೂ ಡ್ಯುಯೆಟ್ ಹಾಡುಗಳನ್ನು ಚಿತ್ರೀಕರಣ ಮಾಡಲು ವಿದೇಶಗಳಿಗೆ ಹೋಗುತ್ತಾರೆ, ಆದರೆ ಈ ಚಿತ್ರದ ಕೆಲವು ಆಕ್ಷನ್ ಹಾಗೂ ಟಾಕೀ ಪೋರ್ಷನ್ಗಳನ್ನು ಸಿಂಗಪೂರ್ ಹಾಗೂ ಬ್ಯಾಂಕಾಕ್ನಲ್ಲಿ ಚಿತ್ರೀಕರಿಸುವ ಯೋಜನೆಯನ್ನು ನಿರ್ದೇಶಕ ಲಕ್ಕೀ ಶಂಕರ್ ಅವರು ಹಾಕಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕೆಂಪ ಖ್ಯಾತಿಯ ನಟಿ ಪ್ರಿಯಾಂಕ ತಿಮ್ಮೇಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಅರ್ಜುನ್ಗೌಡ ಚಿತ್ರವನ್ನು ಬರುವ ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ತೆರೆಗೆ ತರುವ ಯೋಜನೆ ನಿರ್ಮಾಪಕ ರಾಮು ಅವರಿಗಿದೆ.