ಮೋದಿ ಸರ್ಕಾರ ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ್ದ ಆರ್ಟಿಕಲ್ 370 ಮತ್ತು 35 ಎ ಆರ್ಟಿಕಲ್ ನ್ನು ರದ್ದು ಮಾಡಿದ್ದ ಬೆನ್ನಲ್ಲೇ ಬಿ ಟೌನ್ ನ ನಿರ್ಮಾಪಕರ ಗುಂಪು ಆ ಆರ್ಟಿಕಲ್ ಹೆಸರಿನಲ್ಲಿಯೇ ಸಿನಿಮಾ ನಿರ್ಮಿಸಲು ಟೈಟಲ್ ಗಾಗಿ ಮುಗಿಬಿದ್ದಿದ್ದಾರೆ. ಕಳೆದ ಎರಡು ದಿನಗಳಿಂದ 20-30 ನಿರ್ಮಾಪಕರು ಈ ಟೈಟಲ್ ಗಳನ್ನು ರಿಜಿಸ್ಟರ್ ಮಾಡಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಈ ಟೈಟಲ್ಗಳ ಹಕ್ಕು ಕೇಳಿ ಈಗಾಗಲೇ ಅನೇಕ ನಿರ್ಮಾಪಕರು ಭಾರತೀಯ ಸಿನಿಮಾ ನಿರ್ಮಾಪಕರ ಸಂಘವನ್ನು ಸಂಪರ್ಕಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಆರ್ಟಿಕಲ್ 370 ರದ್ದುಗೊಳಿಸುವ ಮುನ್ನವೇ ಈ ವಿಷಯದ ಕುರಿತು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದ ನಿರ್ಮಾಪಕ ಆನಂದ್ ಪಂಡಿತ್, ಈಗಾಗಲೇ ಆರ್ಟಿಕಲ್ 370 ಮತ್ತು ಆರ್ಟಿಕಲ್ 35ಎ ಟೈಟಲ್ಗಳಿಗೆ ಹಕ್ಕು ಮಂಡಿಸಿದ್ದಾರೆ ಎಂದು ತಿಳಿದು ಬಂದಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬಯೋಪಿಕ್ ನಿರ್ಮಿಸಿರುವ ಅವರು, ಕೇವಲ ಒಂದು ರಾಜ್ಯಕ್ಕೆ ಮಾತ್ರ ಈ ಸವಲತ್ತು ಯಾಕೆ ಎಂಬ ಬಗ್ಗೆ ನಾನು ಸಿನಿಮಾ ನಿರ್ಮಿಸಬೇಕು ಎಂದುಕೊಂಡಿದ್ದೆ. ಈಗ ಮೋದಿಯವರ ಐತಿಹಾಸಿಕ ನಿರ್ಧಾರದಿಂದಾಗಿ ನನ್ನ ಸಿನಿಮಾಗೆ ಪರ್ಫೆಕ್ಟ್ ಎಂಡಿಂಗ್ ಸಿಕ್ಕಂತಾಗಿದೆ ಎಂದಿದ್ದಾರೆ. ಇವೆರಡು ಟೈಟಲ್ ಮಾತ್ರವಲ್ಲದೆ, ಕಾಶ್ಮೀರ್ ಹಮಾರ ಹೇ, ಧಾರ 370, ಧಾರ 35ಎ, ಕಾಶ್ಮೀರ್ ಮೆ ತಿರಂಗಾ, ಆರ್ಟಿಕಲ್ 370 ಸ್ಕ್ರಾಪ್ಡ್ ಎಂಬ ಟೈಟಲ್ಗಳಿಗೂ ಬೇಡಿಕೆ ವ್ಯಕ್ತವಾಗಿದೆ ಎಂದು ಸಿನಿಮಾ ನಿರ್ಮಾಪಕರ ಸಂಘ ತಿಳಿಸಿದೆ. ಆದರೆ ಯಾವುದೇ ಟೈಟಲ್ ಅಧಿಕೃತವಾಗಿಲ್ಲ.