ತಮಿಳು, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಅರುಣ್ ಪಾಂಡ್ಯನ್ ಪುತ್ರಿ ಕೀರ್ತಿ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ರಂಗಭೂಮಿ ಕಲಾವಿದೆಯಾದ ಕೀರ್ತಿ ಬ್ಯಾಲೆಟ್ ಮತ್ತು ಸಾಲ್ಸಾ ನೃತ್ಯಪಟು ಕೂಡ ಹೌದು. ಹರೀಶ್ ಚೊಚ್ಚಲ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ತಮಿಳು ಚಿತ್ರದ ಶೀರ್ಷಿಕೆಯಿನ್ನೂ ನಿಗಧಿಯಾಗಿಲ್ಲ. ಕಳೆದ ವರ್ಷ ತೆರೆಕಂಡ ’ಕಣ’ ತಮಿಳು ಚಿತ್ರದಲ್ಲಿ ಗಮನಸೆಳೆದ ನಟ ದರ್ಶನ್ ಹೀರೋ. “ತಂದೆಯ ಪ್ರಭಾವ ನನಗೆ ಬೇಕಿಲ್ಲ. ನಾನು ಮೂರು ವರ್ಷ ರಂಗಭೂಮಿಯಲ್ಲಿ ಕೆಲಸ ಮಾಡಿ ನಟನೆ ಕಲಿತಿದ್ದೇನೆ. ಆಡಿಷನ್ನಲ್ಲಿ ಕೂಡ ನನ್ನ ಸರ್ನೇಮ್ ಹೇಳಿರಲಿಲ್ಲ. ಯಾರ ಶಿಫಾರಸು ಇಲ್ಲದೆ ಈ ಪಾತ್ರ ಗಿಟ್ಟಿಸಿದ್ದು, ಸ್ವತಂತ್ರವಾಗಿ ಗುರುತಿಸಿಕೊಳ್ಳಲು ಇಚ್ಛಿಸುತ್ತೇನೆ” ಎನ್ನುತ್ತಾರೆ ಕೀರ್ತಿ.
ಈ ಥ್ರಿಲ್ಲರ್-ಫ್ಯಾಮಿಲಿ ಎಂಟರ್ಟೇನರ್ ಚಿತ್ರವನ್ನು ದೇಶದ ಕೆಲವೆಡೆಯ ರಕ್ಷಿತಾರಣ್ಯಗಳಲ್ಲಿ ಚಿತ್ರಿಸಲಾಗಿದೆಯಂತೆ. ಯತೇಚ್ಛ ವಿಎಫ್ಎಕ್ಸ್ ಬಳಕೆ ಮಾಡಲಾಗುತ್ತಿದೆ. ಹಲವೆಡೆ ಪಾತ್ರಗಳನ್ನು ಊಹಿಸಿ ಕ್ಯಾಮೆರಾ ಎದುರಿಸುವ ಸವಾಲನ್ನು ಕೀರ್ತಿ ಎದುರಿಸಿದ್ದಾರೆ. ಆಗೆಲ್ಲಾ ತಮಗೆ ರಂಗಭೂಮಿ ಅನುಭವ ನೆರವಿಗೆ ಬಂದಿದೆ ಎನ್ನುತ್ತಾರವರು. ಅವರ ತಂದೆ ಅರುಣ್ ಪಾಂಡ್ಯನ್ ನಟನೆ ಮಾತ್ರವಲ್ಲದೆ ನಿರ್ದೇಶನದಲ್ಲೂ ಪ್ರಯೋಗ ನಡೆಸಿದ್ದವರು. ಇತ್ತೀಚೆಗೆ ನಟನೆ ಕಡಿಮೆ ಮಾಡಿರುವ ಅರುಣ್ ಪುತ್ರಿಯ ಸಿನಿಮಾ ಅಭಿಯಾನಕ್ಕೆ ಬೆಂಬಲವಾಗಿ ನಿಂತಿದ್ದಾರೆ. “ನಾನು ಮಾತ್ರ ಸಿನಿಮಾರಂಗದಲ್ಲಿ ಅಪ್ಪನ ನೆರವು ಬಯಸುವುದಿಲ್ಲ. ಹಿರೋಯಿನ್ ಎಂದು ಕರೆಸಿಕೊಳ್ಳುವುದು ನನ್ನ ಗುರಿಯಲ್ಲ. ಉತ್ತಮ ನಟಿ ಎಂದು ಗುರುತಿಸಿದರೆ ಸಾಕು. ರಂಗಭೂಮಿ ಹಿನ್ನೆಲೆ ಇರುವ ನಾನು ಸಿನಿಮಾರಂಗದಲ್ಲಿ ಉತ್ತಮ ಭವಿಷ್ಯದ ನಿರೀಕ್ಷೆಯಲ್ಲಿದ್ದೇನೆ” ಎಂದು ಆತ್ಮವಿಶ್ವಾಸದಿಂದ ಮಾತನಾಡುತ್ತಾರೆ ಕೀರ್ತಿ.
#
No Comment! Be the first one.