ಅರುಣ್ ಕುಮಾರ್ ಜಿ
ಡಿಸಿಪಿ ಅರವಿಂದ್ ಸುತ್ತ ನಡೆಯುತ್ತಿರುವ ಘಟನಾವಳಿಗಳು ʻಅವರ ಬದುಕಿನಲ್ಲಿ ಏನೋ ಸಮಸ್ಯೆ ಇದೆʼ ಅನ್ನೋದನ್ನು ಆರಂಭದಲ್ಲೇ ತಿಳಿಸಿಬಿಡುತ್ತೆ. ಅವರ ಪುಟಾಣಿ ಮಗಳ ಕಣ್ಣಿಗೆ ಯಾವುದೋ ಪ್ರೇತಾತ್ಮವೊಂದು ಕಾಣಿಸುತ್ತಿರುತ್ತೆ. ಕ್ರಮೇಣ ಡಿಸಿಪಿಯ ಕಣ್ಣಿಗೂ ಗೋಚರಿಸುತ್ತದೆ. ಸತ್ತುಹೋಗಿರುವ ತನ್ನ ಪತ್ನಿಯೇ ಈ ರೀತಿ ಪ್ರೇತವಾಗಿ ಕಾಡುತ್ತಿರಬಹುದಾ ಅನ್ನೋದು ಪೊಲೀಸ್ ಅಧಿಕಾರಿ ಅರವಿಂದ್ ಅವರ ಅನಿಸಿಕೆಯಾಗುತ್ತದೆ. ತಮ್ಮ ಕಾರ್ ಚಾಲಕ ವೀರಯ್ಯ ತಂದುಕೊಟ್ಟ ಯಂತ್ರವನ್ನು ಕಟ್ಟಿಕೊಂಡು ಸುಧಾರಿಸಿಕೊಳ್ಳುತ್ತಾರೆ. ಅದೇ ವೀರಯ್ಯನ ಮಾರ್ಗದರ್ಶನದಲ್ಲಿ ಕಾಶಿಗೆ ಹೋಗಿ ಅಘೋರಿಗಳನ್ನು ಮೀಟ್ ಮಾಡುತ್ತಾರೆ. ಅರವಿಂದ್ ಸಮಸ್ಯೆಗಳನ್ನು ಬಗೆಹರಿಸಲು ಬಾಬಾ ಸ್ವಾಮಿನಾಥರು ಲೇಡಿ ಅಘೋರಿ ಭೈರಾದೇವಿಯನ್ನು ನಿಯೋಜಿಸಿ ಕಳಿಸುತ್ತಾರೆ. ಚಿಲುಮೆಗೆ ತುಂಬಿದ ಭಂಗಿಯನ್ನು ದೀರ್ಘವಾಗಿ ಎಳೆದು ಹೊಗೆ ಬಿಟ್ಟು ಭೈರಾದೇವಿ ಬೆಂಗಳೂರಿಗೆ ಬರುತ್ತಾಳೆ. ಪ್ರೇತಬಾಧೆ ತೀರಿಸಲು ಬಂದ ಭೈರಾದೇವಿ ಕಾಳಿಯ ಅವರತಾರವೆತ್ತುತ್ತಾಳೆ. ಅತ್ಯಾಚಾರಕ್ಕೊಳಗಾಗಬೇಕಿದ್ದ ಹೆಣ್ಣುಮಗಳನ್ನು ರಕ್ಷಿಸುತ್ತಾಳೆ. ಡಿಸಿಪಿ ಅರವಿಂದ್ ಅವರನ್ನು ಕಾಡುತ್ತಿರುವ ಆತ್ಮದ ಶೋಧಕಾರ್ಯ ನಡೆಸಲಾಗಿ, ಅದು ಅವರ ಪತ್ನಿಯ ಆತ್ಮವಲ್ಲ, ಬದಲಿಗೆ ಅದೊಂದು ಕನ್ಯೆಯ ಆತ್ಮ ಅನ್ನೋದು ದೃಢಪಡುತ್ತದೆ!
ಹಾಗಾದರೆ ಆ ಕನ್ಯೆ ಯಾರು? ಡಿಸಿಪಿ ಅರವಿಂದ್ ಅವರಿಗೂ ಆ ಕನ್ಯೆಗೂ ಏನು ಸಂಬಂಧ? ಅರವಿಂದ್ ಪತ್ನಿಯ ಸಾವಿಗೆ ಅಸಲೀ ಕಾರಣವೇನು? ಲೇಡಿ ಅಘೋರಿಯ ಮುಂದೆ ಅನಾವರಣಗೊಳ್ಳುವ ವಿಚಾರಗಳೇನು? ಎಂಬಿತ್ಯಾದಿ ಕೌತುಕಮಯ ವಿಚಾರಗಳನ್ನು ತಿಳಿಸುವ ಕಥೆ ಭೈರಾದೇವಿ ಚಿತ್ರದಲ್ಲಿದೆ.
ಈ ಚಿತ್ರದಲ್ಲಿ ನಟಿ ರಾಧಿಕಾ (ಕುಟ್ಟಿ ರಾಧಿಕಾ) ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಭೂಮಿಕಾ ಆಗಿ ರಾಧಿಕಾ ಅಭಿನಯ ಮುದ್ದಾಗಿದೆ. ಶವಭಕ್ಷಣೆ ಮಾಡುವ ಅಘೋರಿ ಭೈರಾದೇವಿಯಾಗಿಯೂ ಬೆಚ್ಚಿಬೀಳಿಸುತ್ತಾಳೆ. ಸೀನಿಯರ್ ಅಘೋರಿ ಬಾಬಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ರವಿಶಂಕರ್ ದನಿಯಿಂದ ಮಾತ್ರ ಅವರನ್ನು ಗುರುತಿಸಬಹುದು. ಮಿಕ್ಕಂತೆ ಗಡ್ಡ-ಮೀಸೆ, ಬೂದಿ ಅವರನ್ನು ಆವರಿಸಿಕೊಂಡಿದೆ. ರಂಗಾಯಣ ರಘು ಅವರದ್ದು ತೀರಾ ಮಹತ್ವದ ಪಾತ್ರ ಅಲ್ಲದಿದ್ದರೂ ಹೆಚ್ಚು ಮನರಂಜಿಸುತ್ತಾರೆ. ರಮೇಶ್ ಅರವಿಂದ್ ಅವರ ನಟನೆ ಇಲ್ಲಿ ಬೇರೆಯದ್ದೇ ಥರ ಇದೆ. ಅಮೃತವರ್ಷಿಣಿಯ ರಮೇಶ್ ಇಲ್ಲಿ ಕಾಣಸಿಗುತ್ತಾರೆ. ಖಾಕಿ ಯೂನಿಫಾರ್ಮ್ ಕೂಡಾ ರಮೇಶ್ ಅವರಿಗೆ ಒಪ್ಪುವಂತಿದೆ.
ಇದ್ದಕ್ಕಿದ್ದಂತೇ ಒಂದು ರೊಮ್ಯಾಂಟಿಕ್ ಹಾಡು ಶುರುವಾಗುತ್ತದೆ. ಅದರ ಮ್ಯೂಸಿಕ್ಕು ಸಾಹಿತ್ಯವನ್ನು ನುಂಗಿಕೊಂಡಿದೆ. ಕೆ.ಕೆ. ಸೆಂಥಿಲ್ ಅವರ ಸಂಗೀತ ಓಕೆಓಕೆ. ಜೆ.ಎಸ್. ವಾಲಿ ಅವರ ಛಾಯಾಗ್ರಹಣ ಎಂದಿನಂತೆ ಕ್ವಾಲಿಟಿ ಹೊಂದಿದೆ. ನಿರ್ದೇಶಕ ಶ್ರೀ ಜೈ ಸಾಕಷ್ಟು ಸಮಯ ತೆಗೆದುಕೊಂಡು ರೂಪಿಸಿರುವ ಚಿತ್ರ ಇದಾಗಿದ್ದರೂ ಎಲ್ಲೂ ಹದಗೆಡದಂತೆ ಎಚ್ಚ ವಹಿಸಿದ್ದಾರೆ. ಥ್ರಿಲ್ಲರ್ ಕಥಾವಸ್ತುವನ್ನು ಹೇಳುವ ಹಿಡಿತ ಅವರಲ್ಲಿದೆ. ಕಾಸ್ಟೂಮರ್ ಒಂಚೂರು ಕಂಟ್ಯೂನಿಟಿ ಕಡೆ ಗಮನ ನೀಡಬೇಕಿತ್ತು.
ಪ್ರೇತ, ಆತ್ಮಗಳ ಸುತ್ತಲಿನ ಕಥಾವಸ್ತುವಿನ ಸಿನಿಮಾಗಳು ದಂಡಿದಂಡಿಯಾಗಿ ಬಂದಿವೆ. ಆದರೆ, ಭೈರಾದೇವಿಯಲ್ಲಿ ಹೊಸ ಎಲಿಮೆಂಟುಗಳಿವೆ. ಹೀಗೂ ಸಾಧ್ಯವಾ ಎನ್ನುವ ಪ್ರಶ್ನೆಗಳನ್ನು ಹುಟ್ಟುಹಾಕುವ ಅಂಶಗಳು ಇಲ್ಲಿವೆ. ಅದೂ ನವರಾತ್ರಿಯ ಸಮಯಕ್ಕೆ ಹೇಳಿಮಾಡಿಸಿದಂತಾ ಚಿತ್ರವಿದು. ಹಾರರ್ ಛಾಯೆಯಿದ್ದರೂ ತೀರಾ ಭಯ ಪಡಿಸೋದಿಲ್ಲ. ಧಾರಾಳವಾಗಿ ಮನೆಯವರೊಂದಿಗೇ ಕೂತು ನೋಡಬಹುದು!
No Comment! Be the first one.