ಕನ್ನಡದಲ್ಲಿ ನೆಟ್ಟಗೆ ಎರಡು ಸಾಲು ಬರೆಯೋ ಯೋಗ್ಯತೆ ಇಲ್ಲದವರು, ಕನ್ನಡ ಅಂದರೇನು? ಇದರ ಇತಿಹಾಸವೇನು ಅನ್ನೋದನ್ನೂ ತಿಳಿದುಕೊಳ್ಳದ ಅರೆಬರೆಗಳು ಕನ್ನಡ, ಭಾಷಾಭಿಮಾನ ಅಂತೆಲ್ಲಾ ಪಾಠ ಮಾಡಲು ಶುರು ಮಾಡಿಕೊಳ್ಳುತ್ತಾರೆ. ಕನ್ನಡದ ಅಭಿಮಾನಿಗಳ ಹೆಸರಲ್ಲಿ ಬೇಕಂತಲೇ ವಿವಾದ ಸೃಷ್ಟಿಸಿದ ಎರಡು ಪ್ರಕರಣಗಳು ಇತ್ತೀಚೆಗೆ ನಡೆದಿವೆ.

ಕೆಲವರಿರುತ್ತಾರೆ… ಕಿತಾಪತಿ ಮಾಡದಿದ್ದರೆ ಅವರಿಗೆ ತಿಂದ ಅನ್ನ ಜೀರ್ಣವಾಗೋದಿಲ್ಲ. ಒಂದು ವಿಚಾರದ ಬಗ್ಗೆ ತಲೆ ಬುಡ ಗೊತ್ತಿಲ್ಲದ, ಬರೆದದ್ದನ್ನು ಅರಗಿಸಿಕೊಳ್ಳುವ ಯೋಗ್ಯತೆಯೂ ಇಲ್ಲದ ಅಯೋಗ್ಯರ ಗುಂಪೊಂದು ಆನ್ಲೈನ್ ಅನ್ನೇ ಅಡ್ಡಾ ಮಾಡಿಕೊಂಡಿದೆ. ಪಥ್ಯವಾಗದ ವಿಚಾರವೊಂದರ ಬಗ್ಗೆ ಸಾತ್ವಿಕವಾದ ತಕರಾರು ತೆಗೆದು ಸಂವಹನ ನಡೆಸುವವರೂ ಇಲ್ಲಿದ್ದಾರೆ. ಅಂಥವರ ಎಲ್ಲ ವಿಚಾರಗಳನ್ನೂ ಸಕಾರಾತ್ಮಕವಾಗಿ ಸ್ವೀಕರಿಸಬಹುದು. ಆತ್ಮೀಯವಾದ ಸಂವಹನವನ್ನೂ ನಡೆಸಬಹುದು. ಆದರೆ ಇವರೆಲ್ಲರ ನಡುವಿಂದ ಆಗಾಗ ಯಾವುದೋ ಗಟಾರದಲ್ಲಿ ಬಿದ್ದು ಹೊರಳಾಡಿ ಬಂದು ಹೊಟ್ಟೆ ಸೇರಿದ ಹೊಲಸನ್ನೆಲ್ಲ ಕಮೆಂಟ್ ಮೂಲಕ ಕಾರಿಕೊಳ್ಳುವ ಮಂದಿಯೂ ಇದ್ದಾರೆ. ವಿಮರ್ಶೆ ಬರೆದ, ವರದಿ ಬರೆದ ಪೋಸ್ಟ್ಗೂ ಇಲ್ಲಸಲ್ಲದ ಕಮೆಂಟು ಮಾಡುವುದು, ಭಾಷಾಭಿಮಾನದ ಬಣ್ಣ ಬಳಿಯುವ ಕೆಲಸ ಮಾಡುತ್ತಾರೆ. ಮಾಧ್ಯಮದ ಮಂದಿಗೇ ಹೀಗಾದರೆ, ಸಿನಿಮಾ ತಾರೆಯರಿಗೂ ಇಂಥಾ ಕಿತಾಪತಿ ಗ್ಯಾಂಗು ಹುಟ್ಟಿಸುವ ರೇಜಿಗೆ ಅಷ್ಟಿಷ್ಟಲ್ಲ.

ಕನ್ನಡದಲ್ಲಿ ನೆಟ್ಟಗೆ ಎರಡು ಸಾಲು ಬರೆಯೋ ಯೋಗ್ಯತೆ ಇಲ್ಲದವರು, ಕನ್ನಡ ಅಂದರೇನು? ಇದರ ಇತಿಹಾಸವೇನು ಅನ್ನೋದನ್ನೂ ತಿಳಿದುಕೊಳ್ಳದ ಅರೆಬರೆಗಳು ಕನ್ನಡ, ಭಾಷಾಭಿಮಾನ ಅಂತೆಲ್ಲಾ ಪಾಠ ಮಾಡಲು ಶುರು ಮಾಡಿಕೊಳ್ಳುತ್ತಾರೆ. ಕನ್ನಡದ ಅಭಿಮಾನಿಗಳ ಹೆಸರಲ್ಲಿ ಬೇಕಂತಲೇ ವಿವಾದ ಸೃಷ್ಟಿಸಿದ ಎರಡು ಪ್ರಕರಣಗಳು ಇತ್ತೀಚೆಗೆ ನಡೆದಿವೆ. ಕಾಮಿಡಿ ನಟಿ ನಯನಾ ಪೋಸ್ಟ್ಗೆ ಕೆಲಸವಿಲ್ಲದವನೊಬ್ಬ ಕಮೆಂಟ್ ಮಾಡಿದ್ದಕ್ಕೆ ಆಕೆ ʻಮುಚ್ಕೊಂಡ್ ಕೆಲಸ ನೋಡ್ಕೋʼ ಅಂದಿದ್ದಳು. ಮೊನ್ನೆ ದಿನ ನಟಿ ಅಶ್ವಿತಿ ಶೆಟ್ಟಿ ಇನ್ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ಖಾತೆಯಲ್ಲಿ ತನ್ನದೊಂದು ಫೋಟೋ ಶೇರ್ ಮಾಡಿದ್ದರು. ಅದಕ್ಕೊಬ್ಬರು ʻಕನ್ನಡ ಬಳಸಿ ಮೇಡಂʼ ಅಂತಾ ಕಮೆಂಟ್ ಮಾಡಿದ್ದರು. ಹಾಗೆ ಕಮೆಂಟು ಮಾಡಿದವರ ಅಕೌಂಟು ಪರಿಶೀಲಿಸಿದ ಅಶ್ವಿತಿ ʼನಿಮ್ಮ ವಿವರಗಳು ಯಾಕೆ ಇಂಗ್ಲಿಷಿನಲ್ಲಿವೆ?ʼ ಎಂಬ ಮರು ಪ್ರಶ್ನೆ ಹಾಕಿದ್ದರು. ದೇವರಾಜ್ ಎನ್ನುವ ವ್ಯಕ್ತಿ ಅಶ್ವಿತಿಗೆ ಪ್ರಶ್ನಿಸಿದ ರೀತಿಯಲ್ಲಾಗಲಿ, ಅಶ್ವಿತಿ ಮರುಪ್ರಶ್ನಿಸಿದ ರೀತಿಯಲ್ಲಿ ಯಾವ ತಪ್ಪೂ ಇರಲಿಲ್ಲ. ಸಭ್ಯ ರೀತಿಯಲ್ಲೇ ಸಂವಹನ ನಡೆಸಿದ್ದರು. ಆದರೆ ಕೆಲವರು ಅದನ್ನು ಮ್ಯಾನುಪ್ಲೇಟ್ ಮಾಡಿ ʻವಿವಾದʼ ಎನ್ನುವ ಹಣೆಪಟ್ಟಿ ಕಟ್ಟಿದ್ದಾರೆ.

ಅಶ್ವಿತಿ ಮತ್ತು ಅದ್ವಿತಿ ಎಂಬ ಅವಳಿ ಸಹೋದರಿಯರು ಈ ವರೆಗೆ ಯಾವುದೇ ವಿವಾದಗಳನ್ನು ಮೈಮೇಲೆಳೆದುಕೊಂಡವರಲ್ಲ. ತಾವಾಯಿತು ತಮ್ಮ ಕೆಲಸವಾಯಿತು ಅಂತಿರುವ ಹೆಣ್ಣುಮಕ್ಕಳಿವರು. ಕನ್ನಡದ ಬಗ್ಗೆ ಅಪಾರ ಗೌರವ, ಪ್ರೀತಿ ಇಟ್ಟುಕೊಂಡಿದ್ದಾರೆ. ಕಾರಣವಲ್ಲದ ಕಾರಣವನ್ನು ದೊಡ್ಡದಾಗಿಸಿ ಈ ಹುಡುಗಿಯರ ಮನನೋಯಿಸುವುದು ಸರಿಯಾ? ಯಾರದ್ದೇ ಬಗ್ಗೆ ಕಮೆಂಟು ಮಾಡುವ, ಬರೆಯುವ ಮುನ್ನ ಒಮ್ಮೆ ಅವರ ಪೂರ್ವಾಪರ ಗಮನಿಸೋದು ಧರ್ಮವಲ್ಲವೇ?

ರಶ್ಮಿಕಾ ಮಂದಣ್ಣ ಸೇರಿದಂತೆ ಅನೇಕ ನಟನಟಿಯರು, ತಂತ್ರಜ್ಞರು ಕನ್ನಡಕ್ಕೆ ಅಪಮಾನ ಮಾಡಿದಾಗ ಅಂಥವರ ಸ್ವಾಟೆಗೆ ನಾವು ಸರಿಯಾಗೇ ತಿವಿದಿದ್ದೀವಿ. ಕಲಾವಿದರಾದವರು ಎಲ್ಲಾ ಸಂದರ್ಭದಲ್ಲೂ ಕನ್ನಡವನ್ನೇ ಬಳಸಲು ಸಾಧ್ಯವಿಲ್ಲ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬ್ರಾಂಡುಗಳಿಗೆ ಅವರು ಮಾಡೆಲ್ಲುಗಳಾಗಿರುತ್ತಾರೆ. ಅವರ ಕರಾರಿನ ಪ್ರಕಾರ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಇಂಗ್ಲಿಷಿನಲ್ಲಿ ಬರೆದು ಟ್ಯಾಗ್ ಮಾಡಬೇಕಾಗಿರುತ್ತದೆ. ಕನ್ನಡ, ಅಭಿಮಾನವೆನ್ನೋದು ಬರೀ ಫೇಸ್ ಬುಕ್ಕಿಗೆ, ಕಮೆಂಟಿಗೆ ಸೀಮಿತವಾದುದಲ್ಲ. ತಾಯ್ನುಡಿ ಕನ್ನಡವೆನ್ನೋದು ನಮ್ಮ ಅಸ್ಮಿತೆಯಾಗಬೇಕೇ ಹೊರತು ಬರಿಯ ತೋರಿಕೆಯಾಗಬಾರದು.

ಇನ್ನಾದರೂ ಕಿತಾಪತಿ ಸೃಷ್ಟಿಸಲೆಂದೇ ಕಾದು ಕುಂತಿರುವ ಕೆಲವು ನೆಟ್ಟಿಗರು ಸೆಲೆಬ್ರಿಟಿಗಳ, ಮಾಧ್ಯಮಗಳ ಬರಹಗಳನ್ನು ತಿರುಚುವ ಕೆಲಸ ನಿಲ್ಲಿಸಲಿ. ಮೀಡಿಯಾದವರ ಎಷ್ಟೋ ಪೋಸ್ಟ್ ಗಳಿಗೆ ಕೊಳಕು ಕಮೆಂಟ್ ಮಾಡುವ, ಸಭ್ಯತೆಯ ಎಲ್ಲೆ ಮೀರಿ ವರ್ತಿಸುವ ಮಂದಿಯ ಮೇಲೇನಾದರೂ ಸೈಬರ್ ಕ್ರೈಂನಲ್ಲಿ ದೂರು ದಾಖಲಿಸಿದರೆ ಪರಿಸ್ಥಿತಿ ಏನಾಗಬಹುದು ಅನ್ನೋ ಪ್ರಜ್ಞೆ ಇರಲಿ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ನಿರ್ದೇಶಕ ಡಿ.ಪಿ. ರಘುರಾಮ್ ತಂದೆ ಪುಣ್ಯಮೂರ್ತಿ ಇನ್ನಿಲ್ಲ…

Previous article

ಮಲರ್ ಆಸ್ಪತ್ರೆಯಲ್ಲಿ ಮಲಗಿದ್ದಾಳಂತೆ!

Next article

You may also like

Comments

Leave a reply

Your email address will not be published. Required fields are marked *