ಕೊರೋನಾದಿಂದ ಗರ ಬಡಿದಂತಾಗಿದ್ದ ಕನ್ನಡ ಚಿತ್ರರಂಗದಲ್ಲಿ ಈಗ ಮತ್ತೆ ಜೀವ ಕಳೆ ಗರಿಗೆದರಿದೆ. ಹೊಸಬರ ’ಅಶ್ವ’ಹೆಸರಿನ ಬಿಗ್ ಬಜೆಟ್ ಚಿತ್ರವೊಂದು ಸೆಟ್ಟೇರುತ್ತಿದೆ. ಪ್ರಚಾರದ ಸಲುವಾಗಿ ಟೀಸರ್, ಪೋಸ್ಟರ್ ರಿಲೀಸ್, ಮೇಕಿಂಗ್ ತೋರಿಸುವುದು ಸಾಮಾನ್ಯವಾಗಿದೆ. ಆದರೆ ಸ್ಯಾಂಡಲ್‌ವುಡ್ʼನಲ್ಲಿ ಮೊದಲು ಎನ್ನುವಂತೆ ’ಅಶ್ವ’ ಸಿನಿಮಾವು ಯಾವ ರೀತಿ ಮೂಡಿಬರಲಿದೆ ಎಂದು ೨೫ ನಿಮಿಷದ ’ಪ್ರೀಮಿಯರ್ ಷೋ ರೀಲ್ಸ್’ ಅನಾವರಣಗೊಳಿಸಿದ್ದಾರೆ. ಮಸ್ತ್ ಆಕ್ಷನ್, ಕಾಮಿಡಿ, ಸೆಂಟಿಮೆಂಟ್, ಪ್ರೀತಿ, ತುಂಟಾಟ ಎಲ್ಲವೂ ಇದರಲ್ಲಿ ಕಾಣಿಸಿಕೊಂಡಿತು. ಇವಿಷ್ಟು ಕತೆಯಲ್ಲಿ ಶೇಕಡ ಎರಡರಷ್ಟು ಮಾತ್ರ ಬರಲಿದ್ದು, ಚಿತ್ರವು ಬೇರೆ ರೀತಿಯಲ್ಲಿ ಇರುತ್ತದಂತೆ. ಒಂದು ದಶಕದ ಕಾಲ ಸಾಕಷ್ಟು ಚಿತ್ರಗಳಿಗೆ ಮಾತುಗಳನ್ನು ಪೋಣಿಸಿದ್ದ ಎ.ಆರ್.ಸಾಯಿರಾಮ್ ಕತೆ, ಚಿತ್ರಕತೆ, ಸಂಭಾಷಣೆ ಬರೆದು ಮೊದಲ ಬಾರಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಕೋಲಾರ ಕೇಶವ-ಹೇಮಲತಾ ಬಂಡವಾಳ ಹೂಡುತ್ತಿದ್ದಾರೆ. ಕೆ.ಕೆ.ಎಂಟರ್‌ಟೈನ್‌ಮೆಂಟ್ಸ್ ಮತ್ತು ಸೂಪರ್ ನೋವ ಎಂಟರ್‌ಟೈನ್‌ಮೆಂಟ್ಸ್ ಅಡಿಯಲ್ಲಿ ಸಿದ್ದಗೊಳ್ಳುತ್ತಿದ್ದು, ರಾಕಿಂಗ್ ಸ್ಟಾರ್ ಯಶ್ ಅರ್ಪಿಸುತ್ತಿರುವುದು ಮತ್ತೊಂದು ಹಿರಿಮೆಯಾಗಿದೆ.
ಸ್ಫುರದ್ರೂಪಿ ಯುವ ನಟ ವಿವನ್.ಕೆ.ಕೆ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ನಾಯಕಿಗಾಗಿ ಶೋಧ ನಡೆಯತ್ತಿದೆ. ತಾರಗಣದಲ್ಲಿ ಸುಹಾಸಿನಿ, ಸಾಯಿಕುಮಾರ್, ಪ್ರಕಾಶ್‌ರೈ, ಸಾಧುಕೋಕಿಲ, ರಂಗಾಯಣರಘು, ಭವಾನಿಪ್ರಕಾಶ್, ಚಿಕ್ಕಣ್ಣ, ಗಿರಿ, ನಂದಗೋಪಾಲ್, ನಾಗೇಂದ್ರ ಅರಸ್, ಬಲರಾಜವಾಡಿ, ಯಶ್ ಶೆಟ್ಟಿ, ಪವನ್ ಪಚ್ಚಿ, ರಿಚ್ಚಿ ಮುಂತಾದವರು ನಟಿಸುತ್ತಿದ್ದಾರೆ. ಯೋಗರಾಜ ಭಟ್, ಜಯಂತ್ ಕಾಯ್ಕಿಣಿ, ಡಾ.ನಾಗೇಂದ್ರಪ್ರಸಾದ್, ಭರ್ಜರಿ ಚೇತನ್ ಸಾಹಿತ್ಯದ ಹಾಡುಗಳಿಗೆ ಬಿ.ಅಜನೀಶ್ ಲೋಕನಾಥ್ ಸಂಗೀತವಿದೆ. ರವಿಕುಮಾರ್ ಸನ ಛಾಯಾಗ್ರಹಣ, ಶ್ರೀಕಾಂತ್‌ಗೌಡ ಸಂಕಲನ, ರವಿವರ್ಮ-ಪೀಟರ್ ಹೇನ್ಸ್-ವಿಕ್ರಂ-ಕುಂಗ್ಫು ಚಂದ್ರು ಸಾಹಸ, ಜಾನಿ-ಶೇಖರ್-ಧನಂಜಯ್ ನೃತ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರು, ಸಕಲೇಶಪುರ, ಮಂಗಳೂರು, ಅಮೃತಸರ, ಪಣಜಿ, ಹೈದರಬಾದ್ ಮತ್ತು ಕಾಕಿನಾಡದ ಸುಂದರ ತಾಣಗಳಲ್ಲಿ ನವೆಂಬರ್ ಕೊನೆವಾರದಿಂದ ಚಿತ್ರೀಕರಣ ನಡೆಸಲು ತಂಡ ತಯಾರಿ ಮಾಡಿಕೊಳ್ಳುತ್ತಿದೆ.
Leave a Reply
You must be logged in to post a comment.