ಒಬ್ಬ ವ್ಯಕ್ತಿಯ ಬದುಕನ್ನು ಆಧರಿಸಿ, ಅದೂ ಏಕಕಾಲದಲ್ಲಿ ಸಿನಿಮಾ ಆರಂಭವಾದಾಗ ಅಭಿಮಾನಿಗಳ ನಡುವೆ ಇಂಥ ಚಕಮಕಿ ಏರ್ಪಡೋದು ಸಹಜ. ಭಾರತೀಯ ಚಿತ್ರರಂಗದ ಸಿನಿಮಾ ಕತೆಗಳು ಎತ್ತಿಂದ ಎತ್ತ ಹೊರಳಿದರೂ ರಾಮಾಯಣ, ಮಹಾಭಾರತ ಸೂತ್ರಗಳಿಂದ ಹೊರಬರಲು ಸಾಧ್ಯವಿಲ್ಲ.
ಅಶ್ವತ್ಥಾಮ ಹೆಸರಿನ ಸಿನಿಮಾ ಮಾಡೋದಾಗಿ ನಿರ್ದೇಶಕ ಅನೂಪ್ ಭಂಡಾರಿ ಕೆಲ ದಿನಗಳ ಹಿಂದೆ ಅನೌನ್ಸ್ ಮಾಡಿದ್ದರು. ಈ ಚಿತ್ರವನ್ನು ಬಾದ್ ಷಾ ಕಿಚ್ಚ ಸುದೀಪ ಅವರ ಕಿಚ್ಚ ಕ್ರಿಯೇಶನ್ಸ್ ಸಂಸ್ಥೆಯಿಂದ ನಿರ್ಮಿಸುವುದಾಗಿಯೂ ಘೋಷಣೆಯಾಗಿತ್ತು. ಐದು ಸಾವಿರದ ಇನ್ನೂರು ವರ್ಷಗಳ ಹಿಂದಿನಿಂದ ಆರಂಭಿಸಿ ಇವತ್ತಿನ ತನಕ ನಡೆಯುವ ಕತೆ ಈ ಚಿತ್ರದ್ದು. ಈಗ ಇದೇ ಅಶ್ವತ್ಥಾಮನ ಕಥೆಯನ್ನು ಆಧರಿಸಿ ಅವನೇ ಶ್ರೀಮನ್ನಾರಾಯಣ ಚಿತ್ರದ ನಿರ್ದೇಶಕ ಸಚಿನ್ ಕೂಡಾ ಸ್ಕ್ರಿಪ್ಟು ರಡಿ ಮಾಡಿಕೊಂಡಿದ್ದಾರೆ. ಈ ಚಿತ್ರವನ್ನು ಕೂಡಾ ಪುಷ್ಕರ ಮಲ್ಲಿಕಾರ್ಜುನ ಅವರೇ ನಿರ್ಮಿಸಲಿದ್ದಾರೆ. ಮೊನ್ನೆ ರಾಜ್ಯೋತ್ಸವದ ದಿನ ಅಧಿಕೃತವಾಗಿ ಜಾಹೀರು ಮಾಡಿದ್ದಾರೆ. ಈಗಾಗಲೇ ಅನೂಪ್ ಭಂಡಾರಿ ಅಶ್ವತ್ಥಾಮ ಶೀರ್ಷಿಕೆಯನ್ನು ಬಳಸಿರುವುದರಿಂದ ಪುಷ್ಕರ್ ಬೇರೊಂದು ಟೈಟಲ್ ಫಿಕ್ಸ್ ಮಾಡಲಿದ್ದಾರಂತೆ.
ʻಅಶ್ವತ್ಥಾಮ ಸಿನಿಮಾವನ್ನು ಸುದೀಪ್ ಬ್ಯಾನರಿನಲ್ಲಿ ಘೋಷಣೆ ಮಾಡಿದ್ದರೂ ಅದೇ ಸಬ್ಜೆಕ್ಟನ್ನು ಸೆಲೆಕ್ಟ್ ಮಾಡಿಕೊಂಡು ಕಿಚ್ಚನನ್ನು ಕಾಪಿ ಮಾಡುತ್ತಿದ್ದೀರʼ ಅಂತಾ ಸುದೀಪ್ ಅಭಿಮಾನಿಗಳು ಟ್ವೀಟ್ ವಾರ್ ಶುರು ಮಾಡಿದ್ದಾರೆ. ʻನಮ್ಮ ಹೀರೋ ಸಿನಿಮಾಗೆ ಅಶ್ವತ್ಥಾಮ ಅಂತೇನೂ ಹೆಸರಿಟ್ಟಿಲ್ಲ. ನಮ್ಮದು ಫ್ಯಾಂಟಸಿ ಸಿನಿಮಾ ಅಲ್ಲ. ಶಿವಣ್ಣ ಒಪ್ಪಿರುವುದು ಸೈನ್ಸ್ ಫಿಕ್ಷನ್ ಕಥೆಯನ್ನುʼ ಎಂದು ಶಿವರಾಜ್ ಕುಮಾರ್ ಅಭಿಮಾನಿಗಳು ರೀ ಟ್ವೀಟ್ ಮಾಡುತ್ತಿದ್ದಾರೆ.
ಒಬ್ಬ ವ್ಯಕ್ತಿಯ ಬದುಕನ್ನು ಆಧರಿಸಿ, ಅದೂ ಏಕಕಾಲದಲ್ಲಿ ಸಿನಿಮಾ ಆರಂಭವಾದಾಗ ಅಭಿಮಾನಿಗಳ ನಡುವೆ ಇಂಥ ಚಕಮಕಿ ಏರ್ಪಡೋದು ಸಹಜ. ಭಾರತೀಯ ಚಿತ್ರರಂಗದ ಸಿನಿಮಾ ಕತೆಗಳು ಎತ್ತಿಂದ ಎತ್ತ ಹೊರಳಿದರೂ ರಾಮಾಯಣ, ಮಹಾಭಾರತ ಸೂತ್ರಗಳಿಂದ ಹೊರಬರಲು ಸಾಧ್ಯವಿಲ್ಲ. ಮಹಾಭಾರತದಲ್ಲಿ ಚಿರಾಯುವಾದ ದ್ರೋಣನ ಮಗ ಅಶ್ವತ್ಥಾಮನ ಪಾತ್ರಕ್ಕೆ ಬಲು ಶಕ್ತಿ. ಈ ಕಾರಣಕ್ಕೇ ಇಂಡಿಯಾದ ಬಹಳಷ್ಟು ಭಾಷೆಗಳಲ್ಲಿ ಅಶ್ವತ್ಥಾಮನ ಕುರಿತಾದ ಸಿನಿಮಾಗಳು ತಯಾರಾಗುತ್ತಲೇ ಇರುತ್ತವೆ. ಬಾಲಿವುಡ್ಡಿನಲ್ಲೂ ಇದೇ ಅಶ್ವತ್ಥಾಮನ ಕತೆ ಸಿನಿಮಾವಾಗುತ್ತಿದೆ. ತೆಲುಗಿನಲ್ಲಿ ನಾಗಶೌರ್ಯ ಅಭಿನಯದ ಅಶ್ವತ್ಥಾಮ ಹೆಸರಿನ ಚಿತ್ರ ತೀರ ಇತ್ತೀಚೆಗೆ ಬಂದು ಹೋಗಿತ್ತು.
ಹೀಗಿರುವಾಗ, ಸುದೀಪ್ ಮತ್ತು ಶಿವಣ್ಣ ಇಬ್ಬರೂ ಏಕಕಾಲದಲ್ಲಿ ಅಶ್ವತ್ಥಾಮನ ಸಿನಿಮಾಗಳನ್ನು ಒಪ್ಪಿರುವುದು ಕಾಕತಾಳೀಯವಿರಬಹುದು. ಆದರೆ ಇದು ಅಭಿಮಾನಿಗಳ ನಡುವೆ ಮಾತ್ರ ಅಕ್ಷರಶಃ ಆನ್ ಲೈನ್ ಕದನಕ್ಕೆ ಕಾರಣವಾಗಿದೆ. ಕಥೆ ಅಶ್ವತ್ಥಾಮನನ್ನು ಕೇಂದ್ರೀಕರಿಸಿದ್ದರೂ ಇಬ್ಬರೂ ನಿರ್ದೇಶಕರ ಕಲ್ಪನೆಯೇ ಬೇರೆ ಇರುತ್ತದೆ. ಅನೂಪ್ ಭಂಡಾರಿ ಫ್ಯಾಂಟಸಿ ಕಥೆಯನ್ನು ಸಿದ್ದಪಡಿಸಿಕೊಂಡರೆ, ಸಚಿನ್ ಸೈನ್ಸ್ ಸಬ್ಜೆಕ್ಟನ್ನು ಪೋಣಿಸಿದ್ದಾರೆ. ಒಂದು ಗ್ರಂಥ, ಅದರ ಪಾತ್ರ ಒಬ್ಬೊಬ್ಬರಿಗೂ ಒಂದೊಂದು ಹೊಳಹುಗಳನ್ನು ನೀಡುವ ಶಕ್ತಿ ಹೊಂದಿದೆ ಎಂದಮೇಲೆ, ಅದನ್ನು ಬೇಡ ಅಂಥಾ ವಿರೋಧಿಸಲು ಯಾರಿಗೆ ಹಕ್ಕಿದೆ?
ಈ ಕಾರಣಕ್ಕಾದರೂ ಸುದೀಪ್ ಮತ್ತು ಶಿವಣ್ಣ ಅಭಿಮಾನಿಗಳು, ವಾದ-ವಿವಾದಗಳಲ್ಲಿ ತೊಡಗದೇ ಬರಲಿರುವ ಸಿನಿಮಾಗಳನ್ನು ಬೆಂಬಲಿಸಲಿ…