ಇದು ಸವರ್ಣ ಭಾರತದ ಮೇಲ್ತನದ ಮನೋರೋಗವನ್ನು ಅನಾವರಣಗೊಳಿಸುವ ಗಟ್ಟಿಗುಂಡಿಗೆಯ ನಿರ್ದೇಶಕನ ಚಿತ್ರ. ಹಿಂಸೆ- ಕ್ರೌರ್ಯ ಎನಿಸಿದರೂ ಅದು ಸವರ್ಣಜಗತ್ತಿನ ಅಸ್ತ್ರ. ಸವರ್ಣಜಗತ್ತಿಗೆ ಹಿಂಸೆಗಿಳಿಯಲು ಯಾವ ಸಕಾರಣಗಳೂ ಬೇಕಿಲ್ಲ…ಯಾವ ಪ್ರಚೋದನೆಯೂ ಬೇಕಿಲ್ಲ… ಯಾವ ಅನಿವಾರ್ಯ ಒತ್ತಡವೂ ಬೇಕಿಲ್ಲ. ಹೊಟ್ಟೆ ಉರಿ ಮತ್ತು ಮೇಲರಿಮೆಯ ಮನೋರೋಗ ಒಂದೇ ಸಾಕು.
-
ಡಾ.ಚಮರಂ
ಕೆಳಜಾತಿಯ ವ್ಯಕ್ತಿಯೊಬ್ಬರು ಚಪ್ಪಲಿ ಧರಿಸಿದ್ದೇ ಇಡೀ ಊರಿನ ಹಿಂಸಾಕಾಂಡಕ್ಕೆ ನಾಂದಿಯಾಡುತ್ತದೆ! ಇನ್ನು ಸವರ್ಣಿಯರ ಹೊಲದ ಪಕ್ಕದಲ್ಲಿ ಇರುವ ಕೆಳಜಾತಿಯವರ ಹೊಲ ಸಮಸ್ಯೆ ಯಾಗದೆ? ಅದರಲ್ಲೂ ಪ್ರಶ್ನಿಸಿ ಮಾತಾಡುವ ಕೆಳಜಾತಿಯವನನ್ನು ಸವರ್ಣ ಜಗತ್ತು ಸಹಿಸುವುದುಂಟೇ? ಇನ್ನೂ ಮುಂದೆ ಹೋಗಿ ಏಟಿಗೆ ಎದಿರೇಟು ನೀಡಿದರೆ? ಅದು ಒಂದು ಕುಟುಂಬದ ಪ್ರಶ್ನೆಯಾಗಿ ಉಳಿಯುವುದಿಲ್ಲ…ಇಡೀ ಊರಿನ ಸಮಸ್ಯೆಯಾಗುತ್ತದೆ…ಇಡೀ ದೇಶದ ಪ್ರಶ್ನೆಯಾಗುತ್ತದೆ…ಇಡೀ ಸವರ್ಣ ಜಗತ್ತಿನ ಗೌರವದ ಪ್ರಶ್ನೆಯಾಗುತ್ತದೆ!!
ಸವರ್ಣಿಯರು ಕೆಳವರ್ಗದ ಮೇಲೆ ಮಾಡುವ ಯಾವ ಮಟ್ಟದ ದೌರ್ಜನ್ಯವೂ ಕ್ರೌರ್ಯ ಎನಿಸುವುದಿಲ್ಲ ಅದು ಘಟನೆ ನೋಡುವವರಿಗೂ…ಘಟನೋತ್ತರ ಕತೆ ಕೇಳುವವರುಗೂ ಮತ್ತು ಅದು ಮರುಸೃಷ್ಟಿಯ ಸಿನಿಮಾ ಆದಾಗಲೂ!! ಆದರೆ ಏಟಿಗೆ ಏಟು ನೀಡುವ ಕೆಳವರ್ಗದ ಅತೀ ಸಹಜ ವರ್ತನೆ ಮಾತ್ರ ಮಹಾ ಕ್ರೌರ್ಯವಾಗಿ ಕಾಣಿಸುತ್ತದೆ! ಇದು ಮನುಪ್ರಣೀತ ಮನಸ್ಥಿತಿ. ಹಾಗಾಗಿಯೇ ಸಿನಿಮಾ ನೋಡುವ ನಗರ ಕೇಂದ್ರಿತ ತಳಸಮುದಾಯಗಳಿಗೂ ಇದೇನಿದು ಅತಿಯಾದ ಹಿಂಸೆ ಎನಿಸುತ್ತದೆ ಮಾತ್ರವಲ್ಲ…ಹಿಂಸೆಗೆ ಹಿಂಸೆಯೇ ಉತ್ತರವೇ? ಇದೊಂದು ಪ್ರಜಾಸತ್ತಾತ್ಮಕ ನಡೆಯೇ? ಎಂದು ಬಹಳ ನಾಜೂಕಾಗಿ ಕೆಲವರು ಮಾತನಾಡುತ್ತಾರೆ…
ಅರೇ…ಸವರ್ಣಿಯರಿಗೊಂದು ನ್ಯಾಯ…ಅವರ್ಣಿಯರಿಗೊಂದು ನ್ಯಾಯವೇ? ಕ್ರೌರ್ಯವನ್ನು ಅತೀ ಸಹಜವಾಗಿ ಮತ್ತು ಅಕಾರಣವಾಗಿ ಎಸಗುವ ಸವರ್ಣಿಯರಿಗೆ ಪ್ರಜಾಪ್ರಭುತ್ವ ಗೊತ್ತಿಲ್ಲವೇ? ಕಾನೂನು ಅರಿವಿಲ್ಲವೇ? ಅದು ಅಪರಾಧ ಎನಿಸುವುದಿಲ್ಲವೇ? ಊಹುಂ ಅದ್ಯಾವುದೂ ದೌರ್ಜನ್ಯಕೋರರಿಗೆ ಬಾಧಿಸುವುದಿಲ್ಲ! ಯಾಕೆಂದರೆ ಅದು ಸವರ ಶಾಸ್ತ್ರ ಪುರಾಣಗಳು ಅವರಿಗೆ ಕೊಡಮಾಡಿರುವ ಹಕ್ಕು..!! ಇದನ್ನೇ ಅವರು ನಂಬಿದ್ದಾರೆ ಮತ್ತು ತಳಸಮುದಾಯಗಳಿಗೂ ನಂಬಿಸಿದ್ದಾರೆ!! ಆದ್ದರಿಂದ ಅವರು ಹೊಡೆಯುವುದು ಇವರು ಹೊಡೆಸಿಕೊಳ್ಳುವುದೇ ಅವರ ಪ್ರಜಾಪ್ರಭುತ್ವ! ಅದು ಉಳ್ಟಾ ಹೊಡೆದರೆ? ಅದು ಹಿಂಸೆ ಮತ್ತು ಅಪ್ರಜಾಸತ್ತಾತ್ಮಕ!!
ಚಿತ್ರದಲ್ಲಿ ತಳಸಮುದಾಯದ ಸಣ್ಣಹುಡುಗ ಮೇಲ್ಜಾತಿಯವರಿಂದ ತನ್ನ ಅಣ್ಣ ಭೀಕರವಾಗಿ ಕೊಲೆಯಾಗುವುದನ್ನು ಕಣ್ಣಾರೆ ಕಂಡ ಹುಡುಗನಪಾತ್ರ ಪದೇ ಪದೇ ಒಂದು ಪ್ರಶ್ನೆಯನ್ನು ಕೇಳುತ್ತದೆ…”ಅಪ್ಪಾ ನಮ್ಮ ಅಣ್ಣನನ್ನು ಕೊಲೆಮಾಡಿದವರನ್ನು ಪೊಲೀಸರು ಏನೂ ಮಾಡಲಿಲ್ಲ…ಮತ್ತೆ ನಾವು ಮಾಡಿದ ತಪ್ಪನ್ನು ಮಾತ್ರ ಯಾಕೆ ಒಪ್ಪಿಕೊಂಡು ಶರಣಾಗಬೇಕು? ಅವರಿಗೊಂದು ನ್ಯಾಯ ನಮಗೊಂದು ನ್ಯಾಯನಾ?” ಇಡೀ ಜಾತಿವಾದಿ ಸವರ್ಣ ಸಮಾಜ ತಮಗೆ ತಾವೇ ಕೇಳಿಕೊಳ್ಳಬೇಕಾದ ಪ್ರಶ್ನೆಯಿದು. ಇಡೀ ಜಾತಿವಾದಿ ಸವರ್ಣ ಸಮಾಜದ ಆತ್ಮಕ್ಕೆ ಆಘಾತ ಉಂಟುಮಾಡಬೇಕಾದ ಪ್ರಶ್ನೆಯಿದು. ಇಡೀ ಜಾತಿವಾದಿ ಸವರ್ಣ ಸಮಾಜ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಪ್ರಶ್ನೆಯಿದು. ಇಡೀ ತಳಸಮುದಾಯವೂ ತಮ್ಮ ಆತ್ಮರಕ್ಷಣೆ ಮತ್ತು ಆತ್ಮಗೌರವಕ್ಕಾಗಿ ಕೇಳಿಕೊಳ್ಳಬೇಕಾದ ಪ್ರಶ್ನೆಯಿದು.
ತಳವರ್ಗಗಳಲ್ಲಿಯೂ ಅನೇಕ ಪಲ್ಲಟಗಳಾಗಿವೆ. ಅವರು ಅಂದಂತೆ ಅನಿಸಿಕೊಳ್ಳುವ, ಒದ್ದಂತೆ ಒದೆಸಿಕೊಳ್ಳುವ ಸ್ಥಿತಿಯಲ್ಲಿಲ್ಲ…ಏಟಿಗೆ ಎದಿರೇಟು…ರಕ್ತಕ್ಕೆ ರಕ್ತ…ಹಿಂಸೆಗೆ ಪ್ರತಿಹಿಂಸೆಯ ಹಾದಿ ಹಿಡಿಯಬಲ್ಲರು ಎಚ್ಚರ ಸವರ್ಣಿಯರೇ ಎಂಬ ಎಚ್ಚರಿಕೆಯನ್ನು ನಿರ್ದೇಶಕ ಸೂಕ್ಷ್ಮವಾಗಿ ಮತ್ತು ಸೂಚ್ಯವಾಗಿ ದಾಟಿಸುತ್ತಾರೆ. ಇಡೀ ಊರವರ ಕಾಲಿಗೆ ಚಪ್ಪಲಿ ಹೊಲೆದುಕೊಡುವವರು ತಾವು ಮಾತ್ರ ಬರಿಗಾಲಲ್ಲಿರಬೇಕೆಂದು ಬಯಸುವ ಸವರ್ಣೀಯರ ಮನೋಧೋರಣೆಯು ಎಷ್ಟು ಕ್ರೌರ್ಯ! ತಮ್ಮ ಭೂಮಿಯಲ್ಲಿ ತಳವರ್ಗ ಬೆವರು ಸುರುಸಿ ದುಡಿದು ತಮಗೆ ಹಾಕಿ ಅವರು ಮಾತ್ರ ಹಸಿವಿನಿಂದ ಬಳಲಬೇಕೆಂದು ಬಯಸುವ ಸವರ್ಣೀಯ ಮನೋರೋಗ ಅದೆಷ್ಟು ಕ್ರೂರ! ತಮಗೆ ಬಂಗಲೆಗಳನ್ನು ನಿರ್ಮಿಸಿಕೊಟ್ಟು ಅವರು ಮಾತ್ರ ಜೋಪಡುಗಳಲ್ಲೇ ಸಾಯಬೇಕೆಂದು ಬಯಸುವ ಸವರ್ಣೀಯರ ಮನಸೆಷ್ಟು ಅಮಾನುಷ…
ಅಸುರನ್ ಇಂತಹ ಅಮಾನುಷ, ಕ್ರೂರ ಜನರ ಅಸಹ್ಯಗಳನ್ನು ಮುಖಕ್ಕೆ ರಾಚುವಂತೆ, ನೋಡುಗರು ನಾಚುವಂತೆ ಹಿಡಿದ ಕನ್ನಡಿ ಅಷ್ಟೆ…ಇದೂ ಅವರಿಗೆ ಕಾಡಲಿಲ್ಲವೆಂದರೆ ಅವರು ಮನುಷ್ಯರೇ ಅಲ್ಲ. ಚಿತ್ರದ ಹಿಂಸೆ ನಮಗೆ ಭಯಾನಕ ಎನಿಸುತ್ತದೆ. ಆದರೆ ನಿಜವಾಗಿ ನಡೆದ ಕಂಬಾಲಪಲ್ಲಿ ಸಜೀವ ದಹನ, ಖೈರ್ಲಾಂಜಿಯ ಭೀಕರ ಕೊಲೆ , ಮೊನ್ನೆ ಉತ್ತರ ಪ್ರದೇಶದಲ್ಲಿ ನಡೆದ ಹತ್ಯಾಚಾರ, ನಿನ್ನೆ ಕರ್ನಾಟಕದಲ್ಲಿ ನಡೆದ ಕೊಲೆ,ಇಂದು ಗುಜರಾತ್ ನಲ್ಲಿ ನಡೆದ ದಲಿತ ಯುವಕನ ಬರ್ಬರ ಹತ್ಯೆ ಹೀಗೆ ಜಾತಿರೋಗ ಪೀಡಿತ ಸವರ್ಣ ಜಗತ್ತು ಭಾರತದಲ್ಲಿ ನಡೆಸುತ್ತಿರುವ ರಕ್ತ ಪಾತಗಳ ಸ್ಯಾಂಪಲ್ ಸರ್ವೆಯಂತಿದೆ ಅಸುರನ್!
No Comment! Be the first one.