ಒಂದು ಪ್ರಸಂಗ ಗಮನಿಸಿ… ತಿರುನೆಲ್ವೇಲಿ (ತಮಿಳಿನಲ್ಲಿ ನೆಲ್ ಅಂದರೆ ಭತ್ತ), ತಮಿಳುನಾಡಿನ ಭತ್ತದ ಕಣಜ. ಅದಕ್ಕೆ ಹೊಂದಿಕೊಂಡಂತೆ ತೂತ್ತುಕುಡಿ, ವಿರುಧುನಗರ್ ಜಿಲ್ಲೆಗಳು.ಥೇನಿ, ಮಧುರೈ, ರಾಮನಾಥ ಪುರಂ ದೂರವೇನೊ ಇಲ್ಲ. ತಮಿಳರ ಹೆಮ್ಮೆ, ಪ್ರತಿಷ್ಟೆಗಳನ್ನು ಹೆಚ್ಚಿಸಿದ ಹಲವು ವ್ಯಕ್ತಿಗಳು ತಮಿಳುನಾಡಿನ ದಕ್ಷಿಣದ ಈ ಜಿಲ್ಲೆಗಳವರು. ತಮಿಳುನಾಡಿಗೆ ಅನ್ನವೀಯುವ ಈ ಪ್ರದೇಶಗಳು, ಅಲ್ಲಿನ ಫ್ಯೂಡಲ್ ಮನ:ಸ್ಥಿತಿಯ ಜಮೀನುದಾರರ ಕ್ರೌರ್ಯ, ಶೋಷಣೆ, ಅಸಂವಿಧಾನಾತ್ಮಕ ಕಾರ್ಯವೈಖರಿಗಳಿಂದ ಸಾಕಷ್ಟು ಅಪಖ್ಯಾತಿಯನ್ನೂ ಪಡೆದಿದೆ. ಈ ತಿರುನೆಲ್ವೇಲಿಯ ಒಂದು ಗ್ರಾಮ ತಾಲೈಯೂತ್ತು. ಆ ಗ್ರಾಮದ ಪಂಚಾಯಿತಿಯ ಅಧ್ಯಕ್ಷೆ, ಕೃಷ್ಣವೇಣಿ ಎಂಬ ದಲಿತ ಹೆಣ್ಣು ಮಗಳು. ಅಂದು ಜೂನ್ ೧೩, ೨೦೧೧. ಆ ದಿನವನ್ನು ಆಕೆ ಎಂದಿಗೂ ಮರೆಯಲಾರಳು.
ಗ್ರಾಮ ಪಂಚಾಯತಿಯಲ್ಲಿನ ಜಾತಿ ತಾರತಮ್ಯ, ಪುರುಷ ಪ್ರಧಾನತೆಯ ವಿರುದ್ಧ ನಿರಂತರ ಕೂಗು ಮೊಳಗಿಸುತ್ತಿದ್ದ ಕೃಷ್ಣವೇಣಿ, ಸ್ವಜಾತಿ-ಮೇಲ್ಜಾತಿಯವರೊಡನೆ ದ್ವೇಷ ಕಟ್ಟಿಕೊಂಡಿದ್ದರು. ಧೈರ್ಯವಂತ ಹೆಣ್ಣುಮಗಳು ಕೃಷ್ಣವೇಣಿ ಹೆದರಲಿಲ್ಲ. ತಾಲೈಯೂತ್ತು ಸಮೀಪದಲ್ಲಿ ಬೃಹದಾಕಾರದ ಇಂಡಿಯಾ ಸೀಮೆಂಟ್ಸ್ ಕಂಪನಿ, ಗ್ರಾಮದ ಗಣನೀಯ ಪ್ರಮಾಣದ ಭೂಮಿಯನ್ನು ಒತ್ತುವರಿಯಾಗಿಸಿಕೊಳ್ಳಲು ಹೊಂಚುತ್ತಿತ್ತು. ಆಕೆ ಜಗ್ಗಲಿಲ್ಲ. ಅತಿಕ್ರಮಿಸಲು ಬಿಡಲೇ ಇಲ್ಲ. ಪಂಚಾಯಿತಿಗೆ ಸೇರಿದ ಭೂಮಿಯಲ್ಲಿ ಮಹಿಳೆಯರಿಗೆಂದೇ ಶೌಚಾಲಯ ಕಟ್ಟಿಸಲು ನಿರ್ದೇಶಿಸಿದರು. ಗ್ರಾಮದಲ್ಲಿ ಕಷ್ಟತರವಾಗಿದ್ದ ಮಹಿಳೆಯರ ಬದುಕಿಗೆ ಸ್ಪಂದಿಸಿದರು. ಪಂಚಾಯಿತಿಯ ಚೇರ್ ಮನ್ ಕುರ್ಚಿಯಲ್ಲಿ ಆಸೀನರಾದ ದಲಿತ ಹೆಣ್ಣುಮಗಳ ವರ್ತನೆಯಿಂದ ಗ್ರಾಮದ ಹಿರಿಯರು ಕೆರಳಿದರು.
ಜೂನ್ ೧೩ರ ಆ ರಾತ್ರಿ, ತಮ್ಮ ಕೆಲಸ ಮುಗಿಸಿದ ಕೃಷ್ಣವೇಣಿ ಮನೆಗೆ ಹಿಂದಿರುಗುತ್ತಿದ್ದರು. ಆದರೆ ಮನೆ ಸೇರಲಿಲ್ಲ. ರಾತ್ರಿ ಹನ್ನೊಂದಾದರೂ ಮನೆಗೆ ಬಾರದ ಪತ್ನಿಯನ್ನು ಅರಸಿ ಆಕೆಯ ಪತಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಕಂಗಾಲಾಗಿ ಹುಡುಕಲಾರಂಭಿಸಿದರು. ಮನೆಯ ಸಮೀಪವಿದ್ದ ಗ್ರಾಮದೇವರ ಗುಡಿ ಬಳಿ ಅರೆ ಪ್ರಜ್ಞಾಸ್ಥಿತಿಯಲ್ಲಿ ಕೃಷ್ಣವೇಣಿ ರಕ್ತದ ಮಡುವಲ್ಲಿ ಬೋರಲಾಗಿ ಬಿದ್ದಿದ್ದರು. ಆಕೆಯ ಎರಡೂ ಕೈಗಳ ತಲಾ ಒಂದೊಂದು ಬೆರಳು ಕತ್ತರಿಸಿ ಬಿದ್ದಿದ್ದವು. ೧೫ ಜನರ ಗುಂಪೊಂದು ಕ್ರಿಕೆಟ್ ದಾಂಡು-ಮಚ್ಚುಗಳಿಂದ ಸತತವಾಗಿ ಹಲ್ಲೆನಡೆಸಿದ್ದರು. ಓಡಿ ಹೋಗಲು ಆಗದಂತೆ ಎರಡೂ ಮಂಡಿಗಳ ಮೇಲೆ ಬ್ಯಾಟುಗಳಿಂದ ಬಲವಾಗಿ ಚಚ್ಚಿದ್ದರು. ಆಕೆಯ ಬಲಗಿವಿ ಕತ್ತರಿಸಿಹೋಗಿತ್ತು. ಇಡೀ ಊರಲ್ಲಿ ಯಾರೂ ಸಹಾಯಕ್ಕೆ ಬರಲಿಲ್ಲ. ಪತಿ ಕಷ್ಟಪಟ್ಟು ಆಟೋವೊಂದನ್ನು ಹಿಡಿದು, ತಮ್ಮ ಮಕ್ಕಳ ಸಹಾಯದಿಂದ ಆಸ್ಪತ್ರೆಗೆ ಸೇರಿಸಿದರು. ಮಹಾನ್ ಗಟ್ಟಿ ಮನಸ್ಸಿನ ಕೃಷ್ಣವೇಣಿ ಉಳಿದರು. ನಾನು ಬದುಕುಳಿದದ್ದು ನನಗೇ ಅಚ್ಚರಿ ಎಂದು ಕೃಷ್ಣವೇಣಿ ಹೇಳುತ್ತಾರೆ. ಈಗ ಕೃಷ್ಣವೇಣಿ ಸಾಕಷ್ಟು ಚೇತರಿಸಿಕೊಂಡಿದ್ದಾರೆ. ಅವರ ಮೇಲೆ ಹಲ್ಲೆ ನಡೆಸಿದವರ ಮನೆಯ ಸಮೀಪವೇ ಆಕೆಯೂ ವಾಸವಿದ್ದಾರೆ. ಮೊದಲಂತೆ ನಡೆಯಲು ಆಗುವುದಿಲ್ಲ. ಬಹಳ ಹೊತ್ತು ಕೂರಲು ಆಗುವುದಿಲ್ಲ. ಹಲ್ಲೆ ಮಾಡಿದ ದುರುಳರು ಕುಹುಕದ ನೋಟ ಬೀರುತ್ತಾರೆ. ಹೋಗಿ ಒಬ್ಬೊಬ್ಬರನ್ನೂ ಕೊಂದು ಬಿಡೋಣ ಅನಿಸುತ್ತೆ… ಏನು ಮಾಡೋದು… ನಡೆಯೋದೇ ಕಷ್ಟ ಎಂದು ಕೃಷ್ಣವೇಣಿ ಹತಾಶರಾಗಿ ನುಡಿದಾಗ, ಅವರನ್ನು ಸಂದರ್ಶಿಸುತ್ತಿದ್ದ ಪತ್ರಕರ್ತೆ ಕೂಡಾ ಗದ್ಗತಿತರಾಗಿದ್ದರು.
ಮೇಲೆ ಹೇಳಿದ ಘಟನೆಯನ್ನೇ ಹೋಲುವ ಹತ್ತು ಹಲವು ಘಟನೆಗಳು ಥೇನಿ, ರಾಮನಾಡ್, ದಿಂಡಿಗಲ್ ಜಿಲ್ಲೆಗಳಲ್ಲಿ ನಡೆದಿವೆ. ತಿರುನೆಲ್ವೇಲಿಯಲ್ಲಿ ಹೆಚ್ಚು ನಡೆದಿವೆ. ೨೦೧೫ ರ ಅಂಕಿ-ಅಂಶದ ಪ್ರಕಾರ ೧೦೦ ಕ್ಕೂ ಹೆಚ್ಚು ಜಾತಿ ದ್ವೇಷದ ಕೊಲೆಗಳು ತಿರುನೆಲ್ವೇಲಿ ಜಿಲ್ಲೆಯೊದರಲ್ಲೇ ವರ್ಷವೊಂದರಲ್ಲಿ ನಡೆದಿವೆ. ಹಲವು ಕೊಲೆ-ರಕ್ತಪಾತದ ಸುದ್ದಿಗಳು ಮಾಧ್ಯಮದವರೆಗೂ ಬರುವುದೇ ಇಲ್ಲ. ಕೊಲೆಯಾದ ವ್ಯಕ್ತಿಯ ಇಡೀ ದೇಹ ಸಿಕ್ಕದೇ ಇರುವ ಹಲವು ಸಂದರ್ಭಗಳೂ ಇವೆ. ಪೊಲೀಸ್ ಠಾಣೆಯ ಮೆಟ್ಟಿಲವರೆಗೂ ಹೋಗದ ಕೊಲೆಗಳ ಹಲವು ಘಟನೆಗಳೂ ಇವೆ. ಬಲಿಷ್ಟ ತೇವರ್-ಪಲ್ಲರ್ ವರ್ಗದವರಿಂದ ಸಕ್ಕಿಳರ್ ಎಂಬ ಕೆಳ ವರ್ಗದ ಮೇಲೆ ನಡೆಯುವ, ನಡೆಯುತ್ತಿರುವ ಹಲ್ಲೆಗಳು ಸಾಮಾನ್ಯವಾಗಿವೆ. ತಮ್ಮ ಹೊಲದಲ್ಲಿ ಬಂದು ಉಳುವವನ ಮಕ್ಕಳು ತಮಗಿಂತ ಚೆನ್ನಾಗಿ ಓದಿದರೆ, ತಾವು ಮೆಟ್ಟದ ಚಪ್ಪಲಿ ಅವರು ಮೆಟ್ಟಿದರೆ, ತಮ್ಮ ಬಳಿ ಇರದ ಸೈಕಲ್ ಒಂದು ಅವರ ಬಳಿ ಇದ್ದರೆ ಸಹಿಸಲಾರದೇ ದಹದಹಿಸುವ, ಅನಾಗರಿಕ, ಅಮಾನುಷ, ಪಾಳೆಗಾರಿಕೆಯ ಮನಃಸ್ಥಿತಿಯೊಂದು ಈ ಎಲ್ಲಾ ಹಿಂಸಾಚಾರ, ಅಮಾನವೀಯ ಕೃತ್ಯಗಳಿಗೆ ಮೂಲ. ಇಂತಹ ಮನಃಸ್ಥಿತಿ ತಂದೊಡ್ಡುವ ಸಾಮಾಜಿಕ ಆತಂಕಗಳು ಹಲವು. ಈ ಆತಂಕಗಳೇ ಪ್ರಜಾಸತ್ತೆಯ ದೊಡ್ಡ ಸವಾಲು.
ಮೊನ್ನೆ ವೆಟ್ರಿಮಾರನ್ ಚಿತ್ರಿಸಿರುವ ಅಸುರನ್ ನೋಡಿದಾಗ, ಈ ಘಟನೆಗಳೆಲ್ಲಾ ಮನದ ಪರದೆಯ ಮೇಲೆ ಮೂಡಿದವು. ಗ್ರಾಮೀಣ ಭಾರತದಲ್ಲಿರುವ Feudal Lords ಗಳ ದಬ್ಬಾಳಿಕೆ, ಕ್ಷುಲ್ಲಕ ಕಾರಣಕ್ಕಾಗಿ ಕತ್ತಿ, ಮಚ್ಚು, ಈಟಿಗಳನ್ನು ಹಿರಿದು ನಡೆದಾಡುವ ದಾರಿಯನ್ನೇ ಯುದ್ಧಭೂಮಿಯಾಗಿಸಿಕೊಳ್ಳುವ ಸಂಗತಿಗಳನ್ನು ಅರಿಯದವರಿಗೆ, ಅಸುರನ್ ನಲ್ಲಿನ ಹಲವು ದೃಶ್ಯಗಳು ಹಿಂಸಾತ್ಮಕವೆನಿಸಿದರೆ ಸಹಜವೇ. ವೈಯಕ್ತಿಕವಾಗಿ ನನಗೆ ಹಾಗೆನಿಸಲಿಲ್ಲ.
ಬಲವಂತ, ಅನಿವಾರ್ಯತೆಗಳಿಂದ ಹಿಂಸೆಯಲ್ಲಿ ಭಾಗಿಯಾದವರು ಮಾನವತೆಗಾಗಿ ಅರಸುವ ತಲ್ಲಣದ ಕಥೆಯೊಂದನ್ನು ವೆಟ್ರಿಮಾರನ್ ಮನದಾಳಕ್ಕಿಳಿಯುವಂತೆ ಹೇಳಿದ್ದಾರೆ. ಧನುಷ್ (ಶಿವಸಾಮಿ), ಅವರ ಮಗ ಕೆನ್ ಕರುಣಾಸ್ (ಚಿದಂಬರಮ್) ಇಬ್ಬರೂ ಪಾತ್ರವನ್ನು ಆವರಿಸಿಕೊಂಡಿರುವ ಪರಿ ಅನನ್ಯ. ಸಭ್ಯರಾಗಿಯೇ ಬಾಳುವೆ ನಡೆಸುವ ಮಂದಿಯನ್ನು ಕೆಣಕಿದಾಗ ಮಾತ್ರ ತಿರುಗಿ ಬೀಳುವುದನ್ನು ಗಮನಿಸಬೇಕು. ಹಂದಿಬೇಟೆಯ ದೃಶ್ಯ ಒಂದು ರೂಪಕವಾಗಿ ಮೂಡಿಬಂದಿದೆ. ವೆಟ್ರಿಮಾರನ್ ರ ಸಂಭಾಷಣೆ ಹಲವೆಡೆ ಮಾರ್ಮಿಕವಾಗಿದೆ. ತನ್ನ ಜಮೀನನ್ನು ನುಂಗಲೆತ್ನಿಸುವ ಜಮೀನುದಾರನಿಂದ ಶಿವಸಾಮಿ ತೀವ್ರ ಮಾನಸಿಕ ಯಾತನೆ ಅನುಭವಿಸುತ್ತಾನೆ. ಎಳೆಪ್ರಾಯದ ಮೊದಲ ಮಗ ಮುರುಗನ್ ಮಾಡುವ ತಪ್ಪಿಗೆ (ಜಮೀನುದಾರನ ಪ್ರಕಾರ), ಶಿವಸಾಮಿ ಊರ ಪ್ರತಿಮನೆಯ ಮುಂದೆಯೂ ಸಾಷ್ಟಾಂಗ ನಮಸ್ಕರಿಸಿ ಕ್ಷಮೆ ಯಾಚಿಸಬೇಕಾದ ಶಿಕ್ಷೆಗೆ ಗುರಿಯಾಗುತ್ತಾನೆ. ತನ್ನ ಕುಟುಂಬ ಕ್ಷೇಮವಾಗಿರಲು ಶಿವಸಾಮಿ ಮರುಮಾತನಾಡದೇ ಶಿಕ್ಷೆ ಅನುಭವಿಸುತ್ತಾನೆ. ತಂದೆಗಾದ ಅವಮಾನ, ಮೌನವಾಗಿ ತಂದೆ ಶಿಕ್ಷೆ ಅನುಭವಿಸಿದ್ದನ್ನು ಕಂಡು ಕೆರಳುವ ಮುರುಗ, ಟೆಂಟ್ ನಲ್ಲಿ ಸಿನಿಮಾ ನೋಡಲು ಬಂದ ಜಮೀನುದಾರನನ್ನು ತೀವ್ರವಾಗಿ ವಿಚಾರಿಸಿಕೊಂಡುಬಿಡುತ್ತಾನೆ.
ಇದಾದ ಒಂದೆರೆಡು ದಿನಗಳಲ್ಲೇ ಮುರುಗ ಊರ ಜಮೀನುದಾರನ ಕ್ರೌರ್ಯಕ್ಕೆ ಬಲಿಯಾಗುತ್ತಾನೆ. ರುಂಡವಿಲ್ಲದ ಅವನ ಶವ ಊರಾಚೆ ದೊರಕಿದೆ. ಪೊಲೀಸರು ಕಾಣೆಯಾಗಿದ್ದನೆಂದು ಪ್ರಕರಣ ದಾಖಲಿಸಿಕೊಳ್ಳುತ್ತಾರೆ. ಇಡೀ ಪೊಲೀಸ್ ವ್ಯವಸ್ಥೆ ಜಮೀನ್ದಾರನ ಅಣತಿಯಂತೆ ನಡೆಯುತ್ತದೆ. ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳುವ ಮತ್ತೊಬ್ಬ ಮಗ ಮತ್ತು ಪುಟ್ಟ ಮಗಳನ್ನು ಕಳೆದುಕೊಳ್ಳಲು ಇಚ್ಚಿಸದ ಶಿವಸಾಮಿ ಆತಂಕದಿಂದ ಕೇರಿ ಬಿಟ್ಟೋಡುವ ಆ ಕ್ರಿಯೆಯೂ ಒಂದು ರೂಪಕವೇ.. ಅತ್ತ ಮತ್ತೊಂದು ದಿಕ್ಕಿನಲ್ಲಿ ಶಿವಸಾಮಿಯ ಪತ್ನಿ ಪಚ್ಚೈಯಮ್ಮಾಳ್ (ಮಂಜು ವೇರಿಯರ್) ಮತ್ತು ಪುಟ್ಟ ಮಗಳು ತಪ್ಪಿಸಿಕೊಳ್ಳುತ್ತಾರೆ. ಎಲ್ಲರೂ ಒಟ್ಟಾಗಿರಲು, ಒಂದೇ ದಿಕ್ಕಿನಲ್ಲಿ ತಪ್ಪಿಸಿಕೊಂಡು ಓಡಲೂ ಭಯ. ಎಲ್ಲರನ್ನೂ ಜಮೀನುದಾರನ ದುಷ್ಟಪಡೆ ಒಟ್ಟಿಗೇ ಸಂಹರಿಸಿಬಿಡುವ ಅಪಾಯವಿದೆ. ಉಳಿದರೆ ಕೆಲವರಾದರೂ ಉಳಿಯಲಿ ಎಂಬ ಆಸೆ. ಹಾಗಾಗಿ ಸಂಸಾರ ದಿಕ್ಕಾಪಾಲಾಗಿ ಓಡಲಾರಂಭಿಸುತ್ತದೆ. ಕೊಲೆ, ರಕ್ತಪಾತಗಳ ಎಡೆಯಿಂದ, ಕಾಡು, ಮೇಡು, ಮರಳುಗಾಡಾದ ಬತ್ತಿದ ನದಿ-ಹೊಂಚುತ್ತಾ ಹಿಂಬಾಲಿಸುವ ದುಷ್ಟ ಪಡೆಗಳನ್ನೂ ಲೆಕ್ಕಿಸದೇ, ಆತಂಕ-ನಿರೀಕ್ಷೆಗಳಿಂದ ಜೀವಪರತೆಯೆಡೆ ದಾಪುಗಾಲು ಹಾಕುವ ತಂದೆ ಮಗ, ತಂದೆಯ ಸಮಸಮಕ್ಕೂ ನಡೆಯುತ್ತಾ, ಕಾಡಲ್ಲೇ ಸಿಕ್ಕ ಮೊಲವೊಂದನ್ನು ಸುಟ್ಟು ತಿನ್ನುವ ನಿರ್ಲಿಪ್ತತೆ ತೋರುವ ಮಗ, ಮೊಲ ಸುಡುವಾಗ ಎದ್ದ ಹೊಗೆ ಕಂಡು ಕಂಗಲಾಗಿ ಓಡಿ ಬಂದು ಬೆಂಕಿ ಆರಿಸಿ, ಹೊಗೆ ನೋಡಿದರೆ ಇಲ್ಯಾರೋ ಇದ್ದಾರೆ ಅಂತ ಸಂದೇಹ ಬರಲ್ವೇನೊ ಮುಟ್ಟಾಳ ಎನ್ನುತ್ತಾ ಮಗನಿಗೊಂದು ಬಾರಿಸುವ ತಂದೆ.. ವೆಟ್ರಿಮಾರನ್ ರ ನಿರೂಪಣೆ ಹೀಗೆಯೇ ಜೀವಂತವಾಗಿ ಸಾಗುತ್ತದೆ.
ಶಿವಸಾಮಿಯ ಹಿನ್ನಲೆ ತೋರಿಸುವ ದೃಶ್ಯಗಳು ಚಿತ್ರದ ಜೀವಾಳ. ಸಾರಾಯಿ ಕಾಸುತ್ತಾ, ತನ್ನ ಧಣಿ ವಿಶ್ವನಾಥನ್ (ವೆಂಕಟೇಶ್) ಗೆ ಬಲಗೈ ಬಂಟನಾಗಿದ್ದ ಶಿವಸಾಮಿ ಮಾಡುವ ದೊಡ್ಡ ಅವಿವೇಕ, ನಂಬಿಕಸ್ಥನಂತೆ ದೀನನಂತೆ ಬಂದು ನಿಲ್ಲುವ ಕಿಡಿಗೇಡಿ ಪಾಂಡ್ಯನ್ (ನಿತೀಶ್ ವೀರಾ)ಗೆ ತನ್ನ ಧಣಿಯ ಬಳಿ ಕೆಲಸ ಕೊಡಿಸುವುದು. ಶಿವಸಾಮಿಯ ಕುಟುಂಬವಿದ್ದ ಗುಡಿಸಲಿಗೆ ಬೆಂಕಿಯಿಡುವ ಮಟ್ಟಕ್ಕೆ ಹೋಗುವ ಪಾಂಡ್ಯನ್, ಶಿವಸಾಮಿಯ ಬಾಳನ್ನು ಮೂರಾಬಟ್ಟೆಯಾಗಿಸುತ್ತಾನೆ. ಪಾಂಡ್ಯನ್, ಹಾಗೂ ಅವನನ್ನು ಈ ಹಿಂಸಾತ್ಮಕ ಕೃತ್ಯಕ್ಕೆ ಪ್ರಚೋದಿಸುವ ಧಣಿ ಇಬ್ಬರನ್ನೂ ಶಿವಸಾಮಿ ಕೊಂದುಹಾಕುತ್ತಾನೆ. ಮುಗ್ಧತೆ, ಈರ್ಷ್ಯೆ, ಮತ್ಸರ, ನಂಬಿಕೆದ್ರೋಹ, ಪಾಳೆಗಾರಿಕೆಯ ಮನಸ್ಥಿತಿಗಳಿಗೆ ಮೂರ್ತರೂಪವೊಂದನ್ನು ವೆಟ್ರಿಮಾರನ್ ಈ ಪಾತ್ರಗಳಲ್ಲಿ ಕೊಟ್ಟಿದ್ದಾರೆ. ಪಾಂಡ್ಯನ್ ತರದ ಮನಃಸ್ಥಿತಿಯೇ, ಕೃಷ್ಣವೇಣಿಯಂತಹ ಸಭ್ಯ ಹೆಣ್ಣುಮಗಳನ್ನು ಅಮಾನುಷವಾಗಿ ಹಲ್ಲೆಮಾಡಲು ಸಾಧ್ಯ. ಮೈ-ಕೈ ರಕ್ತಮಾಡಿಕೊಂಡ, ಇಡೀ ಸಂಸಾರ ಭೀಕರವಾಗಿ ಮರಟಿಹೋದದ್ದರಿಂದ ಕ್ಷೋಭೆಗೊಳಗಾದ ಶಿವಸಾಮಿ, ಸಾರಾಯಿ ಮರೆತು ಕೃಷಿಗಿಳಿಯುವ ಕ್ರಿಯೆ, ಮಾನವೀಯ ಸೆಲೆಯೊಂದನ್ನು ರೂಪಿಸುತ್ತದೆ. ಕೃಷಿ, ಶಿವಸಾಮಿಯಲ್ಲಿ ಹಲವು ಬದಲಾವಣೆಗಳನ್ನು ತರುತ್ತದೆ. ಆಕ್ರೋಶ, ರಕ್ತಕ್ಕಾಗಿ ಹೊಂಚುವ ತವಕಗಳೆಲ್ಲಾ ಇಳಿಮುಖವಾಗುತ್ತದೆ. ಮಗನೊಡನೆ ಕಾಡು ಮೇಡು ಅಲೆಯುವ ಶಿವಸಾಮಿ ಬಹಳ ಮಾಗಿದ್ದಾನೆ. ಅಣ್ಣನ ಬದಲು ನೀನೇ ಸತ್ತಿದ್ದರೆ ಚೆನ್ನಾಗಿರುತ್ತಿತ್ತು ಎಂದು ಚಿದಂಬರಂ ಉದ್ಧಟವಾಡಿದಾಗ, ಶಿವಸಾಮಿ ಕೆರಳದೇ ಮೌನವಾಗಿ ಆತ್ಮವಿಮರ್ಶೆಗಿಳಿಯುವುದು, ಅವನಲ್ಲಾದ ಪಕ್ವತೆಯನ್ನು ಬಿಂಬಿಸುತ್ತದೆ. ತನ್ನ ಮೊದಲಮಗನ ಕೊಲೆಗಾರ ಕೈಗೆ ಸಿಕ್ಕರೂ, ಅವನನ್ನು ಕೊಲ್ಲದೇ ಶಿವಸಾಮಿ ಕ್ಷಮಿಸಿಬಿಡುತ್ತಾನೆ. ಕೊಲೆ, ಮತ್ತೊಂದು ಕೊಲೆ ಮಾಡಿಸುತ್ತದೆ, ಅದಕ್ಕೆ ಕೊನೆಯೇ ಇಲ್ಲ ಎಂದು ಚಿದಂಬರನಿಗೆ ಬುದ್ಧಿ ಹೇಳುತ್ತಾನೆ.
ಜಮೀನುದಾರನ ಕೊಲೆ ಪ್ರಕರಣ ರೂವಾರಿ ಚಿದಂಬರಂ, ಹಾಗೂ ಶಿವಸಾಮಿಗಾಗಿ ಪೊಲೀಸರು ಮಾತ್ರವಲ್ಲದೇ ಜಮೀನುದಾರನ ಸೈನ್ಯ ಕೂಡಾ ಹುಡುಕುತ್ತಿರುತ್ತದೆ. ಜಮೀನಿನಿಂದ ಇಷ್ಟೆಲ್ಲಾ ಹಿಂಸೆ-ಅವಮಾನಗಳಿಂದ ಹೈರಾಣಾದ ಶಿವಸಾಮಿಗೆ ಈಗ ನೆಮ್ಮದಿ ಬೇಕಿದೆ. ಮಗ-ಮಗಳು ಸಾರ್ಥಕ ಜೀವನ ನಡೆಸುವುದು ಮುಖ್ಯವಾಗಿದೆ. ಭೀಭತ್ಸ ದಿನಗಳನ್ನು ಕೊನೆಗಾಣಿಸಬೇಕಿದೆ. ಶಿವಸಾಮಿಗೆ ಈಗ ರಕ್ತ-ಸೇಡು ಬೇಡ. ಜಮೀನು, ಕಾಸು ಕಿತ್ತುಕೊಳ್ಳಬಹುದು ಕಣೋ… ವಿದ್ಯೆ, ಅಕ್ಷರ ಯಾರಿಗೂ ಕಿತ್ತುಕೊಳ್ಳಲಾಗಲ್ಲ… ನೀನು ಓದಬೇಕು ಎಂದು ಆರ್ದ್ರ ಧ್ವನಿಯಲ್ಲಿ ಚಿದಂಬರನಿಗೆ ಬುದ್ಧಿ ಹೇಳುವ ಶಿವಸಾಮಿ ಕೊನೆಯಲ್ಲಿ ಕೋರ್ಟ್ ಹಾಲ್ ಒಳಗೆ ನಡೆಯುತ್ತಾನೆ. ಇಷ್ಟು ದಿನ ಶಾಂತಿ-ನೆಮ್ಮದಿ ಕಸಿದಿದ್ದ ಹಿಂಸೆಯ ಆ ಜ್ವಾಲೆಯನ್ನು ನಂದಿಸುವಂತೆ ನ್ಯಾಯಾಲಯದ ಆವರಣದಲ್ಲಿ ಮಳೆ ಸುರಿಯುತ್ತದೆ. ಜಮೀನುದಾರನ ಸೈನ್ಯಕ್ಕೆ ಸಿಲುಕಿ ಹಣ್ಣುಗಾಯಿ-ನೀರುಗಾಯಾಗುವ ಉಳಿದೊಬ್ಬನೇ ಮಗ ಚಿದಂಬರನನ್ನು ಉಳುಸಿಕೊಳ್ಳಲು ಓಡೋಡಿ ಬರುವ, ವೀರಾವೇಶದಿಂದ ಕಾದಾಡುವ ಶಿವಸಾಮಿಗಿಂತ, ಜಮೀನು ಪತ್ರಕ್ಕೆ ಹೆಬ್ಬೆಟ್ಟು ಒತ್ತಿ, ತನಗಿದ್ದ ಅಲ್ಪ ಭೂಮಿಯನ್ನು ಪರಭಾರೆ ಮಾಡಿ, ಭಾರವಾದ ಹೆಜ್ಜೆ ಇಡುತ್ತಾ ಅಸಹಾಯಕನಾಗಿ ಬರುವ ಶಿವಸಾಮಿ ಬಹಳದಿನ ನೆನಪಲ್ಲಿ ಉಳಿಯುತ್ತಾನೆ.
ಚಿತ್ರವನ್ನು ಮತ್ತಷ್ಟು ಸ್ಮರಣೀಯವಾಗಿಸಿರುವುದು ವೇಲರಾಜ್ ರಾಜಾಮಣಿ ಯವರ ಕ್ಯಾಮೆರಾ ಕುಸುರಿ, ಪೀಟರ್ ಹೇಯ್ನ್ಸ್ ರ ರೋಚಕ ಸ್ಟಂಟ್ಸ್ ಮತ್ತು ಇಡೀ ಚಿತ್ರ ಎಲ್ಲೂ ಎಡವದೇ ತಡವರಿಸದೇ ಚೇತೋಹಾರಿಯಾಗಿ ಸಾಗಿಸುವ ರಾಮರ್ ರ ಸಂಕಲನ. ತಮಿಳು ಚಿತ್ರರಂಗದ ಗೌರವಾನ್ವಿತ ತಂತ್ರಜ್ಞರಾದ ತಿರು (ತಿರುನಾಕ್ಕರಸು) ಬಳಿ ಸಹಾಯಕರಾಗಿದ್ದ ವೇಲರಾಜ್ ಸ್ವತಃ ನಿರ್ದೇಶಕರೂ ಹೌದು. ಹಂದಿಬೇಟೆಯ ದೃಶ್ಯ, ಸ್ಟಂಟ್ಸ್ ದೃಶ್ಯಗಳ ಚಿತ್ರೀಕರಣದಲ್ಲಿನ ಸ್ಟಡಿ ಶಾಟ್ ಗಳು, ಕಾಡು-ಮೇಡುಗಳಲ್ಲಿ ಶಿವಸಾಮಿ-ಚಿದಂಬರಮ್ ಅಲೆಯುವ ಸನ್ನಿವೇಶಗಳಲ್ಲಿ ಬಳಸಿರುವ ಏರಿಯಲ್ ಶಾಟ್ ಗಳ ಸಮರ್ಪಕ ಬಳಕೆ ಪ್ರಶಂಸಾರ್ಹವಾಗಿದೆ. ಹಾಗೆಯೇ, ಪೀಟರ್ ಹೇಯ್ನ್ಸ್ ರ ಸಾಹಸ ದೃಶ್ಯಗಳೂ ಕೂಡಾ. ಇಲ್ಲಿ ಅತಿಮಾನುಷವೆನಿಸುವ ಸ್ಟಂಟ್ಸ್ ಗಳಾವುದೂ ಇಲ್ಲ. ಅನವಶ್ಯಕ ಸ್ಲೋ-ಮೋಷನ್ ಗಳಿಲ್ಲ. ಗ್ರಾಮದ ಹಿನ್ನಲೆ ಪರಿಗಣಿಸಿ, ವಾಸ್ತವಿಕವಾಗಿರುವಂತೆ ಸಂಯೋಜಿಸಿರುವ ಹೇಯ್ನ್ ರ ಕೆಲಸ ಇಷ್ಟವಾಗುತ್ತದೆ. ಜಿ.ವಿ.ಪ್ರಕಾಶ್ ಕುಮಾರ್ ಸಂಯೋಜಿಸಿರುವ ಹಾಡುಗಳಲ್ಲಿ ಇಳಯರಾಜಾರ ದಟ್ಟ ಪ್ರಭಾವವಿದೆಯಾದರೂ, ಹಿನ್ನಲೆ ಸಂಗೀತ ಆಪ್ತವಾಗುತ್ತದೆ. ಪಶುಪತಿಯಂತಹ ದೈತ್ಯ ಪ್ರತಿಭೆಗೆ ಇಲ್ಲಿ ಹೆಚ್ಚು ಕೆಲಸವಿಲ್ಲ ಎಂಬುದೇ ಬೇಸರದ ವಿಷಯ. ಮಂಜು ವೇರಿಯರ್ ಅಭಿನಯ ನೆನಪಿನಲ್ಲುಳಿಯುತ್ತದೆ.
ಜಾತಿ ವೈಷಮ್ಯದ ಘಟನೆಗಳಿಗೆ, ಉಳ್ಳವರು-ಉಳುವವರ ನಡುವಿನ ಹೋರಾಟಕ್ಕೆ ಒಂದು ಇತಿಹಾಸವೇ ಇದೆ. ೧೯೬೮ರಲ್ಲೇ ನಾಗಪಟ್ಟಣಂ ಜಿಲ್ಲೆಯ ಕೀಳ್ ವೆಣ್ಮಣಿ ಯಲ್ಲಿ ಹೆಚ್ಚು ಪಗಾರದ ಬೇಡಿಕೆ ಇಟ್ಟದ್ದಕ್ಕಾಗಿ ೪೪ ಮಂದಿ ದಲಿತರ ಮಾರಣಹೋಮ ನಡೆದಿತ್ತು. ಆಗ ತಾನೇ ಅಣ್ಣಾರ (ಸಿ.ಎನ್.ಅಣ್ಣಾದುರೈ)ರ ಎಡಪಂಥೀಯ ಒಲವಿದ್ದ ಡಿಎಂಕೆ ಸರ್ಕಾರ ಆಡಳಿತಾರೂಢವಾಗಿತ್ತು. ಈ ಘಟನೆ ಅಣ್ಣಾಸರ್ಕಾರ ಹಲವು ಭೂಸುಧಾರಣೆಗಳನ್ನು ಕೈಗೊಳ್ಳಲು ಪ್ರೇರೇಪಿಸಿತು. ಈ ಘಟನೆಯನ್ನು ಆಧರಿಸಿ ಲೇಖಕಿ ಇಂದಿರಾ ಪಾರ್ಥಸಾರಥಿ ಕುರುಧಿಪ್ಪುನಲ್ (ರಕ್ತದ ಮಡು) ಎಂಬ ಕಾದಂಬರಿ ಬರೆದರು. ೧೯೭೭ ರಲ್ಲಿ ರಚಿಸಿದ ಆ ಕಾದಂಬರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಬಂದಿತು. ೧೯೮೩ರಲ್ಲಿ ಈ ಕಾದಂಬರಿಯನ್ನು ಆಧರಿಸಿ ಶ್ರೀಧರ್ ರಾಜನ್ ಕಣ್ ಸಿವಂತಾಲ್ ಮಣ್ ಸಿವಕ್ಕುಮ್ (ಕಣ್ಣು ಕೆಂಪಾದರೆ, ಮಣ್ಣೂ ಕೆಂಪಾಗುತ್ತದೆ) ಎಂಬ ಚಿತ್ರ ಮಾಡಿದರು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಶ್ರೀಧರ್ ರಾಷ್ಟ್ರಪ್ರಶಸ್ತಿಯನ್ನೂ ಪಡೆದರು. ಸತ್ಯಜಿತ್ ರೇ ಅವರ ಅಚ್ಚುಮೆಚ್ಚಿನ ಛಾಯಾಗ್ರಹಕ ಸೌಮೆಂದು ರಾಯ್, ಚಿತ್ರವನ್ನು ಅಂದವಾಗಿ ಚಿತ್ರಿಸಿದ್ದರು. ಕೀಳ್ ವೆಣ್ಮಣಿಯ ಘಟನೆ ರಾಷ್ಟ್ರದಾದ್ಯಂತ ಸುದ್ದಿಯಾಗಲು ಕಾರಣರಾದವರು ಮೈಥಿಲಿ ಶಿವರಾಮನ್ ಎಂಬ ಮಹಿಳಾ ಹೋರಾಟಗಾರ್ತಿ. ಅವರ Haunted by Fire ಇಡೀ ಘಟನೆಯ ಮೇಲೆ ಬೆಳಕಿ ಚೆಲ್ಲುತ್ತದೆ. ಅಸುರನ್ ನಲ್ಲಿ ಕೂಡಾ ಕೀಳ್ ವೆಣ್ಮಣಿಯ ಘಟನೆಯ ಪ್ರಸ್ತಾಪ ಬರುತ್ತದೆ.
ಕರ್ನಾಟಕದ ಕಂಬಾಲಪಲ್ಲಿಯಲ್ಲಿಯಲ್ಲೂ ಕೀಳ್ ವೆಣ್ಮಣಿಯಂತಹದೇ ದೌರ್ಜನ್ಯವೊಂದು ೨೦೦೦ದಲ್ಲಿ ನಡೆಯಿತು. ೪೬ ಜನ ಆರೋಪಿಗಳನ್ನು ದೋಷಮುಕ್ತರನ್ನಾಗಿಸಿ ಹೈಕೋರ್ಟ್ ತೀರ್ಪು ನೀಡಿತು. ಇದ್ದ ಒಬ್ಬನೇ ಪ್ರತ್ಯಕ್ಷಸಾಕ್ಷಿ ವೆಂಕಟರಾಯಪ್ಪ ಎರಡುವರ್ಷಗಳ ಹಿಂದೆ ತೀರಿಕೊಂಡರು. ಅವರ ಕುಟುಂಬದ ಐದು ಜನ (ಒಟ್ಟು ೭ ಜನ) ಬಲಿಷ್ಟಜಾತಿಯ ದೌರ್ಜನ್ಯಕ್ಕೆ ಬೂದಿಯಾಗಿ ಹೋದರು. ಕಂಬಾಲಪಲ್ಲಿ ಹೆಸರಿನ ಚಿತ್ರ ಕೂಡಾ ಬಂದು ಹೋಯಿತು. ಇದಲ್ಲದೇ ಜಾತಿ, ವರ್ಗ ತಾರತಮ್ಯದ ಹಲವು ಹತ್ತು ಘಟನೆಗಳು ರಾಜ್ಯದಾದ್ಯಂತ ನಡೆದ ವರದಿಗಳು ಬರುತ್ತಲೇ ಇರುತ್ತವೆ. ನಮ್ಮ ಚಿತ್ರರಂಗ ಸೂಕ್ಷ್ಮವಾಗಿ ಅವಲೋಕಿಸಬೇಕಿದೆ. ಹಾಗೆಯೇ ಬಾಲುಮಹೇಂದ್ರರಿಂದ ಇಂದಿನ ವೆಟ್ರಿಮಾರನ್ ವರೆಗೂ, ಪಿ ಸಿ ಶ್ರೀರಾಮ್, ಸಂತೋಷ್ ಶಿವನ್, ತಿರು ಇಂದ ವೇಲರಾಜ್ ವರೆಗೂ ವ್ಯಾಪಿಸಿರುವ ತಮಿಳು ಸಿನಿಮಾದ ಶಾಲೆಯ ಬಗ್ಗೆ ಮೆಚ್ಚುಗೆ ಮೂಡುತ್ತದೆ.
ಅಸುರನ್ಗೆ ಆಧಾರ ಪೂಮಣಿಯವರ ವೆಕ್ಕೈ (ಉರಿ) ಎಂಬ ಕಾದಂಬರಿ. ವೆಟ್ರಿಮಾರನ್ ಹೇಳಿರುವಂತೆ ಮೂಲ ಕಾದಂಬರಿಯ ಹಲವು ಘಟನೆಗಳು ಮತ್ತಷ್ಟು ಭೀಭತ್ಸವಾಗಿವೆ. ವೆಟ್ರಿಮಾರನ್-ಮಣಿಮಾರನ್ ಸಾಕಷ್ಟು ಸಂಯಮವಹಿಸಿ ಚಿತ್ರಕಥೆ ರಚಿಸಿದ್ದಾರೆ. ಸಂದರ್ಶನದಲ್ಲಿ ಅವರೇ ಹೇಳಿದಂತೆ ಇದು ತಂದೆಯೆಡೆಗೆ ಮಗನ ಪಯಣ. ನಿಜ… ತಂದೆ ಇಲ್ಲಿ ಪಕ್ವತೆ-ಸಂಯಮಗಳ ಸಂಕೇತ. ಮಗ ಹುಡುಗು, ಆತುರ, ಮುಂಗೋಪದ ಸಂಕೇತ. ಮಗ ತಂದೆಯೆಡೆಗೆ ನಡೆಯಬೇಕು.