“ಅಸುರನ್ ಕೇವಲ ಸಿನಿಮಾ ಮಾತ್ರವಲ್ಲ, ಪಾವಿತ್ರ್ಯ ಭಾರತೀಯತೆಯ ಹುಸಿ ಸೋಂಕಿನಲ್ಲಿ ಬಳಲುತ್ತಿರುವ ರೋಗಿಗಳಿಗೆ ಜೀವಜನ್ಯ ಮದ್ದು” ಎಂದು ಕನ್ನಡದ ಕತೆಗಾರ ವಿ.ಆರ್.ಕಾರ್ಪೆಂಟರ್ ಬರದದ್ದನ್ನು ಓದಿದೆ. “ತಮಿಳು ಸಿನಿಮಾ ಎಂದಿಗೂ ಇಂಡಿಯಾದ ಇತರ ಭಾಷೆಗಳ ಸಿನಿಮಾದಂತಿರುವುದಿಲ್ಲ. ಚಿತ್ರದಲ್ಲಿ ಹಠಾತ್ ಘಟಿಸುವ ಕೊಲೆಯೊಂದರಲ್ಲಿ ನೀವು ಭಾಗಿಯಾಗಿರುತ್ತೀರಿ ಅಥವಾ ಅಲ್ಲಿನ ಪಾತ್ರವೊಂದರ ಎದೆಗೆ ಚೂರಿಯೊಂದು ತೂರಿ ಚಿಮ್ಮಿದ ರಕ್ತ ನಿಮಗೂ ತಾಕುತ್ತದೆ. ಆಯಾಸ, ದಣಿವು, ಹಿಂಸೆ, ದಿಗಿಲು, ರೋಮಾಂಚನ ಮತ್ತು ಹೇಳಿಕೊಳ್ಳಲಾಗದ ಮೌನಗಳಿಗೆಲ್ಲ ನೀವು ತಮಿಳು ಸಿನಿಮಾ ನೋಡುವಾಗ ತುತ್ತಾಗುತ್ತೀರಿ. ತಮಿಳು ಸಿನಿಮಾವೊಂದು ನೋಡಿಯಾದ ಮೇಲೆ ಯಾರೊಂದಿಗೂ ಮಾತು ಬೇಕು ಅನ್ನಿಸುವುದಿಲ್ಲ. ಈ ವಿಚಿತ್ರ ಬೇನೆ ಒಂದೆರಡು ದಿನಗಳಲ್ಲಿ ಮಾಯವಾಗುವಂತದ್ದಲ್ಲ.” ಎಂದು ಯುವ ಬರಹಗಾರ ಚಂದ್ರಶೇಖರ ಐಜೂರ್ ಅಸುರನ್ ಕುರಿತು ಬರೆಯುತಾರೆ. ನನಗೆ ನಿಜಕ್ಕೂ “ಅಸುರನ್” ಬಗ್ಗೆ ಗಮನ ಸೆಳೆದದ್ದು ‘ಐಜೂರ್’ ಪೇಸ್ ಬುಕ್ ನಲ್ಲಿ ಸತತವಾಗಿ ಹಾಕಿದ ಟಿಪ್ಪಣೆಗಳೇ! ಈ ಹುಡುಗನಿಗೆ ಅಸುರನ್ ಅದೆಷ್ಟು ಆವರಿಸಿದೆಯೆಂದರೆ ಈತ ಸದ್ಯದಲ್ಲಿ ಅಸುರನ್ ನಿಂದ ಹೊರಬರುವ ಸೂಚನೆಗಳೇ ಕಾಣುತ್ತಿಲ್ಲ!
“ಅಸುರನ್ ಕೇವಲ ಒಂದು ಸಿನಿಮಾ ಅಲ್ಲ. ಗ್ರಾಮೀಣ ಭಾರತದ ದರ್ಶನ. ಇದು ಸವರ್ಣ ಭಾರತದ ಮೇಲ್ತನದ ಮನೋರೋಗವನ್ನು ಅನಾವರಣಗೊಳಿಸುವ ಗಟ್ಟಿಗುಂಡಿಗೆಯ ನಿರ್ದೇಶಕನ ಚಿತ್ರ. ಹಿಂಸೆ- ಕ್ರೌರ್ಯ ಎನಿಸಿದರೂ ಅದು ಸವರ್ಣಜಗತ್ತಿನ ಅಸ್ತ್ರ. ಸವರ್ಣಜಗತ್ತಿಗೆ ಹಿಂಸೆಗಿಳಿಯಲು ಯಾವ ಸಕಾರಣಗಳೂ ಬೇಕಿಲ್ಲ…ಯಾವ ಪ್ರಚೋದನೆಯೂ ಬೇಕಿಲ್ಲ… ಯಾವ ಅನಿವಾರ್ಯ ಒತ್ತಡವೂ ಬೇಕಿಲ್ಲ. ಹೊಟ್ಟೆ ಉರಿ ಮತ್ತು ಮೇಲರಿಮೆಯ ಮನೋರೋಗ ಒಂದೇ ಸಾಕು” ಎಂದು ದಲಿತ ಚಿಂತಕ ಕೃಷ್ಣಮೂರ್ತಿ ಚಮರಂ ಭಾರತದ ಸಂಧರ್ಭದಲ್ಲಿ ಜಾತಿ ಮೂಲದ ದೌರ್ಜನ್ಯಗಳನ್ನಿಟ್ಟುಕೊಂಡು ಅಸುರನ್ ಕುರಿತು ವಿವರವಾಗಿ ಬರೆಯುತ್ತಾರೆ!
ಈ ಸಿನಿಮಾದ ಬಗ್ಗೆ ತೀರ ತಲೆ ಕೆಡಿಸಿಕೊಂಡಿರುವ ಮತ್ತೊಬ್ಬ ಲೇಖಕ ಮತ್ತು ಆಕ್ಟಿವಿಸ್ಟ್ ಬಾಸ್ಕರ್ ಪ್ರಸಾದ್ ಇದೇ ಅಸುರನ್ ಕುರಿತಂತೆ ಪತ್ರಕರ್ತನೊಬ್ಬನೊಂದಿಗೆ ಒಂದು ಕಾಲ್ಪನಿಕ ಸಂಧರ್ಶನ ಮಾಡುತ್ತಾ.. ಚಿತ್ರದಲ್ಲಿರುವ ಕ್ರೌರ್ಯ ಮತ್ತು ಹಿಂಸೆಗೆ ಸಂಭಂದಿಸಿದ ಪ್ರಶ್ನೆಯೊಂದಕ್ಕೆ ಈ ಕೆಳಕಂಡಂತೆ ಉತ್ತರಿಸುತ್ತಾರೆ
“ಪ್ರಶ್ನೆ – …. ಶಿವಸ್ವಾಮಿಯ ಕೈಗಳು ಅಷ್ಟು ರಕ್ತದಾಹಿಯಾಗಬೇಕಿತ್ತಾ?”
“ಉತ್ತರ- ನಿಮ್ಮೊಳಗೆ ನಿಮ್ಮ ಜಾತಿವಾದವೂ ಸದಾ ಜಾಗೃತವಾಗಿದೆ ಅನ್ನೋದಕ್ಕೆ ನಿಮ್ಮ ಪ್ರಶ್ನೆಯೇ ಸಾಕ್ಷಿ. ಪ್ರತಿರೋಧಗಳಿಗೆ ನೂರಾರು ದಾರಿ, ಸ್ವರೂಪಗಳಿವೆ ನಿಜ. ಆದರೆ, ಯಾವ ಸಂದರ್ಭದಲ್ಲಿ, ಯಾಕಾಗಿ, ಯಾವ ತರದ ಪ್ರತಿರೋಧಕ್ಕೆ ಒಬ್ಬ ಮನುಷ್ಯ ಅಥವಾ ಒಂದು ಸಮುದಾಯ ತನ್ನನ್ನು ತಾನು ಅನಿವಾರ್ಯವಾಗಿ ದೂಡಿಕೊಳ್ಳುತ್ತೆ ಅನ್ನೋದನ್ನ ನೀವು ಗಮನಿಸಬೇಕು. ಶಿವಸ್ವಾಮಿಯ ಕೈಗಂಟಿದ ರಕ್ತದ ಬಗ್ಗೆ ನಿಮ್ಮ ತಕರಾರಿದೆ.ಅತಿಯಾದ ಹಿಂಸೆಯಾಗಿ ಕಾಣುತ್ತೆ. ಒಬ್ಬ ಹೆಣ್ಣುಮಗಳು ಚಪ್ಪಲಿ ಮೆಟ್ಟಿದ ಕಾರಣಕ್ಕೆ ಅದೇ ಹೆಣ್ಣುಮಗಳ ತಲೆ ಮೇಲೆ ಚಪ್ಪಲಿ ಹೊರಿಸಿ, ಊರೆಲ್ಲಾ ಮೆರವಣಿಗೆ ಮಾಡುತ್ತಾ ಹಿಂದಿನಿಂದ ಜಾಡಿಸಿ ಜಾಡಿಸಿ ಒದ್ದುಕೊಂಡು ಬರುವ ದೃಶ್ಯವನ್ನು ನಿಮಗೆ ತೋರಿಸಿದರೆ ನಿಮಗದು ಈ ಭಾರತದ ವಾಸ್ತವ ಅಂತ ಅನ್ನಿಸಲ್ಲ ಅಲ್ಲವೇ, ಅಂತಹ ನಿಜವಾದ ದರಿದ್ರ ಭಾರತವನ್ನು ಒಪ್ಪಿಕೊಳ್ಳೋಕೆ ನಿಮ್ಮ ಜಾತಿಗ್ರಸ್ಥ ಮನಸ್ಸುಗಳಿಗೆ ಸಾಧ್ಯವೇ ಆಗಲ್ಲ. ಭಾರತವನ್ನು ಇಂತಹ ಕ್ರೌರ್ಯದಿಂದ ಬಿಡುಗಡೆ ಮಾಡುವ ಪಣ ತೊಡಬೇಕು ಅನ್ನಿಸಲ್ಲ. ಬದಲಾಗಿ ಆ ದಬ್ಬಾಳಿಕೆಯ ವಿರುದ್ದ ದನಿ ಎತ್ತಿ ದಬ್ಬಾಳಿಕೆ ಮಾಡುವವನ ಜಾತಿರೋಗದ ಮರ್ಮಾಂಗಕ್ಕೆ ಕುಡುಗೋಲು ಬೀಸಿದಾಗ ಆ ರಕ್ತ ಶಿವಸ್ವಾಮಿಯ ಕೈಗಂಟಿದಾಗ ಮಾತ್ರ ನಿಮಗದು ಹಿಂಸೆಯ ಅನಾವರಣ ಅನ್ನಿಸಿ ಬಿಡುತ್ತೆ ಅಲ್ಲವೇ? ತನ್ನ ಕಣ್ಣೆದರೇ ತನ್ನಣ್ಣನ ಕುತ್ತಿಗೆ ಬಿಗಿದು ಹಂದಿಗೆ ತಿವಿಯುವಂತೆ ತಿವಿದು ತಿವಿದು ಸಾಯಿಸಿದ್ದನ್ನು ನೋಡಿದ ಆ ಹುಡುಗನಲ್ಲಿ ಭಯ ಹುಟ್ಟಿಲ್ಲವೆಂದಾದರೆ ಅಲ್ಲಿ ಪ್ರತಿಕಾರದ ಜ್ವಾಲೆ ಹೊತ್ತಿದೆ ಅಂತಲೇ ಅಲ್ಲವೇ. ಆದರೂ ಆ ಹುಡುಗನೇನು ಏಕಾಏಕಿ ಬಾಂಬು ಮಚ್ಚು ಹಿಡುದುಬಿಡಲಿಲ್ಲ ಅಲ್ಲವೇ, ಪೋಲೀಸರು ಕನಿಷ್ಟ ದೂರು ದಾಖಲಿಸಿಕೊಳ್ಳಲು ಅಸಡ್ಡೆ ತೋರಿದ್ದಾಗ, ತನ್ನ ತಂದೆ ಕುಡಿದು ಕುಡಿದೂ ಸಾಯುತ್ತಿದ್ದಾಗ ತಾಯಿ ಕಣ್ಣೀರಲ್ಲೇ ಕೈತೊಳೆಯುತ್ತಿದ್ದಾಗ, ಕೊಲೆಗಡುಕರು ಊರ ತುಂಬಾ ಮೆರೆದಾಡಿಕೊಂಡಿದ್ದಾಗ ಆ ಹುಡುಗನೊಳಗೆ ಹುಟ್ಟಬಹುದಾದ ಪ್ರತೀಕಾರದ ಬೆಂಕಿಯಾದರು ಹೇಗಿರಬಹುದು ಹೇಳಿ. ಮತ್ತೆ ಹೇಳುತ್ತಿದ್ದೇನೆ ಆ ಹುಡುಗ ಅವಿಧ್ಯಾವಂತನೂ, ಅಧಿಕಾರ ಹೀನ ಸಮುದಾಯದವನು, ವ್ಯವಸ್ಥೆಯ ತಾರತಮ್ಯಕ್ಕೆ ಒಳಗಾಗಿದ್ದವನು. ಇದನ್ನು ಮನಸ್ಸಲ್ಲಿಟ್ಟುಕೊಂಡು ಹೇಳಿ. ಆ ಹುಡುಗನ ಪ್ರತಿಭಟನೆಯ ದಾರಿ ಯಾವುದಿರಬಹುದು. ಸದ್ಯ ಭಾರತದಲ್ಲಿ ಈಗ ನಡೆಯುತ್ತಿರುವುದಾದರೂ ಏನು? ಹೆತ್ತ ಮಗನನ್ನು ಹತ್ತಾರು ಕಡೆ ಇರಿದು ಕೊಂದು, ತಲೆಯನ್ನೇ ಕತ್ತರಿಸಿಕೊಂಡು ಹೋದ ಬರಿಯ ದೇಹದ ಮೇಲೆ ಉರುಳುರುಳಾಡಿ ಗೋಳಾಡಿದ ಅಪ್ಪನ ಮುಂದೆಯೇ, ಉಳಿದ ಕಿರಿ ಮಗನನ್ನೂ ಕೊಲ್ಲಲು ಬಂದರೆ ಅವನೇನು ಭಜನೆ ಮಾಡುತ್ತಾ ಕೂರಬೇಕೆಂದಾದರು ನೀವು ಬಯಸುತ್ತೀರೇನು. ಅಟ್ಲೀಸ್ಟ್ ತನ್ನ ಮತ್ತು ಮಗನ ಪ್ರಾಣ ರಕ್ಷಣೆಗಾಗಿಯಾದರೂ ಆ ಕ್ಷಣವಾದರೂ ಅವನು ಕತ್ತಿ ಹಿಡಿಯಬಾರದೆಂದು ಅದ್ಹೇಗೆ ಒತ್ತಾಯ ಪಡಿಸುತ್ತೀರಿ. ಕೇವಲ ಚಿತ್ರದಲ್ಲಿ ಮಾತ್ರವೇ ಈ ದೃಶ್ಯಗಳನ್ನು ನೋಡಿದ ಮಾತ್ರಕ್ಕೆ ಹಿಂಸೆಯ ವಿಜೃಂಭಣೆ ಎಂದು ಬೊಬ್ಬೆ ಹೊಡೆಯುತ್ತೀರಲ್ಲಾ.. ಇನ್ನು ದಿನ ನಿತ್ಯವೂ ಜಾತಿ ಧರ್ಮದ ಕಾರಣಕ್ಕೆ ಇದಕ್ಕಿಂತಲೂ ಹೀನಾಯವಾಗಿ ಬಡಿಸಿಕೊಂಡು, ಇರಿಸಿಕೊಂಡು ನರಳಿ ನರಳಿ ಸಾಯುತ್ತಿರುವುದು ಸುಳ್ಳೆ? ಅತ್ಯಾಚಾರಕ್ಕೆ ಒಳಗಾಗಿ ನರಳುತ್ತಿರುವುದು ಸುಳ್ಳೆ?
ಅದ್ಯಾವುದೂ ನಿಮ್ಮ ಕಣ್ಣುಗಳಿಗೆ ಹಿಂಸೆಯಾಗಿ ಕಾಣುತ್ತಿಲ್ಲವೇ? ಈ ಹಿಂಸೆಯ ವಿಜೃಂಭಣೆ ನಿಲ್ಲಬೇಕೆಂದು ಪ್ರತಿಭಟಿಸುವ ಯೋಚನೆ ಈ ಜಾತಿ ಪೀಡಿತ ಸಮಾಜಕ್ಕೆ ಯಾಕಿನ್ನೂ ಬಂದಿಲ್ಲ.? ಅತ್ಯಾಚಾರಕ್ಕೆ ಒಳಗಾಗಿ ಏದುಸಿರು ಬಿಡುತ್ತಿದ್ದ ಖೈರ್ಲಾಂಜಿಯ ಆ ಸಣ್ಣ ಹುಡುಗಿಯ ಯೋನಿಗೆ ದನದ ಗೂಟ ಇಕ್ಕಿ ಸುತ್ತಿಗೆಯಿಂದ ಹೊಡೆದು ಕೊಂದುಬಿಟ್ಟರಲ್ಲ. ಆ ನೋವನ್ನೇನಾದರೂ ನೀವು ಊಹೆಯಲ್ಲಾದರೂ ಅನುಭವಿಸಲು ಸಾಧ್ಯವೇ? ಜೀವಂತವಾಗಿ ಸುಟ್ಟು ಗಹಗಹಿಸಿ ನಗುತ್ತಿರುವ ನಿತ್ಯ ನರಕದ ಭಾರತವನ್ನು ನೀವು ಅಲ್ಲಗಳೆಯುತ್ತೀರೇನು? ಆ ಸತ್ಯವನ್ನು ಚಿತ್ರವೊಂದರಲ್ಲಿ ತೋರಿಸಿದ ಮಾತ್ರಕ್ಕೆ ನಿಮಗದು ಹಿಂಸೆಯ ಮೆರವಣಿಗೆ ಅನ್ನಿಸಿದರೆ ನಾನೇನು ಮಾಡಲಿ. ಅಥವಾ ಚಿತ್ರದಲ್ಲಿ ಹಾಗೆ ತೋರಿಸದೆ ಹೋಗಿದ್ದಿದ್ದರೆ ಈ ಸಮಾಜದಲ್ಲಿ ನಡೆಯುತ್ತಿರುವ ನಿತ್ಯ ನಿರಂತರ ಹಿಂಸೆಗಳೆಲ್ಲಾ ಸುಳ್ಳಾಗಿಬಿಡುತ್ತವಾ? ನಿಜವಾದ ಭಾರತದ ಸ್ಥಿತಿಯನ್ನು ಒಪ್ಪಿಕೊಳ್ಳೋಕೆ ಮತ್ತು ಭಾರತವನ್ನು ಇದರಿಂದ ಬಿಡುಗಡೆ ಮಾಡಲು ಈ ಜಾತಿವಾದಿ ಭಾರತ ಯಾಕೆ ಮನಸ್ಸು ಮಾಡುತ್ತಿಲ್ಲ.? ಮನುಷ್ಯತ್ವದ ಬೆಲೆಯೇ ಗೊತ್ತಿಲ್ಲದ ಜಾತಿ ಹುಚ್ಚು ಹತ್ತಿಸಿಕೊಂಡು ಕೊಲ್ಲುವದನ್ನೇ ಸಲೀಸು ಮಾಡಿಕೊಂಡು ವ್ಯವಸ್ಥೆಯನ್ನೂ ತನ್ನ ಬೆರಳ ತುದಿಯಲ್ಲಿಟ್ಟುಕೊಂಡಿರುವ ದಬ್ಬಾಳಿಕೆಕೋರರಿಗೆದುರಾಗಿ ಭಾರತದ ಶೋಷಿತ ಸಮಾಜ ಇದುವರೆಗೂ ಅನುಸರಿಸಿಕೊಂಡು ಬಂದಿರುವುದು ಎರಡೇ ದಾರಿ. ಒಂದು ಶರಣಾಗತಿ ಮತ್ತೊಂದು ಪ್ರತಿರೋಧ. ಪ್ರತಿರೋಧಕ್ಕೆ ಸಾವಿರ ದಾರಿಗಳುಂಟು. ಆದರೆ ಯಾವ ಪ್ರತಿರೋಧದ ಹಾದಿಯೂ ಇನ್ನೂ ತನ್ನ ಗುರಿ ತಲುಪಿಲ್ಲ..” ಎಂದು ಬಾಸ್ಕರ್ ಒಂದೇ ಉಸಿರಿನಲ್ಲಿ ಉತ್ತರಿಸುತ್ತಾರೆ!
ಈ ಸಿನಿಮಾದ ಆತ್ಮವನ್ನೇ ತೆರೆದಿಡುವ ಕನ್ನಡದ ಮತ್ತೊಬ್ಬ ಮಹತ್ವದ ಯುವ ಬರಹಗಾರ ಟಿ.ಕೆ.ದಯಾನಂದ್ ‘ಅಸುರನ್’ ಚಿತ್ರದ ಮೂಲದಾತುವನ್ನು ಸೂಕ್ಷ್ಮವಾಗಿ ಇಲ್ಲಿ ದಾಖಲಿಸುತ್ತಾರೆ.. ಇಲ್ಲಿ ಸಿನಿಮಾದ ಕತೆಯೂ ಸಣ್ಣದಾಗಿ ನಿವೇದನೆಯಾಗುತ್ತದೆ? ದಯಾನಂದ ಬರಹವನ್ನು ಗಮನಿಸಿ.. “..ಇಲ್ಲಿ ಒಟ್ಟು ಕಥೆಯ ಆತ್ಮವಿರುವುದೇ ಶಿವಸಾಮಿಯ ಪ್ರೇಯಸಿ ಮಾರಿಯಮ್ಮಾಳ್ ಚಪ್ಪಲಿ ಧರಿಸಿದ ಕಾರಣಕ್ಕೆ ಅಪಮಾನಕ್ಕೊಳಗಾಗುವ ಸಂದರ್ಭ ಮತ್ತು ಸಾರಾಯಿ ಕಾಯಿಸುವ ಶಿವಸಾಮಿಯು ಮಾರಿಯಮ್ಮಾಳ್ ಳಿಗಾದ ಸಾರ್ವಜನಿಕ ಅಪಮಾನಕ್ಕೆ ಪ್ರತಿಯಾಗಿ ಮೇಲ್ಜಾತಿಯ ಲೆಕ್ಕಿಗನಿಗೆ ಜನರೆದುರು ಬಡಿಯುವ ವಿವರಗಳಲ್ಲಿ. ಇದಾದ ನಂತರವೇ ಶಿವಸಾಮಿಯ ಊರಾಚೆಗಿನ ದಲಿತ ಸಮುದಾಯ ಬೆಂಕಿಗೆ ಆಹುತಿಯಾಗುತ್ತದೆ. ದಲಿತನೊಬ್ಬನ ಕ್ರೋಧತೆಯನ್ನು ಅವನ ಸಮುದಾಯವನ್ನು ಸುಡುವ ಮೂಲಕ ಪ್ರತೀಕಾರ ತೆಗೆದುಕೊಳ್ಳುವಷ್ಟು ಗ್ರಾಮೀಣ ಫ್ಯೂಡಲ್ ಜಾತಿಗಳು ಬಲಿತಿರುವುದು ತಿಳಿದ ನಂತರವೇ ಶಿವಸಾಮಿ ಹಿಂಸೆಯನ್ನು ತ್ಯಜಿಸಿ ದೂರವುಳಿದು ಬದುಕು ಕಟ್ಟಿಕೊಳ್ಳುತ್ತಾನೆ. ಮಗನನ್ನು ಕೊಲ್ಲಲು ಬಂದವರನ್ನು ಕೊಲ್ಲದೆ ಉಳಿಸುವುದೂ ಈ ಭಯಕ್ಕಾಗಿಯೇ. ಕೊನೆಗೆ ವಡಕ್ಕೂರನ್ ನರಸಿಂಹನ್ ನನ್ನು ಹತ್ಯೆ ಮಾಡಿದ ಮಗನ ಪ್ರಾಣ ಮತ್ತು ತನ್ನ ಸಮುದಾಯದ ಜನರ ಪ್ರಾಣವುಳಿಯಲೆಂದು ಲಾಯರ್ ಮೂಲಕ ಸಂಧಾನಕ್ಕು ಎಳೆಸುತ್ತಾನೆ. ದೊಡ್ಡಮಗನ ಕೊಲೆಯ ನಂತರವೂ ಎಲ್ಲಿಯೂ ಹಿಂಸೆಗೆ ಇಳಿಯದ ಶಿವಸಾಮಿ ಎರಡನೆಯ ಮಗ ಚಿದಂಬರಂನ ಕಣ್ಣಲ್ಲಿ ಹೇಡಿಯಾಗಿ ಕಂಡರೂ, ಜೀವವೇ ಆಪತ್ತಿಗೆ ಸಿಕ್ಕ ಸಂದರ್ಭದಲ್ಲಿ ತಿರುಗಿಯೂ ಬೀಳುತ್ತಾನೆ. ಅನಿವಾರ್ಯ ಸಂದರ್ಭಗಳಲ್ಲು ತನ್ನ ರಕ್ಷಣೆಗೂ ಹಿಂಸೆಗಿಳಿಯದೆ ಅಹಿಂಸಾವಾದಿಯಾಗಿರಬೇಕೆಂದು ಆಶಿಸುವುದು ಕಂಫರ್ಟ್ ಜೋನ್ ಜನಗಳ ನೈತಿಕ ವ್ಯಸನವಾಗಷ್ಟೇ ಕಾಣುತ್ತದೆ. ಅಸುರನ್ ನಲ್ಲಿರುವುದು ಲಾರಿಗಟ್ಟಲೆ ಜನಕ್ಕೆ ಒಂದೇ ಕೈನಲ್ಲಿ ಚಚ್ಚಿ ಕೊಲ್ಲುವ ಹಿಂಸಾತ್ಮಕ ಲಾರ್ಜರ್ ದ್ಯಾನ್ ಲೈಫ್ ಸೂಪರ್ ಹೀರೊ ಅಲ್ಲ, ತನ್ನ ಪುಟ್ಟ ಕುಟುಂಬ, ತನ್ನ ಸಮುದಾಯಕ್ಕೆ ಹೆಚ್ಚುಕಡಿಮೆಯಾಗಬಾರದೆಂದು ಊರ ಜನರೆದುರು ಅಂಗಾತ ಬಿದ್ದು ಕ್ಷಮೆ ಕೇಳುವ ಖಾಲಿಪೀಲಿ ಮಧ್ಯವಯಸ್ಕ ದಲಿತ. ಇಂಥವನೊಬ್ಬ ಕೊನೆಯ ಆಯ್ಕೆಯಾಗಿ ಜೀವ ಉಳಿಸಿಕೊಳ್ಳಲೂ ಕೈಗೆ ಕುಡುಗೋಲು ತೆಗೆದು ಕೊಳ್ಳಬಾರದೆಂದು ಅಂದುಕೊಳ್ಳುವುದೇ ಪರಮ ಕ್ರೂರತೆಯಾಗುವುದಿಲ್ಲವೇ?” ಇದು ದಯಾನಂದ್ ಕೇಳುವ ನೈತಿಕ ಪ್ರಶ್ನೆ.
ಮೇಲಿನ ಐದೂ ಜನ ಅತ್ಯಂತ ಸೆನ್ಸಿಬಲ್ ಆಗಿ ಯೋಚಿಸಬಲ್ಲ ಬರಹಗಾರರು, ಎಲ್ಲರೂ ದಲಿತ ಸಮುದಾಯಕ್ಕೆ ಸೇರಿದವರು. ಇನ್ನೂ ಒಂದಷ್ಟು ಜನ ಇದರ ಬಗ್ಗೆ ಬರೆದಿರಬಹುದು ಆದರೆ ನನ್ನ ಗಮನಕ್ಕೆ ಪ್ರಮುಖವಾಗಿ ಬಂದಂತೆ ಈ ಐದೂ ಜನರನ್ನು ಈ ಸಿನಿಮಾ ಇಷ್ಟೊಂದು ಪ್ರಮಾಣದಲ್ಲಿ ಕಾಡಿದ್ದು, ಡಿಸ್ಟರ್ಬ್ ಮಾಡಿದ್ದು ಹೇಗೆ..!? ಈ ಕುತೂಹಲ ನನ್ನನ್ನು ಈ ಸಿನಿಮಾಗೆ ಎಳೆತಂದು ಕೂರಿಸಿತು!! ಮೇಲಿನವರು ಹೇಳಿದ್ದೆಲ್ಲಾ ಅಕ್ಷರಶಃ ಸತ್ಯ!? ಅಸುರನ್ ನನ್ನಲ್ಲಿ ಇಂಚಿಂಚಾಗಿ ಇಳಿಯುತ್ತಲೇ ನನ್ನ ಜಂಗಾಬಲವನ್ನೇ ಅಲ್ಲಾಡಿಸಿಬಿಟ್ಟಿತು! ಇದು ಮೇಲ್ನೋಟಕ್ಕೆ ಹಿಂಸೆಯನ್ನು ವಿಜೃಂಭಿಸುವ ಸಿನಿಮಾ ಅನ್ನುವುದಕ್ಕಿಂತಲೂ ಹೆಚ್ಚಾಗಿ ಇದು ತಣ್ಣನೆಯ ಜಾತೀಯ ಕ್ರೌರ್ಯವನ್ನು ಜೀರ್ಣಿಸಿಕೊಂಡು ಪ್ರತಿಹಿಂಸೆಯ ಪಾಠ ಹೇಳುವ ಸಿನಿಮಾ ಅನಿಸಿತು! ನನ್ನ ನೆನಪಿನ ಸ್ಮೃತಿಪಟಲದ ಮೇಲೆ ಬೆಲ್ಚಿ, ಪಿಪ್ರಾ, ಖೈರ್ಲಾಂಜೆ, ಕಂಬಾಲಪಲ್ಲಿಗಳು ಸಾಲುಸಾಲಾಗಿ ಹಾದುಹೋದರೂ, ಈ ಸಿನಿಮಾದ ಹಿನ್ನೆಲೆಯಲ್ಲಿ ನನ್ನಲ್ಲಿ ಸ್ಥಿರವಾಗಿ ನಿಂತಿದ್ದು ಮಾತ್ರ ‘ಕಿಲ್ವನ್ಮಣಿ’ ಮತ್ತು ‘ಕರಂಚೆಡು’ಗಳ ರಕ್ತಸಿಕ್ತ ದೃಷ್ಯಗಳೇ!!
ತಮಿಳುನಾಡಿನ ನಾಗಪಟ್ಟಣಂ ಬಳಿಯ ಕುಗ್ರಾಮ ಕಿಲ್ವನ್ಮಣಿ. 1968 ರ ಡಿಸೆಂಬರ್ 25ರಂದು ಇಲ್ಲಿ 44 ಮಂದಿ ದಲಿತರ ಮಾರಣಹೋಮ ನಡೆಯುತ್ತದೆ! ಬಲಿಷ್ಟ ಜಾತಿಗೆ ಸೇರಿದವರ ಭತ್ತದ ಗಿರಣಿಗಳಲ್ಲಿ ದಲಿತ ಕೂಲಿಕಾರರು ಹೆಚ್ಚಿನ ಭತ್ಯ ಕೇಳಿದ ಕಾರಣಕ್ಕೆ ಆರಂಭವಾಗುವ ಸಣ್ಣ ಸಂಘರ್ಷ 5ಜನ ಗಂಡಸರು, 16 ಜನ ಮಹಿಳೆಯರು ಮತ್ತು 23 ಮಂದಿ ಮಕ್ಕಳನ್ನು ಬಲಿಷ್ಟ ಜಾತಿಯ ಪಾಳೇಗಾರರು ಕೊಚ್ಚಿಹಾಕುತ್ತಾರೆ! ಕೇವಲ 8×9 ಅಗಲದಷ್ಟಿರುವ ಗೂಡಿನಲ್ಲಿ ಪ್ರಾಣಭೀತಿಯಿಂದ ಸೇರಿಕೊಂಡಿದ್ದ ದಲಿತ ಮಕ್ಕಳಿರುವ ಗೂಡಿಗೇ ಬೆಂಕಿ ಇಡುತ್ತಾರೆ! ಹೇಗೋ ಬೆಂಕಿಯಿಂದ ತಪ್ಪಿಸಿಕೊಂಡು ಹೊರಬಂದ ಮಕ್ಕಳನ್ನು ಅನಾಮತ್ತಾಗಿ ಎತ್ತಿ ಬೆಂಕಿಗೆ ಎಸೆಯುತ್ತಾರೆ! ಅಂದು ನಡೆದ ನರಮೇದದ ಹಿಂಸೆಯನ್ನು ವರ್ಣಿಸಲಸಾದ್ಯ.!! ಅಂದಿನ ಕೃತ್ಯದ ನೇತೃತ್ವ ವಹಿಸಿದ ಭತ್ತದ ಗಿರಣಿಗಳ ಭೂಮಾಲೀಕರ ಸಂಘಟನೆಯ ನಾಯಕ ‘ಇರಿಂಚೂರ್ ಗೋಪಾಲಕೃಷ್ಣನ್ ನಾಯ್ಡು’ ಹತ್ತು ವರ್ಷ ಜೈಲಲಿದ್ದು 1975 ರಲ್ಲಿ ಹೊರಬರುತ್ತಾನೆ. ಆದರೆ 1980 ರಲ್ಲಿ ಈತನನ್ನು ಧಮನಕ್ಕೊಳಗಾದ ನೊಂದವರೇ ಮುಗಿಸುತ್ತಾರೆ! ಕಿಲ್ವನ್ಮಣಿಯ ರೀತಿಯಲ್ಲಿಯೇ ಆಂಧ್ರದ ‘ಕರಂಚೆಡು’ ಎಂಬಲ್ಲಿ 1985 ಜುಲೈ 17ರಂದು ಎಂಟು ಜನ ದಲಿತರನ್ನು ಇಲ್ಲಿನ ಕಮ್ಮನಾಯ್ಡು ಜನಾಂಗದ ಭೂಮಾಲೀಕರು ಅಮಾನುಷವಾಗಿ ಕೊಚ್ಚಿ ಹಾಕುತ್ತಾರೆ. ಈ ಮಾರಣಹೋಮದ ನಾಯಕತ್ವ ವಹಿಸಿಕೊಂಡ ದಗ್ಗುಬಾಟಿ ಚೆಂಚು ರಾಮಯ್ಯ ಎನ್ನುವಾತ ತೆಲಗುದೇಶಂನ ಪರಚೂರಿನ ಶಾಸಕ ದಗ್ಗುಬಾಟಿ ವೆಂಕಟೇಶ್ವರ ರಾವ್ ಅವರ ತಂದೆ. ಎನ್.ಟಿ.ಆರ್. ಕುಟುಂಕ್ಕೆ ಆಪ್ತರಿವರು! ಈತನಿಗೆ ಹಣ, ಆಸ್ತಿ, ರಾಜಕೀಯ ಪ್ರಭಾವ ಎಲ್ಲಾ ಇರುತ್ತೆ. ಆದರೆ ಕರಂಚೆಡು ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ನಕ್ಸಲೀಯರು ಈತನನ್ನು ಕೊಂದು ಹಾಕುತ್ತಾರೆ!
ಈ ಎರಡೂ ಘಟನಾವಳಿಗಳ ಸೂಕ್ಷ್ಮ ವಿವರಗಳನ್ನು ಗಮನಿಸಿದರೆ ಅಸುರನ್ ಸಿನಿಮಾದ ಚಿತ್ರಕತೆಯ ದೃಷ್ಯಗಳು ಕಣ್ಣಮುಂದೆ ಬರುತ್ತವೆ! ಅಸುರನ್ ಸಿನಿಮಾದಲ್ಲಿ ನಾಯಕ ಶಿವಸಾಮಿಯ ಪತ್ನಿ ಪಚ್ಚಿಯಮ್ಮಾಳ್ ಬಾವಿಯ ಬಳಿ ಹೋದಾಗ ಭೂಮಾಲೀಕರು ಮತ್ತು ಪಚ್ಚಿಯಮ್ಮಾಳ್ ನಡುವೆ ಭುಗಿಲೆದ್ದ ಸಂಘರ್ಷದಂತೆಯೇ ಕರಂಚೆಡು ಹತ್ಯಾಕಾಂಡಕ್ಕೆ ಮೂಲ ಮಾದಿಗಪಲ್ಲಿಯಲ್ಲಿ ಮುನ್ನಂಗಿ ಸುವಾರ್ತ ಎಂಬ ಮಾದಿಗರ ಹೆಣ್ಣುಮಗಳಿಗೂ ಮತ್ತು ಭೂಮಾಲೀಕರಿಗೆ ಸಂಘರ್ಷ ಆರಂಭವಾಗುತ್ತದೆ.! ಅಸುರನ್ ಎಂಬ ಸಿನಿಮಾ ಮತ್ತು ಕರಂಚೆಡು ಎಂಬ ವಾಸ್ತವದಲ್ಲಿ ನಡೆಯುವ ಏಕರೀತಿಯ ಈ ಸಣ್ಣ ಸಂಘರ್ಷವೇ ಮುಂದಿನ ಮಾರಣಹೋಮಕ್ಕೆ ನಾಂದಿಯಾಗುತ್ತವೆ.
ಅಸುರನ್ ಚಿತ್ರ ನಿರ್ಮಾಣವಾಗಿರುವುದು ಪೂಮಣಿಯವರ ‘ವೆಕ್ಕೈ’ ಎಂಬ ಕಾದಂಬರಿ ಆಧಾರಿತ. ಇದು ಕೋವಿಲ್ಪಟ್ಟಿ ಸುತ್ತಲಿನ ಕತೆ. ಇದು ವಡಕ್ಕೂರ್ (ಉತ್ತರದವರು) ಮತ್ತು ತೇಕ್ಕೂರ್ (ದಕ್ಷಿಣದವರು) ನಡುವೆ ನಡೆದ ಭೂಮಿ ಮತ್ತು ಜಾತಿ ಹಿನ್ನೆಲೆಯ ಸಂಘರ್ಷದ ಕತೆ. ಚಿತ್ರನಾಯಕ ಶಿವಸಾಮಿ ಎಂಬ ಅಸುರ ದಕ್ಷಿಣದವನು ಎನ್ನುವುದೂ ಸಾಂಕೇತಿಕ! ಇಲ್ಲಿನ ಪರಿಸರವನ್ನು ನೋಡಿದರೆ ಅರವತ್ತನೇ ದಶಕದಿಂದ ಎಂಬತ್ತನೇ ದಶಕದ ನಡುವೆ ಈ ಕತೆ ನಡೆದಂತೆ ಭಾಸವಾಗುತ್ತದೆ ಆದರೆ ಇಲ್ಲಿನ ಸ್ಥಿತಿಗತಿಗಳನ್ನು ಅವಲೋಕಿಸಿದಾಗ ಈ ಕತೆ ಇಂದಿಗೂ ಪ್ರಸ್ತುತವೆನಿಸುತ್ತದೆ! ವೆಟ್ರಿಮಾರನ್ ನಿರ್ದೇಶನ ಅತ್ಯದ್ಬುತ! ದನುಷ್ ನಟನೆ ಅಮೋಗ!! ಮಿಕ್ಕಂತೆ ಯಾವ ನಟರೂ ಇಲ್ಲಿ ನಟಿಸೇ ಇಲ್ಲ!? ಎಲ್ಲಾ ಕಲಾವಿದರೂ ಇಲ್ಲಿನ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಜೀವಂತವಾಗಿ ಉಸಿರಾಡಿದ್ದಾರೆ! ಕತ್ತಲಲ್ಲಿ ಕರಗುತ್ತಾ ಸಾಗುವ ಗ್ರಾಮೀಣ ಪರಿಸರ, ಸೋಗೆ ಗುಡಿಸಲುಗಳಲ್ಲಿನ ಬದುಕು, ಕುರಿ, ಮೇಕೆ, ಜಾನುವಾರುಗಳಲ್ಲಿ ಬೆರೆತುಹೋದ ಜೀವನ.. ಈ ಎಲ್ಲವನ್ನೂ ಜೀವಂತವಾಗಿ ಹಿಡಿದಿಡುವ ಛಾಯಾಗ್ರಹಣ, ಸಂಗೀತ ಎಲ್ಲವೂ ಅದ್ಭುತ. ಇಲ್ಲಿ ‘ಚಪ್ಪಲಿ’ ಒಂದು ಮೆಟಾಫರ್ ನಂತೆ ನಮ್ಮಂತವರಿಗೆ ಕಂಡರೂ ಇದು ಸ್ಪಷ್ಟವಾಗಿ ಕಾಣುವುದು ಮಾತ್ರ ಮೇಲ್ಜಾತಿಯವರ ಪೊಗರಾಗಿ ಕೆಳಜಾತಿಗಳ ಪ್ರತಿಭಟನೆಯಾಗಿ ಅಥವ ಸ್ವಾಮಿಮಾನದ ಸಂಕೇತವಾಗಿ ಮಾತ್ರ!! ಕಾವಿಲ್ಪಟ್ಟಿ ಕಡೆಯ ತಮಿಳು ಈ ಸಿನಿಮಾವನ್ನು ಪ್ರೇಕ್ಷಕನ ಹೃದಯದೊಂದಿಗೇ ನೇರವಾಗಿ ಸಂವಾದಿಸಿದಂತೆ ಮಾಡಿದೆ!
ಇಲ್ಲಿ ಎಷ್ಟೇ ಹಿಂಸೆ, ಪ್ರತಿಹಿಂಸೆ, ನೆತ್ತರು, ಕ್ರೌರ್ಯ ಇದ್ದರೂ ಕಡೆಯಲ್ಲಿ ಚಿತ್ರ ನಾಯಕ ಶಿವಸ್ವಾಮಿ ತನ್ನ ಮಗನಿಗೆ “ಹಣ ಮತ್ತು ಜಮೀನನ್ನು ಯಾರಾದರೂ ಕಿತ್ತುಕೊಳ್ಳಬಹುದು ಆದರೆ ನಿನ್ನ ವಿದ್ಯೆಯನ್ನಲ್ಲ.. ಆದ್ದರಿಂದ ಶಿಕ್ಷಣ ಪಡೆ” ಎಂಬ ಅರ್ಥ ಬರುವ ಬಾಬಾಸಾಹೇಬರ ಮಾತಿನಿಂದ ಮುಗಿಸುವುದು ಅರ್ಥಗರ್ಬಿತವಾಗಿದೆ. ಈ ಸಿನಿಮಾ ನೋಡಿದ ಅಹಿಂಸಾವಾದಿ ಸ್ಪೃಶ್ಯರು ಎತ್ತುವ ಪ್ರಶ್ನೆ “ಸಿನಿಮಾದಲ್ಲಿನ ನಾಯಕ ಮಚ್ಚು ಹಿಡಿದು ಇಷ್ಟೊಂದು ಮಂದಿಯನ್ನು ಕೊಚ್ಚುತ್ತಾ ನೆತ್ತರು ಹರಿಸುವುದು ನ್ಯಾಯವೇ..?” ಎಂಬುದು. ಆದರೆ ನಾಯಕ ಈ ಮಟ್ಟಕ್ಕಿಳಿಯಲು ಪ್ರೇರೇಪಿಸುವ ಕಾರಣವಾದ ಕ್ರೌರ್ಯದ ಬಗ್ಗೆ ಇವರಾರದೂ ತಕರಾರಿಲ್ಲ! ಹಿಂದೆ ಬಾಸ್ಕರ್ ಪ್ರಸಾದ್ ‘ಅಸುರನ್’ ಬಗ್ಗೆ ಬರೆದ ಬರಹಕ್ಕೆ ಪ್ರತಿಕ್ರಿಯಿಸಿದ್ದೆ, ಅದೇ ಪ್ರತಿಕ್ರಿಯಲ್ಲಿನ ಒಂದು ಬಾಗದಿಂದಲೇ ಈ ಬರಹವನ್ನು ಮುಗಿಸುತ್ತೇನೆ… “…ಹಿಂಸೆ ಸಕಾರಣವಾದರೆ, ಸ್ವರಕ್ಷಣೆಗಾಗಿ ಆದರೆ, ಅನಿವಾರ್ಯವಾದರೆ, spontaneous ಆದರೆ, ಅದು ತಪ್ಪು ಅನಿಸುವುದಿಲ್ಲ. ಇಂತಹ ಸಂಧರ್ಭ ಕಾನೂನು ಕ್ರಮ, ಶಾಂತಿ ಮಂತ್ರ ಅಥವ ಸಂವಿಧಾನದ ಆಶಯಗಳಿಗೆ ಕಾಯಲ್ಲ. ಬುದ್ದ ಕೂಡ ಕಾಡಲ್ಲಿ ಹುಲಿ ಎದುರು ಬಂದು ತನ್ನ ಮೇಲೆ ಎರಗುತ್ತದೆಂದಾಗ ಹುಲಿಯನ್ನು ಕೊಂದು, ಸತ್ತ ಹುಲಿಯ ಮಾಂಸ ತಿಂದು ಮುಂದೆ ಹೋಗುತ್ತಾರೆ ಎಂಬುದನ್ನು ಕೋಸಾಂಬಿ ದಾಖಲಿಸಿದ್ದಾರೆ. ಇಲ್ಲಿ ಆತ್ಮರಕ್ಷಣೆಯ ಅನಿವಾರ್ಯತೆ, “ಕೊಂದ ಪಾಪವನ್ನು ತಿಂದು ಪರಿಹಾರ ಮಾಡಿಕೋ” ಎಂಬ ಅನೇಕ ಜನಪದೀಯ ಮತ್ತು practical ಪಾಠಗಳಿವೆ. ಈ ಹಿನ್ನೆಲೆಯಲ್ಲಿ ನಿಮ್ಮ ಬರಹ ಅದ್ಭುತವಾಗಿದೆ. ನಾವು ನಾಲ್ಕು ದಶಕಗಳ ಹೋರಾಟದ ದ್ವಂದ್ವದಲ್ಲಿ ಇನ್ನೂ ಮುಳುಗಿರುವಾಗ ನಿಮ್ಮಂತಹ ಯುವಕರು ತೀರ candid ಆಗಿ ಯೋಚಿಸುವುದು ನನ್ನಂತವರಿಗೆ ಆಶ್ಚರ್ಯ ಮತ್ತು ಮೆಚ್ಚುಗೆ ಯನ್ನು ಉಂಟುಮಾಡುತ್ತದೆ. ಅಸಹಾಯಕ ಮತ್ತು ದುರ್ಬಲ ಇರುವೆಯ ಮೇಲೆ ಕಾಲಿಟ್ಟಾಗ ಅದು ಮುರುಟಿಹೋಗುವಂತೆ ತನ್ನ ಇಡೀ ದೇಹವನ್ನು ಬಳಸಿ ಕಾಲಿಗೆ ಕಚ್ಚಿ ಪ್ರಾಣ ಬಿಡುವುದು ನಮಗೆ ನಿಸರ್ಗ ಕಲಿಸಿದ ಪಾಠವಲ್ಲವೆ?” – ಸಿ.ಎಸ್.ದ್ವಾರಕಾನಾಥ್
No Comment! Be the first one.