ಕಪ್ಪು ಹುಡುಗ, ಬಿಳೀ ಹುಡುಗಿಯ ಜೋಡಿಯನ್ನು ಅಣಕ ಮಾಡಲು ಇಲ್ಲಿರುವ ಫೋಟೋ ಬಳಕೆಯಾಗುತ್ತಿರುತ್ತದೆ. ಈ ಫೋಟೋವನ್ನಿಟ್ಟುಕೊಂಡು ಅದೆಷ್ಟು ಜನ ಕರೀ ಇಡ್ಲಿ ಅಂತೆಲ್ಲಾ ಟ್ರೋಲು ಮಾಡಿದ್ದಾರೋ…. ಅಸಲಿಗೆ ಈ ಫೋಟೋದಲ್ಲಿರುವ ಕಪ್ಪು ಬಣ್ಣದ ಹುಡುಗ ಸಾಮಾನ್ಯನಲ್ಲ. ಹೆಸರು ಅಟ್ಲೀ ಕುಮಾರ್!
ಒಂದೆರಡು ಶಾರ್ಟ್ ಸಿನಿಮಾಗಳನ್ನು ಮಾಡಿ, ನಂತರ ಡೈರೆಕ್ಟರ್ ಶಂಕರ್ ಬಳಿ ಸಹಾಯಕನಾಗಿ ಕೆಲಸ ಮಾಡಿದ್ದ. 2011ರಲ್ಲಿ ಬಂದ ರಾಜಾರಾಣಿ ಎನ್ನುವ ಹಿಟ್ ಸಿನಿಮಾ ಈತ ನಿರ್ದೇಶಿಸಿದ್ದ ಮೊದಲ ಸಿನಿಮಾ. ಎರಡನೇ ಚಿತ್ರಕ್ಕೆ ಇಳಯ ದಳಪತಿ ವಿಜಯ್ ಕಾಲ್ ಶೀಟ್ ಕೊಟ್ಟಿದ್ದರು. ತೇರಿ ಎನ್ನುವ ಸಿನಿಮಾ ತಯಾರಾಗಿ ಬಿಡುಗಡೆಯಾಯಿತು. ಆ ಕಾಲಕ್ಕೇ ಬರೋಬ್ಬರಿ ನೂರು ಕೋಟಿ ರುಪಾಯಿಗಳ ನಿವ್ವಳ ಲಾಭ ಮಾಡಿತು. ನಂತರ ಮೆರ್ಸೆಲ್ ಮತ್ತು ಬಿಗಿಲ್ ಎನ್ನುವ ಸಿನಿಮಾಗಳನ್ನೂ ಡೈರೆಕ್ಟ್ ಮಾಡುವ ಅವಕಾಶ ಕೂಡಾ ಪಡೆದುಕೊಂಡ. ತಮಿಳಿನ ಸ್ಟಾರ್ ನಟ ವಿಜಯ್ ಒಂದರ ಹಿಂದೆ ಒಂದರಂತೆ ಮೂರು ಸಿನಿಮಾಗಳನ್ನು ನೀಡುತ್ತಾರೆಂದರೆ, ಮೂರಕ್ಕೆ ಮೂರೂ ದೊಡ್ಡ ಮಟ್ಟದಲ್ಲಿ ಗೆದ್ದು ನಿಲ್ಲುತ್ತವೆ ಅಂದರೆ ಈ ಹುಡುಗನ ಟ್ಯಾಲೆಂಟು ಎಂಥದ್ದು ಅಂತಾ ಲೆಕ್ಕ ಹಾಕಬಹುದು. ಇಷ್ಟೆಲ್ಲಾ ಸಾಧನೆ ಮಾಡಿರುವ ಕೃಷ್ಣವರ್ಣದ ಅಟ್ಲೀ ಕೃಷ್ಣ ಪ್ರಿಯಾಳನ್ನು ಪ್ರೀತಿಸಿ ಮದುವೆಯಾದ. ಇವರ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೆ ಬಳಕೆಯಾಗುತ್ತಿರುತ್ತದೆ. ಬಹುಶಃ ಹಾಗೆ ಅಣಕ ಮಾಡುವವರಿಗೆ ಈತ ಯಾರು ಎನ್ನುವ ಪರಿಚಯ ಇರಲಿಕ್ಕಿಲ್ಲ!
ಒಂದು ಸಿನಿಮಾ ಆರ್ಯನಿಗಾಗಿ ನಂತರದ ಮೂರನ್ನು ವಿಜಯ್‌ಗಾಗಿ ನಿರ್ದೇಶಿಸಿರುವ ಅಟ್ಲಿ ಡೈರೆಕ್ಟ್ ಮಾಡುತ್ತಿರುವ ಐದನೇ ಸಿನಿಮಾದ ಹೀರೋ ಶಾರುಖ್ ಖಾನ್! ನಾಲ್ಕು ಸಿನಿಮಾ ರೂಪಿಸಿದ ಯುವಕ ಐದನೇ ಚಿತ್ರಕ್ಕೆ ಬಾಲಿವುಡ್ಡಿನವರು ಬಾಗಿಲಿಗೆ ಕರೆದು ಛಾನ್ಸು ಕೊಡುತ್ತಾರೆ, ಅದಕ್ಕೆ ನೂರಾರು ಕೋಟಿ ಬಜೆಟ್ಟು, ಸೂಪರ್ ಸ್ಟಾರ್ ಹೀರೋ ಅಂದಾಗ ನಿರೀಕ್ಷೆ, ಜವಾಬ್ದಾರಿಗಳು ಹೆಚ್ಚೇ ಇರುತ್ತವೆ. ಈ ಹಿಂದೆ ತಮಿಳಿನ ಸಾಕಷ್ಟು ಜನ ನಿರ್ದೇಶಕರು ಹಿಂದಿ ಸಿನಿಮಾ ಡೈರೆಕ್ಟ್ ಮಾಡುವ ಅವಕಾಶ ಪಡೆದಿದ್ದಾರೆ. ಮುಗುಗದಾಸ್ ರಂಥವರು ಗಜನಿಯಂತಾ ಸಿನಿಮಾ ಕೊಟ್ಟು ಗೆದ್ದಿದ್ದಾರೆ. ಈಗ ಅಟ್ಲೀ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿರುವ ಅಟ್ಲೀ ಸೈ ಅನ್ನಿಸಿಕೊಳ್ಳುತ್ತಾನಾ ಅನ್ನೋದು ಆದಷ್ಟು ಬೇಗ ಗೊತ್ತಾಗಲಿದೆ.
ಅಂದಹಾಗೆ ಶಾರುಖ್ ನಟನೆಯಲ್ಲಿ ಅಟ್ಲೀ ನಿರ್ದೇಶನದ ಸಿನಿಮಾಗೆ ʻಸಂಕಿʼ ಎನ್ನುವ ಹೆಸರಿಡಲಾಗಿದೆ ಎನ್ನಲಾಗುತ್ತಿದೆ. ಈ ಸಿನಿಮಾವನ್ನು ಸ್ವತಃ ಶಾರುಖ್ ನಿರ್ಮಿಸುತ್ತಿದ್ದಾರೆ. ಐಪಿಎಲ್ ಕ್ರಿಕೆಟ್ ಸಂದರ್ಭದಲ್ಲಿ ಶಾರುಖ್ ಹೊರಬಂದಾಗ ಅವರ ಹೊಸ ಲುಕ್ ಕೂಡಾ ಅನಾವರಣಗೊಂಡಿದೆ. ಈ ಸಿನಿಮಾ ಕುರಿತ ಮಿಕ್ಕೆಲ್ಲಾ ವಿಚಾರಗಳು ಒಂದೊಂದೇ ಹೊರಬರಲಿದೆ.
Leave a Reply
You must be logged in to post a comment.