ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು ಅನ್ನೋ ಸಿನಿಮಾ ಇದೇ ಫೆಬ್ರವರಿ ಒಂದರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು ಅನ್ನೋ ಶೀರ್ಷಿಕೆ ನೋಡಿದವರು ಇದು ಕಲಾತ್ಮಕ ಸಿನಿಮಾನಾ? ಅಂತಾ ಪ್ರಶ್ನಿಸುವಂತಿದೆ ನಿಜ. ಆದರೆ ಸಿನಿಮಾದ ತಿರುಳೇ ಬೇರೆ ಇದೆ. ಈ ಸಿನಿಮಾವನ್ನು ನಿರ್ದೇಶಿಸಿ ಸ್ವತಃ ಪ್ರಮುಖ ಪಾತ್ರವೊಂದರಲ್ಲಿ ನಟಿಸಿರುವವರು ಲೋಕೇಂದ್ರ ಸೂರ್ಯ. ಈ ಸಿನಿಮಾದಲ್ಲಿ ಬರುವ ಪ್ರಧಾನ ಪಾತ್ರಕ್ಕೆ ಲೋಕೇಂದ್ರ ಹೆಸರಿಟ್ಟಿರೋದು ಕ್ವಾಚೆ ಅನ್ನೋ ಹೆಸರು. ಮೂತ್ರ ವಿಸರ್ಜನೆ ಮಾಡುವಾಗ ಈತ ನಿಂತ ಪಕ್ಕದ ದಿಕ್ಕಿನಲ್ಲಿ ನೆಲ ಒದ್ದೆಯಾಗುತ್ತದೆ ಅನ್ನೋ ಕಾರಣಕ್ಕೆ ಆ ಪಾತ್ರಕ್ಕೆ ಕ್ವಾಚೆ ಅನ್ನೋ ಅಡ್ಡ ಹೆಸರು ಬಂದಿರುತ್ತದೆ. ಇಡೀ ಸಿನಿಮಾದಲ್ಲಿ ಅಪಾರವಾಗಿ ಗಮನ ಸೆಳೆಯೋದು ಈ ಕ್ವಾಚೆ ಕ್ಯಾರೆಕ್ಟರ್ರೇ. ಹಾಗೆ ನೋಡಿದರೆ ಸಿನಿಮಾಗೆ ಕ್ವಾಚೆ ಅಂತಾನೇ ಹೆಸರಿಟ್ಟಿದ್ದಿದ್ದರೆ ಹೆಚ್ಚು ಸೂಕ್ತವಾಗಿರುತ್ತಿತ್ತೋ ಏನೋ? ಯಾಕೆಂದರೆ ಚಿತ್ರದ ತುಂಬಾ ಕ್ವಾಚೆಯ ಕ್ಯಾರೆಕ್ಟರ್ರು ಆವರಿಸಿಕೊಂಡುಬಿಟ್ಟಿದೆ.
ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು ಪಕ್ಕಾ ಕಮರ್ಷಿಯಲ್ ಫಾರ್ಮುಲಾಗಳನ್ನು ಹೊಂದಿರುವ ಸಿನಿಮಾ. ಒಂದು ಹಳ್ಳಿ, ಆ ಊರಿನ ಶ್ರೀಮಂತಿಕೆ, ಜಾತಿ ವ್ಯವಸ್ಥೆ, ಸಂಬಂಧಗಳು, ಅನೈತಿಕ ಸಂಬಂಧ, ಅದರಿಂದಾಗೋ ಯಡವಟ್ಟು. ಪರಿಸ್ಥಿತಿ ಒಬ್ಬೊಬ್ಬರ ಜೀವನದಲ್ಲೂ ಆಡುವ ಆಟವನ್ನು ಈ ಚಿತ್ರದ ಮೂಲಕ ಕಟ್ಟಿಕೊಟ್ಟವರು ಲೋಕೇಂದ್ರ ಸೂರ್ಯ.
ಇದು ಎಲ್ಲ ಥರದ ಪ್ರೇಕ್ಷಕರಿಗೂ ಇಷ್ಟವಾಗೋ ಸಿನಿಮಾ ಅನ್ನೋದರಲ್ಲಿ ಅನುಮಾನವೇ ಇಲ್ಲ. ಮುಂದೇನಾಗುತ್ತದೆ ಅನ್ನೋ ಸಣ್ಣ ಸುಳಿವನ್ನೂ ಬಿಟ್ಟುಕೊಡದೇ ಕ್ಷಣಕ್ಷಣಕ್ಕೂ ರೋಚಕ ತಿರುವುಗಳನ್ನು ನೀಡುತ್ತಾ ನೋಡುಗರನ್ನು ಸೀಟಿನ ತುದಿಗೆ ತಂದು ಕೂರಿಸೋ ಸಿನಿನಾ ಅಟ್ಟಯ್ಯ. ಅದರಲ್ಲೂ ಹಳ್ಳಿ ಬದುಕನ್ನು ಕಂಡವರಿಗಂತೂ ಈ ಸಿನಿಮಾದ ಕತೆ ತೀರಾ ಆಪ್ತವೆನಿಸಲಿದೆ. ಇಲ್ಲಿ ಜೀವಪಡೆದ ದೃಶ್ಯಗಳನ್ನು ಕಂಡರೆ ಇದು ನಮ್ಮದೇ ಕೇರಿಯಲ್ಲಿ ನಡೆದ ಅಥವಾ ನಡೆಯುತ್ತಿರುವ ಸಂಗತಿಯಲ್ಲವೇ ಅನ್ನಿಸುತ್ತದೆ. ಮೇಲ್ನೋಟಕ್ಕೆ ಇದು ಹೊಸಬರೇ ಕಾಣಿಸುತ್ತಿರುವ ಸಿನಿಮಾ ಅನ್ನಿಸಿದರೂ, ಒಂದೇ ಒಂದು ಸಲ ನೋಡಿಬಿಟ್ಟರೆ ಎಂಥವರನ್ನೂ ಸೆಳೆಯುವ ತಾಕತ್ತು ಹೊಂದಿದೆ. ಇನ್ನೇನು ಫೆಬ್ರವರಿ ಒಂದನೇ ತಾರೀಖು ಬಂದೇಬಿಡುತ್ತಿದೆ. ಕ್ವಾಚೆಯನ್ನು ನೋಡೋದು ಮರೆಯಬೇಡಿ.
#