ಈ ಹುಡುಗಿಯ ಹೆಸರು ಋತುಚೈತ್ರ. ಲೋಕೇಂದ್ರ ಸೂರ್ಯ ಅವರ ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು ಸಿನಿಮಾದ ನಾಯಕನಟಿ. ಹೋಮ್ಲಿ ಲುಕ್ ಹೊಂದಿರುವ ಋತು ಚೈತ್ರ ಕನ್ನಡ ಚಿತ್ರರಂಗದಲ್ಲಿ ಚೆಂದನೆಯ ಕಲಾವಿದೆಯಾಗಿ ನೆಲೆ ನಿಲ್ಲುತ್ತಾರೆ ಅನ್ನೋದಂತೂ ನಿಜ. ಇವತ್ತು ಸಿನಿಮಾರಂಗಕ್ಕೆ ಬರೋ ಹುಡುಗಿಯರು ಅಂದ ಚೆಂದ ಇದ್ದರೆ ಸಾಕು ಮಿಂಚಿಬಿಡಬಹುದು ಅಂದುಕೊಂಡಿರುತ್ತಾರೆ. ಆದರೆ ಚೈತ್ರ ನಟನೆಗೆ ಬೇಕಿರುವ ಎಲ್ಲ ತಯಾರಿ ಮುಗಿಸಿಕೊಂಡೇ ಈ ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟಿದ್ದಾರೆ.
ತುರುವೇಕೆರೆ ಬಳಿಯ ಇಟಿಗೆ ಹಳ್ಳಿ ಋತು ಚೈತ್ರಾ ಅವರ ಮೂಲ. ಈಕೆಯಿನ್ನೂ ಪುಟ್ಟ ಹುಡುಗಿಯಾಗಿದ್ದಾಗಲೇ ಇವರ ತಂದೆ ಕಾಂತರಾಜು ಸಂಸಾರ ಸಮೇತ ಬೆಂಗಳೂರಿಗೆ ಬಂದು ಕ್ಯಾಟರಿಂಗ್ ಉದ್ಯೋಗ ಕಂಡುಕೊಂಡವರು. ಸರ್ಕಾರಿ ಹೋಮ್ ಸೈನ್ಸ್ ಕಾಲೇಜಿನಲ್ಲಿ ಡಿಗ್ರಿ ಮತ್ತು ಮಾಸ್ಟರ್ ಡಿಗ್ರಿ ಮಾಡೋ ಹೊತ್ತಿಗೆ ಚೈತ್ರಾಗೆ ಸಿನಿಮಾರಂಗದ ಸೆಳೆತ ಶುರುವಾಗಿತ್ತು.
ಹೋಂ ಸೈನ್ಸ್ ಕಾಲೇಜಿನಲ್ಲಿ ‘ತ್ರಿಷಾ ಎನ್ನುವ ಕಲ್ಚರಲ್ ಫೆಸ್ಟಿವಲ್ ಪ್ರತೀ ವರ್ಷ ಅದ್ಧೂರಿಯಾಗಿ ನಡೆಯುತ್ತದೆ. ಹೋಂ ಸೈನ್ಸ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಡಾ. ಸಿಜಿ. ಲಕ್ಷ್ಮೀಪತಿ ಪ್ರತಿಭಾವಂತ ವಿದ್ಯಾರ್ಥಿಗಳ ಪಾಲಿನ ಆಶಾಕಿರಣವಿದ್ದಂತೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಮಗೆ ಪರಿಚಿತ ಪ್ರತಿಭೆಗಳನ್ನು ಕರೆಸೋ ವಾಡಿಕೆ ರೂಢಿಸಿಕೊಂಡಿದ್ದಾರೆ. ಹಾಗೆ ಕಾಲೇಜಿನ ಕಲ್ಚರಲ್ ಫೆಸ್ಟಿವಲ್ಲಿನಲ್ಲಿ ನಡೆದ ಫ್ಯಾಷನ್ ಶೋಗೆ ಜಡ್ಜ್ ಆಗಿ ನಿರ್ದೇಶಕ ಲೋಕೇಂದ್ರ ಸೂರ್ಯ ಅವರನ್ನು ಕರೆಸಿದ್ದರು. ಆಗ ಲೋಕೇಂದ್ರ ಅವರು ಚೈತ್ರಾಳನ್ನು ನೋಡಿ ‘ಆ ಹುಡುಗಿ ನಮ್ಮ ಸಿನಿಮಾದಲ್ಲಿ ಆಕ್ಟ್ ಮಾಡ್ತಾಳಾ? ಅಂತಾ ಕೇಳಿದ್ದರಂತೆ. ಈ ವಿಚಾರವನ್ನು ಲಕ್ಷ್ಮೀಪತಿ ಮೇಷ್ಟ್ರು ಚೈತ್ರಾಳಿಗೆ ತಿಳಿಸಲಾಗಿ, ಈಕೆ ‘ಓಕೆ ಅಂತಾ ಹೇಳಿ ಲೋಕೇಂದ್ರ ಅವರನ್ನು ಭೇಟಿ ಮಾಡಿದ್ದರು. ಈ ಮೂಲಕ ಚೈತ್ರಾ ಸಿನಿಮಾ ಜರ್ನಿ ಆರಂಭವಾಗಿತ್ತು.
ಒಂದು ಫೋಟೋ ಶೂಟ್ ಮುಗಿಸಿದ ನಂತರ ಲೋಕೇಂದ್ರ ನಿರ್ದೇಶನದಲ್ಲಿ ‘ಮೌನಿ ಅನ್ನೋ ಸಿನಿಮಾ ಕೂಡಾ ಆರಂಭವಾಯ್ತು. ನಟನೆಯಲ್ಲಿ ಸಿಕ್ಕಾಪಟ್ಟೆ ವೀಕು ಮಾತ್ರವಲ್ಲ, ಪಬ್ಲಿಕ್ ಫಿಯರ್ರು ಚೈತ್ರಾಳನ್ನು ಇನ್ನಿಲ್ಲದಂತೆ ಕಾಡಿತ್ತು. ನಾನಾ ಕಾರಣಗಳಿಂದ ‘ಮೌನಿ ಕೂಡಾ ನಿಂತುಹೋಯಿತು. ಈ ಸಂದರ್ಭದಲ್ಲಿ ಸ್ವತಃ ಲೋಕೇಂದ್ರ ಸೂರ್ಯ ಒಂದು ತೀರ್ಮಾನಕ್ಕೆ ಬಂದಿದ್ದರು. ‘ನೀನು ಒಳ್ಳೆ ನಟಿಯಾಗಬೇಕಂದ್ರೆ ಹೋಗಿ ಮೊದಲು ಒಂದಿಷ್ಟು ನಟನೆ ಕಲಿಯಬೇಕು ಅಂತಾ ಹೇಳಿ ಅವರೇ ಕರೆದೊಯ್ದು ಎನ್.ಎಸ್.ಡಿ. (ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ)ದಲ್ಲಿ ಒಂದು ವರ್ಷದ ಕೋರ್ಸ್ಗೆ ಸೇರಿಸಿದರು. ಜೊತೆಗೆ ನ್ಯಾಚುರಲ್ ಆಗಿ ನಟಿಸುವುದು ಹೇಗೆ ಅಂತಾ ಹೇಳಿಕೊಡುತ್ತಾ ಹೋದರು. ಇದೆಲ್ಲದರ ಪ್ರತಿಫಲವೆನ್ನುವಂತೆ ಹಂತಹಂತವಾಗಿ ಚೈತ್ರಾ ನಟನೆಯಲ್ಲಿ ಇನ್ವಾಲ್ವ್ ಆಗುತ್ತಾಬಂದರು. ಕಸ್ತೂರಿ ವಾಹಿನಿಯಲ್ಲಿ ಚಂದ್ರಮುಖಿ ಧಾರಾವಾಹಿಯಲ್ಲಿ ನಟಿಸಲು ಶುರು ಮಾಡಿದರು. ಡಾ. ಶಿವರಾಜ್ ಕುಮಾರ್ ಅವರ ಅಭಿಮಾನಿಗಳೆಲ್ಲಾ ಸೇರಿ ಶುರು ಮಾಡಿದ್ದ ಅಮೋಘ ಅನ್ನೋ ಸಿನಿಮಾದಲ್ಲಿ ನಾಯಕಿಯಾಗಿ ಅವಕಾಶ ಕೂಡಾ ಸಿಕ್ಕಿತು. ಜೊತೆಗೆ ಸೀರಿಯಲ್ಲುಗಳಲ್ಲಿ ಜನ ಗುರುತಿಸುವಂತಾ ಪಾತ್ರಗಳೂ ಸಿಕ್ಕವು.
ಆಗ ಲೋಕೇಂದ್ರರೊಂದಿಗೆ ಮತ್ತೊಂದು ಸಿನಿಮಾ ಮಾಡುವ ಆಫರ್ ಬಂತು. ಅದು ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು! ಈ ಸಿನಿಮಾದಲ್ಲಿ ನಟಿಸೋ ಹೊತ್ತಿಗೆ ಚೈತ್ರಾಗೆ ಹಳೆಯ ಭಯ, ಅಂಜಿಕೆಗಳಂತಾ ಯಾವ ಸಮಸ್ಯೆಯೂ ಇರಲಿಲ್ಲ. ಎನ್.ಎಸ್.ಡಿ ಯಂಥಾ ಶಾಲೆಯಲ್ಲಿ ಕಲಿತ ಕಾರಣವೋ, ಲೋಕೇಂದ್ರ ಸೂರ್ಯ ಅವರ ಮಾರ್ಗದರ್ಶನವೋ ಗೊತ್ತಿಲ್ಲ ಚೈತ್ರಾ ಪರಿಪೂರ್ಣ ನಟಿಯಾಗಿ ರೂಪುಗೊಂಡಿದ್ದರು.
ಅಟ್ಟಯ್ಯ ಸಿನಿಮಾವೇನೋ ಆರಂಭವಾಯ್ತು. ಆದರೆ ಈ ಸಿನಿಮಾದಲ್ಲಿ ಚೈತ್ರಾ ಮೇಕಪ್ ಇಲ್ಲದೆ, ಬಗೆಬಗೆಯ ಕಾಸ್ಟೂಮುಗಳೂ ಇಲ್ಲದೇ ನಟಿಸಬೇಕಾದ ಅನಿವಾರ್ಯತೆಯಿತ್ತು. ಹೇಳಿ ಕೇಳಿ ಇದು ಹಳ್ಳಿ ಸಬ್ಜೆಕ್ಟಾಗಿದ್ದರಿಂದ ಮಾಮೂಲಿ ಸಿನಿಮಾಗಳಂತೆ ಬಣ್ಣ, ಬಟ್ಟೆಗಳ ಅಗತ್ಯವಿರಲಿಲ್ಲ. ಒಂದು ವೇಳೆ ಮುಖಕ್ಕೆ ಕ್ರೀಮು ಹಚ್ಚಿಕೊಂಡು ಬಂದರೂ ‘ಮೊದಲು ಹೋಗಿ ತೊಳೆದುಕೊಂಡು ಬಾ ಅಂತಾ ನಿರ್ದೇಶಕರು ಕಳಿಸುತ್ತಿದ್ದರು. ಹಾಕಿದ್ದೇ ಬಟ್ಟೆಯನ್ನು ಹಾಕಬೇಕಿತ್ತು. ಕೇಳಿದರೆ, ‘ಹಳ್ಳಿ ಹೆಣ್ಮಕ್ಳತ್ರ ದಿನಕ್ಕೊಂದು ಬದಲಿಸುವಷ್ಟು ಬಟ್ಟೆಗಳಿರುತ್ತವಾ? ಎನ್ನುತ್ತಿದ್ದರಂತೆ. ಆರಂಭದಲ್ಲಿ ‘ಏನಪ್ಪಾ ಇದು ಹೀಗೆಲ್ಲಾ ಸಿನಿಮಾ ಮಾಡ್ತಿದಾರೆ ಅಂತಾ ಚೈತ್ರಾಗೆ ಅನ್ನಿಸಿದ್ದೂ ಇದೆ. ಆದರೆ ಸಿನಿಮಾದ ಮೊದಲ ಪ್ರತಿ ನೋಡಿದ ನಂತರವಷ್ಟೇ ಚೈತ್ರಾಗೆ ಗೊತ್ತಾಗಿತ್ತು. ಲೋಕೇಂದ್ರ ಸೂರ್ಯ ಅವರು ಹೇಳಿದ್ದೆಲ್ಲಾ ಈ ಪಾತ್ರದ ಒಳಿತಿಗಾಗಿ ಅನ್ನೋದು. ಯಾಕೆಂದರೆ, ಸಿನಿಮಾ ಮತ್ತು ಅದರಲ್ಲಿನ ಚೈತ್ರಾ ಪಾತ್ರ ಅಷ್ಟೊಂದು ಸಹಜವಾಗಿ ಮೂಡಿಬಂದಿತ್ತು.
ಚೈತ್ರಾಳ ನಟನೆ ಮತ್ತು ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು ಸಿನಿಮಾದ ತಿರುಳು ಏನೆಂದರು ತಿಳಿದುಕೊಳ್ಳಬೇಕೆಂದರೆ ಈಗಷ್ಟೇ ಬಿಡುಗಡೆಯಾಗಿರುವ ಸಿನಿಮಾವನ್ನೊಮ್ಮೆ ನೀವು ನೋಡುವುದೊಳ್ಳೇದು.
#
No Comment! Be the first one.