ಸಿನಿಮಾ ಮೇಲಿನ ಸೆಳೆತ, ಕಲಾವಿದನಾಗಬೇಕೆನ್ನುವ ಬಯಕೆ ಯಾರನ್ನು ಎಲ್ಲಿಗೆ ಬೇಕೋ ತಂದು ನಿಲ್ಲಿಸಬಹುದು. ಕಲಾವಿದನಾಗಬೇಕು ಅಂತಾ ಬೆಂಗಳೂರಿಗೆ ಬಂದು ಇವತ್ತು ಅದಕ್ಕಿಂತಾ ಹೆಚ್ಚಾಗಿ ಆಟೋ ಪಬ್ಲಿಸಿಟಿಯಲ್ಲಿ ಬ್ಯುಸಿಯಾಗಿರುವವರು ಆಟೋ ನಾಗರಾಜ್. ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆ, ಮೇಗಳಪುರ ಗ್ರಾಮದವರಾದ ನಾಗರಾಜ್ ಮೊದಲಿಗೆ ಹಲಗೂರಿನ ಹೆಚ್.ಎ.ಎಸ್. ಸಿನಿಮಾ ಥಿಯೇಟರ್ ಟಿಕೇಟು ಕೊಡೋ ಕೆಲಸ ಮಾಡುತ್ತಿದ್ದರು. ಆಪರೇಟರ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಆ ಚಿತ್ರಮಂದಿರದ ಮಾಲೀಕರದ್ದೇ ಹಲಗೂರು ಎಕ್ಸ್ ಪ್ರೆಸ್ ಅಂತಾ ಬಸ್ಸುಗಳಿದ್ದವು. ನಾಗರಾಜ್ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದದ್ದನ್ನು ನೋಡಿ ದಸರಾ, ನವರಾತ್ರಿ ಟೈಮಿನಲ್ಲಿ ಕಂಡಕ್ಟರ್ ಆಗಿ ನೇಮಿಸಿದರು. ಹಾಗೆ ನೋಡಿದರೆ, ನಾಗರಾಜ್ ಅವರಿಗೆ ತೀವ್ರವಾದ ಬಯಕೆಯಿದ್ದಿದ್ದು ಸಿನಿಮಾ ನಟನಾಗಬೇಕು ಅಂತಾ. ಆದರೂ ಹತ್ತು ವರ್ಷಗಳ ಕಾಲ ಕಂಡಕ್ಟರ್ ಆಗಿ ಕೆಲಸ ಮಾಡಿದರು.
‘ಇದು ನನ್ನ ಕೆಲಸವಲ್ಲ ಸಿನಿಮಾದಲ್ಲಿ ಏನಾದರೂ ಮಾಡಬೇಕು” ಅನ್ನೋ ತುಡಿತ ಹೆಚ್ಚಾದಾಗ, ಇದ್ದ ಕಂಡಕ್ಟರ್ ವೃತ್ತಿಯನ್ನು ಬಿಟ್ಟು ಸೀದಾ ಬೆಂಗಳೂರಿಗೆ ಬಂದಿಳಿದರು. ಸಂಬಂಧಿಕರಿದ್ದರೂ ಯಾರ ಮನೆಗೂ ಹೋಗುತ್ತಿರಲಿಲ್ಲ. ಯಾವುದಾದರೂ ಮದುವೆ ಚೌಲ್ಟ್ರಿಗಳಿಗೆ ಹೋಗಿ ಊಟ ಮಾಡುತ್ತಿದ್ದರು. ಇನ್ನೆಲ್ಲೋ ಜಾಗವಲ್ಲದ ಜಾಗಗಳಲ್ಲಿ ಮಲಗುತ್ತಿದ್ದರು. ಅದಾಗಲೇ ಜೊತೆಯಾದ ಸ್ನೇಹಿತನೊಬ್ಬ ‘ಹೇಗೂ ನಿನಗೆ ಕತೆ ಕಾದಂಬರಿ ಓದುವ ಬರೆಯುವ ಹುಚ್ಚು. ಒಂದೆರಡು ಒಳ್ಳೊಳ್ಳೆ ಡ್ರೆಸ್ ತಗೊಂಡು, ಹಾಕ್ಕೊಂಡ್ ಗಾಂಧಿನಗರದಲ್ಲಿ ತಿರುಗಾಡು. ಹೈಟು ಪರ್ಸನಾಲಿಟಿ ಬೇರೆ ಸಖತ್ತಾಗಿದಿಯ. ಯಾರಾದ್ರೂ ನೋಡಿ ಒಳ್ಳೇ ಕ್ಯಾರೆಕ್ಟ್ರು ಕೊಡ್ತಾರೆ’ ಅಂತಾ ಐಡಿಯಾ ಕೊಟ್ಟಿದ್ದ. ಅದನ್ನು ನಂಬಿ ಸ್ನೇಹಿತನ ಸಲಹೆಯಂತೆ ಬಣ್ಣ ಬಣ್ಣದ ಬಟ್ಟೆ ತಗಲಾಕಿಕೊಂಡು ತಿರುಗಿದ್ದೇ ತಿರುಗಿದ್ದು ಗಾಂಧಿ ನಗರದ ಗಲ್ಲಿಗಳಲ್ಲಿ. ಆದರೆ, ಯಾರೊಬ್ಬರು ಕರೆಯಲೂ ಇಲ್ಲ. ಕಡೇ ಪಕ್ಷ ಕಣ್ಣೆತ್ತಿಯೂ ನೋಡಲಿಲ್ಲ. ಹಿಂಗೇ ಇದ್ದರೆ ಅನ್ನ ಗಿಟ್ಟಿಸಿಕೊಳ್ಳೋದು ಕಷ್ಟ ಅಂತಾ ಗೊತ್ತಾಗಿ ಆಟೋ ಓಡಿಸಲು ಶುರು ಮಾಡಿದರು ನಾಗರಾಜ್. ಆಗ ಡಾಕ್ಯುಮೆಂಟರಿ ಸಿನಿಮಾಗಳನ್ನು ಮಾಡುತ್ತಿದ್ದ ತುಮಕೂರು ಮಹದೇವಯ್ಯನವರ ಪರಿಚಯವಾಯಿತು. ಡಾಕ್ಯುಮೆಂಟರಿಯ ದೃಶ್ಯವೊಂದಕ್ಕೆ ಆಟೋ ಬೇಕಿತ್ತು. ಪ್ರಕಾಶ್ ಎನ್ನುವವರು ನಾಗರಾಜ್ ಅವರನ್ನು ಕರೆದು ‘ಶೂಟಿಂಗ್ ಇದೆ ಬರ್ತಿಯೇನಪ್ಪ?’ ಅಂದಿದ್ದರು. ಮೊದಲೇ ಸಿನಿಮಾ ಶೂಟಿಂಗು ಅಂದರೆ ನಾಗರಾಜ್ಗೆ ಆಕರ್ಷಣೆ. ಇನ್ನು ಬಂದ ಆಫರನ್ನು ಬಿಡೋದೆಲ್ಲಿಂದ? ಆಗ ಪರಿಚಯವಾದವರು ಈ ನಡುವೆ ತುಮಕೂರು ಮಹದೇವಯ್ಯ. “ನೋಡಪ್ಪ ತಿಂಗಳಿಗೆ ಹತ್ತು ದಿನ ನಮ್ಮ ಶೂಟಿಂಗಿಗೆ ಬಂದುಬಿಡು. ಡೈಲಿ ಎಂಟು ನೂರು ರುಪಾಯಿ ಕೊಡ್ತೀನಿ” ಅಂದರು. ಲಡ್ಡು ಎಗರಿಬಂದು ನಾಗರಾಜ್ ಬಾಯಿಗೇ ಬಿದ್ದಂತಾಗಿತ್ತು. ಈ ಕೆಲಸಕ್ಕೆ ಸೇರಿ ಸಣ್ಣ ಪುಟ್ಟ ಕ್ಯಾರೆಕ್ಟರು ಗಿಟ್ಟಿಸಿಕೊಳ್ಳಬಹುದು ಅಂತಾ ತಕ್ಷಣ ಒಪ್ಪಿದ್ದರು.
ಹೀಗೇ ಕೆಲಸ ನಡೆಯುತ್ತಿದ್ದಾಗ ಖುದ್ದು ಮಹದೇವಯ್ಯನವರು ಒಂದು ಮಾತು ಕೇಳಿದ್ದರು ‘ನಾಗರಾಜ್.. ಎಷ್ಟು ಸಂಪಾದನೆ ಮಾಡ್ತೀಯಾ ದಿನಕ್ಕೆ” ಅಂತಾ. ಆಟೋಗೆ ನೂರೈವತ್ತು ರುಪಾಯಿ, ಇನ್ನೂರು ರುಪಾಯಿ ಗ್ಯಾಸ್, ಉಳಿದ ಮುನ್ನೂರು ನಾನ್ನೂರು ರುಪಾಯಿ ಮನೆಗೆ ಸರ್.” ಅಂದಿದ್ದರು. “ನೀನ್ಯಾಕೆ ಸ್ವಂತಕ್ಕೆ ಒಂದು ಆಟೋ ತಗೋಬಾರದು ಅಂತಾ ಅವರು ಕೇಳಿದಾಗ, “ಬರೋದು ಹೊಟ್ಟೆ ಬಟ್ಟೆಗೇ ಸಾಲಲ್ಲ ಇನ್ನು ಒಂದೂ ಮುಕ್ಕಾಲು ಲಕ್ಷ ಎಲ್ಲಿಂದ ಹೊಂಚಲಿ” ಅಂದಿದ್ದರು ನಾಗರಾಜ್. ‘ನಾನು ಕೊಡಿಸ್ತೀನಿ ತಗೊಳ್ರೀ” ಅಂದವರೇ ಆ ದೇವರಂತಾ ಮನುಷ್ಯ ತುಮಕೂರು ಮಹದೇವಯ್ಯ ಒಂದು ಬಿಡಿಗಾಸನ್ನೂ ನಾಗರಾಜ್ರಿಂದ ಬಯಸದೇ ಉಚಿತವಾಗಿ ಆಟೋ ಕೊಡಿಸಿದರು.
ಇವೆಲ್ಲದರ ಜೊತೆ ಜೊತೆ ಸಿನಿಮಾದವರ ಸಂಪರ್ಕಸಾಧಿಸಿದ್ದರು ನಾಗರಾಜ್. ಅದೊಂದು ದಿನ ಸಿನಿಮಾ ನಿರ್ದೇಶಕ ಶಿವಪ್ರಭು ಅವರ ಭಾವ ಕರೆದು ಡೈರೆಕ್ಟರ್ ದಿನಕರ್ ಅವರಿಗೆ ಸಾರಥಿ ಸಿನಿಮಾ ಶೂಟಿಂಗ್ಗೆ ನಾನ್ನೂರು ಆಟೋಗಳು ಬೇಕು ಅಂತಾ ಕೇಳಿದ್ದರು. ಕೇಳಿದಷ್ಟು ಆಟೋಗಳನ್ನು ತಂದು ಚಿತ್ರೀಕರಣದ ಸ್ಥಳದಲ್ಲಿ ಸಾಲು ಸಾಲಾಗಿ ನಿಲ್ಲಿಸಿದ್ದರು ನಾಗರಾಜ್. ಇದೇ ಸಾರಥಿ ಸಿನಿಮಾಗೆ ಆಟೋಮೇಲೆ ಸ್ಟಿಕರ್ ಅಂಟಿಸಿ ಪಬ್ಲಿಸಿಟಿ ಮಾಡುವ ಅವಕಾಶವನ್ನು ನಿರ್ದೇಶಕ ದಿನಕರ್ ಕೊಡಮಾಡಿದ್ದರು. ಅಲ್ಲಿಂದ ಶುರುವಾಯಿತು ನೋಡಿ ನಾಗರಾಜ್ ಆಟೋ ಯಾನ.
ಎರಡು ಸಾವಿರ ವಿಸಿಟಿಂಗ್ ಕಾರ್ಡು ಪ್ರಿಂಟ್ ಮಾಡಿಸಿಕೊಂಡು ಕರ್ನಾಟಕವೆಲ್ಲಾ ಅಲೆದು ತಮ್ಮ ಪರಿಚಯ ಮಾಡಿಕೊಂಡು ಬಂದರು. ಹಾಗೆ ಶುರುವಾದ ಆಟೋ ಪ್ರಚಾರದ ಕೆಲಸ ನಾಗರಾಜ್ ಅವರ ಕೈ ಹಿಡಿದಿದೆ. ಇಲ್ಲೀತನಕ ಏನಿಲ್ಲವೆಂದರೂ ಮುನ್ನೂರನಲವತ್ತು ಸಿನಿಮಾಗಳಿಗೆ ನಾಗರಾಜ್ ಕೆಲಸ ಮಾಡಿದ್ದಾರೆ. ನಾಗರಾಜ್’ಗೆ ಇವತ್ತು ಇಡೀ ಚಿತ್ರರಂಗದ ಪರಿಚಯವಿದೆ. ನಿರ್ದೇಶಕ, ನಿರ್ಮಾಪಕರು ಪ್ರೀತಿಯಿಂದ ಕರೆದು ಆಟೋ ಪಬ್ಲಿಸಿಟಿಯ ಕೆಲಸ ಕೊಡುತ್ತಾರೆ. ಆದರೆ ನಾಗರಾಜ್ ಅವರಿಗಿರುವ ಒಂದೇ ಒಂದು ನೋವೆಂದರೆ, ನನ್ನೊಳಗೊಬ್ಬ ಕಲಾವಿದ ಇದ್ದಾನೆ. ಎಂಥಾ ಪಾತ್ರ ಕೊಟ್ಟರೂ ಮಾಡುತ್ತೀನಿ. ಪಾತ್ರ ಬೇಡುವ ತಯಾರಿಯನ್ನೂ ಮಾಡಿಕೊಳ್ಳಬಲ್ಲೆ. ಆದರೆ ಚಿತ್ರರಂಗದವರು ನನ್ನನ್ನು ಬಹಳಷ್ಟು ಬಾರಿ ಬರೀ ಆಟೋ ಪಬ್ಲಿಸಿಟಿಗಷ್ಟೇ ಸೀಮಿತಗೊಳಿಸಿದ್ದಾರೆ ಎನ್ನುವ ಕೊರಗು ನಾಗರಾಜ್ ಅವರನ್ನು ಕಾಡುತ್ತಿದೆ. ನಾಗರಾಜ್ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಲೇ ಬಂದಿದ್ದಾರೆ.
ಇರುವುದರಲ್ಲೇ ನಾಗರಾಜ್ ಪ್ರತಿಭೆಯನ್ನು ಗುರುತಿಸಿದವರು ಇಬ್ಬರು ನಿರ್ದೇಶಕರು. ಕಳೆದ ವರ್ಷವಷ್ಟೇ ತೀರಿಕೊಂಡ ಪಿ.ಎನ್. ಸತ್ಯ ಶಿವಾಜಿನಗರ ಸಿನಿಮಾದಲ್ಲಿ ಒಂದೊಳ್ಳೆ ಪಾತ್ರ ನೀಡಿದ್ದರು. “ಸಿನಿಮಾರಂಗದಲ್ಲಿ ನನಗೆ ಯಾರಾದರೂ ಗಾಡ್ ಫಾದರ್ ಅಂತಾ ಇದ್ದರೆ ಅದು ಶಶಾಂಕ್ ಸರ್. ಅವರು ಯಾವುದೇ ಸಿನಿಮಾ ಆರಂಭಿಸಿದರೂ ಮಿಸ್ಸಿಲ್ಲದಂತೆ ನನಗೊಂದು ಕ್ಯಾರೆಕ್ಟರ್ ಫಿಕ್ಸ್ ಮಾಡಿರುತ್ತಾರೆ. ಜೊತೆಗೆ ಆಟೋ ಪಬ್ಲಿಸಿಟಿ ಕೆಲಸವನ್ನೂ ಕೊಡುತ್ತಾರೆ.” ಅನ್ನೋದು ನಿರ್ದೇಶಕ ಶಶಾಂಕ್ ಕುರಿತು ನಾಗರಾಜ್ ಮನದಾಳದ ಮಾತು. ಬಚ್ಚನ್, ತಾಯಿಗೆ ತಕ್ಕ ಮಗ, ಸಾಯಿ ಪ್ರಕಾಶ್ ಅವರ ಚಿತ್ರಗಳು ಸೇರಿದಂತೆ ಕೆಲವಾರು ಸಿನಿಮಾಗಳಲ್ಲಿ ನಾಗರಾಜ್ ಬಣ್ಣ ಹಚ್ಚಿದ್ದಾರೆ. `ಇಷ್ಟು ಜನ ನಿರ್ದೇಶಕರು ನನ್ನನ್ನು ಕರೆದು ಪಾತ್ರ ಕೊಟ್ಟು ಯಾವತ್ತಿಗೂ ನನ್ನ ಮನಸ್ಸಿನಲ್ಲಿ ನೆಲೆಸಿದ್ದಾರೆ. ಅವರು ನನ್ನ ಮನೆಯಲ್ಲೂ ನೆಲೆಸಿರಲಿ’ ಎಂದು ಈವರೆಗೆ ತಮಗೆ ಅವಕಾಶ ಕೊಟ್ಟ ನಿರ್ದೇಶಕರ ಫೋಟೋಗಳನ್ನು ಒಟ್ಟು ಸೇರಿಸಿ ಮನೆಯಲ್ಲಿಟ್ಟುಕೊಂಡಿದ್ದಾರೆ ಅಂದರೆ ನಾಗರಾಜ್ ಅವರ ನಿಯತ್ತು ಎಂಥದ್ದು ಅನ್ನೋದು ತಿಳಿಯುತ್ತದೆ.
ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ರಾಬರ್ಟ್ ಸಿನಿಮಾದಲ್ಲೂ ಪಾತ್ರ ನಿರ್ವಹಿಸಿದ್ದಾರೆ. ಬರೋಬ್ಬರಿ ಹನ್ನೆರಡು ವರ್ಷಗಳ ನಂತರ ರಾಬರ್ಟ್ ಸೆಟ್’ನಲ್ಲಿ ನಾಗರಾಜ್ ಅವರನ್ನು ಗಮನಿಸಿದ ದರ್ಶನ್ ನೆನಪು ಮಾಡಿಕೊಂಡು ಮಾತಾಡಿದರಂತೆ. ಇನ್ನು ಲಕ್ಕಿ ಸಿನಿಮಾಗಾಗಿ ಕೆಲಸ ಮಾಡಿದಾಗ ಖುದ್ದು ಯಶ್ ಭೇಷ್ ಅಂದಿದ್ದರಂತೆ. ಯಶ್ ಎಲ್ಲೇ ಎದುರು ಸಿಕ್ಕರೂ “ಏನ್ರೀ ಆಟೋ ನಾಗರಾಜ್” ಅಂತಾ ಬಯ್ತುಂಬಾ ಮಾತಾಡಿಸುತ್ತಾರಂತೆ.
ಅಂದಹಾಗೆ ಆಟೋ ನಾಗರಾಜ್ ದಿ. ಶಂಕರ್ ನಾಗ್ ಅವರ ಪರಮ ಅಭಿಮಾನಿ. ಪ್ರತಿ ವರ್ಷ ನವೆಂಬರ್ ಒಂಭತ್ತಕ್ಕೆ ಸ್ನೇಹಿತ ದಿನಿ ಸಿನಿ ಜೊತೆ ಸೇರಿ ಶಂಕರ್ ನಾಗ್ ಜನ್ಮೋತ್ಸವವನ್ನು ಅದ್ಧೂರಿಯಾಗಿ ನೆರವೇರಿಸುತ್ತಾರೆ. ಆಟೋ ಚಾಲಕರಿಗಾಗಿ ಆಟೋ ಡ್ರೈವರ್ ಪ್ರಶಸ್ತಿ ಕೊಡೋದು ಮಾತ್ರವಲ್ಲದೆ, ನಿರ್ಮಾಪಕರು, ಗಣ್ಯರಿಂದ ಆಟೋಗಳನ್ನು ಪಡೆದು ಇದುವರೆಗೂ ಒಂಭತ್ತು ಜನರಿಗೆ ಉಚಿತವಾಗಿ ಆಟೋ ವಿತರಿಸಿದ್ದಾರೆ. ತನಗೊಬ್ಬರು ಆಟೋ ಕೊಡಿಸಿದ್ದರಿಂದ ಇಲ್ಲೀತನಕ ಸಾಗುವಂತಾಗಿದೆ. ನನ್ನಂತೆಯೇ ಇನ್ನೊಂದಷ್ಟು ಜನ ಆಗಲಿ ಅನ್ನೋ ಒಳ್ಳೇ ಮನಸ್ಸು ನಾಗರಾಜ್ ಅವರದ್ದು. “ಹಾದಿ ಬೀದಿ ಲವ್ ಸ್ಟೋರಿ ಎನ್ನುವ ಸಿನಿಮಾ ಮಾಡಿದ್ದ ನಿರ್ಮಾಪಕರಿಂದ ಸಾಕಷ್ಟು ಜನ ದುಡ್ಡು ತಿಂದರು. ನಾನು ಅವರ ಬಳಿ ನೇರವಾಗಿ ಎರಡು ಲಕ್ಷ ಕೇಳಿದ್ದೆ. ಅವರು ಯಾಕೆ ಅಂತಲೂ ಕೇಳದೆ ಕೊಟ್ಟರು. ಅದರಲ್ಲಿ ಎರಡು ಆಟೋ ತಂದು ದಾನ ಮಾಡಲಾಯಿತು. ಇದಲ್ಲದೆ ಭಾಗ್ಯ ಲಕ್ಷ್ಮಿ ಫುಡ್ ಪ್ರಾಡಕ್ಟ್ ಮತ್ತು ನಿರ್ಮಾಪಕ ಸಾಜಿದ್ ಖುರೇಷಿ ಕೂಡಾ ಸಾಕಷ್ಟು ಸಹಾಯ ಮಾಡಿದ್ದಾರೆ” ಎಂದು ತಮ್ಮ ಆಟೋ ಸಮುದಾಯದವರಿಗೆ ಸಹಾಯಹಸ್ತ ಚಾಚಿದವರಿಗೆ ನಾಗರಾಜ್ ಕೃತಜ್ಞತೆ ಸಲ್ಲಿಸುತ್ತಾರೆ.
ಒಂದು ಕಾಲದಲ್ಲಿ ಬರಿಗೈಲಿ ಬೆಂಗಳೂರಿಗೆ ಬಂದವರು ನಾಗರಾಜ್. ಇವತ್ತು ಮಡದಿ, ಇಬ್ಬರು ಮಕ್ಕಳೊಂದಿಗೆ ಚೆಂದದ ಸಂಸಾರ ಕಟ್ಟಿಕೊಂಡಿದ್ದಾರೆ. ಬಾಡಿಗೆ ಮನೆಯಾದರೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆಟೋ ಪಬ್ಲಿಸಿಟಿಯ ಮೂಲಕ ಇಡೀ ಚಿತ್ರರಂಗ ಗುರುತಿಸುವಂತಾಗಿದ್ದಾರೆ. ಕರ್ನಾಟಕದ ಯಾವುದೇ ಮೂಲೆಯಿಂದ ಬರುವ ಆಟೋ ಚಾಲಕರಿಗೆ ತಮ್ಮಿಂದಾದ ಸಹಾಯ ಮಾಡುತ್ತಾ ಬಂದಿದ್ದಾರೆ. ನಾಗರಾಜ್ ಕೆಲಸ ಮಾಡಿರುವ ಸಿನಿಮಾಗಳ ನಿರ್ಮಾಪಕರು, ನಿರ್ದೇಶಕರಲ್ಲಿ ಯಾರೊಬ್ಬರೂ ಇವರ ಕೆಲಸದ ಬಗ್ಗೆ ಬೆರಳು ಮಾಡಿ ತೋರಿಸಿಲ್ಲ. ಪ್ರತಿಯೊಬ್ಬರೂ ನಾಗರಾಜ್ ಬಗ್ಗೆ ‘ಒಳ್ಳೇ ಕೆಲಸಗಾರ’ ಅನ್ನೋ ಮಾತನ್ನೇ ಆಡುತ್ತಾರೆ. ಇವೆಲ್ಲದರ ನಡುವೆ ಒಳ್ಳೆ ಪಾತ್ರಗಳನ್ನು ಪಡೆದು ಉತ್ತಮ ನಟನೆನಿಸಿಕೊಳ್ಳುವ ಬಯಕೆ ನಾಗರಾಜ್ ಅವರಿಗೆ ತುಸು ಹೆಚ್ಚೇ ಇದೆ. ನಾಗರಾಜ್ ಅವರ ಕನಸು ಸಾಕಾರಗೊಳ್ಳಲಿ. ಅವರ ಪ್ರಚಾರ ಸೇವೆ ಚಿತ್ರರಂಗದ ಪಾಲಿಗೆ ಹೀಗೇ ದಕ್ಕುತ್ತಿರಲಿ…