ಕೆಂಪೇಗೌಡ ಮಾಗಡಿ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಸಸ್ಪೆನ್ಸ್ , ಹಾರರ್ ಚಿತ್ರ ಆವಂತಿಕಾ. ಈ ಸಿನಿಮಾದ ಹಾಡುಗಳ ಬಿಡುಗಡೆ ಸಮಾರಂಭ ಕಳೆದವಾರ ನಡೆಯಿತು. ತನ್ನ ಪೋಸ್ಟರ್ ಮೂಲಕವೇ ಪ್ರೇಕ್ಷಕರ ಗಮನ ಸೆಳೆದಿರುವ ಈ ಚಿತ್ರದಲ್ಲಿ ಅರ್ಪಿತ್ ನಾಯಕನಾಗಿ ಕಾಣಿಸಿಕೊಂಡಿದ್ದು, ಅವರ ಜೊತೆ ಅಮೃತ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಆವಂತಿಕ ಸಿನಿಮಾದ ಮೇಜರ್ ಕ್ಯಾರೆಕ್ಟರ್ ಆದ ಅವಂತಿಕಾ ಎಂಬ ಪಾತ್ರದಲ್ಲಿ ನಿರ್ಮಾಪಕಿ ರತ್ನ ಚಂದನ ಅವರೇ ನಟಿಸಿದ್ದಾರೆ. ಇದೊಂದು ಸಸ್ಪೆನ್ಸ್, ಹಾರರ್ ಹಾಗೂ ಕಾಮಿಡಿ ಎಂಟರ್ ಟೈನರ್ ಕಥೆಯಿರುವ ಸಿನಿಮಾ. ಇತ್ತೀಚೆಗೆ ಚಿತ್ರತಂಡ ಹಮ್ಮಿಕೊಂಡಿದ್ದ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಹುತೇಕ ರಾಜಕೀಯ ಗಣ್ಯರು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ನಿರ್ದೇಶಕ ಕೆಂಪೇಗೌಡ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಮೂಢನಂಬಿಕೆ ಅನ್ನೋದು ಹಾಗೇ ಉಳಿದು ಬಿಟ್ಟಿದೆ. ಈ ಸಿನಿಮಾದಲ್ಲಿ ನಾಯಕ ಅಂಥಾ ಒಂದು ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತಾರೆ. ಅದರಿಂದ ಅವನು ಹೇಗೆ ಹೊರಗೆ ಬರುತ್ತಾನೆ ಎನ್ನುವುದೇ ಈ ಸಿನಿಮಾದ ಕಥೆ. ಆವಂತಿಕ ಚಿತ್ರದ ಕಥೆ ಹೇಗೆ ಆಯ್ತು ಎಂದಾಗ ನಾನು ಮೊದಲೇ ಮೂರರಿಂದ ನಾಲ್ಕು ಕಥೆಗಳನ್ನು ಬರೆದಿದ್ದೆ. ಆಗ ನಿರ್ಮಾಪಕಿ ರತ್ನಚಂದನ ಅವರು ಸಿನಿಮಾ ನಿರ್ಮಾಣ ಮಾಡಲು ಮುಂದೆ ಬಂದರು. ಹಾಗಾಗಿ ಅವರಿಗೆ ನಾನು ಮಾಡಿಕೊಂಡಿದ್ದ ನಾಲ್ಕು ಕಥೆಗಳನ್ನೂ ಹೇಳಿದೆ. ಆದರೆ ಅವರಿಗೆ ಈ ಸಿನಿಮಾದ ಕಥೆಯೇ ತುಂಬಾ ಇಷ್ಟವಾಗಿ ಇದನ್ನೇ ಸಿನಿಮಾ ಮಾಡಲು ನಿರ್ಧರಿಸಿದರು. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಬೇಕು ಎಂದು ಈ ಸಿನಿಮಾ ಮಾಡಿರುವುದಾಗಿ ಎಂದು ಹೇಳಿದರು. ಸಮಾರಂಭದ ಮುಖ್ಯ ಅತಿಥಿಯಗಿದ್ದ ವಿಧಾನಸಭಾ ಪರಿಷತ್ ಮಾಜಿ ಸದಸ್ಯ ವಿ. ಎಸ್ ಉಗ್ರಪ್ಪ ಮಾತನಾಡಿ, ನಿರ್ಮಾಪಕಿ ರತ್ನ ಅವರ ಒತ್ತಾಯಕ್ಕೆ ಮಣಿದು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಅವರು ನನಗೆ ತೋರಿದ ಪ್ರೀತಿ ವಿಶ್ವಾಸದಿಂದ ನಾನು ಇಲ್ಲಿಗೆ ಬಂದಿದ್ದೇನೆ ಎಂದರು. ಇನ್ನು ಈ ಚಿತ್ರದ ಶೂಟಿಂಗ್ ಮಾಗಡಿ , ಮಂಗಳೂರು, ಬೆಂಗಳೂರು ಸೇರಿದಂತೆ ಮುಂತಾದ ಲೊಕೇಶನ್ಗಳಲ್ಲಿ ನಡೆಸಲಾಗಿದೆ. ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ವಿನು ಮನಸು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.