ನೀನಾಸಂ ಸತೀಶ್ ಒಂದು ದೊಡ್ಡ ಗೆಲುವಿನ ಖುಷಿಯಲ್ಲಿದ್ದಾರೆ. ಅವರು ಅಭಿನಯಿಸಿರೋ ಅಯೋಗ್ಯ ಚಿತ್ರ ಐವತ್ತು ದಿನಗಳ ಗಡಿ ದಾಟಿ ಯಶಸ್ವಿಯಾಗಿ ಮುಂದುವರೆಯೋ ಮೂಲಕ ಸತೀಶ್ ವೃತ್ತಿ ಬದುಕಿಗೊಂದು ಮಹಾ ತಿರುವು ಸಿಕ್ಕಿಬಿಟ್ಟಿದೆ. ಇದೇ ಹೊತ್ತಲ್ಲಿ ನೀನಾಸಂ ಸತೀಶ್ ಸಂಭಾವನೆಯ ಬಗೆಗೂ ಅಚ್ಚರಿದಾಯಕ ವಿಚಾರವೊಂದು ಹೊರ ಬಿದ್ದು ಚಿತ್ರರಂಗದ ತುಂಬಾ ಹರಿದಾಡಲಾರಂಭಿಸಿದೆ!
ಮಹೇಶ್ ನಿರ್ದೇಶನದ ಅಯೋಗ್ಯ ಚಿತ್ರದ ಅಗಾಧ ಯಶಸ್ಸು ಇಡೀ ಚಿತ್ರ ತಂಡದ ನಸೀಬನ್ನೇ ಬದಲಾಯಿಸಿಬಿಟ್ಟಿದೆ. ಹಾಗಿರುವಾಗ ನಾಯಕನಾಗಿ ನಟಿಸಿ, ಈ ಒಟ್ಟಾರೆ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿರುವ ನೀನಾಸಂ ಸತೀಶ್ ಬದುಕು ಬದಲಾಗದಿರುತ್ತಾ? ಅದರಂತೆಯೇ ಅವರ ಸಂಭಾವನೆಯಲ್ಲಿ ಏರಿಕೆ ಕಂಡಿದೆ ಮತ್ತದು ಕೋಟಿ ದಾಟಿ ಹತ್ತತ್ತಿರ ಎರಡು ಕೋಟಿ ಮೀರಿದೆ ಎಂಬುದು ಈಗ ಹೊರ ಬಿದ್ದಿರೋ ಸುದ್ದಿ. ಇದರಲ್ಲಿ ಖಂಡಿತಾ ಸತ್ಯವಿದೆ.
ಅಯೋಗ್ಯ ಚಿತ್ರದ ಯಶಸ್ಸಿನ ನಂತರ ನೀನಾಸಂ ಸತೀಶ್ ಅವರಿಗೆ ನಿರ್ಮಾಪಕರ ತಾವಾಗಿಯೇ ಮುತ್ತಿಕೊಳ್ಳಲಾರಂಭಿಸಿದ್ದಾರೆ. ಸಂಭಾವನೆ ಹೆಚ್ಚಾದುದರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದರೆ ಅಳೆದೂ ತೂಗಿಯೇ ಇಂಥಾ ಅವಕಾಶಗಳು ಮತ್ತು ಕಥೆಗಳನ್ನು ಸತೀಶ್ ಮ್ಯಾನೇಜ್ ಮಾಡುತ್ತಿದ್ದಾರೆ. ಅಯೋಗ್ಯದಂಥಾ ಭಿನ್ನವಾದ ಕಥೆಯನ್ನೀಗ ಜನ ಇಷ್ಟ ಪಟ್ಟಿದ್ದಾರೆ. ಆದ್ದರಿಂದಲೇ ತನ್ನ ಜವಾಬ್ದಾರಿಯೂ ಹೆಚ್ಚಾಗಿದೆ ಅಂದುಕೊಂಡಿರೋ ನೀನಾಸಂ ಸತೀಶ್ ತುಂಬಾ ಯೋಚಿಸಿ ಒಂದು ಕಥೆಯನ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ಅಡ್ವಾನ್ಸ್ ಕೂಡಾ ಆಗಿದೆಯಂತೆ.
ಇನ್ನುಳಿದಂತೆ ಚಂಬಲ್ ಮತ್ತು ಗೋಧ್ರಾ ಚಿತ್ರಗಳು ಈಗಾಗಲೇ ರೆಡಿಯಾಗಿವೆ. ತಮಿಳು ಚಿತ್ರವೊಂದು ವಾರದೊಪ್ಪತ್ತಿನಲ್ಲಿಯೇ ಚಿತ್ರೀಕರಣ ಶುರು ಮಾಡಲಿದೆ. ಸದ್ಯಕ್ಕೆ ನಿರ್ದೇಶಕರೂ ಕೂಡಾ ನೀನಾಸಂ ಸತೀಶ್ ಮುಂದೆ ಸಾಲುಗಗಟ್ಟಿ ನಿಂತಿದ್ದಾರೆ. ಯಾವುದಕ್ಕೂ ಅರ್ಜೆಂಟು ಮಾಡದೆ ಭಿನ್ನವಾದ ಕಥೆಗಳತ್ತ ಮಾತ್ರವೇ ಸತೀಶ್ ಗಮನ ನೆಟ್ಟಿದ್ದಾರೆ. ಭರ್ಜರಿ ಗೆಲುವಿನ ಸಿನಿಮಾ ಮೂಡಿಬಂದರೆ ಹೀರೋಗಳು ತಾವಾಗಿ ತಾವು ಸಂಭಾವನೆ ಹೆಚ್ಚಿಸಿಕೊಳ್ಳೋ ಅಗತ್ಯವೇ ಇರುವುದಿಲ್ಲ. ಬದಲಿಗೆ ಇಂಡಸ್ಟ್ರಿಯೇ ಅವರ ಮಾರ್ಕೆಟ್ಟಿಗೆ ತಕ್ಕ ಪೇಮೆಂಟು ಫಿಕ್ಸು ಮಾಡುತ್ತದೆ. ಇದು ಸತೀಶ್ ಅವರ ವಿಚಾರದಲ್ಲೂ ನಿಜವಾದಂತಿದೆ.
#