ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ಸಾಕಷ್ಟು ವಾಹಿನಿಗಳು ಜನ್ಮತಳೆದಿವೆ. ಕೆಲವೊಮ್ಮೆ ಚಾನೆಲ್‌ ಗಳನ್ನು ಶುರು ಮಾಡುವುದರ ಉದ್ದೇಶ ಬೇರೆಯದ್ದೇ ಆಗಿರುತ್ತದೆಯಾದ್ದರಿಂದ, ಎಷ್ಟೋ ವಾಹಿನಿಗಳು ಹೆಚ್ಚು ಸಮಯ ಉಸಿರಾಡುವುದಿಲ್ಲ. ಹೀಗಿರುವಾಗ, ಉತ್ತಮ ಮನಸ್ಥಿತಿಯಿಂದಲೇ ಆರಂಭವಾಗಿ, ಕಡಿಮೆ ಅವಧಿಯಲ್ಲಿ ಹೆಚ್ಚು ಜನರನ್ನು ಸೆಳೆದ, ಅತ್ಯುತ್ತಮ ಕಾರ್ಯಕ್ರಮಗಳ ಮೂಲಕ ಮಾದರಿಯಾಗಿರುವ ವಾಹಿನಿ ಆಯುಷ್‌ ಟಿವಿ. ಈ ವಾಹಿನಿ ಈಗ ನಾ‌ಲ್ಕು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ.

ಆಯುಷ್ ಟಿವಿ… ಹೆಸರೇ ಹೇಳುವಂತೆ ಆರೋಗ್ಯ ಮತ್ತು ಜೀವನಶೈಲಿಯ ವಿಚಾರಧಾರೆಗಳನ್ನು ಹಂಚಿಕೊಳ್ಳುತ್ತಾ ಬಂದಿರುವ ಟಿವಿ ವಾಹಿನಿ. 2017ರಲ್ಲಿ ಪ್ರಾರಂಭವಾದ ಆಯುಷ್ ವಾಹಿನಿಗೆ ಈ ಸಂಕ್ರಾಂತಿಗೆ 4ನೇ ವರ್ಷದ ಸಂಭ್ರಮ. ದಿನದ 24 ಗಂಟೆಯೂ ಆರೋಗ್ಯಕರ ಮಾಹಿತಿಯನ್ನು ನೀಡುತ್ತಿರುವ ಜಗತ್ತಿನ ಏಕೈಕ ವಾಹಿನಿ ಆಯುಷ್ ಟಿವಿ. ಆಧುನಿಕ ಕಾಲದಲ್ಲಿ ಕಡೆಗಣಿಸಲ್ಪಟ್ಟಿದ್ದ ಭಾರತೀಯ ಪುರಾತನ ವೈದ್ಯ ಪರಂಪರೆಗಳಾದ ಆಯುರ್ವೇದ, ಯೋಗ, ಯುನಾನಿ, ಸಿದ್ಧ, ಪ್ರಕೃತಿಚಿಕಿತ್ಸೆ ಮತ್ತು ಹೋಮಿಯೋಪತಿಗೆ ಪ್ರಾಶಸ್ತ್ಯ ನೀಡಿರುವ ಹೆಗ್ಗಳಿಕೆ ಆಯುಷ್ ವಾಹಿನಿಗೆ ಸಲ್ಲುತ್ತದೆ.

ಮನುಷ್ಯನಲ್ಲಿ ಕಂಡುಬರುವ ಸರ್ವರೋಗಗಳು ಹಾಗೂ ಅವುಗಳಿಗೆ ಸೂಕ್ತವಾದ ಪರಿಹಾರವನ್ನು ತಿಳಿಸುವ ಕಾರ್ಯ ವಾಹಿನಿ ಮಾಡುತ್ತಿದೆ. ಕ್ಯಾನ್ಸರ್, ಡಯಾಬಿಟಿಸ್, ಆರ್ಥರೈಟೀಸ್, ಥೈರಾಯ್ಡ್, ಸೋರಿಯಾಸಿಸ್. ಹೃದಯ ಸಂಬಂಧಿ ಕಾಯಿಲೆಗಳಂತಹ ಭಯಾನಕ, ಮಾರಕ, ಬೆಂಬಿಡದ ಅನಾರೋಗ್ಯ ಸಮಸ್ಯೆಗಳ ಬಗ್ಗೆ ಸಮಗ್ರ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ. ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿ ಜನಸಾಮಾನ್ಯರ ಪ್ರಶ್ನೆಗಳು, ಗೊಂದಲಗಳಿಗೆ ತಜ್ಞ ವೈದ್ಯರ ಸಮಾಲೋಚನೆ ಮೂಲಕ ಸೂಕ್ತ ಚಿಕಿತ್ಸಾ ಮಾರ್ಗಗಳನ್ನು ತಿಳಿಯಲು ಆಯುಷ್ ಟಿವಿ ಸೇತುವೆಯಾಗಿ ಕೆಲಸ ಮಾಡುತ್ತಿದೆ.

ಅಂದಹಾಗೆ ಆಯುಷ್ ವಾಹಿನಿಯಲ್ಲಿ ದಿನನಿತ್ಯ ವಿಭಿನ್ನ ಆರೋಗ್ಯಕರ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ. ಮುದ್ರಾ ಥೆರಪಿ, ಸುಲಭ ಯೋಗ, ಯೋಗಾ ಫಾರ್ ಲೈಫ್, ಮನೆಮದ್ದು, ಫಸ್ಟೆಡ್, ಆಲ್ ಇಸ್ ವೆಲ್, ಆಹಾರವೇ ಔಷಧಿ, ನಮ್ಮ ಹೋಮಿಯೋಪತಿ, ಗುಣಮುಖವಾಗದ ಖಾಯಿಲೆಗಳಿಗೆ ವನಮೂಲಿಕೆಯಲ್ಲಿದೆ ಔಷಧದಂತಹ ಕಾರ್ಯಕ್ರಮಗಳು ಈಗಾಗಲೇ ವೀಕ್ಷಕರ ಮೆಚ್ಚುಗೆಯನ್ನು ಪಡೆದಿದೆ. ಅದಷ್ಟೇ ಅಲ್ಲ… ಸೆಲೆಬ್ರೆಟಿ ಫಿಟ್ನೆಸ್, ಹೊಸ ಸಿನಿಮಾ, ಚಿತ್ರಲೋಕ, ಶಾರ್ಟ್ ಮೂವೀಸ್, ಆಯುಷ್ ಮ್ಯೂಸಿಕ್, ಸೆಲೆಬ್ರೆಟಿ ಇಂಟರ್ವ್ಯೂನಂತಹ ಕಾರ್ಯಕ್ರಮಗಳು ಆರೋಗ್ಯಕರ ಮನರಂಜನೆಯನ್ನು ನೀಡುತ್ತಾ ಬಂದಿದೆ.

ಇನ್ನು ಕಳೆದ ಒಂದು ವರ್ಷದಿಂದ ಈಚೆಗೆ ಇಡೀ ಪ್ರಪಂಚವನ್ನೇ ಕಾಡುತ್ತಿರುವ ಮಹಾಮಾರಿ ಕೊರೋನಾ ನಿಯಂತ್ರಣ ಕ್ರಮಗಳ ಬಗ್ಗೆ ಕೊರೋನಾ ಮುನ್ನೆಚ್ಚರಿಕೆಯಂತಹ ಅನೇಕ ವಿಶೇಷ ನೇರಪ್ರಸಾರ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಕೋವಿಡ್ ಪ್ಯಾಂಡಮಿಕ್ ಸಮಯದಲ್ಲಿ ಜನರಿಗೆ ಧೈರ್ಯ ನೀಡಿ, ಹೆಲ್ತ್ ಟಿಪ್ಸ್ ನೀಡುತ್ತಾ, ಕೋವಿಡ್ ಬಗೆಗೆ ಜಾಗೃತಿ ಮೂಡಿಸುತ್ತಾ ಬಂದಿರುವ ಹೆಗ್ಗಳಿಕೆ ಆಯುಷ್ ವಾಹಿನಿಗೆ ಸಲ್ಲುತ್ತದೆ.

ವಾಹಿನಿಯ ನಿರ್ದೇಶಕ ಜಿ. ಶ್ರೀನಿವಾಸ, ಕಾರ್ಯಕ್ರಮ ಮುಖ್ಯಸ್ಥ ನಾಗೇಶ್ ವೈ. ದೇಸಾಯಿ ನೇತೃತ್ವದಲ್ಲಿ ಮುನ್ನಡೆಯುತ್ತಾ 4ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಆಯುಷ್ ಟಿವಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಮತ್ತಷ್ಟು ಆರೋಗ್ಯಕರ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಿ ಅನ್ನೋದೆ ನಮ್ಮ ಆಶಯ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

Saala Crossbreed..!

Previous article

ವಿಶ್ವದ ಮೊದಲ ಹೀರೋ!

Next article

You may also like

Comments

Leave a reply

Your email address will not be published.