ಆಯುಷ್‌ಮಾನ್ ಭವ ಚಿತ್ರ ಇದೇ ನವೆಂಬರ್ ೧ರಂದು ತೆರೆಗೆ ಬರುತ್ತಿದೆ. ಈಗಷ್ಟೇ ಬಿಡುಗಡೆಗೊಂಡಿರುವ ಚಿತ್ರದ ಟ್ರೇಲರನ್ನು ಜನ ತುಂಬು ಮನಸ್ಸಿನಿಂದ ಸ್ವೀಕರಿಸಿದ್ದಾರೆ. ದಿನದಿಂದ ದಿನಕ್ಕೆ ನೋಡುಗರ ಸಂಖ್ಯೆ ಏರುತ್ತಲೇ ಇದೆ. ಈ ಸಂದರ್ಭದಲ್ಲಿ ನಿರ್ದೇಶಕ ಪಿ. ವಾಸು ಆಯುಷ್‌ಮಾನ್ ಭವ ಚಿತ್ರದ ಕುರಿತಾಗಿ ಹಂಚಿಕೊಂಡ ಒಂದಷ್ಟು ವಿವರಗಳು ಇಲ್ಲಿವೆ…

ಈ ಚಿತ್ರ ಆಡಿಯೋ ಹೀರೋ ಗುರುಕಿರಣ್ ರವರ ೧೦೦ನೇ ಚಿತ್ರ. ಇಲ್ಲಿಂದ ಕೇರಳಕ್ಕೆ ಹೋಗಿ ಅಲ್ಲಿ ಕೂತು ಈ ಚಿತ್ರದ ಹಾಡುಗಳನ್ನು ಕಂಪೋಸ್ ಮಾಡಿದ್ದೇವೆ. ಎಲ್ಲಾ ಹಾಡುಗಳು ಸುಂದರವಾದ ಅನುಭವವನ್ನು ನೀಡಿವೆ. ಆಪ್ತರಕ್ಷಕ, ಆಪ್ತಮಿತ್ರ ಸೇರಿದಂತೆ ನಾನು ಕನ್ನಡದಲ್ಲಿ ಮಾಡಿದ ಎಲ್ಲಾ ಚಿತ್ರಗಳಿಗೂ ಗುರುಕಿರಣ್ ಅವರೇ ಸಂಗೀತ ನಿರ್ದೇಶಕರು ಹಾಗೂ ದಾಸ್ ಅವರು ಕ್ಯಾಮೆರಾಮೆನ್. ಈ ಟೀಮ್ ನನಗೆ ಒಳ್ಳೆ ಲಕ್ ತಂದಿದೆ. ಈ ಚಿತ್ರದಲ್ಲಿ ಹಾಡುಗಳು ಬಹಳ ಚೆನ್ನಾಗಿ ಬಂದಿವೆ. ಇದಕ್ಕೆ ಗುರು ಅವರಿಗೆ ನನ್ನ ಅಭಿನಂದನೆಗಳನ್ನು ತಿಳಿಸುತ್ತೇನೆ. ಇದು ದ್ವಾರಕೀಶ್ ಚಿತ್ರ ಸಂಸ್ಥೆ ಅವರ ೫೦ನೇ ವರ್ಷದ ಸಂಭ್ರಮ. ಈ ಸಂಸ್ಥೆಯ ೫೦ನೇ ಸಿನಿಮಾ ನಾನು ನಿರ್ದೇಶನ ಮಾಡುತ್ತಿರುವುದು ಬಹಳ ಸಂತೋಷ ತಂದಿದೆ. ಒಂದುವೇಳೆ ದ್ವಾರಕೀಶ್ ರಿಯಲ್ ಎಸ್ಟೇಟಿನಂತಹ ವ್ಯವಹಾರದಲ್ಲಿ ಹೂಡಿಕೆ ಮಾಡಿದ್ದರೆ ಈ ಹೊತ್ತಿಗೆ ದೊಡ್ಡ ಶ್ರೀಮಂತರಾಗಿರುತ್ತಿದ್ದರು, ಆದರೆ ೭೦ರ ದಶಕದಿಂದ ಬರೀ ಸಿನಿಮಾ ಲೋಕದಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಿನಿಮಾ ಇವರ ನಿದ್ರೆ, ಊಟ, ಉಸಿರು ಎಲ್ಲವೂ ಆಗಿವೆ. ನಾನು ದ್ವಾರಕೀಶ್ ಅವರ ನಿರ್ಮಾಣದಲ್ಲಿ ನನ್ನ ಮೊದಲನೇ ಸಿನಿಮಾ ನಿರ್ದೇಶನಕ್ಕಾಗಿ ಅವಕಾಶ ಕೇಳಲು ಚೆನ್ನೈನ ಅವರ ಮನೆಯಲ್ಲಿ ಭೇಟಿಯಾಗಿ ನನ್ನ ಪರಿಚಯವನ್ನು ಮಾಡಿಕೊಂಡೆ. ಮನೆಯಲ್ಲಿ ಫೋನ್ ತೆಗೆದು ನನಗೆ ಕಾಫಿ ತರಲು ಹೇಳಿದರು. ನಾನು ಕೇಳಿದೆ ಯಾರಿಗೆ ಹೇಳಿದಿರಿ ಅಂತ, ಅಡುಗೆ ಮನೆಗೆ ಎಂದರು. ಮೊಟ್ಟಮೊದಲು ನಾನು ಇಂಟರ್‌ಕಾಮ್ ನೋಡಿದ್ದೇ ಅಲ್ಲಿ. ಅಲ್ಲಿಂದ ಅವರ ೫೦ನೇ ಸಿನಿಮಾ ನಿರ್ದೇಶನ ಮಾಡುವ ಹಂತಕ್ಕೆ ಅವರೊಂದಿಗೆ ನನ್ನ ಸ್ನೇಹ ಬೆಳೆದು ಬಂದಿದೆ.

ತಮಿಳಿನ ದಿ ಗ್ರೇಟ್ ಹೀರೋ ಎಂ.ಜಿ.ಆರ್. ಅವರು ಒಮ್ಮೆ ವಾಹಿನಿ ಸ್ಟುಡಿಯೋ ಮಾಲೀಕ ನಾಗಿರೆಡ್ಡಿ ಅವರೊಡನೆ ಒಂದು ಮಾತು ಹೇಳಿದ್ರಂತೆ, ಒಬ್ಬ ಡೈರೆಕ್ಟರ್ ಒಬ್ಬ ಹೀರೋಗೆ ಆ ಸಿನಿಮಾ ಮಾಡಿದ್ರೆ ಆ ಚಿತ್ರ ಆದ ನಂತರ ಆ ಹೀರೋಗೆ ಒಂದು ಲಕ್ಷ ಅಭಿಮಾನಿಗಳನ್ನ ಹೆಚ್ಚಿಸಬೇಕು ಅಂತ. ಹಾಗೆಯೇ ಶಿವಣ್ಣ ಶಿವಲಿಂಗ ಸಿನಿಮಾ ಮಾಡಿದ ನಂತರ ಐವತ್ತು ಸಾವಿರ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಆದರೆ, ಶಿವಣ್ಣ ಈ ಚಿತ್ರ ಮಾಡಿದ ನಂತರ ಕಡೇ ಪಕ್ಷ ಒಂದು ಲಕ್ಷ ಅಭಿಮಾನಿಗಳಾದರೂ ಹೆಚ್ಚಾಗಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಶಿವಣ್ಣ ಇಸ್ ಮೈ ಗ್ರೇಟ್ ಹೀರೋ. ಶಿವಣ್ಣ ಈ ಸಿನಿಮಾದಲ್ಲಿ ಬಹಳ ರಿಸ್ಕ್ ತೆಗೆದುಕೊಂಡಿದ್ದಾರೆ. ಕೇರಳದಲ್ಲಿ ಒಂದು ಹಾಡನ್ನು ಬೆಟ್ಟದ ಮೇಲೆ ಶೂಟ್ ಮಾಡುವ ಸಂದರ್ಭದಲ್ಲಿ ನಾನು ದೂರದಲ್ಲಿ ಕುಳಿತು ಶಾಟ್‌ಅನ್ನು ಟಿವಿಯಲ್ಲಿ ನೋಡುತ್ತಿದ್ದೆ. ಆಗ ಅಲ್ಲೊಬ್ಬ ವ್ಯಕ್ತಿ ಬಂದು ಮಲಯಾಳಂ ಭಾಷೆಯಲ್ಲಿ ಅಬ್ಬಾ… ಸ್ವಲ್ಪ ಜಾರಿದ್ರೂ ಅವರು ಕೆಳಗೆ ಬೀಳುತ್ತಾರೆ, ಯಾಕೆ ಅವರು ಈ ರೀತಿಯ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ ಅಂದ. ನಾನು ಆಗ ನಾನು ‘ದೇವರೆ ಈ ಶಾಟ್ ಬೇಗ ಮುಗೀಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ದೇವರ ದಯೆ ಶಿವಣ್ಣ ಶಾಟ್ ಮುಗಿಸಿ ಬಂದರು!

ಈ ಚಿತ್ರದಲ್ಲಿ ಮೊದಲನೆ ಬಾರಿ ಅನಂತನಾಗ್ ಅವರೊಂದಿಗೆ ಕೆಲಸ ಮಾಡಲು ದೇವರ ಆಶೀರ್ವಾದ ನನಗೆ ಸಿಕ್ಕಿದೆ. ಈ ಚಿತ್ರದ ಚಿತ್ರಕಥೆಯನ್ನು ನಾನು ಅವರಿಗೆ ಹೇಳಲು ಎರಡು ಮೂರು ಬಾರಿ ಭೇಟಿ ಮಾಡಲು ಪ್ರಯತ್ನ ಮಾಡಿದೆ, ಆದರೆ ಸಾಧ್ಯವಾಗಲಿಲ್ಲ. ನಿರ್ಮಾಪಕ ಯೋಗಿ ಅವರು ಅನಂತ್ರನ್ನು ಭೇಟಿ ಮಾಡಿ ಕಥೆ ಹೇಳಿದಾಗ ಅವರು ಈ ಚಿತ್ರದಲ್ಲಿ ನಟಿಸಲು ಒಪ್ಪಿದರು. ಚಿತ್ರ ಪ್ರಾರಂಭವಾದ ಮೊದಲ ದಿನ ಅವರೊಂದಿಗೆ ಚಿತ್ರಕಥೆ ಬಗ್ಗೆ ವಿವರವಾಗಿ ಮಾತನಾಡಿದ್ದೆ. ಶೂಟಿಂಗ್ ಶುರುವಾದ ೧೦ನೇ ದಿನ ಅವರು ನನಗೆ ಪರ್ಫ್ಯೂಮ್ವೊಂದನ್ನು ಗಿಫ್ಟ್ ನೀಡಿದರು. ಅದನ್ನು ಕೊಟ್ಟು ಐ ಲೈಕ್ ಯುವರ್ ಡೈರೆಕ್ಷನ್, ಐ ಲೈಕ್ ಯುವರ್ ಸ್ಪಿರಿಟ್, ಐ ಲೈಕ್ ಯುವರ್ ವೇ ಆಫ್ ವರ್ಕ್ ಎಂದು ಆಶೀರ್ವದಿಸಿದರು, ಈ ಅವಕಾಶ ನನಗೆ ನೀಡಿದ್ದಕ್ಕೆ ಅನಂತ್‌ನಾಗ್ ಅವರಿಗೆ ನನ್ನ ಧನ್ಯವಾದ ಅರ್ಪಿಸುತ್ತೇನೆ. ಈ ಚಿತ್ರದಲ್ಲಿ ಅದ್ಭುತವಾದ ಪಾತ್ರವೊಂದರಲ್ಲಿ ಅವರು ನಟಿಸಿದ್ದಾರೆ. ನಾಯಕಿಯಾಗಿ ರಚಿತಾರಾಮ್ ಬಹಳ ಅದ್ಭುತವಾಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಒಳ್ಳೆಯ ಹೆಸರು ರಚಿತಾ ಅವರಿಗೆ ಬರುತ್ತದೆ. ದ್ವಾರಕೀಶ್ ಚಿತ್ರ ಸಂಸ್ಥೆಯೆಂಬ ಕುಟುಂಬದಲ್ಲಿ ನಾನೂ ಒಬ್ಬ ಸದಸ್ಯ ಎಂಬುದು ನನ್ನ ಹೆಮ್ಮೆ. ಎಡಿಟರ್ ಗೌತಮ ರಾಜು, ಕ್ಯಾಮೆರಾ ಮೆನ್ ದಾಸ್, ಮ್ಯೂಸಿಕ್ ಡೈರೆಕ್ಟರ್ ಗುರು ಎಲ್ಲ ಒಂದು ಒಳ್ಳೆ ಟೀಮ್ ಜೊತೆ ಕೆಲಸ ಮಾಡಿದ್ದೇನೆ, ಚಿತ್ರದಲ್ಲಿ ನಟಿಸಿರುವ ಎಲ್ಲಾ ನಟರು ಹಾಗೂ ಟೆಕ್ನೀಷಿಯನ್‌ಗಳಿಗೆ ನನ್ನ ಧನ್ಯವಾದಗಳು. ಈ ಚಿತ್ರ ಇನ್ನೊಂದು ಆಪ್ತಮಿತ್ರ ಆಗಲಿದೆ ಎಂದು ಭಾವಿಸುತ್ತೇನೆ.

CG ARUN

ಕತ್ತಲು, ಕಾಡು, ಲಾರಿ, ಜೈಲು..!

Previous article

ಓದಿದ್ದು ಏಳನೇ ಕ್ಲಾಸು ನಟಿಸಿದ್ದು ನೂರಾರು ಸಿನಿಮಾ!

Next article

You may also like

Comments

Leave a reply

Your email address will not be published. Required fields are marked *

More in cbn