ಪಿ. ವಾಸು ಕಥೆಯೊಂದನ್ನು ಕಟ್ಟಿ, ಅದನ್ನು ನಿರೂಪಿಸುವ ಶೈಲಿಯೇ ಚೆಂದ. ಕಮರ್ಷಿಯಲ್ ಫಾರ್ಮುಲಾ ಮೂಲಕವೇ ಕತೆ ಹೇಳೋ ಕಲೆ ಅವರಿಗೆ ಸಿದ್ದಿಸಿದೆ.
ಏನೇನೂ ಅಲ್ಲದ ವ್ಯಕ್ತಿಯೊಬ್ಬ ಸಡನ್ನಾಗಿ ಕುಟುಂಬವೊಂದಕ್ಕೆ ಎಂಟ್ರಿ ಕೊಡುತ್ತಾನೆ. ಮನೆ ಕೆಲಸಗಾರನಂತೆ ಚಾಕರಿ ಮಾಡುತ್ತಾನೆ. ಜೊತೆ ಜೊತೆಗೆ ತಾನೊಬ್ಬ ಬುದ್ದಿವಂತ, ಮೆಡಿಕಲ್ ಬಗ್ಗೆ ತಿಳಿದಿರುವವನು, ಸಂಗೀತ ಜ್ಞಾನ ಹೊಂದಿರುವವನು ಅನ್ನೋದನ್ನೂ ನೋಡುಗರಿಗೆ ರಿಜಿಸ್ಟರ್ ಮಾಡಿಸುತ್ತಾನೆ. ಆಗರ್ಭ ಶ್ರೀಮಂತರ ಮನೆ, ಕೂಡು ಕುಟುಂಬ, ದೊಡ್ಡ ಸಂಸಾರದಲ್ಲಿ ಸಣ್ಣತನದ ಕೆಲ ವ್ಯಕ್ತಿಗಳು, ಶ್ರೀಮಂತ ಹೆಂಗಸರ ಆಡಂಬರ, ವಯ್ಯಾರಗಳ ನುವೆಯೇ ತೆರೆದುಕೊಳ್ಳುವ ಕಥೆ ನಾನಾ ತಿರುವುಗಳ ಮೂಲಕ ನೋಡುಗರನ್ನು ರಂಜಿಸುತ್ತಾ ಸಾಗುತ್ತದೆ. ಹೀರೋ ಆ ಮನೆಗೆ ಯಾಕೆ ಎಂಟ್ರಿ ಕೊಡುತ್ತಾನೆ? ಅದೇ ಮನೆಯ ಔಟ್ ಹೌಸ್ ನಿಂದ ಯಾಕೆ ವಿಕಾರ ಶಬ್ದ ಕೇಳಿಬರುತ್ತದೆ? ಅಸಲಿಗೆ ಹೀರೋಗೂ ಆ ಮನೆಗೂ ಇರುವ ಸಂಬಂಧವಾದರೂ ಏನು? ಹೀಗೆ ಹಲವಾರು ಕುತೂಹಲಕಾರಿ ಅಂಶಗಳೊಂದಿಗೆ, ಆಗಾಗ ಅಚ್ಛರಿಗೊಳಿಸುವ ದೃಶ್ಯಗಳೊಂದಿಗೆ ರೂಪುಗೊಂಡಿರುವ ಸಿನಿಮಾ ಆಯುಷ್ಮಾನ್ ಭವ
ರಚಿತಾರಾಮ್ ಈ ಸಿನಿಮಾದಲ್ಲಿ ಈ ವರೆಗೂ ಕಾಣಿಸಿಕೊಳ್ಳದ ಮತ್ತು ತೀರಾ ಗಮನಾರ್ಹವಾದ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದಾರೆ. ಅದೇನು ಅಂತಾ ಸಿನಿಮಾ ನೋಡುವ ಮುಂಚೆಯೇ ಗೊತ್ತಾಗಿಬಿಟ್ಟರೆ ಬಹುಶಃ ಸಿನಿಮಾದ ಮಜಾ ಹಾಳಾಗಿಬಿಡುತ್ತದೆ.
ಮಾನಸಿಕ ಅಸ್ವಸ್ಥತೆಗೆ ಬರೀ ಮೆಡಿಸನ್ನು, ಆಸ್ಪತ್ರೆ, ಟ್ರೀಟ್ ಮೆಂಟುಗಳ ಹೊರತಾಗಿ ಬೇರೆಯದ್ದೇ ರೀತಿಯಲ್ಲಿ ಗುಣಪಡಿಸಬಹುದು ಅನ್ನೋದನ್ನು ಆಯುಷ್ಮಾನ್ ಭವ ಸಿನಿಮಾದ ಮೂಲಕ ಪಿ ವಾಸು ಸಾಬೀತು ಮಾಡಿದ್ದಾರೆ. ಇಲ್ಲಿ ಶಿವರಾಜ್ ಕುಮಾರ್, ರಚಿತಾರಾಮ್, ಅನಂತ್ ನಾಗ್ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. ಅದನ್ನು ಬಿಟ್ಟರೆ ಸಂಗೀತ ಅನ್ನೋದು ಕೂಡಾ ಇಲ್ಲಿ ಒಂದು ರೀತಿಯಲ್ಲಿ ಪಾತ್ರದಂತೆ ಬೆಸೆದುಕೊಂಡಿದೆ.
ಶಿವರಾಜ್ ಕುಮಾರ್ ಅನ್ನೋ ಹೀರೋಗೆ ಸಿನಿಮಾದಿಂದ ಸಿನಿಮಾಗೆ ಬೇರೆಯದ್ದೇ ಬಗೆಯಲ್ಲಿ ನಟಿಸುವ ಶಕ್ತಿ ಅದೆಲ್ಲಿಂದ ಬಂತೋ ಗೊತ್ತಿಲ್ಲ. ಪಾತ್ರವೇ ತಾವಾಗಿ ಇಲ್ಲಿ ಅವತಾರವೆತ್ತಿದ್ದಾರೆ. ವಿ.ನಾಗೇಂದ್ರ ಪ್ರಸಾದ್ ಅವರೇ ಬರೆದಿರುವ ಈ ಚಿತ್ರದ ಒಂದು ಹಾಡಿನ ಸಾಲಿನಲ್ಲಿದ್ದಂತೆ ಶಿವಣ್ಣನ ವ್ಯಕ್ತಿತ್ವ ಮತ್ತು ಅವರ ನಟನೆಯಲ್ಲೇನೋ ಮ್ಯಾಜಿಕ್ಕಿದೆ. ಅನಂತ್ ನಾಗ್, ರಚಿತಾ, ರಮೇಶ್ ಭಟ್ ಮುಂತಾದವರ ಬಗ್ಗೆ ಹೇಳುವಂತೆಯೇ ಇಲ್ಲ. ಅಷ್ಟು ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸಿದ್ದಾರೆ. ಅದಲ್ಲದೇ, ಸುಹಾಸಿನಿ ಕೂಡಾ ಮುಖ್ಯ ಭಾಗದಲ್ಲಿ ಬಂದು ಹೋಗುತ್ತಾರೆ.
ಇವಷ್ಟೇ ಅಲ್ಲದೆ, ಆನೆ, ಹುಲಿ ಮುಂತಾದ ಪ್ರಾಣಿಗಳು ಕಾಡು, ಪ್ರಕೃತಿ, ಜಲಪಾತಗ, ಐಶಾರಾಮಿ ಬಂಗಲೆ, ದುಬಾರಿ ಕಾರುಗಳು – ಇವೆಲ್ಲವೂ ಚಿತ್ರವನ್ನು ಶ್ರೀಮಂತಗೊಳಿಸಿವೆ. ಇವೆಲ್ಲವನ್ನೂ ಸೆರೆ ಹಿಡಿದ ಪಿ.ಕೆ.ಎಚ್. ದಾಸ್ ಅವರ ಕ್ಯಾಮೆರಾ ಕೆಲಸ ಕೂಡಾ ಮೋಹಕವಾಗಿದೆ. ಗುರುಕಿರಣ್ ತಮ್ಮ ನೂರನೇ ಸಿನಿಮಾವನ್ನು ಚೆಂದದ ಹಾಡುಗಳ ಮೂಲಕ ಸಾರ್ಥಕಗೊಳಿಸಿಕೊಂಡಿದ್ದಾರೆ. ವಿ. ನಾಗೇಂದ್ರ ಪ್ರಸಾದ್ ಅವರು ರಚಿಸಿರುವ ಗೀತೆಗಳು ಸಿನಿಮಾದ ಒಟ್ಟೂ ತೂಕವನ್ನು ಹೆಚ್ಚಿಸಿದೆ.
ಜೀವಕ್ಕೆ, ಜೀವನಕ್ಕೆ ಹೆಚ್ಚು ಮೌಲ್ಯ ಕೊಡುವ ಶಿವಣ್ಣ ದೃಶ್ಯವೊಂದರಲ್ಲಿ ಹುಲಿಯ ಜೀವಕ್ಕೆ ಯಾಕೆ ಬೆಲೆ ಕೊಡಲಿಲ್ಲ? ಅದರ ಜಾಗಕ್ಕೆ ಹೋಗಿ ಅದಕ್ಕೇ ಘಾಸಿ ಮಾಡಿದ್ದು ಸರಿಯಾ? ಆ ದೃಶ್ಯವನ್ನು ಬೇರೆಯದ್ದೇ ಬಗೆಯಲ್ಲಿ ರೂಪಿಸಿ ವನ್ಯಜೀವವನ್ನು ರಕ್ಷಿಸಿಯೂ ಹೀರೋ ಆಗಬಹುದಿತ್ತು ಎನ್ನುವುದು ನೋಡಿದ ಕೆಲವರ ಸಣ್ಣ ಆಕ್ಷೇಪ. ಅಷ್ಟು ಬಿಟ್ಟರೆ ಇದು ಪಕ್ಕಾ ಫ್ಯಾಮಿಲಿ ಪ್ಯಾಕೇಜು. ಮನೆ ಮಂದಿಯೆಲ್ಲಾ ಗುಂಪು ಗುಂಪಾಗಿ ಹೋಗಿ ನೋಡಬಹುದಾದ, ನೋಡಿ ಭರಪೂರ ಮನರಂಜನೆ ಪಡೆಯಬಹುದಾದ ಸಿನಿಮಾ. ದ್ವಾರಕೀಶ್ ಚಿತ್ರ ಶುರುವಾದ ಐವತ್ತನೇ ವರ್ಷಕ್ಕೆ ಕನ್ನಡ ಜನತೆಗೆ ಒಂದೊಳ್ಳೆ ಕೊಡುಗೆ ಇದಾಗಿದೆ. ಮಿಸ್ ಮಾಡದೇ ಥಿಯೇಟರಿಗೇ ಹೋಗಿ ನೋಡಿ…
– ಅರುಣ್ ಕುಮಾರ್ ಜಿ