ವಾರಕ್ಕೆ ಮುನ್ನವಷ್ಟೇ ರವಿಚಂದ್ರನ್, ಉಪೇಂದ್ರ, ಶಿವಣ್ಣ, ದ್ವಾರಕೀಶ್, ಪಿ. ವಾಸು ಸೇರಿದಂತೆ ಸಿನಿಮಾರಂಗದ ದಿಗ್ಗಜರ ನಡುವೆ ಆಯುಷ್ಮಾನ್ ಭವ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದವು. ನಾಳೆ ಅಕ್ಟೋಬರ್ ೨೭ರಂದು ಈ ಸಿನಿಮಾದ ಟ್ರೇಲರ್ ಅನಾವರಣಗೊಳ್ಳುತ್ತಿದೆ. ಇದೇ ನವೆಂಬರ್ ೧ರಂದು ತೆರೆಗೆ ಬರುತ್ತಿರುವ ಆಯುಷ್ಮಾನ್ ಭವ ಚಿತ್ರದ ಟ್ರೇಲರ್ ಗಾಗಿ ಶಿವಣ್ಣನ ಅಭಿಮಾನಿಗಳು ಮಾತ್ರವಲ್ಲ, ಇಡೀ ಚಿತ್ರರಂಗ ಕಾದಿದೆ. ಯಾವುದೇ ಗದ್ದಲವಿಲ್ಲದೆ ಶೂಟಿಂಗ್ ಮುಗಿಸಿಕೊಂಡು, ಸಮಾಧಾನವಾಗಿ ಬಿಡುಗಡೆಯಾಗುತ್ತಿರುವ ಆಯುಷ್ಮಾನ್ ಭವ ಸಿನಿಮಾದ ಕುರಿತಾಗಿ ಜನರಲ್ಲಿ ಕುತೂಹಲ ಮನೆ ಮಾಡಲೂ ಕಾರಣಗಳಿವೆ.
ದ್ವಾರಕೀಶ್ ಚಿತ್ರದಿಂದ ನಿರ್ಮಾಣವಾಗುವ ಯಾವುದೇ ಸಿನಿಮಾಗಳು ಜನಮೆಚ್ಚುವಂತಾ ಕಂಟೆಂಟ್ ಹೊಂದಿರುತ್ತವೆ. ಹೀರೋ ಡೇಟ್ಸ್ ಇದೆ, ಡೈರೆಕ್ಟರ್ ಸಿಕ್ಕಿದ್ದಾರೆ ಅಂತಾ ಸಂತೆ ಹೊತ್ತಿಗೆ ಸೀರೆ ನೇಯುವ ಜಾಯಮಾನ ದ್ವಾರಕೀಶ್ ಚಿತ್ರದಲ್ಲ. ಸಾಮಾನ್ಯಕ್ಕೆ ಕಮರ್ಷಿಯಲ್ ಹೀರೋಗಳ ಸಿನಿಮಾವನ್ನು ವ್ಯಾಪಾರೀ ದೃಷ್ಟಿಯಿಂದಷ್ಟೇ ಬಹುತೇಕರು ರೂಪಿಸುತ್ತಾರೆ. ಆದರೆ ದ್ವಾರಕೀಶ್ ಚಿತ್ರದ ಹಿಂದೆ ಹಲವಾರು ಪ್ರತಿಭಾವಂತರ ತಂಡವಿದೆ. ಮೇಲಾಗಿ ದ್ವಾರಕೀಶ್ ಅವರ ಪುತ್ರ ಯೋಗಿ ಕತೆಯೊಂದನ್ನು ಒಪ್ಪಿದರು ಅಂದರೆ, ಆ ಸಿನಿಮಾದಲ್ಲಿ ಗಟ್ಟಿಯಾದ ಕಥೆ ಇದೆ ಎಂದೇ ಅರ್ಥ. ಅದಕ್ಕೆ ಅವರು ಈ ಹಿಂದೆ ನಿರ್ಮಿಸಿರುವ ಸಿನಿಮಾಗಳೇ ಸಾಕ್ಷಿ.
ಒಂದು ನಿರ್ಮಾಣ ಸಂಸ್ಥೆ ಬರೋಬ್ಬರಿ ಐವತ್ತು ವರ್ಷ ಪೂರೈಸಿ, ಐವತ್ತಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸುವುದೆಂದರೆ ಸುಮ್ಮನೆ ಮಾತಲ್ಲ. ದ್ವಾರಕೀಶ್ ಚಿತ್ರವೆಂಬ ಬ್ಯಾನರು ಅದನ್ನು ಸಾಧಿಸಿದೆ. ಈ ಸಂಸ್ಥೆ ಆರಂಭಗೊಂಡು ಅರ್ಧ ಶತಮಾನದ ಸಂಭ್ರಮಕ್ಕೆ ಆಯುಷ್ಮಾನ್ ಭವ ಎನ್ನುವ ಕಂಪ್ಲೀಟ್ ಫ್ಯಾಮಿಲಿ ಸಬ್ಜೆಕ್ಟಿನ ಸಿನಿಮಾವೊಂದನ್ನು ಉಡುಗೊರೆಯಾಗಿ ನೀಡುತ್ತಿದೆ. ದೀಪಾವಳಿ ಕಳೆದು, ಜನ ರಾಜ್ಯೋತ್ಸವದ ಸಡಗರಕ್ಕೆ ಹೊರಳಿಕೊಳ್ಳುವ ಘಳಿಗೆಯಲ್ಲೇ ಆಯುಷ್ಮಾನ್ ಭವ ತೆರೆಗೆ ಬರುತ್ತಿದೆ. ಈ ಸಿನಿಮಾ ಹೇಳಿ ಕೇಳಿ ಮನೆಮಂದಿಯೆಲ್ಲಾ ಕೂತು ನೋಡುವ ಚಿತ್ರವಾಗಿರುದು, ಜೊತೆಗೆ ರಾಜ್ಯೋತ್ಸವದ ರಜೆ ಎಲ್ಲವೂ ಸೇರಿದರೆ ಜನ ಕುಟುಂಬಸಮೇತರಾಗಿ ಥಿಯೇಟರಿಗೆ ಬರೋದು ಗ್ಯಾರೆಂಟಿ. ನಾಳೆ ಬರುವ ಟ್ರೇಲರು ನೋಡುತ್ತಿದ್ದಂತೇ ಜನ ಈ ಸಿನಿಮಾಗೆ ಹೋಗಲೇ ಬೇಕು ಅಂತಾ ತೀರ್ಮಾನಿಸೋದು ಕೂಡಾ ಅಷ್ಟೇ ಸತ್ಯ!