ಸುಮನ್ ನಗರ್’ಕರ್ ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟಿ. ಕನ್ನಡಿಗರ ಪಾಲಿಗೆ ಬೆಳದಿಂಗಳ ಬಾಲೆ ಎಚಿದೇ ಚಿರಪರಿಚಿತರಾಗಿರುವ ಸುಮನ್ ಬಬ್ರೂ ಸಿನಿಮಾವನ್ನು ನಿರ್ಮಿಸಿ ನಟಿಸಿದ್ದಾರೆ. ಅವರ ಅನುಭವಗಳು ಅವರದ್ದೇ ಮಾತುಗಳಲ್ಲಿ ಕೇಳಿದರೆ ಚೆಂದ…
ನಿರೂಪಣೆ: ಸುಮ ಜಿ
ಸುಮನ್ ನಗರ್ಕರ್ ಮತ್ತು ಯುಗ ಕ್ರಿಯೇಷನ್ಸ್ ನಿರ್ಮಾಣ ಮಾಡಿರುವ ಮೊಟ್ಟಮೊದಲ ಹಾಲಿವುಡ್ ಕನ್ನಡ ಚಿತ್ರ ಬಬ್ರು. ಇಷ್ಟು ದಿನ ನಟನೆ ಆಯಿತು, ಈಗ ನಿರ್ಮಾಣದ ಒಂದು ಅನುಭವ ಸಹ ಆಗ್ತಿದೆ. ಇದು ಪೂರ್ತಿಯಾಗಿ ಅಮೆರಿಕಾದಲ್ಲಿ ಚಿತ್ರೀಕರಣಗೊಂಡಿರುವ ಒಂದು ಜರ್ನಿ ಚಿತ್ರ. ಇದರ ಜೊತೆಗೆ ಸಸ್ಪೆನ್ಸ್ ಕೂಡ ಇದೆ. ನಮ್ಮ ಲೈಫ್ನಲ್ಲಿ ಹಲವಾರು ಟ್ವಿಸ್ಟ್ ಹಾಗೂ ಟರ್ನ್ಸ್ ಇದ್ದೇ ಇರುತ್ತದೆ. ಹಾಗೆ ನಮ್ಮ ಇಬ್ಬರು ಸ್ಟ್ರೇಂಜರ್ಸ್ ಒಂದು ಜರ್ನಿ ಹೊರಡ್ತಾರೆ. ಹಾಗೆ ಹೊರಟಾಗ ಸ್ವಲ್ಪ ಹೊತ್ತು ಜರ್ನಿ ಸುಗಮವಾಗಿ ಇರುತ್ತೆ. ಅದಾದ ನಂತರ ಏನಾಗುತ್ತದೆ ಎಂಬುದನ್ನು ತೆರೆಯ ಮೇಲೆ ನೋಡಬೇಕು.
ಬಬ್ರು ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಸನಾ. ಈ ಸನಾ ಒಂದು ಮಧ್ಯ ವಯಸ್ಸಿನ ಮಹಿಳೆ. ಗಂಡನಿಂದ ಸಾಕಷ್ಟು ಅಬ್ಯೂಸ್ ಆಗಿರ್ತಾಳೆ. ಸ್ವಲ್ಪ ಫ್ರೀಡಂ ಬೇಕಿರುತ್ತದೆ. ಎಲ್ಲಾದ್ರೂ ಟ್ರಾವೆಲ್ ಹೋಗೋಣ ಎಂದು ಹೊರಡುತ್ತಾಳೆ. ಆಗ ಅವಳು ಒಂದು ಕಾರ್ ಮೂವಿಂಗ್ ಸರ್ವೀಗೆ ಹೋಗ್ತಾಳೆ. ಅಲ್ಲಿ ಅರ್ಜುನ್ ಅಂದ್ರೆ ಸಿನಿಮಾ ನಾಯಕನ ಪರಿಚಯವಾಗುತ್ತದೆ. ಇಬ್ಬರೂ ಒಂದೇ ಜಾಗಕ್ಕೆ ಹೋಗಬೇಕಿರುತ್ತದೆ. ಆದ್ರೆ ಕಾರ್ ಮಾತ್ರ ಒಂದೇ ಇರುತ್ತದೆ. ಇಬ್ಬರು ಯೋಚನೆ ಮಾಡಿ ಒಟ್ಟಿಗೆ ಜರ್ನಿ ಶುರುಮಾಡುತ್ತಾರೆ. ಈ ಪಾತ್ರ ಬಹಳ ನೈಜತೆಯಿಂದ ಕೂಡಿರುವಂತಹದ್ದು.
ಇಲ್ಲಿ ಚಿತ್ರಗಳನ್ನ ಮಾಡುವಾಗ ೫೦-೬೦ ಜನರ ಲಕ್ಸ್ಯುರಿ ಯೂನಿಟ್ ನಮ್ಮೊಂದಿಗಿರುತ್ತದೆ. ಅಷ್ಟು ಜನ ಸೇರಿ ಒಟ್ಟಿಗೆ ಕೆಲಸ ಮಾಡುತ್ತೇವೆ. ಆದರೆ ಅಮೆರಿಕಾದಲ್ಲಿ ಹೆಚ್ಚೆಂದರೆ ಸುಮಾರು ೧೦ ಜನ ಇರುತ್ತಿದ್ದೆವು. ನಾವೆಲ್ಲರೂ ಕಷ್ಟಪಟ್ಟು ಒಂದು ಕುಟುಂಬ ಸೇರಿ ಸಿನಿಮಾ ಮಾಡಿದಂತಿದೆ. ಆದರೆ ತೆರೆಮೇಲೆ ಎಲ್ಲೂ ನಿಮಗೆ ಕಾಣೋದಿಲ್ಲ. ಕಥೆ ಬಹಳ ಚೆನ್ನಾಗಿದೆ. ಒಂದು ಹಾಲಿವುಡ್ ಸಿನಿಮಾವನ್ನ ಕನ್ನಡದಲ್ಲಿ ನೋಡುವ ಅನುಭವ ಚಿತ್ರ ನೋಡಿದವರಿಗೆ ಸಿಗುತ್ತದೆ.
ನಾಯಕ ನಟನಾಗಿ ಮಾಹಿ ಹಿರೇಮಠ್, ಪ್ರಕೃತಿ ಕಶ್ಯಪ್, ಗಾನ ಭಟ್, ರೇ ಟುಸ್ಟಾಡೊ, ಸನ್ನಿ ಮೋಜ಼ಾ ಇವರಲ್ಲದೆ ಅನೇಕ ಅಮೆರಿಕನ್ ಹಾಗೂ ಸ್ಪ್ಯಾನಿಷ್ ನಟರಿದ್ದಾರೆ. ಹೀಗೆ ಹಲವು ಭಾಷೆಯ ನಟರು, ಹಲವು ಭಾಷೆ ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.
ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿಯವರ ಸಂಗೀತವಿದೆ. ಅವರು ಬೇರೆಯದ್ದೇ ರೀತಿಯ ಸಂಗೀತವನ್ನು ನೀಡೋದಕ್ಕೆ ಪ್ರಯತ್ನ ಮಾಡಿದ್ದಾರೆ. ಆಕೆಪ್ಪಲ್ಲಾ ಎಂಬ ಸಂಗೀತವನ್ನು ಇದಕ್ಕೆ ನೀಡಿದ್ದಾರೆ. ಸುಮಾರು ಶೇ. ೮೦ರಷ್ಟು ಹ್ಯೂಮನ್ ವಾಯ್ಸ್ನಿಂದ ಮ್ಯೂಸಿಕ್ ಕ್ರಿಯೇಟ್ ಆಗಿದ್ದು, ಶೇ. ೨೦ರಷ್ಟು ಇನ್ಸ್ಟ್ರುಮೆಂಟ್ಸ್ ಬಳಸಿ ಸಂಗೀತ ಮಾಡಿದ್ದಾರೆ. ಇದೊಂದು ಬಹಳ ವಿಭಿನ್ನವಾದ ಪ್ರಯತ್ನ. ಚಿತ್ರಮಂದಿರಕ್ಕೆ ಹೋಗಿ ನೋಡಿದಾಗಲೇ ಅದರ ಅನುಭವ ಪಡೆಯೋಕೆ ಸಾಧ್ಯ. ವಿಜಯ್ ಪ್ರಕಾಶ್, ಚಂದನ್ ಶೆಟ್ಟಿ, ಸಂಜಿತ್ ಹೆಗ್ಡೆ, ಅತಿಥಿ ಸಾಗರ್ ಅಲ್ಲದೇ ಪೂರ್ಣಚಂದ್ರ ತೇಜಸ್ವಿಯವರೂ ಸಹ ಒಂದು ಹಾಡನ್ನ ಹಾಡಿದ್ದಾರೆ. ಇನ್ನೂ ಒಂದು ವಿಶೇಷತೆ ಎಂದರೆ ಒಂದು ಸ್ಪ್ಯಾನಿಷ್ ಹಾಡು ಸಹ ಈ ಚಿತ್ರದಲ್ಲಿದೆ. ಮೆಕ್ಸಿಕೋನಲ್ಲಿ ಇರುವಂತಹ ಸ್ಪ್ಯಾನಿಷ್ ಸಿಂಗರ್ ಒಬ್ಬರು ನನ್ನ ಸ್ನೇಹಿತರ ಮೂಲಕ ನಾವು ಈ ರೀತಿಯ ಚಿತ್ರ ಮಾಡುತ್ತಿದ್ದೇವೆಂದು ತಿಳಿದು ಕಥೆ ಕೇಳಿ ಈ ಚಿತ್ರಕ್ಕೆಂದೇ ಒಂದು ಹಾಡನ್ನು ಅವರೇ ಕಂಪೋಸ್ ಮಾಡಿ ರೆಕಾರ್ಡ್ ಮಾಡಿ ಕಳಿಸಿದ್ದರು. ಆ ಹಾಡನ್ನು ಈ ಚಿತ್ರಕ್ಕೆ ಅಳವಡಿಸಿಕೊಂಡಿದ್ದೇವೆ.
ಸಾಮಾನ್ಯವಾಗಿ ಸಿನಿಮಾಗಳಲ್ಲಿ ಅಮೇರಿಕಾ ಅಂದ್ರೆ ಗೋಲ್ಡನ್ ಗೇಟ್ ಬ್ರಿಡ್ಜ್, ಟೈಮ್ಸ್ ಸ್ಕ್ವೇರ್ ರೀತಿಯ ಪ್ರಸಿದ್ಧ ಜಾಗಗಳನ್ನು ಅಥವಾ ಎತ್ತರೆತ್ತರದ ಬಿಲ್ಡಿಂಗ್ಗಳನ್ನ ಮಾತ್ರ ನೋಡಿರುತ್ತೀರಿ. ಆದ್ರೆ ನಮ್ಮ ಈ ಚಿತ್ರದಲ್ಲಿ ಈ ರೀತಿಯ ಯಾವುದೇ ಜಾಗಗಳನ್ನೂ ತೋರಿಸಿಲ್ಲ. ಯಾರೂ ನೋಡದೇ ಇರುವಂತಹ ಗ್ರ್ಯಾಂಡ್ ಕ್ಯಾನಿಯನ್, ಡೆತ್ ವ್ಯಾಲಿ, ರೆಡ್ವುಡ್ ಫಾರೆಸ್ಟ್ ಈ ತರಹದ ಜಾಗಗಳಲ್ಲಿ ಚಿತ್ರೀಕರಿಸಿ, ಇದು ಅಮೆರಿಕಾ ಅಂತ ತೋರಿಸೋ ಪ್ರಯತ್ನ ಮಾಡಿದ್ದೇವೆ. ಇದೊಂದು ಜರ್ನಿ ಸಿನಿಮಾ ಆಗಿರೋದ್ರಿಂದ ಈ ರೀತಿಯ ಸಾಕಷ್ಟು ಜಾಗಗಳನ್ನು ತೋರಿಸಿದ್ದೀವಿ. ಇದೊಂದು ವಿಷ್ಯುಯಲ್ ಟ್ರೀಟ್, ಆದ್ದರಿಂದ ಇದನ್ನ ದೊಡ್ಡ ಪರದೆ ಮೇಲೆ ನೋಡಬೇಕು.
ಈ ಚಿತ್ರದ ನಿರ್ದೇಶಕರು ಸುಜಯ್ ರಾಮಯ್ಯ. ಇವರು ಸಾಕಷ್ಟು ಕಿರು ಚಿತ್ರಗಳನ್ನ ನಿರ್ದೇಶಿಸಿದ್ದಾರೆ. ಇದು ಅವರ ಮೊದಲನೇ ಪೂರ್ಣಪ್ರಮಾಣದ ಚಿತ್ರ. ಈಗ ಸುಮಾರು ಮೂರು ವರ್ಷದ ಹಿಂದೆ ಪೈರಸಿಗೆ ಸಂಬಂಧಿಸಿದ ಗ್ರೇ ಎಂಬಂತಹ ಕಿರುಚಿತ್ರದಲ್ಲಿ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದೆವು, ಇದರಲ್ಲಿ ನಾನು ನಟಿಸಿದ್ದೆ. ಆನಂತರ ಇಬ್ಬರೂ ಸೇರಿ ಒಂದು ಸಿನಿಮಾ ಮಾಡೋ ಐಡಿಯಾ ಬಂತು.
ಡಿಸೆಂಬರ್ ೬ರಂದು ಚಿತ್ರ ತೆರೆಕಾಣಲಿದೆ. ಎಲ್ಲರೂ ಚಿತ್ರಮಂದಿರದಲ್ಲಿ ನೋಡಿದಾಗಲೇ ನಮಗೆ ಈ ರೀತಿಯ ಹೊಸ ಪ್ರಯೋಗಗಳನ್ನು ಮಾಡಲು ಸಾಧ್ಯ.