ಎಲ್ಲೆಲ್ಲಿಂದಲೋ ಬಂದು, ಒಂದೇ ಜಾಗಕ್ಕೆ ತಲುಪಬೇಕಿರುವ ಮೂವರು ಒಂದು ಕಾರಿನಲ್ಲಿ ಸೇರುತ್ತಾರೆ. ಒಬ್ಬೊಂಬರದ್ದೂ ಒಂದೊಂದು ಹಿನ್ನೆಲೆ, ಪ್ರತ್ಯೇಕ ಗುರಿ. ಆದರೆ ಆ ಕಾರು ಇವರನ್ನೆಲ್ಲ ತಲುಪಬೇಕಾದ ಗಮ್ಯ ಮುಟ್ಟಿಸುತ್ತದಾ ಅನ್ನೋದೇ ಕ್ಷಣಕ್ಷಣಕ್ಕೂ ಕಾಡುವ ಕುತೂಹಲ. ಆ ಕಾರಿನ ಹೆಸರೇ ಬಬ್ರು!
ಇದು ಕನ್ನಡದ ಮಟ್ಟಿಗೆ ಹಿರಿಯ ನಾಯಕನಟಿ ಎನಿಸಿಕೊಂಡಿರುವ ಸುಮನ್ ನಗರ್ ಕರ್ ನಟಿಸಿ ನಿರ್ಮಿಸಿರುವ ಸಿನಿಮಾ ಅನ್ನೋದೂ ಸೇರಿದಂತೆ ಸಂಪೂರ್ಣ ಅಮೆರಿಕದಲ್ಲೇ ಚಿತ್ರೀಕರಣಗೊಂಡಿರುವ ಕನ್ನಡ ಚಿತ್ರ ಎನ್ನುವತನಕ ಸಾಕಷ್ಟು ಬಗೆಯಲ್ಲಿ ಕ್ಯೂರಿಯಾಸಿಟಿ ಹುಟ್ಟಿಸಿದ್ದ ಚಿತ್ರ. ಈ ನಿಟ್ಟಿನಲ್ಲಿ ನೋಡಿದರೆ ಇದು ಸುಮನ್ ನಗರ್ ಕರ್ ಕಂಬ್ಯಾಕ್ ಸಿನಿಮಾ ಅನ್ನಿಸಿಕೊಳ್ಳಲು ನಿಜಕ್ಕೂ ಅರ್ಹತೆ ಹೊಂದಿದೆ ಮತ್ತು ಈ ವರೆಗಿನ ಅಮೆರಿಕ ಕಲ್ಪನೆಯನ್ನು ಬದಲಿಸುವಂತಿದೆ. ಯಾಕೆಂದರೆ ಬಹುಶಃ ಅಮೆರಿಕದಲ್ಲಿದ್ದೂ ಆ ದೇಶವನ್ನು ಸರಿಯಾಗಿ ನೋಡದವರೂ ಆಶ್ಚರ್ಯಗೊಳ್ಳುವಂತೆ ತೆರೆದಿಟ್ಟಿದ್ದಾರೆ.
ಸಿನಿಮಾದ ಮೊದಲ ಭಾಗ ಒಂಚೂರು ನಿಧಾನವಾ ಅಂದುಕೊಳ್ಳೋ ಹೊತ್ತಿಗೆ ಬಬ್ರೂ ಸ್ಪೀಡು ಪಡೆಯುತ್ತದೆ. ಇಂಥ ಥ್ರಿಲ್ಲರ್ ಸಿನಿಮಾಗಳು ಆರಂಭದಲ್ಲೇ ವೇಗ ಪಡೆದುಕೊಂಡರೆ ಮುಕ್ತಾಯ ಮಂಕಾಗುವ ಅಪಾಯ ಇರುತ್ತದೆ. ಬಹುಶಃ ಇದೇ ಕಾರಣಕ್ಕೇ ನಿರ್ದೇಶಕರು ಹಂತ ಹಂತವಾಗಿ ಪ್ರೇಕ್ಷಕರ ಕುತೂಹಲ ಕೆರಳಿಸುವ ತಂತ್ರವನ್ನಿಲ್ಲಿ ಅಳವಡಿಸಿದ್ದಾರೆ.
ಬ್ರೂ ಸಿನಿಮಾ ಭಾಗಶಃ ಪಯಣದಲ್ಲೇ ಸಾಗುವ ಕಥೆ. ಕಾರು, ಕಾಡು, ರಸ್ತೆ ಹೀಗೆ ಸಾಗುತ್ತಲೇ ಕಥೆ ಹೇಳಿ, ಆಗಾಗ ಬೆಚ್ಚಿಬೀಳಿಸುವ, ಅಚ್ಛರಿಗೊಳಿಸುವ, ಹೃದಯಕ್ಕೆ ಹತ್ತಿರವಾದ ದೃಶ್ಯಗಳ ಮೂಲಕ ಮುದ ನೀಡುತ್ತದೆ. ಖಡಾಖಂಡಿತವಾಗಿ ಇದು ಹೊಸ ಬಗೆಯ ಸಿನಿಮಾ. ನೋಡಿದ ಪ್ರತಿಯೊಬ್ಬರನ್ನೂ ಕಾಡುವ, ಹಿತಾನುಭವ ನೀಡುವ ಚಿತ್ರ. ಮೇಡಮ್ ಸುಮನ್ ಇನ್ನೂ ಅದೇ ಆಕರ್ಷಣೆ ಉಳಿಸಿಕೊಂಡಿದ್ದಾರೆ. ಮಹೀ ಹಿರೇಮಠ್ ಪ್ರಯತ್ನಿಸಿದರೆ ಒಳ್ಳೇ ನಟನಾಗಿ ನೆಲೆ ನಿಲ್ಲಬಹುದು ಅನ್ನೋದನ್ನು ತೋರಿಸಿದ್ದಾರೆ.
ಕಡಿಮೆ ತಂತ್ರಜ್ಞರಿದ್ದೂ ಅದ್ಭುತ ದೃಶ್ಯಗಳನ್ನು ಕಟ್ಟಿದ್ದಾರೆ. ಹಿನ್ನೆಲೆ ಸಂಗೀತ ಸಿನಿಮಾವನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದಿದೆ. ಒಟ್ಟಾರೆಯಾಗಿ ಬಬ್ರೂವನ್ನು ಒಮ್ಮೆ ನೋಡಿದರೆ ಚೆಂದ ಅನ್ನುವಷ್ಟರ ಮಟ್ಟಿಗೆ ಸಿನಿಮಾ ಹೊರಹೊಮ್ಮಿದೆ.