ಆ ಹುಡುಗರು ಎಲ್ಲ ರೀತಿಯಲ್ಲೂ ನೇರ್ಪಾಗೇ ಇರ್ತಾರೆ. ಫಸ್ಟ್ ಬೆಂಚಲ್ಲಿ ಕೂತು, ಓದೋದರಲ್ಲೂ ಮುಂದಿರುತ್ತಾರೆ. ಕ್ಲಾಸ್ ರೂಮಲ್ಲಿ ಲಾಸ್ಟ್ ಬೆಂಚಲ್ಲಿ ಕೂತ ಪುರಾತನ ವಿದ್ಯಾರ್ಥಿಗಳ ಹಾವಳಿ ತಡೆಯಲಾರದೇ ಅವರನ್ನು ಮುಂದಕ್ಕೆ ಕೂರಿಸುತ್ತಾರೆ. ಓದೋ ಮಕ್ಕಳು ಎಲ್ಲಿ ಕೂತರೂ ಓದುತ್ತಾರೆ ಅನ್ನೋ ನಂಬಿಕೆಯಿಂದ ಈ ಹುಡುಗರನ್ನು ಕಡೆಯ ಬೆಂಚಿಗೆ ಸ್ಥಾನ ಪಲ್ಲಟ ಮಾಡಲಾಗುತ್ತದೆ. ಅಲ್ಲಿಂದ ಮಕ್ಕಳ ಮನಸ್ಸು ಕೂಡಾ ಎಲ್ಲೆಲ್ಲೋ ಶಿಫ್ಟ್ ಆಗಲು ಶುರು ಮಾಡುತ್ತದೆ. ಹೇಗೆಲ್ಲಾ ಇದ್ದವರು ಹೇಗೇಗೋ ಆಡಲು ಆರಂಭಿಸುತ್ತಾರೆ. ಬೇಡದ ಸಾವಾಸಕ್ಕೆ ಬೀಳುತ್ತಾರೆ. ಎಲ್ಲೆಂದರಲ್ಲಿ ಕುಡಿದು ಮಜಾ ಮಾಡುತ್ತಾರೆ. ಇದು ʻಬ್ಯಾಕ್ ಬೆಂಚರ್ಸ್ ಸ್ಟೋರಿʼ!
ಯಾವುದೇ ಒಂದು ಸಿನಿಮಾಗೆ ಟಾರ್ಗೆಟೆಡ್ ಆಡಿಯನ್ಸ್ ಅಂತಾ ಇರುತ್ತಾರೆ. ಇದು ಇಂಥಾ ವರ್ಗವನ್ನೇ ಗಮನದಲ್ಲಿರಿಸಿಕೊಂಡು ರೂಪಿಸಿರುವ ಸಿನಿಮಾ ಅನ್ನೋದು ಅದರ ಅರ್ಥ. ಕಿರಿಕ್ ಪಾರ್ಟಿ, ಹಾಸ್ಟೆಲ್ ಹುಡುಗರು ಸಿನಿಮಾಗಳೆಲ್ಲಾ ಇದೇ ಜಾನರಿಗೆ ಸೇರುವಂಥದ್ದು. ಬಹುತೇಕ ಲಾಸ್ಟ್ ಬೆಂಚರ್ಸ್ ಕೂಡಾ ಅದೇ ವರ್ಗಕ್ಕೆ ಸೇರಿದ್ದು. ಯಾರೆಲ್ಲಾ ಕಿರಿಕ್ ಪಾರ್ಟಿ ಸಿನಿಮಾವನ್ನು ಇಷ್ಟ ಪಟ್ಟಿದ್ದರೋ ಅದೇ ವರ್ಗ ಲಾಸ್ಟ್ ಬೆಂಚರ್ಸನ್ನೂ ಮುಲಾಜಿಲ್ಲದೇ ಸ್ವೀಕರಿಸುತ್ತಾರೆ.
ಪ್ರತಿಯೊಬ್ಬರಿಗೂ ವಿದ್ಯಾರ್ಥಿ ಜೀವನ ಅನ್ನೋದು ಬಹುಮುಖ್ಯ. ಜೀವ ಇರೋ ತನಕವೂ ನೆನಪಿನಲ್ಲುಳಿಯುವ, ಕಾಡುವ, ಸ್ವತಃ ನಾಚಿಕೆಗೆ ಒಳಪಡಿಸುವ, ಘಟನೆಗಳು, ಅಚಾತುರ್ಯಗಳು, ಯಡವಟ್ಟುಗಳೆಲ್ಲಾ ಆ ಹೊತ್ತಿನಲ್ಲಿ ಘಟಿಸಿರುತ್ತವೆ. ಆ ಎಲ್ಲ ಘಟನೆಗಳನ್ನೂ ಇಲ್ಲಿ ಕಣ್ಮುಂದೆ ತಂದು ನಿಲ್ಲಿಸಿದ್ದಾರೆ. ಮೇಲ್ನೋಟಕ್ಕೆ ಇದು ಕಾಲೇಜು ಹುಡುಗರನ್ನಷ್ಟೇ ಗಮನದಲ್ಲಿರಿಸಿಕೊಂಡು ರೂಪಿಸಿರುವ ಚಿತ್ರ ಅಂತ ಅನ್ನಿಸುತ್ತದೆ ನಿಜ. ಆದರೆ, ಸಿನಿಮಾವನ್ನು ನೋಡನೋಡುತ್ತಾ ಹಿರಿಯ ಮತ್ತು ವಯಸ್ಸು ಮೀರಿದ ಪ್ರೇಕ್ಷಕರೂ ತಮ್ಮ ಹಳೇ ದಿನಗಳಿಗೆ ಜಾರಿಬಿಡುತ್ತಾರೆ. ತಾವು ಮಾಡಿದ ತುಂಟಾಟ, ಪೋಲಿ ಕೆಲಸಗಳೆಲ್ಲಾ ನೆನಪಿಗೆ ತರಿಸುತ್ತದೆ.
ಲಾಸ್ಟ್ ಬೆಂಚರ್ಸ್ ಆರಂದ ದೃಶ್ಯದಿಂದ ಹಿಡಿದು ಕಟ್ಟ ಕಡೆಯ ದೃಶ್ಯದ ತನಕ ಮನರಂಜಿಸುತ್ತದೆ. ಹಾಗೆ ನೋಡಿದರೆ, ಇಲ್ಲಿ ತೀರಾ ಗಟ್ಟಿ ಕಥೆಯಾಗಲಿ, ತೂಕದ ಕಂಟೆಂಟಾಗಲೀ ಇಲ್ಲ. ಮನುಷ್ಯ ಸಹಜ ತೀಟೆಗಳೇ ಇಲ್ಲಿ ರಂಜಿಸುತ್ತಾ ಹೋಗುತ್ತದೆ. ಯಾವುದೋ ಕೇಸಿನಲ್ಲಿ ಸಿಕ್ಕಿಬಿದ್ದ ಹುಡುಗರು ಹೇಳಿಕೊಳ್ಳುವ ತಮ್ಮದೇ ಲೈಫ್ ಸ್ಟೋರಿಯಂತೆ ನಿರೂಪಿತಗೊಂಡಿರುವ ಬ್ಯಾಕ್ ಬೆಂಚರ್ಸ್ ಐದಾರು ಜನ ಹುಡುಗರ ಸಹಜ ಅಭಿನಯ, ತಮಾಷೆಯ ಪ್ರಸಂಗಗಳಿಂದ ಮಜಾ ಕೊಡುತ್ತದೆ. ಸುಚೇಂದ್ರ ಪ್ರಸಾದ್ ಇದುವರೆಗೂ ಮಾಡದ ಪಾತ್ರವನ್ನಿಲ್ಲಿ ನಿಭಾಯಿಸಿದ್ದಾರೆ. ಸುಚೇಂದ್ರ ಪ್ರಸಾದ್ ಇಷ್ಟೊಂದು ನಗಿಸಲು ಹೇಗೆ ಸಾಧ್ಯವಾಯಿತು ಅನ್ನೋದು ಎಲ್ಲರಲ್ಲೂ ಅನುಮಾನ ಹುಟ್ಟುತ್ತದೆ. ರಂಜನ್, ಜತಿನ್ ಆರ್ಯನ್, ಆಕಾಶ್, ಶಶಾಂಕ್ ಸಿಂಹ, ಮಾನ್ಯ, ಅನುಶಾ, ವನಿತಾ, ನಮಿತಾ, ಗೌರವ್ ಸೇರಿದಂತೆ ಬ್ಯಾಕ್ ಬೆಂಚರ್ಸ್ ಹುಡುಗರ ಪಾತ್ರದಲ್ಲಿ ಮಾಡಿರುವ ಪ್ರತಿಯೊಬ್ಬರೂ ಅದ್ಭುತವಾಗಿ ನಟಿಸಿದ್ದಾರೆ. ಎಲ್ಲ ಹುಡುಗರೂ ಚಿತ್ರರಂಗದಲ್ಲಿ ನೆಲೆ ನಿಲ್ಲೋದು ಖಚಿತ.
ಹಾಗೆ ನೋಡಿದರೆ ಈ ಚಿತ್ರದ ನಿರ್ದೇಶಕ ಈ ಹಿಂದೆ ಪೆರೋಲ್, ಅಮೃತವಾಹಿನಿ, ಬರ್ಫಿ ಮತ್ತು ತ್ರಿಕೋನ ಎನ್ನುವ ನಾಲ್ಕು ಚಿತ್ರಗಳನ್ನು ನೀಡಿದ್ದವರು. ಆ ಸಿನಿಮಾಗಳ ಒಂದಿಷ್ಟೂ ನೆರಳು ಇಲ್ಲಿಲ್ಲ. ಸಂಪೂರ್ಣ ಬೇರೆಯದ್ದೇ ಸಬ್ಜೆಕ್ಟನ್ನು ಆಯ್ಕೆ ಮಾಡಿಕೊಂಡು, ಅಷ್ಟೇ ಲವಲವಿಕೆಯಿಂದ ಸಿನಿಮಾ ಕಟ್ಟಿಕೊಟ್ಟಿದ್ದಾರೆ ಮತ್ತು ಗೆದ್ದಿದ್ದಾರೆ. ಇಡೀ ಸಿನಿಮಾದ ಗುಣಮಟ್ಟ ಈ ಮಟ್ಟಕ್ಕೆ ಬರಲು ಕಾರಣ ಛಾಯಾಗ್ರಾಹಕ ಮನೋಹರ್ ಜೋಷಿ ಅನ್ನೋದರಲ್ಲಿ ಡೌಟೇ ಇಲ್ಲ. ನಕುಲ್ ಅಭಯಂಕರ್ ಹಿನ್ನೆಲೆ ಸಂಗೀತ ಮತ್ತು ರಂಜನ್ ಮತ್ತು ಅಮರ್ ಗೌಡ ಸಂಕಲನವೂ ಸಿನಿಮಾವನ್ನು ನೋಡುಗರ ಮನಸ್ಸಿಗೆ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಒಟ್ಟಾರೆ ಪರಿಪೂರ್ಣ ಮನರಂಜನೆ ಬೇಕು ಅನ್ನಿಸಿದರೆ ಸೀದಾ ಹೋಗಿ ಬ್ಯಾಕ್ ಬೆಂಚರ್ಸ್ ನೋಡಬಹುದು…!
No Comment! Be the first one.