ಕಾಲೇಜು ದಿನಮಾನದ ಕಥೆಗಳೆಂದರೇನೇ ಕನ್ನಡದ ಪ್ರೇಕ್ಷಕರು ರೋಮಾಂಚಿತರಾಗುತ್ತಾರೆ. ಈ ಕಾರಣದಿಂದಲೇ ಕಾಲೇಜು ಕೇಂದ್ರಿತ ಕಥೆಗಳು ಆಗಾಗ ಗೆಲುವು ದಾಖಲಿಸುತ್ತವೆ. ಹಾಗಿರುವಾಗ, ಈವರೆಗೆ ಬಂದಿರುವ ಅಷ್ಟೂ ಸಿನಿಮಾಗಳ ಛಾಯೆಯಿಲ್ಲದ, ಹೊಸತನವನ್ನೇ ಆತ್ಮವಾಗಿಸಿಕೊಂಡಿರುವ ಸಿನಿಮಾವೊಂದು ತೆರೆಗಾಣಲು ಸಜ್ಜಾಗಿದೆಯೆಂದರೆ ಅದರತ್ತ ಕುತೂಹಲ ಮೂಡಿಕೊಳ್ಳದಿರಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಪ್ರೇಕ್ಷಕರನ್ನೆಲ್ಲ ಹಂತ ಹಂತವಾಗಿ ಸೆಳೆಯುತ್ತಾ ಸಾಗಿ ಬಂದಿರುವ ಚಿತ್ರ `ಬ್ಯಾಕ್ ಬೆಂಚರ್ಸ್’. ಇದೀಗ ಬಿಡುಗಡೆಗೆ ತಯಾರಾಗಿ ನಿಂತಿರುವ ಈ ಚಿತ್ರದ ಟೀಸರ್ ಒಂದು ಬಿಡುಗಡೆಗೊಂಡಿದೆ. ಅದರಲ್ಲಿರೋ ದೃಶ್ಯಗಳು, ಕಾಮಿಡಿ ಪಂಚುಗಳಿಗೆ ಪ್ರೇಕ್ಷಕರೆಲ್ಲ ಮನಸೋತಿದ್ದಾರೆ!
ಇದು ಬಿ.ಆರ್ ರಾಜಶೇಖರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ನಿರ್ಮಾಪಕರಾಗಿ, ನಿರ್ದೇಶಕರಾಗಿ ಸಾಕಷ್ಟು ಹೊಸತನದ ಸಿನಿಮಾಗಳ ರೂವಾರಿಯಾಗಿರುವವರು ರಾಜಶೇಖರ್. ಪೂರ್ತಿಯಾಗಿ ಹೊಸಬರ ತಂಡವನ್ನಿಟ್ಟುಕೊಂಡು, ಎಲ್ಲರನ್ನೂ ಸೆಳೆಯಬಲ್ಲ ಯುವ ಆವೇಗದ ಕಥೆಯೊಂದಿಗೆ ಅವರು ನಿರ್ದೇಶನ ಮಾಡಿರುವ ಚಿತ್ರ ಬ್ಯಾಕ್ ಬೆಂಚರ್ಸ್. ಈಗಾಗಲೇ ಹಾಡುಗಳ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದ ಬ್ಯಾಕ್ ಬೆಂಚರ್ಸ್ ಇದೀಗ ಟೀಸರ್ ಮೂಲಕ ನಗುವಿನ ಕಚಗುಳಿ ಇಟ್ಟಿದ್ದಾರೆ. ಆ ದೃಶ್ಯಗಳು, ಕಾಮಿಡಿ ಟೈಮಿಂಗ್ ಮೂಲಕವೇ ಈ ಸಿನಿಮಾದಲ್ಲೇನೋ ಇದೆ ಎಂಬ ಭರವಸೆ ಮೂಡಿಸುವಲ್ಲಿ ಚಿತ್ರತಂಡ ಯಶಸ್ಸು ಕಂಡಿದೆ. ಈ ಟೀಸರ್ ಬಿಡುಗಡೆಗೊಂಡು ಅತ್ಯಂತ ಕಡಿಮೆ ಅವಧಿಯಲ್ಲಿಯೇ ಹೆಚ್ಚೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಿದೆ. ಸಾಮಾಜಿಕ ಜಾಲತಾಣದಲ್ಲಂತೂ “ಬ್ಯಾಕ್ ಬೆಂಚರ್ಸ್” ಕ್ರೇಜ್ ಸೃಷ್ಟಿಯಾಗಿ ಬಿಟ್ಟಿದೆ. ತಾನೇ ತಾನಾಗಿ ಈ ದೃಶ್ಯಗಳು ಸಕಾರಾತ್ಮಕವಾಗಿ ಟ್ರೋಲಾಗಲಾರಂಭಿಸಿವೆ. ನಿಖರವಾಗಿ ಹೇಳಬೇಕೆಂದರೆ, ಈ ಟೀಸರ್ ಗೆ ಸಿಗುತ್ತಿರುವ ಅಭೂತಪೂರ್ವ ಪ್ರತಿಕ್ರಿಯೆ ಚಿತ್ರತಂಡಕ್ಕೆ ಮತ್ತಷ್ಟು ಹುರುಪು ತುಂಬಿದೆ. ಕುತೂಹಲಕಾರಿಯಾದ ಕಂಟೆಂಟಿನೊಂದಿಗೆ, ನಾಜೂಕಾಗಿ ಕಾಮಿಡಿ ಬೆರೆಸಿ ಈ ಸಿನಿಮಾವನ್ನು ರೂಪಸಿದ್ದಾರೆಂಬ ಸ್ಪಷ್ಟ ಅಂದಾಜನ್ನು ಸದರಿ ಟೀಸರ್ ರವಾನಿಸಿದೆ. ಯುವ ತಲೆಮಾರು ಟೀಸರ್ ಅನ್ನು ಸಂಭ್ರಮಿಸುತ್ತಿರುವ ರೀತಿಯೇ ದೊಡ್ಡ ಗೆಲುವಿನ ಮುನ್ಸೂಚನೆಯಂತೆ ಕಾಣಿಸುತ್ತಿದೆ.
ಈ ಹಿಂದೆ ಹಂತ ಹಂತವಾಗಿ “ಬ್ಯಾಕ್ ಬೆಂಚರ್ಸ್” ಚಿತ್ರದ ಹಾಡುಗಳು ಬಿಡುಗಡೆಗೊಂಡಿದ್ದವು. ಸಾಹಿತ್ಯ ಮಾತ್ರವಲ್ಲದೇ ದೃಶ್ಯದ ಮೂಲಕವೂ ಅವು ಪ್ರೇಕ್ಷಕರನ್ನು ಆವರಿಸಿಕೊಂಡಿದ್ದವು. ಅವುಗಳಲ್ಲಿ ಒಟ್ಟಾರೆ ಕಥೆಯ ಹೊಸತನ ಸ್ಪಷ್ಟವಾಗಿಯೇ ಕಾಣಿಸಿತ್ತು. ಆ ಮೂಲಕ ಸೃಷ್ಟಿಯಾಗಿದ್ದ ಕುತೂಹಲ, ಈ ಟೀಸರ್ ನೊಂದಿಗೆ ಮತ್ತಷ್ಟು ತೀವ್ರಗೊಂಡಿದೆ. ಈಗಾಗಲೇ ಕಾಲೇಜು ಕೇಂದ್ರಿತವಾದ ಒಂದಷ್ಟು ಸಿನಿಮಾಗಳು ಬಂದಿವೆ. ಗೆಲುವನ್ನೂ ಕಂಡಿವೆ. ಆದರೆ, ಬ್ಯಾಕ್ ಬೆಂಚರ್ಸ್ ಕಥೆಯನ್ನು ನಿರ್ದೇಶಕ ರಾಜಶೇಖರ್ ಅಂದಾಜಿಗೆ ನಿಲುಕದಂತೆ ರೂಪಿಸಿದ್ದಾರಂತೆ. ಕಾಲೇಜು ಕಥೆಯೆಂದಾಕ್ಷಣ ನಿಮ್ಮಲ್ಲೊಂದು ಕಲ್ಪನೆಯ ಚಿತ್ರಣ ಮೂಡಿಕೊಂಡಿದ್ದರೆ, ಅದಕ್ಕೆ ಮೀರಿದ ದೃಷ್ಯರೂಪದ ಅಚ್ಚರಿಗಳು ಎಲ್ಲರನ್ನೂ ಚಕಿತಗೊಳಿಸಲು ಕಾದಿವೆ.
ಒಟ್ಟಾರೆಯಾಗಿ, ಈಗ ಬಿಡುಗಡೆಗೊಂಡಿರುವುದು ನಿಜಕ್ಕೂ ಪ್ರಾಮಿಸಿಂಗ್ ಟೀಸರ್ ಎಂಬ ಅಭಿಪ್ರಾಯ ಪ್ರೇಕ್ಷಕರ ಕಡೆಯಿಂದಲೇ ಹೊಮ್ಮುತ್ತಿದೆ. ಪಿಪಿ ಪ್ರೊಡಕ್ಷನ್ಸ್ ಅಡಿಯಲ್ಲಿ ಖುದ್ದು ರಾಜಶೇಖರ್ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ, ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಳೀಕರ್, ಮಾನ್ಯ ಗೌಡ, ಕುಂಕುಮ್ ಹೆಚ್, ಅನುಷಾ ಸುರೇಶ್, ವಿಯೋಮಿ ವನಿತಾ, ಮನೋಜ್ ಶೆಟ್ಟಿ, ನಮಿತಾ ಗೌಡ, ವಿಕಾಸ್, ರನ್ನ, ವಿಜಯ್ ಪ್ರಸಾದ್, ಚತುರ್ಥಿ ರಾಜ್, ಗೌರವ್ ಮುಂತಾದವರ ತಾರಾಗಣವಿದೆ. ನಕುಲ್ ಅಭಯಂಕರ್ ಸಂಗೀತ ನಿರ್ದೇಶನ, ಮನೋಹರ್ ಜೋಶಿ ಛಾಯಾಗ್ರಹಣ, ರಂಜನ್ ಮತ್ತು ಅಮರ್ ಗೌಡ ಸಂಕಲನ ಈ ಚಿತ್ರಕ್ಕಿದೆ.
“ಕಿರಿಕ್ ಪಾರ್ಟಿ” ಹೊಸ ತಂಡ ಕಟ್ಕೊಂಡ್ ಬಂದ್ರು. ಆಮೇಲೆ “ಹಾಸ್ಟೆಲ್ ಹುಡುಗ್ರು” ಬಂದ್ರು, ಈಗ ನಾವು ಹೊಸ ತಂಡ ಕಟ್ಕೊಂಡು ಬರ್ತಾ ಇದೀವಿ ಅಂತಿದ್ದಾರೆ “ಬ್ಯಾಕ್ ಬ್ಯಾಂಚರ್ಸ್”.
Leave a Reply
You must be logged in to post a comment.