ದುನಿಯಾ ಸೂರಿ ನಿರ್ದೇಶನದಲ್ಲಿ ಒಂದು ಸಿನಿಮಾ ಹಿಟ್ ಆಗಿ, ಅದರ ನಂತರ ಬಂದ ಚಿತ್ರ ಮುಗ್ಗರಿಸಿರುತ್ತದೆ. ಸತತವಾಗಿ ಹಿಟ್ಟು, ಫ್ಲಾಪುಗಳನ್ನು ಸಮಾನವಾಗಿ ನೀಡುತ್ತಾ ಬಂದಿರುವ ನಿರ್ದೇಶಕ ಸೂರಿ. ಸುಕ್ಕಾ ಸೂರಿಯ ಈ ಹಿಂದಿನ ಸಿನಿಮಾ ಪಾಪ್ ಕಾರ್ನ್ ಮಂಕಿ ಟೈಗರ್ ಭಯಾನಕವಾಗಿ ಸೋತಿತ್ತು. ಒಂದೇ ಏಟಿಗೆ ಜೀರ್ಣಿಸಿಕೊಳ್ಳಲಾರದಷ್ಟು ಹೊಸತನವನ್ನು ತುಂಬಿದ್ದ ಕಾರಣಕ್ಕೋ ಏನೋ ಮಂಕಿ ಮಕಾಡೆ ಮಲಗಿತ್ತು.
ಈ ಲೆಕ್ಕದಲ್ಲಿ ನೋಡಿದರೆ ಈ ಸಲ ʻಬ್ಯಾಡ್ ಮ್ಯಾನರ್ಸ್ʼ ಗೆಲ್ಲಲೇಬೇಕು!
ಅಂಬರೀಷ್ ಪುತ್ರ ಅಭಿಷೇಕ್ ನಟಿಸಿದ್ದ ಮೊದಲ ಸಿನಿಮಾ ಕೂಡಾ ಶೋಚನೀಯ ಸೋಲು ಕಂಡಿತ್ತು. ಬೇರೆ ಯಾವುದೋ ಹೀರೋಗೆ ಮಾಡಿದ್ದ ಕಥೆಯನ್ನು ನಿರ್ದೇಶಕ ನಾಗಶೇಖರ್ ಅಭಿಷೇಕ್ ಮೇಲೆ ಪ್ರಯೋಗಿಸಿದ್ದರು. ಈ ಹುಡುಗನ ಅಜಾನುಬಾಹು ದೇಸಹಕ್ಕೂ ಆ ಕಥೆಕೂ ಒಂದಿಷ್ಟೂ ಮ್ಯಾಚ್ ಆಗಿರಲಿಲ್ಲ. ಪ್ರತಿಫಲವಾಗಿ ʻಅಮರ್ʼ ಚಿತ್ರ ಅಡ್ಡಡ್ಡ ಬಿದ್ದುಕೊಂಡಿತು.
ಈ ಸಲ ಅಭಿಷೇಕ್ ಮತ್ತು ಸೂರಿ ಇಬ್ಬರೂ ಒಂದಾಗಿದ್ದಾರೆ. ಕನ್ನಡದ ಮಟ್ಟಿಗೆ ಯಾರನ್ನು ಬೇಕಾದರೂ ಗೆಲ್ಲಿಸಬಲ್ಲ ನಿರ್ದೇಶಕ ಸೂರಿ. ಇದು ಆರಂಭದಿಂದ ಇಲ್ಲೀತನಕ ಸಾಬೀತಾಗುತ್ತಲೇ ಬಂದಿದೆ. ಬ್ಲಾಕ್ ಕೋಬ್ರಾ ವಿಜಯ್ ಅವರನ್ನು ಏಕಾಏಕಿ ಸ್ಟಾರ್ ಮಾಡಿದ್ದು ಇದೇ ಸೂರಿ ಅಲ್ಲವಾ? ನಟನೆ ಬಗ್ಗೆ ಏನೂ ಗೊತ್ತಿಲ್ಲದ ಹುಡುಗನನ್ನು ಹೀರೋ ಮಾಡಿ ʻಕೆಂಡಸಂಪಿಗೆʼಯನ್ನು ಗೆಲ್ಲಿಸಿದ್ದೂ ಸೂರಿ ತಾನೆ? ಶಿವಣ್ಣ, ಅಪ್ಪುರಂಥ ಸೂಪರ್ ಸ್ಟಾರ್ಗಳಾದರೂ ಸರಿ, ಹೊಸ ಹುಡುಗರಾದರೂ ಓಕೆ ತಾನು ಸೃಷ್ಟಿಸಿದ ಕಥೆ, ಪಾತ್ರಗಳಿಗೆ ಜೀವ ಕೊಡಬಲ್ಲ ಕಸುಬುದಾರ ನಿರ್ದೇಶಕ ಸೂರಿ.
ಸದ್ಯ ಮಂಡ್ಯದ ಶುಗರ್ ಫ್ಯಾಕ್ಟರಿಯಲ್ಲಿ ಬ್ಯಾಡ್ ಮ್ಯಾನರ್ಸ್ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಸಕ್ಕರೆ ಕಾರ್ಖಾನೆಯ ಒಳಗಡೆ ಬ್ರಿಗೇಡ್ ರಸ್ತೆಯನ್ನು ಹೋಲುವ ಸ್ಟ್ರೀಟ್ ಸೆಟ್ ನಿರ್ಮಿಸಿದ್ದಾರಂತೆ. ಅದನ್ನು ನೋಡಿದವರ ಪ್ರಕಾರ ಈ ವರೆಗೂ ಇಷ್ಟು ಹೊಸ ಬಗೆಯ ಸ್ಟ್ರೀಟ್ ಸೆಟ್ಟನ್ನು ಕನ್ನಡದ ಯಾವ ಸಿನಿಮಾದಲ್ಲೂ ಸೃಷ್ಟಿಸಿಲ್ಲವಂತೆ. ಕಳೆದ ಇಪ್ಪತ್ತು ದಿನಗಳಿಂದ ಇದೇ ಸೆಟ್ಟಿನಲ್ಲಿ ಶೂಟಿಂಗ್ ನೆರವೇರುತ್ತಿದ್ದು, ಅಲ್ಲಿ ಯಾವ ಬಗೆಯ ದೃಶ್ಯಗಳು ಮೂಡಿಬರುತ್ತಿರಬಹುದು ಅನ್ನೋದು ಎಲ್ಲರ ಕುತೂಹಲವಾಗಿದೆ.
ಸೋಲು ಗೆಲುವಿನಾಚೆಗೆ ಸದಾ ಹೊಸತನಕ್ಕೆ ತುಡಿಯುವ ಡೈರೆಕ್ಟರ್ ಸೂರಿ. ಬ್ಯಾಡ್ ಮ್ಯಾನರ್ಸ್ ಮೂಲಕ ಅಂಬರೀಶ್ ಮಗನನ್ನು ಹೀರೋ ಆಗಿ ನಿಲ್ಲಿಸಬೇಕಾದ ಮಹತ್ತರ ಜವಾಬ್ದಾರಿಯ ಜೊತೆಗೆ ತಾವೂ ಗೆಲ್ಲಬೇಕಾದ ಅನಿವಾರ್ಯತೆ ಇದೆ…!
No Comment! Be the first one.