• ಕುಮಾರ್‌ ಶೃಂಗೇರಿ

ನಗರ ಪ್ರದೇಶದ ಫುಟ್‌ ಪಾತ್‌ ಗಾಡಿ ವ್ಯಾಪಾರಿಗಳೇ ಬಡವರ ಅನ್ನದಾತರು ಅಂತಾ ನಂಬಿದ ಹುಡುಗ. ಅಪ್ಪ ಆಟೋ ಡ್ರೈವರ್‌. ಬಯಸಿದ ಕೆಲಸ ಸಿಕ್ಕಿರೋದಿಲ್ಲ. ಅವರಿವರ ಕೈ ಕೆಳಗೆ ಗುಲಾಮರಂತೆ ಕೆಲಸ ಮಾಡುವುದಕ್ಕಿಂತಾ ತಾನೇ ಒಂದು ಬ್ರಾಂಡ್ ಆಗಬೇಕೆಂದು ಅಂದುಕೊಂಡಿರುತ್ತಾನೆ. ಕಷ್ಟಪಟ್ಟು ಅನ್ನ ಹುಟ್ಟಿಸಿಕೊಂಡು ತಿನ್ನುವ ವರ್ಗವೆಂದರೆ ಹೀರೋಗೆ ಅಪಾರ ಪ್ರೀತಿ ಕಾಳಜಿ.

ಎಲ್ಲರ ಪ್ರೀತಿ ಗಳಿಸಿದವನ ಮನಸು ಗಿಲ್ಲಲು ಬಂದವಳು ಮಹಿಳಾ ರಾಜಕಾರಣಿ ‌ ಮಗಳು. ಬಯಸಿದ ಪ್ರೀತಿ ದೂರಾದಾಗ ಹೀರೋ ಹತ್ರಿವಾಗೋದು ಎಣ್ಣೆ ಬಾಟಲಿಗೆ. ಯಾವಾಗ ಹುಡುಗಿ ಕೈಕೊಟ್ಟೋಗ ಇಡೀ ಪ್ರಂಪಂಚವೇ ಮೋಸ ಅನ್ನೋ ಭಾವ ಆವರಿಸುತ್ತದೆ. ಅಷ್ಟೊತ್ತಿಗೆ ಬಡವರ ಅನ್ನದ ತಟ್ಟೆಗೆ ಕೈಯಿಡುವ ಖೂಳರನ್ನು ಮಟ್ಟಹಾಕಲು ಹೋಗುತ್ತಾನೆ. ಅವರ ದಾದಾಗಿರಿಯನ್ನು  ತಡೆಯಲು ಹೋಗಿ ತಾನೇ ಆ ಗುಂಪಿಗೆ ಸೇರಿ, ಅಲ್ಲಿರುವವರಿಗೆ ತನ್ನ ಜೀವನಗಾಥೆಯನ್ನು ಹೇಳುತ್ತಾ ಅವರೊಳಗ್ಗೊಬ್ಬನಾಗುತ್ತಾನೆ. ಈ ಪೊರ್ಕಿ ಗುಂಪಿನಲ್ಲಿ ಒಬ್ಬೊಬ್ಬರದ್ದು ಒಂದೊಂದು ಇತಿಹಾಸವಿರುತ್ತದೆ. ಅಪ್ಪಾಮ್ಮ ಇಟ್ಟ ಹೆಸರಿನ ಜೊತೆಗೊಂಡು ಅಡ್ಡಹೆಸರೂ ತಗುಲುಕೊಂಡಿರುತ್ತದೆ. ಹೆಚ್ಚೂ ಕಮ್ಮಿ ಪಾತ್ರ ಪರಿಚಯವೇ ಮೊದಲರ್ಧವನ್ನು ಆವರಿಸಿಕೊಳ್ಳುತ್ತದೆ.

ಅಸಲಿಗೆ ಹೀರೋಗೆ ಬಡವ ರಾಸ್ಕಲ್‌ ಎನ್ನುವ ಹೆಸರು ಯಾಕೆ ಬಂತು ಅನ್ನೋದು ಎರಡನೇ ಭಾಗದಲ್ಲಿ ತೆರೆದುಕೊಳ್ಳುತ್ತದೆ. ಬಡತನ ಮಗನ ಬೆಳವಣಿಗೆಗೆ ಅಡ್ಡಿಯಾಗಬಾರದು, ಬಡತನದಲ್ಲೇ ಶ್ರೀಮಂತನಾಗಿ ಬೆಳೆಯಬೇಕು ಅನ್ನೋದು ತಂದೆ ತಾಯಿಯ ಬಯಕೆ. ಮಗ ಏನೇ ಮಾಡಿದರೂ ಒಳ್ಳೇದನ್ನೇ ಮಾಡುತ್ತಾನೆಂಬ ಅಚಲ ನಂಬಿಕೆ. ಒಂದಲ್ಲಾಒಂದು ದಿನ ದೊಡ್ಡ ಎತ್ತರಕ್ಕೇರುತ್ತಾನೆ ಎನ್ನುವ ಆಶಯದಲ್ಲೇ ಮಗನನ್ನು ಬೆಳೆಸುವ ರೀತಿ ಎಂಥವರ ಮನಸ್ಸಿಗೂ ಹತ್ತಿರವಾಗುತ್ತದೆ. ಭಾವುಕ ಕ್ಷಣಗಳು ಎದುರಾಗುತ್ತವೆ.  ಮೇಲ್ನೋಟಕ್ಕೆ ನಡುದಾರಿಯಲ್ಲಿ ಹುಡುಗಿ ಕೈಬಿಟ್ಟು ಹೋದಂತೆ ಅನ್ನಿಸಿದರೂ, ಅದರ ಹಿಂದೆ ಅವಳಮ್ಮನ ʻಕತ್ತರಿ ಪ್ರಯೋಗʼದ ಕ್ರೌರ್ಯ ಅಡಗಿರುತ್ತದೆ.

ಬಡವ ರಾಸ್ಕಲ್‌ ಸಿನಿಮಾದ ಕಥೆಯ ಎಳೆಯನ್ನು ಒಂದೇ ಗುಕ್ಕಿಗೆ ಸಲೀಸಾಗಿ ಹೇಳಿಬಿಡಲು ಸಾಧ್ಯವಿಲ್ಲ. ಹೇಳಿಕೊಳ್ಳುವಂತಾ ಕತೆ ಕೂಡಾ ಚಿತ್ರದಲ್ಲಿಲ್ಲ. ಆದರೆ, ಇಡೀ ಸಿನಿಮಾವನ್ನು ನಿರೂಪಿಸಿರುವ ಧಾಟಿಯಲ್ಲೇ ಒಂದು ಬಗೆಯ ಆತ್ಮೀಯ ಭಾವ ಆವರಿಸಿಕೊಳ್ಳುತ್ತದೆ. ನಾವು ಕಂಡ ನಮ್ಮ ಅಕ್ಕಪಕ್ಕದವರ, ನಮ್ಮ ಅಣ್ತಮ್ಮಂದಿರ ಬದುಕನ್ನೇ ತೆರೆ ಮೇಲೆ ಕಾಣುವಂತೆ ಫೀಲ್‌ ಆಗುತ್ತದೆ.

ನಿರ್ದೇಶಕ ಶಂಕರ್‌ ಗುರು ಅವರೇ ಕಥೆಯ ಜೊತೆಗೆ ಸಂಭಾಷಣೆಯನ್ನೂ ಬರೆದಿರೋದರಿಂದ, ಮಾತುಗಳೆಲ್ಲಾ ಚಿತ್ರಕತೆಯೊಂದಿಗೆ ಸಲೀಸಾಗಿ ಬೆರೆತುಹೋಗಿದೆ. ಇದು ಸಿನಿಮಾದ ಶಕ್ತಿಯೂ ಹೌದು.  ವಿದ್ಯಾವಂತ ಆಟೋ ಡ್ರೈವರ್‌ ಒಬ್ಬನ ಆತ್ಮಕತೆಯಂತೆ ಬಡವ ರಾಸ್ಕಲ್‌ ಅನಾವರಣಗೊಂಡಿದೆ.

ಡಾಲಿ ಧನಂಜಯ ಬಿಟ್ಟು ಬಹುಶಃ ಬೇರೆ ಯಾರನ್ನೂ ಈ ಬಡವ ರಾಸ್ಕಲ್‌ ಪಾತ್ರಕ್ಕೆ ಕಲ್ಪಿಸಿಕೊಳ್ಳಲೂ ಆಗದಂತೆ ಆವರಿಸಿಕೊಂಡಿದ್ದಾರೆ. ಅಮ್ಮನ ಮನಸ್ಸಿನ ಅಪ್ಪನಾಗಿ ರಂಗಾಯಣ ರಘು, ಗಟ್ಟಿಗಿತ್ತಿ ತಾಯಿಯಾಗಿ ತಾರಾ ಅಭಿನಯ ನಿಜಕ್ಕೂ ಸಮ್ಮೋಹಕ. ಅಮೃತಾ ಅಯ್ಯಂಗಾರ್‌ ಕೂಡಾ ಏರಿಯಾ ಹುಡುಗಿಯಂತೆ ಗಮನ ಸೆಳೆಯುತ್ತಾಳೆ.

ಡಾಲಿಯ ಜೊತೆಗೆ ನಟಿಸಿರುವ ಇತರೆ ಹುಡುಗರಿಗೂ ತೆರೆ ಮೇಲೆ ಸಮಾನ ಅವಕಾಶ ನೀಡಿದ್ದಾರೆ. ವಾಸುಕಿ ವೈಭವ್‌ ಖಂಡಿತವಾಗಿಯೂ ಕಮರ್ಷಿಯಲ್‌ ಸಿನಿಮಾಗಳಲ್ಲಿ ಮುನ್ನಡೆಯಬಹುದು. ಅಷ್ಟು ಆಪ್ತವಾದ ಸಂಗೀತ. ಕಣ್ಣೆದುರೇ ನಡೆಯುತ್ತಿದೆ ಅನ್ನಿಸುವಷ್ಟು ಸಹಜ ಛಾಯಾಗ್ರಹಣ ಬಡವ ರಾಸ್ಕಲ್‌ ಅನ್ನು ಗಟ್ಟಿಗೊಳಿಸಿವೆ.

ಬೆಂಗಳೂರಿನಂತಾ ಸಿಟಿಯಲ್ಲಿ, ಮಧ್ಯಮ ಮತ್ತು ಕೆಳ ಮಧ್ಯಮ  ವರ್ಗದ ಬದುಕು ಸಾಗಿಸುತ್ತಿರುವವರಿಗೆ ನಿಜಕ್ಕೂ ಬಡವ ರಾಸ್ಕಲ್‌ ಆತ್ಮೀಯ ಭಾವ ಮೂಡಿಸುತ್ತದೆ. ಕೆಲವೊಂದು ಕಡೆ ಭಾಷೆಯ ಬಳಕೆ ಅತಿ ಅನಿಸಿದರೂ ಅದು ಇಲ್ಲಿ ಅವಶ್ಯಕ ಕೂಡಾ ಅನ್ನೋದು ಮನದಟ್ಟಾಗುತ್ತದೆ. ಸಿನಿಮಾ ಪೂರ್ತಿ ಎಣ್ಣೆ ಘಾಟು ತುಂಬಿಹೋಗಿದ್ದರೂ, ಭರ್ತಿ ಮನರಂಜನೆಯನ್ನೂ  ನೀಡುತ್ತದೆ.

ಲವರ್‌ ಬಾಯ್‌ ರೈಡರ್!

Previous article

ನಟಿಯರಿಗೆ ಮಕ್ಕಳನ್ನು ಹೆರುಲು ಭಯ ಯಾಕೆ?

Next article

You may also like

Comments

Leave a reply

Your email address will not be published.