ಯಾರ ಬದುಕಿನಲ್ಲಿ ಸೋಲು, ಗೆಲುವುಗಳಿಲ್ಲ ಹೇಳಿ? ಸ್ವಯಂಕೃತ ಅಪರಾಧಗಳು ಕೆಲವಾದರೆ, ಕಾರಣವೇ ಇಲ್ಲದೆ ಸಮಸ್ಯೆಗಳಿಗೆ ಸಿಲುಕುವ ನಸೀಬು ಹಲವರದ್ದು. ಐಪಿಎಲ್ ಬಟ್ಟಿಂಗು, ಬಡ್ಡಿ ದಂಧೆ, ಜಗಳ, ಯಾರದ್ದೋ ಕಷ್ಟದಲ್ಲಿ ಲಾಭ ಮಾಡಿಕೊಳ್ಳುವ ಕೀಳು ಮನಸ್ಥಿತಿ, ಜಾಮೀನು ಕೊಟ್ಟವನ ಸಂಕಟ… ಹೀಗೆ ನಮ್ಮ ನಡುವೆಯೇ ನಡೆಯುವ ಹತ್ತು ಹಲವು ವಿಚಾರಗಳನ್ನು ನಮ್ಮ ಕಣ್ಮುಂದೆಯೇ ನಡೆಯುತ್ತಿದೆಯೇನೋ ಎನ್ನುವಷ್ಟರ ಮಟ್ಟಿಗೆ ಸಹಜವಾಗಿ ರೂಪಿಸಿರುವ ಸಿನಿಮಾ ಬಡ್ಡಿ ಮಗನ್ ಲೈಫು!
ದುಡ್ಡಿನ ಸಿರಿಯಲ್ಲಿ ಮೆರೆಯುವ ಬಡ್ಡಿ ಸೀನಪ್ಪ, ಆತನ ಮುದ್ದದ ಮಗಳು, ಅದರ ಎದುರು ಮನೆಯಲ್ಲಿ ಮಧ್ಯಮ ವರ್ಗದ ಕುಟುಂಬದ ಹುಡುಗ. ನೋಡ ನೋಡುತ್ತಲೇ ಒಬ್ಬರಿಗೊಬ್ಬರ ಮೇಲೆ ಲವ್ವು ಶುರುವಾಗುತ್ತದೆ. ದುಡ್ಡಿದ್ದವರ ಮನೆ ಹೆಣ್ಣುಮಗಳು ತಮ್ಮ ಅಂತಸ್ತಿಗೆ ಒಪ್ಪದ ಹುಡುಗನನ್ನು ಮೆಚ್ಚಿದರೆ ವಾಸ್ತವದಲ್ಲಾಗಲಿ, ಸಿನಿಮಾದಲ್ಲಾಗಲಿ ಏನು ತಾನೆ ಮಾಡಲು ಸಾಧ್ಯ? ಗೃಹಬಂಧನಕ್ಕೀಡುಮಾಡಿ, ಮತ್ಯಾರೋ ತಲೆಮಾಸಿದವನನ್ನು ತಂದು ಗಂಟು ಹಾಕುವ ಸ್ಕೆಚ್ಚು ಹಾಕುತ್ತಾರೆ. ಬಡ್ಡಿ ಮಗ ಹುಡುಗಿಯ ಅಪ್ಪ ಕೂಡಾ ಅದನ್ನೇ ಮಾಡುತ್ತಾನೆ. ಆದರೆ ಚಾಲಾಕಿ ಜೋಡಿ ಸುಮ್ಮನೇ ಕೂರತ್ತಾ? ಎಲ್ಲರನ್ನೂ ಯಾಮಾರಿಸಿ ಎಸ್ಕೇಪ್ ಆಗುತ್ತದೆ. ಇಷ್ಟಾಗುತ್ತಿದ್ದಂತೇ ಪ್ರೀತಿಸಿದವರು ಮದುವೆಯಾಗೋದು ವಾಡಿಕೆ. ಆದರೆ ಬಡ್ಡಿಮಗನ್ ಲೈಫಲ್ಲಿ ಏನಾಗುತ್ತದೆ ಅನ್ನೋದೇ ಸಸ್ಪೆನ್ಸು? ಮನೆಯವರ ಕಣ್ತಪ್ಪಿಸಿ ಜೊತೆಯಾದವರು ಮದುವೆಯಾಗುತ್ತಾರಾ? ಮತ್ತಿನ್ನೇನಾದರೂ ಅಡ್ಡಿ ಆತಂಕಗಳು ಎದುರಾಗುತ್ತವಾ? ಅಥವಾ ಅದನ್ನು ಮೀರಿದ್ದೇನಾದರೂ ಘಟಿಸುತ್ತದಾ? ಇಂಥ ಎಲ್ಲ ಕುತೂಹಲದ ಪ್ರಶ್ನೆಗೆ ಬಡ್ಡಿಮಗನ ಲೈಫು ಉತ್ತರ ನೀಡುತ್ತದೆ. ಬಲ ರಾಜವಾಡಿ ಈ ವರೆಗೂ ಕಾಣಿಸಿಕೊಂಡಿದ್ದರಲ್ಲೇ ತೀರಾ ಭಿನ್ನವಾಗಿ, ಮತ್ತು ಪ್ರಧಾನ ಪಾತ್ರದಲ್ಲಿ ಈ ಚಿತ್ರದಲ್ಲಿ ನಟಿಸಿದ್ದಾರೆ.
ಕಾನ್ಸೆಪ್ಟು ಸ್ವಲ್ಪ ಹಳೇದೆನಿಸಿದರೂ ಅದನ್ನು ಹೊಸ ಬಗೆಯಲ್ಲಿ ಸೃಷ್ಟಿಸಿದ್ದಾರೆ. ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಆದಿಯಾಗಿ ಎಲ್ಲರೂ ಗಮನ ಸೆಳೆಯುವಂತೆ ನಟಿಸಿದ್ದಾರೆ. ಗ್ರೀನ್ ಚಿಲ್ಲಿ ಎಂಟರ್ಟೈನ್ಮೆಂಟ್ಸ್ ಲಾಂಛನದಲ್ಲಿ ಪವನ್ ಕುಮಾರ್ ನಿರ್ಮಾಣದ ಬಡ್ಡಿಮಗನ್ ಲೈಫು ಚಿತ್ರವನ್ನು ನಿರ್ಮಿಸಿದೆ. ಮನಸ್ಸಿಗೆ ಹತ್ತಿರವಾಗುವ ಈ ಚಿತ್ರವನ್ನು ಒಮ್ಮೆ ನೋಡಿದರೆ ಚೆಂದ!