ಕನ್ನಡದಲ್ಲಿ ಇದುವರೆಗೂ ಸಾಕಷ್ಟು ಕ್ಯೂಟ್ ಲವ್ ಸ್ಟೋರಿಗಳು ಬಂದಿವೆ. ಪ್ರೀತಿಯ ಹಿನ್ನೆಲೆಯಲ್ಲಿಯೇ ಬದುಕಿನ ದರ್ಶನ ಮಾಡಿಸುವಂಥಾ ಸಾಕಷ್ಟು ಪ್ರಯೋಗಗಳೂ ನಡೆದಿವೆ. ಆದರೆ ಅದೆಷ್ಟೇ ಸಿನಿಮಾಗಳು ಬಂದರೂ ಪ್ರೀತಿ ಅನ್ನೋದು ಸಿನಿಮಾ ರಂಗದ ಪಾಲಿಗೆ ಎಂದಿಗೂ ಮುಗಿಯದ ಅಕ್ಷಯ ಪಾತ್ರೆ. ಅದು ಮೊಗೆದಷ್ಟೂ ಮತ್ತೇನನ್ನೋ ಧೇನಿಸುವಂತೆ ಮಾಡುವ ಅಚ್ಚರಿ. ಅಂಥಾದ್ದೇ ಅಪ್ಪಟ ಪ್ರೇಮ ಕಥಾನಕದೊಂದಿಗೆ ಇದೇ ತಿಂಗಳು ತೆರೆಗಾಣಲು ಸಜ್ಜಾಗಿರೋ ಚಿತ್ರ ಬದ್ರಿ ವರ್ಸಸ್ ಮಧುಮತಿ. ಈ ಸಿನಿಮಾ ಮೂಲಕ ಪ್ರತಾಪವನ್ ನಾಯಕ ನಟನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.
ಶಂಕರ್ ನಾರಾಯಣ ರೆಡ್ಡಿ ನಿರ್ದೇಶನದ ಬದ್ರಿ ವರ್ಸಸ್ ಮಧುಮತಿ ಈಗ ಚೆಂದದ ಹಾಡುಗಳ ಮೂಲಕವೇ ಎಲ್ಲೆಡೆ ಸುದ್ದಿಯಲ್ಲಿದೆ. ಈ ಹಿಂದೆ ಮುಂಗಾರುಮಳೆ ಚಿತ್ರದ ಮೆಲೋಡಿಯಸ್ ಹಾಡುಗಳು ಸಂಚಲನ ಸೃಷ್ಟಿಸಿದ್ದವಲ್ಲಾ? ಅಂಥಾದ್ದೇ ವಾತಾವರಣ ಈ ಚಿತ್ರದ ವಿಚಾರದಲ್ಲಿಯೂ ಮೂಡಿಕೊಂಡಿದೆ. ವಿಶೇಷ ಅಂದರೆ, ಈ ಚಿತ್ರದಲ್ಲಿ ಮೂರು ಹಾಡುಗಳಿಗೆ ಜಯಂತ ಕಾಯ್ಕಿಣಿ ಅವರು ಪ್ರೀತಿಯಿಂದಲೇ ಗೀತರಚನೆ ಮಾಡಿದ್ದಾರೆ. ಸಾಮಾನ್ಯವಾಗಿ ಅವರು ಇಷ್ಟವಾಗದ ಹೊರತು ಒಂದಕ್ಕಿಂತ ಹೆಚ್ಚು ಹಾಡು ಬರೆಯುವುದಿಲ್ಲ. ಆದರೆ ಈ ಸಿನಿಮಾ ಟ್ಯೂನಿಗೆ ಮತ್ತು ಪ್ರತಾಪವನ್ ಅವರ ಸಿನಿಮಾ ಪ್ರೀತಿಗೆ ಮನಸೋತು ಕಾಯ್ಕಿಣಿಯವರು ಅಪರೂಪಕ್ಕೆಂಬಂತೆ ಮೂರು ಹಾಡುಗಳನ್ನು ಬರೆದಿದ್ದಾರೆ. ಚಿತ್ರ ಸೂಪರ್ ಹಿಟ್ ಆಗಲಿ ಅಂತ ಹರಸಿದ್ದಾರೆ.
ಈಗಾಗಲೇ ಟ್ರೈಲರ್ ಮತ್ತು ಹಾಡುಗಳಲ್ಲಿ ನಾಯಕನಾಗಿ ಪ್ರತಾಪವನ್ ಪ್ರತಾಪ ಎಂಥಾದ್ದೆಂಬುದರ ಸುಳಿವು ಸಿಕ್ಕಿದೆ. ಹೀಗೆ ಮೊದಲ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿಯೇ ಈ ಪರಿಯಾಗಿ ಸದ್ದು ಮಾಡುತ್ತಿರೋ ಪ್ರತಾಪವನ್ ಇದಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದಾರೆ. ಅವರೇನು ಹೀರೋ ಆಗಬೇಕೆಂದುಕೊಂಡು ಏಕಾಏಕಿ ಅಖಾಡಕ್ಕಿಳಿದವರಲ್ಲ. ನಟನೆ ಸೇರಿದಂತೆ ಯಾವುದರಲ್ಲೆಲ್ಲ ಪಳಗಬೇಕೋ ಅದರಲ್ಲಿ ಪಕ್ಕಾ ಅನ್ನಿಸಿದ ನಂತರವಷ್ಟೇ ಬದ್ರಿ ವಸಸ್ ಮಧುಮತಿ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.
ಮೂಲತಃ ಚಿಕ್ಕಬಳ್ಳಾಪುರದವರು ಪ್ರತಾಪವನ್. ಬೆಂಗಳೂರಿನ ಶೇಶಾದ್ರಿಪುರಂನಲ್ಲಿ ಬಿಎಸ್ಸಿ ಬಯೋಟೆಕ್ ಪದವೀಧರರಾದ ಪ್ರತಾಪವನ್ ಗೆ ಆರಂಭದಿಂದಲೂ ಸಿನಿಮಾ ಹುಚ್ಚು ಕೊಂಚ ಹೆಚ್ಚೇ ಇತ್ತು. ಶಾಲಾ ಕಾಲೇಜು ದಿನಗಳಲ್ಲಿ ಶಿಕ್ಷಕ ಶಿಕ್ಷಕಿಯರನ್ನೇ ಅನುಕರಣೆ ಮಾಡೋ ಮೂಲಕ ನಟನಾಗಿ ಮೊದಲ ಹೆಜ್ಜೆ ಇಟ್ಟಿದ್ದ ಅವರೊಳಗೆ ಪ್ರಧಾನ ಕನಸಾಗಿದ್ದದ್ದೂ ಕೂಡಾ ಸಿನಿಮಾವೇ. ಮಗನ ಈ ಸಿನಿಮಾ ಪ್ರೀತಿ ಮತ್ತು ಟ್ಯಾಂಲೆಂಟನ್ನು ಗಮನಿಸಿಕೊಂಡೇ ಬಂದಿದ್ದ ಪ್ರತಾಪವನ್ ಅವರ ಅಮ್ಮನೇ ಅವರ ಪಾಲಿಗೆ ಮೊದಲ ಸ್ಫೂರ್ತಿ. ಯಾಕೆಂದರೆ ಅಮ್ಮನೇ ತನ್ನ ಮಗ ಹೀರೋ ಆಗಬೇಕೆಂಬ ತೀವ್ರವಾದ ಆಸೆ ಹೊಂದಿದ್ದರು. ಈ ಸಂಬಂಧವಾಗಿ ಪದೇ ಪದೆ ಉತ್ತೇಜಿಸುತ್ತಿದ್ದರು. ಆದರೆ ಚಿತ್ರರಂಗದ ಬಗ್ಗೆ ಒಂದು ಅಂದಾಜು ಹೊಂದಿದ್ದ ಪ್ತಾಪವನ್ ಯಾರ ಬೆಂಬಲವೂ ಇಲ್ಲದೆ ನಾಯಕನಾಗೋದು ಕಷ್ಟ ಅಂದಾಗೆಲ್ಲ ಅಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಕಷ್ಟಪಟ್ಟು ಸ್ವಂತ ಬಲದಿಂದಲೇ ಮೇಲೆದ್ದು ನಿಂತವರ ಕಥೆ ಹೇಳಿ ಉತ್ತೇಜಿಸುತ್ತಿದ್ದರಂತೆ.
ಹೀಗೆ ಅಮ್ಮನ ಕಾರಣದಿಂದ ತಮ್ಮೊಳಗಿನ ಕನಸಿಗೆ ಹೊಳಪು ಮೂಡಿಸಿಕೊಂಡಿದ್ದ ಪ್ರತಾಪವನ್ ಅವರನ್ನು ಬದುಕಿನ ಅನಿವಾರ್ಯತೆ ಬೇರೊಂದು ದಿಕ್ಕಿನತ್ತ ಸೆಳೆದುಕೊಂಡಿತ್ತು. ಓದು ಮುಗಿದ ನಂತರ ಅವರು ಅಣ್ಣನೊಂದಿಗೆ ಸೇರಿ ಇಂಡಿಯಾ ಇನ್ಫೋಲೈನ್ ಎಂಬ ಕಂಪೆನಿ ಹುಟ್ಟು ಹಾಕಿದ್ದರು. ಒಂದು ವರ್ಷಗಳ ಕಾಲ ಅದರಲ್ಲಿ ಮ್ಯಾನೇಜರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಈ ಅವಧಿಯಲ್ಲಿಯೇ ತಮ್ಮ ಮುಂದಿನ ಗುರಿಯನ್ನ ಸ್ಪಷ್ಟಪಡಿಸಿಕೊಂಡಿದ್ದ ಪ್ರತಾಪವನ್ ಕಡೆಗೂ ಕಂಪೆನಿಯ ಜವಾಬ್ದಾರಿಯನ್ನ ಅಣ್ಣನಿಗೆ ವಹಿಸಿ ನಾಯಕನಾಗೋ ನಿರ್ಧಾರದೊಂದಿಗೆ ಅಖಾಡಕ್ಕಿಳಿದಿದ್ದರು.
ಹಾಗೆ ಹೊರಟ ಅವರ ಮುಂದೆ ನಟನೆಯಲ್ಲಿ ತರಬೇತಿ ಪಡೆದುಕೊಳ್ಳುವ ಉದ್ದೇಶವಿತ್ತು. ಆ ಸಮಯದಲ್ಲಿ ನೀನಾಸಂ ಬಗ್ಗೆ ಅವರಿಗೆ ಅಷ್ಟಾಗಿ ಗೊತ್ತಿರಲಿಲ್ಲವಂತೆ. ಆದ್ದರಿಂದಲೇ ಈ ಬಗ್ಗೆ ಗೆಳೆಯರ ಬಳಿ ವಿಚಾರಿಸಿದಾಗ ಅವರೆಲ್ಲ ಹೇಳಿದ್ದು ವಿಶಾಖಪಟ್ಟಣಂನ ಪ್ರಸಿದ್ಧ ಸತ್ಯಾನಂದ ಇನ್ಟ್ಸಿಟ್ಯೂಟ್ ಹೆಸರನ್ನು. ಇದಾದೇಟಿಗೆ ಸೀದಾ ವೈನಾಡ್ಗೆ ಹೋದ ಪ್ರತಾಪವನ್ ಈ ಸಂಸ್ಥೆಯೆ ತೆರಳಿದ್ದರು. ದಿನಗಟ್ಟಲೆ ಮಾತುಕತೆ ಮುಗಿಸಿದ ನಂತರ ಈ ಸಂಸ್ಥೆಯ ಸಂಸ್ಥಾಪಕರಾದ ಸ್ಟಾರ್ ಮೇಕರ್ ಸತ್ಯಾನಂದವರು ತರಬೇತಿಗೆ ಸೇರಿಕೊಳ್ಳಲು ಗ್ರೀನ್ ಸಿಗ್ನಲ್ ನೀಡಿದ್ದರಂತೆ.
ಅಂದಹಾಗೆ ಈ ಸತ್ಯಾನಂದ ಸಂಸ್ಥೆ ಪ್ರಭಾಸ್, ಪವನ್ ಕಲ್ಯಾಣ್ ಸೇರಿದಂತೆ ಅನೇಕ ಸ್ಟಾರ್ ನಟರಿಗೆ ಆರಂಭಿಕವಾಗಿ ಅಭಿನಯ ತರಬೇತಿ ನೀಡಿರುವ ಪ್ರತಿಷ್ಠಿತ ಸಂಸ್ಥೆ. ಇದರಲ್ಲಿ ಪ್ರವೇಶ ಸಿಗುವುದೇ ಕಷ್ಟ. ಆದರೂ ಅದನ್ನು ಪ್ರತಾಪವನ್ ಸಲೀಸಾಗಿಯೇ ಸಾಧ್ಯವಾಗಿಸಿಕೊಂಡಿದ್ದರು. ಗಡಿಭಾಗವಾದ ಚಿಕ್ಕಬಳ್ಳಾಪುರದವರಾದ ಪ್ರತಾಪವನ್ ಗೆ ತೆಲುಗು ಲೀಲಾಜಾಲ. ಇದು ತರಬೇತಿಯ ಸಂದರ್ಭದಲ್ಲಿಯೂ ಸಹಾಯಕ್ಕೆ ಬಂದಿತ್ತು. ಈ ಹಂತದಲ್ಲಿ ಆರಂಭದಿಂದಲೂ ಸತ್ಯಾನಂದ ಅವರಿಗೆ ಪ್ರತಾಪವನ್ ಹತ್ತಿರಾಗಿದ್ದರು. ಅವರೇ ಖುದ್ದಾಗಿ ನನಗೆ ಪವನ್ ಕಲ್ಯಾಣ್ ಬಿಟ್ರೆ ನೀನೇ ತುಂಬಾ ಇಷ್ಟವಾಗಿದ್ದೀಯ ಎಂಬಂಥಾ ಮೆಚ್ಚುಗೆಯ ಮಾತುಗಳನ್ನೂ ಆಡಿದ್ದರಂತೆ. ತದನಂತರ ಇವರು ಸಜ್ಜಾದ ರೀತಿ ಕಂಡು ನೀನು ಕನ್ನಡಕ್ಕೆ ಪವನ್ ಕಲ್ಯಾಣ್ ಆಗುತ್ತೀಯ ಎಂಬಂಥಾ ಭವಿಷ್ಯವನ್ನೂ ನುಡಿದಿದ್ದರಂತೆ. ಗುರುವಿನಿಂದಲೇ ಇಂಥಾ ಗುರುತರವಾದ ಮೆಚ್ಚುಗೆ ಸಿಗೋದಕ್ಕಿಂತಲೂ ಮಿಗಿಲಾದ ಪ್ರಶಸ್ತಿ ಬೇರ್ಯಾವುದಿದೆ?
ಹಾಗೆ ಚೆಂದಗೆ ನಟನೆ ಕಲಿತು ವಾಪಾಸಾದ ಪ್ರತಾಪವನ್ ಅವರನ್ನು ನಾನಾ ಚಿತ್ರರಂಗದ ಮಂದಿ ಅಕ್ಷರಶಃ ನಾಟ್ಯವಾಡಿಸಿದ್ದರು. ಹತ್ತಾರು ಆಡಿಷನ್ನುಗಳಲ್ಲಿ ಮಪಾಲ್ಗೊಂಡು ಸೆಲೆಕ್ಟ್ ಆದರೂ ಕಾಸು ಕೇಳಿ ಅವಕಾಶ ಕೊಡಲು ಮುಂದಾದವರೇ ಹೆಚ್ಚು. ಹೀಗೆ ಅದೆಷ್ಟೋ ಕಾಲ ಸುತ್ತಿ ಹೈರಾಣಾಗಿದ್ದ ಪ್ರತಾಪವನ್ ಅವರಿಗೆ ಕಡೆಗೂ ಸಿಕ್ಕವರು ಶಂಕರ ನಾರಾಯಣ ರೆಡ್ಡಿ. ಒಳ್ಳೆ ರೈಟರ್ ಆಗಿದ್ದ ಅವರು ಒಂದೊಳ್ಳೆ ಕಥೆ ಹೇಳಿದ್ದರು. ಇದನ್ನು ಕೇಳಿದ ಪ್ರತಾಪವನ್ ಅಣ್ಣ ಪ್ರದೀಪ್ ಜೈನ್ ಮತ್ತು ಸ್ನೇಹಿತ ಧ್ರುವಜಿತ್ ರೆಡ್ಡಿ ಅವರೊಂದಿಗೆ ಸೇರಿ ನಿರ್ಮಾಣ ಮಾಡಲು ನಿರ್ಧರಿಸಿದ್ದರು. ಹಾಗೆ ಶುರುವಾದದ್ದು ಬದ್ರಿ ವರ್ಸಸ್ ಮಧುಮತಿ ಚಿತ್ರ.
ಹೀಗೆ ಹಲವಾರು ಸವಾಲುಗಳನ್ನು ದಾಟಿಕೊಂಡು ಸಂಪೂರ್ಣ ತಯಾರಿಯೊಂದಿಗೇ ಹೀರೋ ಆಗಿ ಅನಾವರಣಗೊಂಡಿರುವವರು ಪ್ರತಾಪವನ್. ಈ ಸಿನಿಮಾ ಇದೇ ತಿಂಗಳು ರಾಜ್ಯಾಧ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈಗ ಇದರ ಸುತ್ತಾ ಹುಟ್ಟಿಕೊಂಡಿರೋ ಕ್ರೇಜ್ ನೋಡಿದರೆ ಸ್ಟಾರ್ ಮೇಕರ್ ಸತ್ಯಾನಂದ ಅವರ ಮಾತು ನಿಜವಾಗೋ ಲಕ್ಷಣಗಳೇ ದಟ್ಟವಾಗಿವೆ…
No Comment! Be the first one.