ನಮ್ಮ ಸಿನಿಮಾ ರಂಗದಲ್ಲಿ ಕನಸುಗಾರ ಅಂತಲೇ ಹೆಸರಾದವರು ವಿ. ರವಿಚಂದ್ರನ್. ಎಲ್ಲರೂ ಒಂದೇ ಬಗೆಯ ಸಿನಿಮಾ ಮಾಡುತ್ತಿದ್ದರೆ ರವಿ ಬೇರೆಯದ್ದೇ ಧಾಟಿಯ ಸಿನಿಮಾ ರೂಪಿಸಿ ಅಚ್ಛರಿ ಮೂಡಿಸುತ್ತಾರಲ್ಲಾ… ಹಾಗೇ ಪತ್ರಿಕೋದ್ಯಮ ಮತ್ತು ಸಾಹಿತ್ಯ ಜಗತ್ತಿನಲ್ಲೊಬ್ಬರು ಕ್ರೇಜ಼ಿ ಸ್ಟಾರ್ ಇದ್ದಾರೆ. ಅವರು ಜಿ.ಎನ್. ಮೋಹನ್!
ಪ್ರಜಾವಾಣಿಯಲ್ಲಿ ವರದಿಗಾರರಾಗಿ ವೃತ್ತಿ ಆರಂಭಿಸಿ, ಉಪಸಂಪಾದಕರಾಗಿ ಒಂದು ದಶಕಕ್ಕೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ್ದರು. ನಂತರ ‘ಈ ಟಿವಿ’ಗೆ ಸೇರಿ, ಅಲ್ಲಿ ಬ್ಯೂರೋ ಮುಖ್ಯಸ್ಥರಾದರು. ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದ ಎಂಡೋಸಲ್ಫಾನ್ ಮತ್ತು ಅಕ್ಕಿ ಹಗರಣಗಳನ್ನು ಬಯಲಿಗೆಳೆದರು. ಈ ಮೂಲಕ ಈಟಿವಿಯ TRP ಹೆಚ್ಚಿಸಿದರ ಜೊತೆಗೆ ಸುದ್ದಿಗಳನ್ನು ಹೀಗೂ ನೀಡಬಹುದು ಅಂತಾ ಇಡೀ ಟೀವಿ ಮಾಧ್ಯಮಕ್ಕೆ ತೋರಿಸಿಕೊಟ್ಟವರು ಇವರು…
ನಂತರ ಸಮಯ ಟಿವಿ, ಈ ಟಿವಿ ಕನ್ನಡ ವಾಹಿನಿಗಳ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡದ ಹೆಸರಾಂತ ಪತ್ರಿಕೆ, ಪುರವಣಿಗಳಿಗೆ ಅಂಕಣ ಬರೆದಿದ್ದಾರೆ. ಸರಿಸುಮಾರು ಮೂವತ್ತೈದು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಾಕಷ್ಟು ಹೊಸತುಗಳನ್ನು ಸೃಷ್ಟಿಸಿದ್ದಾರೆ. ಇವರ ನನ್ನೊಳಗಿನ ಹಾಡು ಕ್ಯೂಬಾ ಪ್ರವಾಸ ಕಥನ ವಿಶ್ವವಿದ್ಯಾಲಯಗಳ ಪಠ್ಯವಾಗಿದೆ. ಮಾಧ್ಯಮ ಅಕಾಡೆಮಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಮೋಹನ್ ಅವರ ಶ್ರಮ, ಕ್ರಿಯಾಶೀಲತೆಗೆ ಸಿಕ್ಕ ಪ್ರತಿಫಲಗಳಷ್ಟೆ.
ಸದಾ ಹೊಸತನವನ್ನು ಬಯಸುವ, ಪ್ರತಿಯೊಂದರತ್ತಲೂ ಹೊಸ ನೋಟ ಬೀರುವ ಮೋಹನ್ ಅವರಿಗೆ ತಂಡ ಕಟ್ಟಿ, ಕೆಲಸ ಕಲಿಸಿ, ಅವರಿಂದ ಕೆಲಸ ತೆಗೆಸಿಕೊಳ್ಳುವ ತೀರಾ ಅಪರೂಪದ ಕಲೆಯೂ ಸಿದ್ಧಿಸಿದೆ. ಹೀಗಾಗಿ ಮಾಧ್ಯಮದ ಯಾವುದೇ ವಿಭಾಗದಲ್ಲೂ ಅವರ ಶಿಷ್ಯಪಡೆ ಕಾಣಸಿಗುತ್ತದೆ. ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮೀಡಿಯಾ ಮಾತ್ರವಲ್ಲದೆ ʻಅವಧಿʼ ಮೂಲಕ ಆನ್ ಲೈನಿನಲ್ಲೂ ಅಕ್ಷರದ ಫಸಲು ತೆಗೆದವರು, ಹತ್ತು ಹಲವು ಹೊಸ ಬರಹಗಾರರನ್ನು ತಂದು ನಿಲ್ಲಿಸಿದವರು ಜಿ.ಎನ್.ಎಂ!
ಸಿದ್ಧಸೂತ್ರಗಳನ್ನು ಬ್ರೇಕ್ ಮಾಡಬೇಕು ಅಂತಾ ತುಡಿಯುವ ಜಿ.ಎನ್. ಮೋಹನ್, ಕಂಡ ಕನಸನ್ನು ಅಷ್ಟೇ ಕರಾರುವಕ್ಕಾಗಿ ಕಾರ್ಯರೂಪಕ್ಕಿಳಿಸುತ್ತಾರೆ. ಮೂವತ್ತೈದು ವರ್ಷಗಳ ಇತಿಹಾಸದಲ್ಲಿ ಇದಕ್ಕೆ ಸಾಕಷ್ಟು ಪುರಾವೆಗಳೂ ಸೃಷ್ಟಿಯಾಗಿವೆ. ಮೀಡಿಯಾ ಮಾಯ್ಕಾರ ಮೋಹನ್ ಅವರ ಹೊಸ ಕನಸೊಂದು ಅಷ್ಟೇ ಮುದ್ದಾಗಿ ಈಗ ಜೀವ ಪಡೆದಿದೆ. ಅದು ಬಹುರೂಪಿ ಬುಕ್ ಹಬ್!
ಶ್ರೀಜಾ ವಿ.ಎನ್, ಧೀರಜ್ ಎಂ.ಹೆಚ್, ಶ್ರೀಕಾಂತ್ ಮತ್ತಿತರರನ್ನು ಒಟ್ಟುಗೂಡಿಸಿ ಬಹುರೂಪಿ ಬುಕ್ ಹಬ್ ಹೆಸರಿನ ಪುಸ್ತಕ ಮಳಿಗೆ ಆರಂಭಿಸಿದ್ದಾರೆ. ಸಾಮಾನ್ಯಕ್ಕೆ ಪುಸ್ತಕದಂಗಡಿಗಳಲ್ಲಿ ಪ್ರಿಂಟಾಗಿ ಬಂದ ಎಲ್ಲವನ್ನೂ ಜೋಡಿಸಿಟ್ಟಿರುತ್ತಾರೆ. ಪುಸ್ತಕ ಕೊಳ್ಳಲು ಹೋದವರು ಉತ್ತಮ ಪುಸ್ತಕವನ್ನು ಹೆಕ್ಕುವುದು ಹೇಗೆ ಅಂತಾ ಕೆಲವೊಮ್ಮೆ ತಲೆ ಕೆಡಿಸಿಕೊಳ್ಳಬೇಕಾಗಿರುತ್ತದೆ. ಆದರೆ ಬಹುರೂಪಿಯಲ್ಲಿ ಹಾಗಾಗುವುದಿಲ್ಲ. ಇಲ್ಲಿರುವ ಎಲ್ಲ ಬುಕ್ಕುಗಳನ್ನೂ ತೆಗೆದುಕೊಂಡುಬಿಡಬೇಕು ಅಂತಾ ದುರಾಸೆ ಹುಟ್ಟಿಸುವಷ್ಟರ ಮಟ್ಟಿಗೆ ಓದಲೇಬೇಕಾದ ಪುಸ್ತಕಗಳನ್ನು ಆಯ್ದು ಮಾರಾಟಕ್ಕಿಡಲಾಗಿದೆ.
ಹಾಗಂತಾ ಬಹುರೂಪಿ ಬರಿಯ ಪುಸ್ತಕ ವಹಿವಾಟಿಗೆ ಸೀಮಿತವಾದ ಮಳಿಗೆಯಲ್ಲ. ಇಲ್ಲಿ ಜೊತೆಗಾರರನ್ನೂ ಕರೆದೊಯ್ದು, ಕೂತು ಕಾಫಿ ಕುಡಿಯುತ್ತಾ, ಅಪರೂಪದ ತಿಂಡಿ ತಿನ್ನುತ್ತಾ ಕೈಗೆತ್ತಿಕೊಂಡ ಕೃತಿಯನ್ನೊಮ್ಮೆ ಕಣ್ಣಾಡಿಸಿ ಬರುವ ವ್ಯವಸ್ಥೆಯೂ ಇದೆ. ಸಂಜಯನಗರ ಮುಖ್ಯರಸ್ತೆಯಲ್ಲಿರುವ ವೈಭವ್ ಥೇಟರಿನ ಸಾಲಿನಲ್ಲೇ ಎರಡು ರಸ್ತೆ ಮುಂದಕ್ಕೆ ಹೋಗಿ ಎಡಕ್ಕೆ ತಿರುಗಿದರೆ ಬಹುರೂಪಿ ಬುಕ್ ಹಬ್ ಸಿಗುತ್ತದೆ. ಒಂದು ಸಲ ಹೋದವರಿಗೆ ಮತ್ತೆ ಮತ್ತೆ ಎಡತಾಕಬೇಕು ಅನ್ನಿಸುವಂಥಾ ಆಹ್ಲಾದಕರ ವಾತಾವರಣ ಬಹುರೂಪಿ ಪುಸ್ತಕ ಮನೆಯದ್ದು!
ಪುಸ್ತಕ, ಕಾಫಿಯ ಜೊತೆಗೆ ಆಗಾಗ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳೂ ಇಲ್ಲಿ ಏರ್ಪಡಲಿದೆ. ಇದರ ಆರಂಭಿಕ ಕಾರ್ಯಕ್ರಮವೆನ್ನುವಂತೆ, ಈಗ ಭಾರತದಾದ್ಯಂತ ಹೆಸರು ಮಾಡುತ್ತಿರುವ ಲಕ್ಷ್ಯ ಫ್ಯೂಜ಼ನ್ ಬ್ಯಾಂಡ್ ತಂಡದ ʻಮ್ಯೂಸಿಕ್ ಹಬ್ಬʼ ನಡೆದಿದೆ. ಇಷ್ಟರಲ್ಲೇ ಎ.ಆರ್. ರೆಹಮಾನ್ ವಿಡಿಯೋವೊಂದರಲ್ಲಿ ಕಾಣಿಸಿಕೊಳ್ಳಲಿರುವ ಲಕ್ಷ್ಯದ ಕೆ.ಜೆ.ದಿಲೀಪ್, ಇಳಾ ದಿಲೀಪ್ ಅವರ ತಂಡದವರು ಇಡೀ ಸಂಜಯನಗರವನ್ನು ಸೂರೆ ಮಾಡುವಂತೆ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಜೊತೆಗೆ ನಮ್ಮ ಕನ್ನಡದ ಯುವ ಗಾಯಕಿ ಚಿನ್ಮಯಿ ಚಂದ್ರಶೇಖರ್ ಕೂಡಾ ತಮ್ಮ ಚೆಂದದ ದನಿಯಲ್ಲಿ ಹಾಡಿ ಎಲ್ಲರನ್ನೂ ಬೆರಗಾಗಿಸಿದರು.
ಪುಸ್ತಕ, ಕಾಫಿ, ಸಂಗೀತ ಎಲ್ಲವನ್ನೂ ಒಂದೇ ಕಡೆ ಲಭ್ಯವಾಗಿಸಿರುವ ಬಹುರೂಪಿಯಲ್ಲಿ ಕನ್ನಡ ಚಿತ್ರರಂಗದ ದಿಗ್ಗಜರು, ಕಿರುತೆರೆ ಮಾಂತ್ರಿಕರೆಲ್ಲಾ ಬರಲಿದ್ದಾರೆ. ಹೇಗಾದರೂ ಸಮಯ ಮಾಡಿಕೊಂಡು ನೀವೂ ಒಂದು ಸಲ ಬಹುರೂಪಿಗೆ ಭೇಟಿ ನೀಡಿ. ಅಲ್ಲಿರುವ ಕಂಬದ ಮೇಲೆ ನಿಮ್ಮಿಷ್ಟದ ಪುಸ್ತಕ, ಲೇಖಕರ ಹೆಸರು ಬರೆದು ನಿಮ್ಮದೊಂದು ಸಹಿ ಹಾಕಿ ಬರೋದನ್ನು ಮರೀಬೇಡಿ.. ವಿಳಾಸ ಇಲ್ಲಿದೆ : Bahuroopi Book Hub Pvt. Ltd, No 1, Naakutanti, Basappa Layout, RMV 2nd Stage, opposite Udupi Garden, Sanjaynagar, Bangalore – 560094. Phone : 7019182729 ; Landline : 080 4167 9293
No Comment! Be the first one.