ಎಂಟು ತಿಂಗಳ ದೊಡ್ಡ ಗ್ಯಾಪ್ ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಸಿನಿಮಾ ತೆರೆಗೆ ಬಂದಿದೆ. ಅದು ಬೈರಾಗಿ. ಇಲ್ಲಿ ಶಿವಣ್ಣನ ಜೊತೆಗೆ ಡಾಲಿ ಧನಂಜಯ ಮತ್ತು ಪೃಥ್ವಿ ಅಂಬಾರ್ ಕೂಡಾ ತೆರೆ ಹಂಚಿಕೊಂಡಿದ್ದಾರೆ.
ಈಗಾಗಲೇ ಒಂದು ಮಟ್ಟದ ಹೆಸರು ಮಾಡಿರುವ ಧನಂಜಯ ಮತ್ತು ಈಗ ಪ್ರವರ್ಧಮಾನಕ್ಕೆ ಬರುತ್ತಿರುವ ಉದಯೋನ್ಮುಖ ನಟ ಪೃಥ್ವಿ ಅಂಬಾರ್ ಜೊತೆಗೆ ಶಿವಣ್ಣನಂಥಾ ಹಿರಿಯ ನಟ ಹೇಗೆ ಕಾಣಿಸಿಕೊಂಡಿರಬಹುದು? ಇದುವರೆಗೆ ರಿವೀಲ್ ಆಗಿರುವ ಶಿವಣ್ಣನ ಥರಹೇವಾರಿ ಗೆಟಪ್ಗೂ ಚಿತ್ರದ ಕಥೆಗೂ ಏನು ಸಂಬಂಧವಿರಬಹುದು? ಎನ್ನುವುದರೊಟ್ಟಿಗೆ ಖುದ್ದು ಶಿವಣ್ಣ ಹೆಚ್ಚು ಮುತುವರ್ಜಿ ವಹಿಸಿ ಪ್ರಚಾರದಲ್ಲಿ ತೊಡಗಿರುವುದರಿಂದ ಬೈರಾಗಿಯ ಬಗ್ಗೆ ಹೆಚ್ಚು ಕುತೂಹಲ ಹುಟ್ಟಲು ಕಾರಣವಾಗಿತ್ತು.
ನಮ್ಮೊಳಗಿನ ಕೋಪ ಬದುಕನ್ನು ಯಾವ ದಿಕ್ಕಿಗೆ ಕೊಂಡೊಯ್ಯುತ್ತದೆ ಎನ್ನುವುದರಿಂದ ಆರಂಭವಾದ ಸಿನಿಮಾ ಊಹಿಸಲು ಸಾಧ್ಯವಾಗದ ಕಡೆಗೆಲ್ಲಾ ಹೊರಳಿಕೊಳ್ಳುತ್ತದೆ. ಹುಲಿ ವೇಷ ಹಾಕಿಕೊಂಡು ಕುಣಿಯುವ ಮಗುವಿನಂಥಾ ಮನಸ್ಸಿನ ಶಿವಪ್ಪನ ಜೀವನದಲ್ಲಿ ಅಸಲೀ ವ್ಯಾಘ್ರಗಳು ಎದುರಾಗುತ್ತವೆ. ಜನನಾಯಕನಾಗಿ ಬೆಳೆಯಬೇಕು ಅಂದುಕೊಂಡವನೊಬ್ಬ ಕಣ್ಣೆದುರಿಗಿನ ಅನ್ಯಾಯಗಳೊಂದಿಗೆ ರಾಜಿಯಾಗುವ ತಣ್ಣಗಿನ ಕ್ರೌರ್ಯ, ನಿಜವಾದ ಪ್ರೀತಿಯ ಬೆನ್ನುಹತ್ತಿದ ಹುಡುಗ, ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡ ಪೊಲೀಸ್ ಅಧಿಕಾರಿ, ಪರಮ ನೀಚ ರಾಜಕಾರಣಿ… ಹೀಗೆ ಸಿನಿಮಾ ಪೂರ್ತಿ ಪಾತ್ರಗಳು ತುಂಬಿಕೊಂಡಿವೆ. ಏನೇನೂ ಘಟಿಸದೆಯೂ ಸಮಾಜದ ಕಣ್ಣಲ್ಲಿ ಲೈಂಗಿಕ ಕಾರ್ಯಕರ್ತೆ ಅಂತಾ ಹಣೆಪಟ್ಟಿ ಕಟ್ಟಿಸಿಕೊಂಡು, ಊರುಬಿಟ್ಟ ನಾಯಕಿಯ ಪಾತ್ರ ಹೆಚ್ಚು ಗಮನ ಸೆಳೆಯುತ್ತದೆ. ದೌರ್ಜನ್ಯಕ್ಕೊಳಗಾದ ಅಪ್ರಾಪ್ತ ವಯಸ್ಸಿನ ಕಂದಮ್ಮನ ಕತೆ ಕಣ್ಣಲ್ಲಿ ನೀರುಕ್ಕಿಸುತ್ತದೆ.
ಊರಲ್ಲಿರೋ ಜನರ ಮನಸ್ಸಿನಲ್ಲಿ ಮನುಷ್ಯತ್ವ ಸತ್ತಿರುತ್ತದೆ, ಸ್ಮಶಾನದಲ್ಲಿ ಮನುಷ್ಯನೇ ಸತ್ತು ಮಲಗಿರುತ್ತಾನೆ… ಎಂಬಿತ್ಯಾದಿಯಾಗಿ ಗುರು ಕಶ್ಯಪ್ ಬರೆದ ಸಂಭಾಷಣೆಯ ಸಾಲು ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಕಾಡುವ ಮಾತುಗಳ ಪೋಣಿಸಿ ಹೋದ ಕಾರಣಕ್ಕೆ ಗುರು ಯಾವತ್ತಿಗೂ ಜೀವಂತವಾಗಿರುತ್ತಾರೆ. ಚಿತ್ರದ ಕಟ್ಟಕಡೆಯಲ್ಲಿ ಡಾಲಿ ಕ್ಯಾರೆಕ್ಟರಿಗೆ ಕೊಟ್ಟಿರುವ ಟ್ವಿಸ್ಟು ಸಮಾಧಾನ ನೀಡುತ್ತದೆ.
ರಿದಂ ಆಫ್ ಶಿವಪ್ಪ ಹಾಡು ತೆರೆಮೇಲೆ ಬಂದಾಗ ನೋಡುಗರಿಗೆ ಎದ್ದು ಕುಣಿಯುವಂತಾದರೆ ಅದು ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಗೆಲುವು ಅಂದುಕೊಳ್ಳಬಹುದು. ಚಿತ್ರದಲ್ಲಿ ರೋಚಕ ಕ್ಷಣಗಳಿಗಿಂತಾ ಭಾವುಕ ದೃಶ್ಯಗಳು ಹೆಚ್ಚಿವೆ. ಅದು ಸಿನಿಮಾದ ಗೆಲುವಿನ ಸೂತ್ರವೂ ಆಗಬಹುದು. ಪರೋಪಕಾರಿ ಶಿವಣ್ಣನ ಪಾತ್ರದಲ್ಲಿ ಹ್ಯಾಟ್ರಿಕ್ ಹೀರೋ ಎಲ್ಲರ ಹೃದಯಕ್ಕೆ ಹತ್ತಿರವಾಗುತ್ತಾರೆ. ಯುವ ನಾಯಕ ಕರ್ಣನಾಗಿ ಡಾಲಿ ನಟನೆ ಅಮೋಘ. ಪೃಥ್ವಿ ಅಂಬಾರ್ ಹಿಂದಿನಂತೆ ಇಲ್ಲೂ ಲವಲವಿಕೆಯ ಪಾತ್ರದಲ್ಲಿ ಅಷ್ಟೇ ಚೆಂದಗೆ ನಟಿಸಿದ್ದಾರೆ. ಸಿಕ್ಕಾಪಟ್ಟೆ ಪಾತ್ರವರ್ಗದ ಜೊತೆಗೆ ದೊಡ್ಡ ಕ್ಯಾನ್ವಾಸನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕ ವಿಜಯ್ ಮಿಲ್ಟನ್ ಬೈರಾಗಿಯನ್ನು ಗೆಲ್ಲಿಸಿದ್ದಾರೆ.
Comments