ಆ ವ್ಯಕ್ತಿಗೀಗ ವಯಸ್ಸು ಐವತ್ತು ವರ್ಷ! ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ. ಈ ವರೆಗೂ ಏಳೆಂಟು ಸಿನೆಮಾಗಳನ್ನು ನಿರ್ದೇಶಿಸಿದ್ದಾರೆ. ಆದರೆ ಬ್ಯಾಂಕ್ ಬ್ಯಾಲೆನ್ಸು ಮಾತ್ರ ಪೂರ್ತಿ ಖಾಲಿಖಾಲಿ!
ಆ ನಿರ್ದೇಶಕನ ಹೆಸರು ಬಾಲಾ!
ಅದು ೧೯೯೯. ಬಾಲಾ ತಮ್ಮ ಮೊದಲ ಸಿನೆಮಾವನ್ನು ನಿರ್ದೇಶಿಸಿದ್ದರು. ಆದರೆ ಬಿಡುಗಡೆ ಮಾಡುವುದೇ ದೊಡ್ಡ ಸವಾಲಾಗಿತ್ತು. ಬರೋಬ್ಬರಿ ಅರವತ್ತು ಜನ ಸಿನಿಮಾ ವಿತರಕರು ಚಿತ್ರ ವೀಕ್ಷಿಸಿದ್ದರು. ಆದರೆ ಒಬ್ಬೇ ಒಬ್ಬ ಕೂಡಾ ಆ ಚಿತ್ರವನ್ನು ಬಿಡುಗಡೆ ಮಾಡುವ ಮನಸ್ಸು ಮಾಡಲಿಲ್ಲ. ಅದಕ್ಕೆ ಅವರೆಲ್ಲ ನೀಡಿದ ಸಬೂಬು ‘ಈ ಸಿನಿಮಾದಲ್ಲಿ ಟ್ರ್ಯಾಜಿಕ್ ಎಂಡ್ ಇದೆ. ನಮ್ಮ ಪ್ರೇಕ್ಷಕರು ಇದನ್ನು ಒಪ್ಪೋದಿಲ್ಲ’ ಅಂತ.
ಕಡೆಗೊಂದು ದಿನ ಆ ಸಿನಿಮಾ ಯಾವುದೇ ಪಬ್ಲಿಸಿಟಿ ಇಲ್ಲದೆ ಕೆಲವು ಥಿಯೇಟರುಗಳಲ್ಲಿ ರಿಲೀಸ್ ಆಯ್ತು. ಸಿನಿಮಾದ ಮಾರ್ನಿಂಗ್ ಶೋ ಮುಗಿದು ಮ್ಯಾಟ್ನಿ ಹೊತ್ತಿಗೆ ಜನ ಥಿಯೇಟರಿನ ಮುಂದೆ ಸಾಲುಗಟ್ಟಿ ನಿಂತಿದ್ದರು. ಎಲ್ಲಾ ವಿತರಕರ ತಾತ್ಸಾರಕ್ಕೆ ಒಳಗಾಗಿದ್ದ ಸಿನಿಮಾ ಓಡಲು ಶುರು ಮಾಡಿತು ನೋಡಿ, ವಾರ, ತಿಂಗಳು, ವರ್ಷಗಳ ಗಡಿಯನ್ನು ಮೀರಿದರೂ ಓಡುತ್ತಲೇ ಇತ್ತು!
ಎಸ್.. ಅದು ‘ಸೇದು’! ಈ ಚಿತ್ರದ ಮೂಲಕ ವಿಕ್ರಂ ಎನ್ನುವ ದೈತ್ಯ ನಟ ಹುಟ್ಟು ಪಡೆದಿದ್ದ. ಕನ್ನಡದಲ್ಲಿ ಕಿಚ್ಚ ಸುದೀಪ್ ಎಂಬ ‘ಅಭಿನಯ ಚಕ್ರವರ್ತಿ’ ಬೆಳ್ಳಿ ತೆರೆಯ ಮೇಲೆ ರಾರಾಜಿಸುವಂತಾಗಿದ್ದರ ‘ಹುಚ್ಚ’ ಸಿನೆಮಾದ ಮೂಲ ಕೂಡಾ ಇದೇ ‘ಸೇದು’! ಕನ್ನಡದಲ್ಲಿ ‘ಹುಚ್ಚ’ನಾಗಿದ್ದರ ಜೊತೆಗೆ ತೆಲುಗಿನಲ್ಲಿ ‘ಶೇಶು’ ಮತ್ತು ಹಿಂದಿಯಲ್ಲಿ ‘ತೇರೆ ನಾಮ್’ ಹೆಸರಲ್ಲಿ ಕೂಡಾ ಇದೇ ಚಿತ್ರ ರಿಮೇಕ್ ಆಯಿತು.
ಸೇದು ಇಂಥ ಅಮೋಘ ಜಯಭೇರಿ ಬಾರಿಸಿದಾಗ ಬೇರೊಬ್ಬ ನಿರ್ದೇಶಕನಾಗಿದ್ದರೆ ಆತನ ತಲೆ ಕುತ್ತಿಗೆ ಮೇಲೆ ಕೂರುತ್ತಿತ್ತೋ ಏನೋ? ಆದರೆ ಬಾಲ ಮಾತ್ರ ತನಗೂ ಆ ಸಿನಿಮಾದ ಯಶಸ್ಸಿಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸತೊಡಗಿದರು. ತಮ್ಮ ಪಾಡಿಗೆ ತಾವು ಮುಂದಿನ ಸಿನೆಮಾಗಳ ಬಗ್ಗೆ ಗಮನಹರಿಸಿದರು.
ಮೊದಲ ಚಿತ್ರದ ಯಶಸ್ಸಿನ ನಂತರ ಬಾಲಾ ನಿರ್ದೇಶಿಸಿದ ನಂದಾ, ಪಿತಾಮಗನ್, ಮಾಯಾವಿ, ನಾನ್ ಕಡವುಳ್, ಅವನ್ ಇವನ್, ಪರ್ದೇಸಿ, ತಾರೈ ತಪ್ಪಟ್ಟೈ ಮತ್ತು ನಾಚಿಯಾ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಪಿತಾಮಗನ್ ಚಿತ್ರ ಕನ್ನಡದಲ್ಲಿ ‘ಅನಾಥರು’ ಹೆಸರಿನಲ್ಲಿ ರಿಮೇಕ್ ಆಗಿದೆ. ನಾನ್ ಕಡವುಳ್ ಚಿತ್ರದ ನಿರ್ದೇಶನಕ್ಕಾಗಿ ಬಾಲಾ ನ್ಯಾಷನಲ್ ಅವಾರ್ಡ್ ಕೂಡಾ ಪಡೆದಿದ್ದಾರೆ. ತಮ್ಮ ಶಿಷ್ಯರಿಗೆ ಅವಕಾಶ ಕೊಟ್ಟು ಸಿನಿಮಾ ನಿರ್ಮಿಸಿದ್ದಾರೆ. ಬೆಂಳೂರಿನ ಪರಿಸರವೆಂದರೆ ಬಾಲಾಗೆ ಅಪಾರ ಮೆಚ್ಚುಗೆ. ಇವರ ಅನೇಕ ಸಿನೆಮಾಗಳ ಕಥೆ ಹುಟ್ಟಿರೋದು ಇಲ್ಲೇ ಅಂತೆ! ಇವತ್ತಿಗೂ ಬಾಲಾ ಬೆಂಗಳೂರಿಗೆ ಬಂದರೆ, ಬಿಎಂಟಿಸಿ ಬಸ್ಸುಗಳಲ್ಲಿ ತಿರುಗುತ್ತಾ ತಮ್ಮ ಸಿನೆಮಾಗಳಿಗೆ ಕಥೆ ಮತ್ತು ಪಾತ್ರಗಳನ್ನು ಹುಡುಕುತ್ತಾರೆಂದರೆ ನಂಬಲೇಬೇಕು.
ಕನ್ನಡದ ಕ್ರಿಯಾಶೀಲ ನಿರ್ದೇಶಕ ಸೂರಿ ಅವರಿಗೆ ನಿಮ್ಮ ಫೇವರಿಟ್ ಫಿಲಂ ಮೇಕರ್ ಯಾರು ಅಂದರೆ, ಅವರು ಹೇಳುವ ಮೊದಲ ಹೆಸರು ಬಾಲಾ. ಹೊಸತನ ಮತ್ತು ನೈಜವಾಗಿ ದೃಶ್ಯ ಕಟ್ಟಿಕೊಡುವ ಬಾಲಾ ಅನೇಕ ಯುವ ನಿರ್ದೇಶಕರಿಗೆ ಸ್ಪೂರ್ತಿಯಾಗಿದ್ದಾರೆ.
ಇತ್ತೀಚೆಗೆ ತಮಿಳುನಾಡಿನಲ್ಲಿ ಫೇಮಸ್ ನಿರ್ದೇಶಕರ ಸಿನೆಮಾಗಳು ಬಿಡುಗಡೆಗೂ ಮುನ್ನ ಐಟಿ ದಾಳಿಗಳಾಗುತ್ತಿವೆ. ಅಂತೆಯೇ ನಿನ್ನೆ ಬಾಲಾ ಮನೆ ಮೇಲೂ ಆದಾಯ ತೆರಿಗೆ ಅಧಿಕಾರಿಗಳು ರೇಡು ಬಿದ್ದಿದ್ದಾರೆ. ಆಗ ನಿಜಕ್ಕೂ ಆ ಅಧಿಕಾರಿಗಳಿಗೆ ಆಶ್ಚರ್ಯವಾಗಿದ್ದೆಂದರೆ, ಬಾಲಾ ತಮ್ಮ ಬದುಕಿಗೋಸ್ಕರ ಕನಿಷ್ಟ ಮಟ್ಟದ ಉಳಿತಾಯ ಕೂಡಾ ಮಾಡಿಲ್ಲ ಅನ್ನೋದು. ಇನ್ನು ಬ್ಲಾಕ್ ಮನಿಯ ಮಾತೆಲ್ಲಿ!
ಹೀಗಾಗಿ ಬಾಲಾರ ಹಿತೈಷಿಗಳು ‘ಇನ್ನಾದರೂ ಮುಂದಿನ ಜೀವನಕ್ಕಾಗಿ ಮತ್ತು ಮನೆಯವರಿಗಾಗಿ ಒಂದಿಷ್ಟು ಹಣ ಕೂಡಿಡಿ’ ಎಂದು ಹಿತವಚನ ನೀಡುತ್ತಿದ್ದಾರೆ!