‘ನಿನ್ನನ್ನ ತುಂಡು ತುಂಡಾಗಿ ಕತ್ತರಿಸಿ ಬಿಸಾಕ್ತೀನಿ ಮಗ್ನೇ..’ ‘ನಿನ್ನ ಜೀವನ ಸರ್ವನಾಶ ಮಾಡಿಹಾಕ್ತೀನಿ..’ ಕೊಲ್ಲೋಕೂ ಹೇಸಲ್ಲ ನಾನು..’ ಇದನ್ನೆಲ್ಲಾ ಓದಿದರೆ ಯಾವುದೋ ಅಗ್ಗದ ಸಿನಿಮಾ ಡೈಲಾಗ್ಸ್ ಇರಬಹುದೇನೋ ಅಂತನ್ನಿಸಬಹುದು ಅಥವಾ ಯಾವುದೋ ರಸ್ತೆ ಗಲಾಟೆ ಅಂತಾನೂ ಅನ್ನಿಸಬಹುದು. ಆದರೆ ಅದ್ಯಾವುದೂ ಅಲ್ಲ, ಇದು ತೆಲುಗು ಸ್ಟಾರ್ ನಟ ಬಾಲಯ್ಯ ಉದುರಿಸಿದ ಅಣಿಮುತ್ತುಗಳು. ಅದರಲ್ಲೂ ಸುತ್ತಾಮುತ್ತಾ ಹತ್ತಾರು ಕ್ಯಾಮೆರಾಗಳಿರುವಾಗ, ನೂರಾರು ಜನ ಸೇರಿರುವಾಗ ಬಾಲಯ್ಯ ಹೀಗೆ ಕಾರಿಕೊಂಡು ವಿವಾದಕ್ಕೀಡಾಗಿದ್ದಾರೆ.
ಸಾರ್ವಜನಿಕ ಜೀವನದಲಿರುವವರು ಸಹಜವಾಗೇ ಘನತೆ ಕಾಪಾಡಿಕೊಳ್ಳಬೇಕು, ಸಂಯಮಿಗಳಾಗಿರಬೇಕು, ನಾಲಿಗೆಯನ್ನ ಹೇಗೆ ಬೇಕೋ ಹಾಗೆ ಹರಿಹಾಯಲು ಬಿಡಬಾರದು. ಆದರೆ ಅದ್ಯಾವುದನ್ನೂ ಪಾಲಿಸದ ಬಾಲಕೃಷ್ಣ ಬಾಯಿಗೆ ಬಂದಂತೆ ಮಾತನಾಡಿ ಮೈಮೆಲೆ ವಿವಾದ ಎಳೆದುಕೊಳ್ಲುತ್ತಲೇ ಇರುತ್ತಾರೆ. ಈ ಸಾರಿ ಅವರ ಪೌರುಷ ವ್ಯಕ್ತವಾದದ್ದು ಓರ್ವ ವಿಡಿಯೋ ಜರ್ನಲಿಸ್ಟ್ ಮೇಲಾದ್ದರಿಂದ ವಿಷಯ ಮತ್ತೂ ರಾಂಗ್ ಆಯಿತು.
ಆದದ್ದಿಷ್ಟೇ. ಹಿಂದೂಪುರದಲ್ಲಿ ಚುನಾವಣಾ ಕ್ಯಾಂಪೇನ್ ಮಾಡುತ್ತಿದ್ದ ಬಾಲಯ್ಯ ಅಲ್ಲಿದ್ದ ವಿಡಿಯೋ ಜರ್ನಲಿಸ್ಟ್ ಮೇಲೆ ಹರಿಹಾಯಿದ್ದಾರೆ. ಬಾಲಯ್ಯರನ್ನ ನೋಡಲು ಮುಗಿಬಿದ್ದ ಅಭಿಮಾನಿಗಳಲ್ಲಿ ಚಿಕ್ಕ ಮಕ್ಕಳೂ ಭಾಗಿಯಾಗಿದ್ದರಂತೆ. ಚಿಕ್ಕವರು ಅಂತೂ ನೋಡದೆ ಬಾಲಯ್ಯನ ಅಂಗರಕ್ಷಕರು ಅವರೆಲ್ಲರನ್ನೂ ದೂರಕ್ಕೆ ತಳ್ಳಿದ್ದಾರೆ. ಇದನ್ನ ಕಂಡ ವಿಡಿಯೋ ಜರ್ನಲಿಸ್ಟ್ ಕೂಡಲೇ ಆ ಸನ್ನಿವೇಶವನ್ನ ಚಿತ್ರೀಕರಿಸಿಕೊಳ್ಳಲು ಮುಂದಾಗಿದ್ದಾನೆ.
ಇದನ್ನ ಕಂಡ ಬಾಲಯ್ಯನಿಗೆ ಎಲ್ಲಿತ್ತೋ ಕೋಪ.. ಕೆಂಡಾಮಂಡಲಾದ ನಟಭಯಂಕರ ವಿಡಿಯೋ ಜರ್ನಲಿಸ್ಟ್ ಗೆ ಎಕ್ಕಾಮಕ್ಕಾ ಬೈದಿದ್ದಾರೆ- ‘ ಡೆಲಿಟ್ ಮಾಡ್ತೀಯೋ ಇಲ್ವೋ.. ಇದನ್ನೆಲ್ಲಾ ಶೂಟ್ ಮಾಡಿ ನನ್ನ ಜೊತೇನೇ ಆಟ ಆಡೋಕೆ ನೋಡ್ತೀರಾ.. ಕತ್ತರಿಸಿ ಬಿಸಾಕ್ತೀನಿ, ಕೊಂದು ಹಾಕ್ತೀನಿ..’
ಮಕ್ಕಳನ್ನ ತಳ್ಳಿದ ತನ್ನ ಅಂಗರಕ್ಷಕರನ್ನ ಗದರಿಸಬೇಕಿದ್ದ ಬಾಲಯ್ಯ, ಅದು ಬಿಟ್ಟು ಅದನ್ನ ಶೂಟ್ ಮಾಡಿದ ಎಂಬ ಕಾರಣಕ್ಕೆ ವಿಡಿಯೋಗ್ರಾಫರ್ಗೆ ಬೈದದ್ದಿದೆಯಲ್ಲ..ಇದು ಪತ್ರಕರ್ತರಾದಿಯಾಗಿ ಅನೇಕರನ್ನ ಕೆರಳಿಸಿದೆ. ಈ ವಿಡಿಯೋ ತುಣುಕ ವೈರಲ್ ಆಗಿ ಬಾಲಯ್ಯನ ವರ್ತನೆಗೆ ಎಲ್ಲಾ ಕಡೆಯಿಂದ ಖಂಡನೆ ವ್ಯಕ್ತವಾಗಿದೆ. ಕೆಲಸ ಕೆಡ್ತು ಎಂದು ಯಾವಾಗ ಖಚಿತವಾಯ್ತೋ.. ಬಾಲಯ್ಯ ಮರುದಿನ ತಿಪ್ಪೆ ಸಾರಿಸಿ ಪ್ರಕರಣ ತಣ್ಣಗೆ ಮಾಡುವ ಪ್ರಯತ್ನ ಮಾಡಿದ್ದಾರೆ.
‘ನಿನ್ನೆ ಕ್ಯಾಂಪೇನ್ ಮಾಡುವಾಗ ದೊಡ್ಡ ಜನ ಸಂದಣಿ. ಅಭಿಮಾನಿಗಳಲ್ಲಿ ಕೆಲವರಂತೂ ನನ್ನ ಫೋಟೋ ವಿಡಿಯೋ ಮಾಡುವ ಆತುರದಲ್ಲಿ ಮಕ್ಕಳ ಮೇಲೆ ಬೀಳುತ್ತಿದ್ದರು. ಮಕ್ಕಳನ್ನ ತುಳೀತಾ ಇದ್ದಾರಲ್ಲ ಅಂತ ಸಿಟ್ಟಿಗೆದ್ದು ನನ್ನ ಕಣ್ಣಿಗೆ ಕಂಡ ಒಬ್ಬ ಕ್ಯಾಮೆರಾದವನಿಗೆ ಬೈದದ್ದು ನಿಜ. ಆದರೆ ಆತ ಜರ್ನಲಿಸ್ಟು ಅಂತ ನನಗೆ ಆಮೇಲೆ ಗೊತ್ತಾಯ್ತು. ಬೇಕಂತಲೇ ಬೈದಿಲ್ಲ. ನನ್ನಿಂದ ನೋವಾಗಿದ್ದರೆ ಕ್ಷಮೆ ಇರಲಿ..’ ಎಂದಿದ್ದಾರೆ. ಬಾಲಯ್ಯನ ವರ್ಷನ್ ಕರೆಕ್ಟೋ ವಿಡಿಯೋ ಜರ್ನಲಿಸ್ಟ್ ವರ್ಷನ್ ಕರೆಕ್ಟೋ ಅನ್ನೋದಕ್ಕೆ ಥೇಟ್ ಬಾಲಯ್ಯನ ಶೈಲಿಯಲ್ಲೇ ತನಿಖೆ ನಡೆಯಬೇಕೇನೋ..
No Comment! Be the first one.