ಬಾಲು ನಾಗೇಂದ್ರ… ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ. ಚಿತ್ರಕಲಾವಿದ, ರಂಗಭೂಮಿ ಪ್ರತಿಭೆ, ರೇಡಿಯೋ ಜಾಕಿ, ಪೋಷಕ ನಟ, ವಿಲನ್, ಹೀರೋ…. ಹೀಗೆ ಹಂತ ಹಂತವಾಗಿ ಬೆಳೆದುಬಂದವರು. ಒಂದು ಕಾಲಕ್ಕೆ ಗಿರೀಶ್ ಕಾರ್ನಾಡ್ ಅವರ ತಂಡಕ್ಕೆ ಸೇರಿ ನಟನೆಯಲ್ಲಿ ಪಳಗಿ, ದುನಿಯಾ ಸೂರಿ ನಿರ್ದೇಶನದ ಇಂತಿ ನಿನ್ನ ಪ್ರೀತಿಯ, ಜಂಗ್ಲಿ, ಅಣ್ಣಾ ಬಾಂಡ್ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಲೇ ಅದೇ ಸೂರಿಯ ಕಡ್ಡಿಪುಡಿಯಲ್ಲಿ ರೆಕ್ಕೆ ವೆಂಕಟೇಶನಾಗಿ ತೆರೆಮೇಲೆ ಭಯ ಹುಟ್ಟಿಸಿದವರು. ನಂತರ ಲೈಟ್ಸ್, ಕ್ಯಾಮೆರಾ, ಆಕ್ಷನ್, ಹುಲಿರಾಯ ಸಿನಿಮಾಗಳ ಮೂಲಕ ಹೀರೋ ಕೂಡಾ ಆಗಿ, ಸದ್ಯ ಇನ್ನೇನು ಬಿಡುಗಡೆಯಾಗುತ್ತಿರುವ ಕಪಟ ನಾಟಕ ಪಾತ್ರಧಾರಿ ಸಿನಿಮಾದಲ್ಲೂ ಬಾಲು ಹೀರೋ ಆಗಿ ನಟಿಸಿದ್ದಾರೆ. ವಿಚಾರ ಇದಲ್ಲ!
ಸತತ ಹನ್ನೊಂದು ವರ್ಷಗಳ ಕಾಲ ಲವ್ ಮಾಡಿ ಆರು ವರ್ಷಗಳ ಹಿಂದೆ ಮದುವೆಯನ್ನೂ ಆಗಿ ಬಾಳ್ವೆ ನಡೆಸುತ್ತಿದ್ದ ಬಾಲು ನಾಗೇಂದ್ರ ಖಾಸಗೀ ಜೀವನದಲ್ಲೀಗ ಬಿರರುಗಾಳಿಯೆದ್ದಂತಾಗಿದೆ. ಕಳೆದ ಎರಡು ತಿಂಗಳಿಗೆ ಮುಂಚೆ ‘ನಟ ಬಾಲು ನಾಗೇಂದ್ರ ಪತ್ನಿಗೆ ಬಡಿದ, ‘ಹೆಂಡತಿಗೆ ಕಿರುಕುಳ ಕೊಟ್ಟ ಅಂತೆಲ್ಲಾ ಟೀವಿ ಚಾನೆಲ್ಲುಗಳಲ್ಲಿ ಸುಳ್ಳುಸುಳ್ಳೇ ಸುದ್ದಿ ಹರಿದಾಡಿತ್ತು. ಮದುವೆಯಾದ ಎಲ್ಲರ ಬದುಕಿನಲ್ಲಿದ್ದಂತೆ ಬಾಲು ಮತ್ತು ದಿವ್ಯಾ ಲೈಫಲ್ಲೂ ಸಣ್ಣ ಪುಟ್ಟ ಕಿತ್ತಾಟ, ಮುನಿಸು ಇತ್ತು. ಆದರೆ ಇದನ್ನು ತೀರಾ ಪೊಲೀಸು, ಕೇಸು ಅನ್ನೋ ಲೆವೆಲ್ಲಿಗೆ ತೆಗೆದುಕೊಂಡು ಹೋಗಿ, ಎಷ್ಟೋ ದಿನಗಳ ನಂತರ ಅದು ಸುದ್ದಿಯಾಗುವಂತೆ ಮಾಡಿದ್ದರ ಹಿಂದೆ ಬಾಲು ನಾಗೇಂದ್ರ ಅವರ ಮಾವ ನರೇಂದ್ರ ರಾವ್ ಅರ್ಥಾತ್ ದಿವ್ಯಾಳ ತಂದೆಯ ಚಿತಾವಣೆಯಿದೆ ಅಂದರೆ ನಂಬಲೇಬೇಕು!
ಬಾಲು ನಾಗೇಂದ್ರ ವಕ್ಕಲಿಗರ ಹುಡುಗ. ದಿವ್ಯಾ ಕೊಂಕಣಿ ಬ್ರಾಹ್ಮಣ ಮನೆತನದ ಹುಡುಗಿ. ಇಬ್ಬರೂ ವರ್ಷಾನುಗಟ್ಟಲೆ ಪ್ರೀತಿಸಿಯೇ ಮದುವೆಯಾಗುವ ನಿರ್ಧಾರ ಮಾಡಿದ್ದರು. ಇದು ದಿವ್ಯಾಳ ತಂದೆ ನರೇಂದ್ರನಿಗೆ ಬಿಲ್ಕುಲ್ ಇಷ್ಟವಿರಲಿಲ್ಲ. ಯಾವಾಗ ಇವರಿಬ್ಬರೂ ಬಿಟ್ಟಿರೋದಿಲ್ಲ ಅಂತಾ ಗೊತ್ತಾಯಿತೋ, ಆಗ ಮೇಲ್ನೋಟಕ್ಕೆ ಒಪ್ಪಿದವರಂತೆ ನಟಿಸಿ ಮದುವೆಯನ್ನೂ ಮಾಡಿಕೊಟ್ಟಿದ್ದರು. ‘ಹೋಗಿ ಹೋಗಿ ಆ ಕನ್ನಡದ ನನ್ ಮಗನ್ನ ಕಟ್ಟಿಕೊಳ್ಳುತ್ತಿದ್ದೀಯ.. ನಿಮ್ಮಿಬ್ಬರನ್ನು ಉಳಿದು ಬಾಳಲು ನಾನು ಬಿಡೋದಿಲ್ಲ. ನಿಮ್ಮ ಮದುವೇನ ಹೇಗೆ ಕಿತ್ತಾಕಬೇಕು ಅಂತಾ ನನಗೆ ಗೊತ್ತು. ಎಂದು ಶಪಥ ಮಾಡಿಯೇ ಮದುವೆಗೆ ಸಮ್ಮತಿಸಿತ್ತು ಈ ನರೇಂದ್ರ ರಾವು!
ಕನ್ನಡ ವರ್ಸಸ್ ಕೊಂಕಣಿ! : ಇದೇನಿದು ‘ಕನ್ನಡದ ನನ್ ಮಗ ಅನ್ನೋದು ಬೈಗುಳವಾ ಅನ್ನೋ ಆಶ್ಚರ್ಯ ಉಂಟಾಗಬಹುದು. ದಿವ್ಯಾಳ ತಂದೆ ನರೇಂದ್ರ ಮತ್ತು ತಾಯಿ ಪ್ರಭಾ ಭಯಂಕರ ಕೊಂಕಣಿ ವ್ಯಾಮೋಹಿಗಳು. ಇರಲಿ ಬಿಡಿ ಅದು ನಮ್ಮ ಪ್ರಾದೇಶಿಕ ಭಾಷೆಯಲ್ಲವಾ ಅಂದುಕೊಂಡರೆ ಇವರಿಗೆ ಕನ್ನಡವೆಂದರೇನೆ ಅಲರ್ಜಿ!
ಗಂಡ ಹೆಂಡತಿಯ ನಡುವೆ ಸಣ್ಣ ಮುನಿಸಾಗಿದೆ ಅನ್ನೋ ವಿಚಾರ ತಿಳಿದುಕೊಂಡ ನರೇಂದ್ರ ತನ್ನ ಹೆಂಡತಿ ಪ್ರಭಾ, ಮಗ ನಿಖಿಲ್ ರಾವ್ ಜೊತೆ ಸೇರಿ ಸಂಚು ರೂಪಿಸಿ ದಿವ್ಯಾಳನ್ನು ಮನೆಗೆ ಕರೆದುಕೊಂಡು ಹೋಗಿ, ಹೌಸ್ ಅರೆಸ್ಟ್ ಮಾಡಿದ್ದರು. ಬಾಲು ನಾಗೇಂದ್ರ ವಿರುದ್ಧ ದೂರು ಕೊಡಿಸಿದ್ದರು. ಅದೂ ದೂರಿನಲ್ಲಿ ಏನಂತಾ ಬರೆಸಿದ್ದರು ಗೊತ್ತಾ? ‘ಕನ್ನಡ ಮಾತಾಡು, ಮಗುವಿನ ಜೊತೆ ಕನ್ನಡದಲ್ಲೇ ಮಾತಾಡಬೇಕು ಅಂತಾ ಕಿರುಕುಳ ನೀಡುತ್ತಾನೆ ಎಂದು! ಈ ಪ್ರಕರಣ ಬಸವನ ಗುಡಿ ಮಹಿಳಾಠಾಣೆಯಲ್ಲಿ ದಾಖಲಾಗಿತ್ತು. ವಿಚಾರಣೆಗೆಂದು ಕರೆದರೆ ದಿವ್ಯಾಳ ಬದಲಿಗೆ ಆಕೆಯ ಮನೆಯವರೇ ಬರುತ್ತಿದ್ದರು. ಹೇಗಾದರೂ ಮಾಡಿ ನನ್ನ ಹೆಂಡತಿ ಮಗುವನ್ನು ನೋಡುವ ಅವಕಾಶ ಮಾಡಿಕೊಡಿ ಅಂತಾ ಸ್ವತಃ ಬಾಲು ವಿನಂತಿಸಿದ್ದರು. ಬಸವನಗುಡಿ ಮಹಿಳಾ ಠಾಣೆಯ ಅಧಿಕಾರಿ ಸತ್ಯವತಿ ನಿಜಕ್ಕೂ ದೇವರಂತಾ ಮಹಿಳೆ. ಅವರ ಸರ್ವೀಸಿನಲ್ಲಿ ಇಂತಾ ಅದೆಷ್ಟು ಜನ ಮನೆ ಮುರುಕರನ್ನು ನೋಡಿದ್ದಾರೋ? ದಿವ್ಯಾ ಮನೆಯವರ ಸ್ಕೆಚ್ಚು, ಪ್ಲಾನುಗಳನ್ನು ಅರ್ಥ ಮಾಡಿಕೊಂಡ ಮೇಡಮ್ಮು ‘ಮೊದಲು ದಿವ್ಯಾಳನ್ನು ಕರೆದುಕೊಂಡು ಬಂದು ಕೂರಿಸಿ ಅಂತಾ ಗದರಿದ್ದರು. ಹಾಗೆ ಬಂದ ದಿವ್ಯಾ ನಡೆದದ್ದನ್ನೆಲ್ಲಾ ವಿವರಿಸಿದ್ದರು. ಮನೆಯಲ್ಲಿ ಕೂಡಹಾಕಿಕೊಂಡು, ಮತ್ತೆ ನೀನು ಆ ಕನ್ನಡದವನ ಜೊತೆ ಹೋದ್ರೆ ನಾವು ಪ್ರಾಣ ಬಿಡ್ತೀವಿ ಅಂತಾ ತನ್ನ ತಾಯಿ ಹೆದರಿಸಿದ್ದಾಗಿಯೂ, ಒತ್ತಾಯಪೂರ್ವಕವಾಗಿ ಸಹಿ ಹಾಕಿಸಿ ದೂರು ಕೊಡಿಸಿದ್ದಾಗಿಯೂ ಒಪ್ಪಿಕೊಂಡಿದ್ದರು. ಮೊದಲೇ ಪ್ರೀತಿಸಿ ಮದುವೆಯಾದವರು, ಗಂಡನನ್ನು ನೋಡುತ್ತಿದ್ದಂತೇ ದಿವ್ಯಾ ಎಲ್ಲವನ್ನೂ ಹೇಳಿಕೊಂಡು ದೂರು ವಾಪಾಸು ಪಡೆದಿದ್ದರು.
ಆದರೆ ನರೇಂದ್ರ ರಾವ್ ಮತ್ತು ಆತನ ಕುಟುಂಬದವರ ಕಿತಾಪತಿ ಇಲ್ಲಿಗೇ ನಿಂತಿಲ್ಲ. ದಿವ್ಯಾ ತನ್ನ ಒಡವೆ ಇತ್ಯಾದಿಗಳನ್ನು ತೆಗೆದುಕೊಂಡು ಗಂಡನ ಮನೆಗೆ ಬಂದಿದ್ದಾರೆ. ಅದಾಗಲೇ ದಿವ್ಯಾ ಮತ್ತು ಮಗು ಹನುಮಂತನಗರದಲ್ಲಿರುವ ಬಾಲು ಮನೆಗೆ ವಾಪಾಸಾಗಿ ತಿಂಗಳಾಗಿದೆ. ಈಗ ದಿಢೀರಂತಾ ರಾಮಮೂರ್ತಿನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂಜೀವರಾಯಪ್ಪ ಕರೆ ಮಾಡಿ “ನಿನ್ನ ಮತ್ತು ನಿನ್ನ ಹೆಂಡತಿ ಮೇಲೆ ಕಂಪ್ಲೇಂಟ್ ಕೊಟ್ಟಿದಾರೆ ಬನ್ನಿ ಅಂದಿದ್ದಾರಂತೆ.
ಅವರ ಪ್ರಕಾರ ನರೇಂದ್ರ ರಾವ್ ತನ್ನ ಮಗಳ ವಿರುದ್ಧವೇ ದೂರು ದಾಖಲಿಸಿದ್ದಾರಂತೆ. ಎರಡು ತಿಂಗಳಿಗೆ ಮುಂಚೆ ಮಗಳಿಂದ ಅಳಿಯನ ಮೇಲೆ ಕಂಪ್ಲೇಂಟು ಕೊಡಿಸಿದ್ದ ಈತ ಈಗ ಮಗಳು ಮತ್ತೆ ಅಳಿಯನ ಜೊತೆ ಸೇರಿಬಿಟ್ಟಳು ಅನ್ನೋ ದ್ವೇಷದಲ್ಲಿ ಮಗಳ ವಿರುದ್ಧವೇ ದೂರು ಕೊಡುತ್ತಾನೆ ಎಂದರೆ, ಈತನಿಗೆ ಅದೆಂತಾ ದುಷ್ಟತನವಿರಬೇಕು ಲೆಕ್ಕ ಹಾಕಿ. ನರೇಂದ್ರ ರಾವ್ ಅನ್ನೋ ವ್ಯಕ್ತಿ ಕನ್ನಡ ದ್ವೇಷಿ, ಕೊಂಕಣಿ ವ್ಯಾಮೋಹಿ ಅನ್ನೋದು ಬಿಟ್ಟರೆ ಉಳಿದಂತೆ ಈತನ ಕಪಟನಾಟಕಕ್ಕೆ ಸೂತ್ರಧಾರಿಯಂತೆ ಕೆಲಸ ಮಾಡುತ್ತಿರೋದು ದಿವ್ಯಾಳ ಚಿಕ್ಕಮ್ಮ ಪೂರ್ಣಿಮಾ ಅನ್ನೋ ಹೆಂಗಸು. ವರಸೆಯಲ್ಲಿ ನಿರೂಪಕಿ ಅನುಶ್ರೀಗೂ ಈಕೆ ಚಿಕ್ಕಮ್ಮ ಅಂತೆ. ಇವರೆಲ್ಲರಿಗೂ ಒಂದೇ ಮನಸ್ಸು. ಈ ಸಂಬಂಧವನ್ನು ಮುರಿದುಹಾಕಿ, ಆ ಮೂಲಕ ಸದಾ ಕನ್ನಡ ಕನ್ನಡ ಅನ್ನುವ ಬಾಲು ನಾಗೇಂದ್ರನ ಬದುಕು ಹಾಳುಮಾಡಬೇಕು ಅನ್ನೋದು.
ನೆನ್ನೆಯಷ್ಟೇ ರಾಜ್ಯೋತ್ಸವ ನೆರವೇರಿದೆ. ಈ ತಿಂಗಳಿಡೀ ಎಲ್ಲೆಲ್ಲೂ ಕನ್ನಡ ಘೋಷ ಮೊಳಗುತ್ತಿರುತ್ತದೆ. ಆದರೆ ಬಾಲು ನಾಗೇಂದ್ರ ಅನ್ನೋ ಅಪ್ಪಟ ಕನ್ನಡದ ಪ್ರತಿಭೆ ಕನ್ನಡ ಪ್ರೀತಿಯಿಂದ ತನ್ನ ಖಾಸಗೀ ಬದುಕಿನಲ್ಲಿ ‘ಕನ್ನಡದ ನನ್ ಮಗ ಅನ್ನಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಬಾಲು ಬಿಡುಗಡೆಗೆ ತಯಾರಾಗಿರುವ ಕಪಟನಾಟಕ ಪಾತ್ರಧಾರಿ ಸಿನಿಮಾದ ಪ್ರಚಾರಕ್ಕೂ ಹೋಗಲಾರದೆ ಒದ್ದಾಡುವಂತಾಗಿದೆ!