ಝೈದ್ ಖಾನ್ ಮತ್ತು ಸೋನಲ್ ಮೊಂತೆರೋ ಅಭಿನಯದ ‘ಬನಾರಸ್’ ಚಿತ್ರ ನವೆಂಬರ್ 04ರಂದು ದೇಶಾದ್ಯಂತ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಕೇರಳ ರಾಜ್ಯಕ್ಕೆ ಚಿತ್ರದ ಮಲಯಾಳಂ ಅವತರಣಿಕೆಯ ವಿತರಣೆಯ ಹಕ್ಕುಗಳನ್ನು ಮುಲಕುಪ್ಪಡಮ್ ಫಿಲಂಸ್ ಸಂಸ್ಥೆಯು ಪಡೆದುಕೊಂಡಿತ್ತು. ಈಗ ಕರ್ನಾಟಕ ವಿತರಣಾ ಹಕ್ಕನ್ನು ಖ್ಯಾತ ವಿತರಣಾ ಸಂಸ್ಥೆ ಡಿ ಬೀಟ್ಸ್ ಪಡೆದುಕೊಂಡಿದೆ.
ವಿ. ಹರಿಕೃಷ್ಣ ಒಡೆತನದ ಡಿ ಬೀಟ್ಸ್ ಸಂಸ್ಥೆಯು ಮೊದಲು ಆಡಿಯೋ ಕಂಪನಿಯಾಗಿತ್ತು. ನಿರ್ಮಾಪಕಿ ಶೈಲಜಾ ನಾಗ್ ಅವರು ಹರಿಕೃಷ್ಣ ಜೊತೆಗೆ ಕೈಜೋಡಿಸಿದ ನಂತರ ಕ್ರಮೇಣ ಚಿತ್ರರಂಗದ ಬೇರೆಬೇರೆ ವಲಯಗಳತ್ತಲೂ ಡಿ ಬೀಟ್ಸ್ ಸಂಸ್ಥೆ ಹೆಜ್ಜೆ ಇಟ್ಟಿದೆ. ಈ ಪೈಕಿ ವಿತರಣೆ ಸಹ ಒಂದು. ಕರೊನಾಗೂ ಮುಂಚೆಯೇ ಡಿ ಬೀಟ್ಸ್ ವಿತರಣೆ ಕ್ಷೇತ್ರಕ್ಕೆ ಕೈಹಾಕುವ ಪ್ರಯತ್ನಕ್ಕೆ ಮುಂದಾಗಿತ್ತು. ಆದರೆ, ಸ್ವಲ್ಪ ವಿಳಂಬವಾಗಿ ಕಳೆದ ವರ್ಷ ನವೆಂಬರ್ನಲ್ಲಿ ಡಿ ಬೀಟ್ಸ್ನ ವಿತರಣಾ ಸಂಸ್ಥೆ ಅಧಿಕೃತವಾಗಿ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ದರ್ಶನ್ ಅಭಿನಯದ ‘ಕ್ರಾಂತಿ’ ಸೇರಿದಂತೆ ಹಲವು ಚಿತ್ರಗಳನ್ನು ರಾಜ್ಯದಲ್ಲಿ ವಿತರಿಸಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ.

ಮೊದಲ ಹಂತವಾಗಿ ಜಯತೀರ್ಥ ನಿರ್ದೇಶನದ ‘ಬನಾರಸ್’ ಚಿತ್ರವನ್ನು ಡಿ ಬೀಟ್ಸ್ ಕೈಗೆತ್ತಿಕೊಂಡಿದ್ದು, ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ. ಕನ್ನಡ ಮತ್ತು ಮಲಯಾಳಂ ನಂತರ ಮುಂದಿನ ದಿನಗಳಲ್ಲಿ ತೆಲುಗು, ಹಿಂದಿ ಮತ್ತು ತಮಿಳಿನ ಪ್ರತಿಷ್ಠಿತ ನಿರ್ಮಾಣ ಮತ್ತು ವಿತರಣೆ ಸಂಸ್ಥೆಗಳು ಬನಾರಸ್ ಚಿತ್ರದ ತೆಲುಗು, ಹಿಂದಿ ಮತ್ತು ತಮಿಳು ಅವತರಣಿಕೆಗಳ ವಿತರಣಾ ಹಕ್ಕುಗಳನ್ನು ಕೊಳ್ಳುವ ಸಾಧ್ಯತೆ ಇದೆ.

ಇನ್ನು, ‘ಬನಾರಸ್’ ಚಿತ್ರದ ಪ್ರಚಾರಕ್ಕಾಗಿ ಝೈದ್ ಮತ್ತು ಸೋನಲ್ ಊರೂರು ತಿರುಗುತ್ತಿದ್ದಾರೆ, ಇತ್ತೀಚೆಗೆ ಮುಂಬೈಗೆ ಹೋದ ಬನಾರಸ್ ಜೋಡಿ, ಅಲ್ಲಿ ಚಿತ್ರದ ಪ್ರಚಾರ ಮಾಡಿ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ನಗರಗಳಿಗೆ ಹೋಗಿ ಈ ಜೋಡಿ ಚಿತ್ರದ ಪ್ರಚಾರ ಮಾಡಲಿದೆ. ಈ ಮಧ್ಯೆ, ಮಾಯಗಂಗೆ ಸೇರಿದಂತೆ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

‘ಬನಾರಸ್’ ಚಿತ್ರದಲ್ಲಿ ಝೈದ್ ಖಾನ್, ಸೋನಲ್, ಅಚ್ಯುತ್ ಕುಮಾರ್ ಮುಂತಾದವರು ನಟಿಸಿದ್ದು, ಜಯತೀರ್ಥ ಬರೆದು ನಿರ್ದೇಶನ ಮಾಡಿದ್ದಾರೆ. ತಿಲಕ್ರಾಜ್ ಭಲ್ಲಾಳ್ ನಿರ್ಮಿಸಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.