ದರ್ಶನ್ ಸಾಮಾನ್ಯವಾಗಿ ಬೇರೆಯವರ ಚಿತ್ರಗಳ ಬಗ್ಗೆ ಮಾತಾಡೋದಿಲ್ಲ. ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ಈಗ ಅವರು ‘ಬನಾರಸ್’ ಚಿತ್ರವನ್ನು ಪ್ರಶಂಸಿಸದ್ದಾರೆ. ಕಾರಣ, ಚಿತ್ರವನ್ನು ಅವರು ನೋಡಿದ್ದು, ಬಹಳವಾಗಿ ಮೆಚ್ಚಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ‘ನಾನು ಸಿನಿಮಾ ನೋಡಿದ್ದೇನೆ. ಈ ಹಿಂದೆ ಜೈದ್ಗೆ ಚಿತ್ರ ನೋಡುತ್ತೇನೆ ಎಂದು ಪ್ರಾಮಿಸ್ ಮಾಡಿದ್ದೆ. ಅವನೊಂಥರಾ ಬೆನ್ನಿಗೆ ಬಿದ್ದ ಬೇತಾಳದ ತರಹ. ಅದೊಂದು ದಿನ ರಾತ್ರಿಯೆಲ್ಲಾ ಕ್ರಾಂತಿ ಚಿತ್ರದ ಫೈಟಿಂಗ್ ಚಿತ್ರೀಕರಣ ಮುಗಿಸಿ ಬೆಳಿಗ್ಗೆ ಮನೆಗೆ ಬಂದೆ. ವರ್ಕೌಟ್ ಮಾಡಿ, ಸ್ನಾನ ಮಾಡಿ, ತಿಂಡಿ ತಿಂದು ಮಲಗೋಣ ಎಂದು ಪ್ಲಾನ್ ಮಾಡಿದ್ದೆ. ಅಷ್ಟರಲ್ಲಿ ಜೈದ್ ಬಂದ. ಚಿತ್ರ ನೋಡುತ್ತೀನಿ ಎಂಬ ನನ್ನ ಪ್ರಾಮಿಸ್ ನೆನಪಿಸಿದ. ಇನ್ನೊಂದು ದಿನ ನೋಡೋಣ, ಸುಸ್ತಾಗುತ್ತಿದೆ ಎಂದೆ. ಅವನು ಬಿಡಲಿಲ್ಲ. ಕೊನೆಗೆ ಅಡುಗೆ ಏನು ಮಾಡಿಸಿದ್ದೀಯಾ ಎಂದು ಕೇಳಿದೆ. ಅವನು ಲಿಸ್ಟ್ ಹೇಳಿದ. ಹೋಗಿ ಚೆನ್ನಾಗಿ ತಿಂದು ಮಲಗಿದರಾಯಿತು ಅಂತಂದುಕೊಂಡು ಹೋದೆ’ ಎನ್ನುತ್ತಾರೆ ದರ್ಶನ್.
ಝೈದ್ ದೊಡ್ಮನೆ ಹುಡುಗ, ಶೋಕಿಗಾಗಿ ಸಿನಿಮಾ ಮಾಡಿರಬಹುದು ಅಂತಂದುಕೊಂಡಿದ್ದರಂತೆ ದರ್ಶನ್. ಆದರೆ, ಅವರ ನಂಬಿಕೆ ಸುಳ್ಳಾಯಿತಂತೆ. ‘ಏನೇ ಆದರೂ ಅವನು ದೊಡ್ಡ ಮನೆಯಿಂದ ಬಂದವನು. ಶೋಕಿಗಾಗಿ ಸಿನಿಮಾ ಮಾಡಿರಬಹುದು. ಇವನಿಗೆ ಏನೂ ಗೊತ್ತಿಲ್ಲ, ಏನೂ ಬರುವುದಿಲ್ಲ ಅಂತಂದುಕೊಂಡಿದ್ದೆ. ಊಟ ಮಾಡಿ ಸೀಟಿಗೆ ಒರಗಿಕೊಂಡೆ. ಹತ್ತೇ ನಿಮಿಷ. ಆಮೇಲೆ ಸರಿಯಾಗಿ ಕೂತವನು ಸಿನಿಮಾ ಮುಗಿಯುವವರೆಗೂ ಅಲ್ಲಾಡಲಿಲ್ಲ. ಎರಡೂವರೆ ಗಂಟೆ ಪೂರ್ತಿ ಸಿನಿಮಾ ನೋಡಿದೆ. ಸಿನಿಮಾ ನೋಡಿದ ಮೇಲೆ ನನಗನಿಸಿದ್ದು ಏನೆಂದರೆ, ಜೈದ್ ಹೊಸಬ ಅಲ್ಲ, ನಾಲ್ಕು ಸಿನಿಮಾ ಮಾಡಿದ ಅನುಭ ಅವನಿಗಿದೆ. ಕಂಟೆಂಟ್ ಸಿನಿಮಾ ಎನ್ನುತ್ತಾರಲ್ಲ, ಆ ತರಹದ ಸಿನಿಮಾ ಇದು. ಈ ಚಿತ್ರದಲ್ಲಿ ಜೈದ್ ತನಗೇನು ಬರತ್ತೆ ಅಂತ ತೋರಿಸಿದ್ದಾನೆ. ಬಹಳ ಸರಳವಾಗಿ ಈ ಚಿತ್ರವನ್ನು ಹ್ಯಾಂಡಲ್ ಮಾಡಿದ್ದಾರೆ. ಈ ಚಿತ್ರವು ಎಲ್ಲರಿಗೂ ಇಷ್ಟ ಆಗುತ್ತೆ ಎಂಬ ನಂಬಿಕೆ ಇದೆ. ನಿಜಕ್ಕೂ ಒಳ್ಳೆಯ ಸಿನಿಮಾ ಮಾಡಿದ್ದಾರೆ’ ಎಂದು ಸರ್ಟಿಫಿಕೇಟ್ ಕೊಡುತ್ತಾರೆ ದರ್ಶನ್.
‘ಬನಾರಸ್’ ಚಿತ್ರವನ್ನು ಜಯತೀರ್ಥ ಬರೆದು ನಿರ್ದೇಶನ ಮಾಡಿದ್ದು, ತಿಲಕ್ರಾಜ್ ಬಲ್ಲಾಳ್ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಜೈದ್ ಖಾನ್, ಸೋನಲ್, ಅಚ್ಯುತ್ ಕುಮಾರ್ ಮುಂತಾದವರು ನಟಿಸಿದ್ದು ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.
No Comment! Be the first one.