ಹಿರಿಯ ನಿರ್ದೇಶಕ ನಾಗಾಭರಣ ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿ ಸ್ಥಾಪನೆಯಾದಾಗ ಅಧ್ಯಕ್ಷರಾಗಿದ್ದವರು. ಆ ಸಂದರ್ಭದಲ್ಲೇ ಅಂತಾರಾಷ್ಟ್ರೀಯ ಚಿತ್ರೋತ್ಸವ ಆರಂಭವಾಯಿತು. ಆ ನಂತರ ತಾರಾ ಅನುರಾಧಾ ಒಂದಿಷ್ಟು ದಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅತಿ ಹೆಚ್ಚು ಕಾಲಾವಧಿ ಈ ಖುರ್ಚಿಯಲ್ಲಿ ಕುಳಿತಿದ್ದರು. ನಂತರ ನಾಗತಿಹಳ್ಳಿ ಚಂದ್ರಶೇಖರರ ಜಾಗಕ್ಕೆ ಕಿರುತೆರೆಯ ಪುರಾತನ ಕಲಾವಿದ, ನಿರ್ದೇಶಕ ಸುನೀಲ್ ಪುರಾಣಿಕ್ ಬಂದಿದ್ದಾರೆ. ಪುರಾಣಿಕ್ ತಮ್ಮ ಅಧಿಕಾರವನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ, ದೊಡ್ಡ ಮಟ್ಟದ ಸಾಧನೆ ಮಾಡುತ್ತಾರೆ ಅನ್ನೋ ಭರವಸೆ ಈ ಕ್ಷಣಕ್ಕೂ ಚಾಲ್ತಿಯಲ್ಲಿದೆ. ಅದರ ಜೊತೆಗೆ ತೀರಾ ಕೆಲಸ ಮಾಡಿದ ಹುಡುಗರ ಭತ್ಯೆ ಕೊಡಿಸುವಲ್ಲಿ ಪುರಾಣಿಕ್ ವಿಫಲರಾದರಾ ಅನ್ನೋ ಪ್ರಶ್ನೆಯೂ ಮೂಡುತ್ತಿದೆ!
ಕಳೆದ ಹನ್ನೆರಡು ವರ್ಷಗಳಿಂದ ಕರ್ನಾಟಕ ಸರ್ಕಾರದ ವತಿಯಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿದೆ. ವಾರ್ತಾ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹಯೋಗದಲ್ಲಿ ಏಳು ದಿನಗಳ ಕಾಲ ನಡೆಯುವ ಈ ಸಿನಿಮೋತ್ಸವದ ಹಿಂದೆ ಸಾವಿರಾರು ಜನ ದುಡಿದಿರುತ್ತಾರೆ. ದೇಶ ವಿದೇಶಗಳಿಂದ, ಹೊರ ರಾಜ್ಯಗಳಿಂದ ಬಂದ ನೂರಾರು ಸಿನಿಮಾಗಳ ಪ್ರದರ್ಶನವಾಗುತ್ತದೆ. ಸಿನಿಮಾಗಳ ಜೊತೆ ಆಯಾ ಚಿತ್ರಗಳ ನಿರ್ದೇಶಕ, ತಂತ್ರಜ್ಞರು ಆಗಮಿಸಿರುತ್ತಾರೆ. ಅವರಿಗೆಲ್ಲಾ ಉಳಿದುಕೊಳ್ಳುವ ಮತ್ತು ಓಡಾಟದ ವ್ಯವಸ್ಥೆ ಮಾಡಲಾಗುತ್ತದೆ. ಆರಂಭದ ದಿನಗಳಲ್ಲಿ ಹೆಸರಾಂತ ಸಿನಿಮಾ ಮಂದಿಯನ್ನು ಹಣ ಕೊಟ್ಟು ಕರೆಸಿ ದೊಡ್ಡ ಸಮಾರಂಭ ಕೂಡಾ ನಡೆಸಲಾಗುತ್ತದೆ. ಕಡೇ ದಿನ ಪಾರ್ಟಿ ಕೂಡಾ ನೆರವೇರುತ್ತದೆ. ಇವಕ್ಕೆಲ್ಲಾ ಕೋಟ್ಯಂತರ ಹಣವನ್ನು ಸರ್ಕಾರ ಖರ್ಚು ಮಾಡುತ್ತದೆ.
ಕಳೆದ ಹನ್ನೆರಡು ವರ್ಷಗಳಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಉತ್ಸವ ಉತ್ತಮ ರೀತಿಯಲ್ಲಿ ನಡೆದು ಏನಾದರೂ ಒಂದಿಷ್ಟು ಹೆಸರು ಬಂದಿದೆಯೆಂದರೆ ಅದಕ್ಕೆ ಬಹುಮುಖ್ಯ ಕಾರಣ ಬೆಳಗಿನಿಂದ ಸಂಜೆ ತನಕ ನಿಂತು ಕಾರ್ಯಕ್ರಮ ರೂಪಿಸುವ ಸ್ವಯಂಸೇವಕರು. ಬೆಂಗಳೂರಿನ ಕಾಲೇಜುಗಳಲ್ಲಿ ಪತ್ರಿಕೋದ್ಯಮ ಕಲಿಯುತ್ತಿರುವವರು ಸೇರಿದಂತೆ ಒಂದಿಷ್ಟು ವಿದ್ಯಾರ್ಥಿಗಳು, ಕಲಾವಿದರುಗಳನ್ನು ಆಯ್ಕೆ ಮಾಡಿಕೊಂಡು ಈ ಕೆಲಸಕ್ಕೆ ನೇಮಿಸಿರುತ್ತಾರೆ. ಕಳೆದ ಫೆಬ್ರವರಿಯಲ್ಲಿ ನಡೆದ 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸರಿಸುಮಾರು ನಾನ್ನೂರು ಜನ ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಿದ್ದರು. ಇವರಿಗೆ ದಿನವೊಂದಕ್ಕೆ ಆರುನೂರು ರುಪಾಯಿಗಳ ಗೌರವ ಧನ ನೀಡುವುದಾಗಿ ತಿಳಿಸಿದ್ದರು. ಕಾಲೇಜು ವಿದ್ಯಾರ್ಥಿಗಳ ಪಾಲಿಗೆ ಎಂಟು ದಿನಗಳ ದುಡಿಮೆಯಿಂದ ಬಂದ ಹಣ ಅಮೂಲ್ಯವಾದದ್ದು. ಇದನ್ನು ಹೇಗೆಲ್ಲಾ ವಿನಿಯೋಗಿಸಬೇಕು ಅಂತಾ ಮೊದಲೇ ಪ್ಲಾನು ಮಾಡಿಕೊಂಡಿರುತ್ತಾರೆ. ಪುಸ್ತಕಗಳನ್ನು ಕೊಳ್ಳಬೇಕು, ಫೀಸು ಕಟ್ಟಬೇಕು, ಬಟ್ಟೆ ಖರೀದಿಸಬೇಕು ಎಂಬಿತ್ಯಾದಿ ಯೋಜನೆಗಳಿರುತ್ತವೆ. ಓದುವ ಮಕ್ಕಳ ಇಂಥಾ ಕನಸಿಗೆ ಸರ್ಕಾರ ನಿಜಕ್ಕೂ ತಣ್ಣೀರೆರಚಿದೆ.
ದಿನವೊಂದಕ್ಕೆ ಆರುನೂರು ರುಪಾಯಿಗಳನ್ನು ಕೊಡುವ ಮಾತಾಡಿದ ಅಕಾಡೆಮಿಯಿಂದ ವಿದ್ಯಾರ್ಥಿಗಳಿಗೆ ಸಂದಾಯವಾಗಿರುವುದು ಇನ್ನೂರೈವತ್ತು ರೂಪಾಯಿಗಳು ಮಾತ್ರ. ಒಪ್ಪಿಕೊಂಡಿದ್ದರಲ್ಲಿ ಅರ್ಧವನ್ನೂ ನೆಟ್ಟಗೆ ಕೊಡದೆ, ಉಳಿದ ಅಮೌಂಟು ಈಗ ಕೊಡ್ತೀವಿ, ಆಗ ಕೊಡ್ತೀವಿ ಅಂತಾ ಆಟವಾಡಿಸಿದ್ದರು. ನೋಡೋತನಕ ನೋಡಿ ವಾಲಂಟಿರುಗಳಾಗಿ ದುಡಿದಿದ್ದವರೆಲ್ಲಾ ಸೇರಿ ವಾರ್ತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್ ಅವರಿಗೆ ಟ್ವೀಟ್ ಮಾಡಿದ್ದರು. ಐ.ಎ.ಎಸ್. ಪಿ. ಮಣಿವಣ್ಣನ್ ಕರ್ನಾಟಕದ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ. ತಮ್ಮ ವ್ಯಾಪ್ತಿಯಲ್ಲಿ ಯಾರದ್ದೇ ಸಮಸ್ಯೆಗಳು ಎದುರಾದರೂ ತಕ್ಷಣ ಸ್ಪಂದಿಸಬಲ್ಲವರು. ಯಾವಾಗ ನಾನ್ನೂರು ಜನ ಸ್ವಯಂಸೇವಕರಿಗೆ ಅನ್ಯಾಯವಾಗಿದೆ ಅಂತಾ ಗೊತ್ತಾಯ್ತೋ ಕೂಡಲೇ ವಿಚಾರಿಸಿ ಹೇಳುವುದಾಗಿ ತಿಳಿಸಿದರು. ಅದಾಗಿ ಒಂದು ದಿನ ಕಳೆಯೋಹೊತ್ತಿಗೆ ದಿಢೀರಂತಾ ಅವರನ್ನು ಬೇರೆ ಜಾಗಕ್ಕೆ ಎತ್ತಂಗಡಿ ಮಾಡಲಾಗಿತ್ತು.
ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರನ್ನು ಕೇಳಿದರೆ ʻʻಸರ್ಕಾರ ನೀಡಿದ್ದ ಹಣವನ್ನು ವಾಪಾಸು ಪಡೆದುಕೊಂಡಿದೆ. ಈಗ ನಮ್ಮ ಬಳಿ ಹಣವಿಲ್ಲʼʼ ಎಂದು ಹೇಳುತ್ತಿದ್ದಾರಂತೆ. ಈ ಕರೋನಾ ಸಂಕಷ್ಟದ ಸಂದರ್ಭದಲ್ಲಾದರೂ ಬರಬೇಕಿರುವ ಬಾಕಿ ಹಣ ಕೈ ಸೇರಬಹುದು ಅಂತಾ ವಿದ್ಯಾರ್ಥಿಗಳು ಕಾದಿದ್ದೇ ಬಂತು ಈವರೆಗೂ ಕೈಸೇರಿಲ್ಲ. ಮುಖ್ಯ ಅತಿಥಿಗಳನ್ನು ಕರೆಸಿ ಸಮಾರಂಭ ನಡೆಸಲು, ಲಕ್ಷ, ಕೋಟಿಗಳ ಲೆಕ್ಕದಲ್ಲಿ ಖರ್ಚು ಮಾಡುವ ಸರ್ಕಾರ, ಅಕಾಡೆಮಿಗಳು ಶ್ರಮವಹಿಸಿ ದುಡಿದ ಹುಡುಗರ ದುಡ್ಡು ಕೊಡದೇ ಸತಾಯಿಸುತ್ತಿರುವುದು ಎಷ್ಟು ಸರಿ? ಸರ್ಕಾರದ ಅಧಿಕಾರಿಗಳು, ಅಕಾಡೆಮಿಯಲ್ಲಿ ಖುರ್ಚಿ ಹಿಡಿದು ಕುಂತವರಿಗೆ ಇದು ಸಣ್ಣ ಅಮೌಂಟಿರಬಹುದು. ಆದರೆ, ಕಷ್ಟದ ಹಿನ್ನೆಲೆಯಿಂದ ಬಂದು ಓದುತ್ತಿರುವ ವಿದ್ಯಾರ್ಥಿಗಳು, ಬಡ ಕಲಾವಿದರಿಗೆ ಈ ಹಣ ನಿಜಕ್ಕೂ ದೊಡ್ಡ ಮೊತ್ತವೇ ಆಗಿರುತ್ತದೆ. ಈ ಕೂಡಲೇ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಸ್ವಯಂ ಸೇವಕರಿಗೆ ತಲುಪಬೇಕಿರುವ ಹಣ ಏನಾಯಿತು? ಯಾವಾಗ ತಲುಪಲಿದೆ ಅನ್ನೋದರ ಬಗ್ಗೆ ಮಾಹಿತಿ ನೀಡಲಿ. ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದು, ಸದ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ, ಎಸ್.ಎನ್. ಸಿದ್ದರಾಮಪ್ಪನವರು ಈ ವಿಚಾರದ ಬಗ್ಗೆ ಗಮನಹರಿಸುವಂತಾಗಲಿ…