ಕೊರೋನಾ ಸಂಕಷ್ಟದಿಂದ ಇಡೀ ಜಗತ್ತು ಆರ್ಥಿಕ ಅಧಃಪತನಕ್ಕೀಡಾಗಿದೆ. ಸಾಕಷ್ಟು ಸಹಕಾರಿ ಸಂಘಗಳು, ಸ್ಥಳೀಯ ಬ್ಯಾಂಕುಗಳು ಸೂಪರ್ ಸೀಡ್ ಆಗಿವೆ. ಯೆಸ್ ಬ್ಯಾಂಕು ಠುಸ್ ಅಂದಿದೆ. ಕರ್ನಾಟಕದಲ್ಲೇ ಸಾಕಷ್ಟು ಸಹಕಾರಿ ಬ್ಯಾಂಕುಗಳು ಆರ್.ಬಿ.ಐ. ನಿಬಂಧನೆಗಳನ್ನು ಗಾಳಿಗೆ ತೂರಿ, ಒಳಗೊಳಗೇ ನಡೆಸಿದ ಅವ್ಯವಹಾರಗಳ ಕಾರಣಕ್ಕೆ ಕಣ್ಣುಮುಚ್ಚಿವೆ. ಶ್ರೀ ರಾಘವೇಂದ್ರ ಸ್ವಾಮಿಗಳ ಹೆಸರಿನಲ್ಲಿ ನಡೆಯುತ್ತಿರುವ ಬ್ಯಾಂಕನ್ನು ಸರ್ಕಾರ ಸುಪರ್ದಿಗೆ ತೆಗೆದುಕೊಳ್ಳುತ್ತಿರುವ ಸುದ್ದಿಯಿದೆ. ಈಗ ಹೆಚ್ಚೂ ಕಮ್ಮಿ ಅದೇ ಪಟ್ಟಿಗೆ ಮತ್ತೊಂದು ಸಹಕಾರಿ ಬ್ಯಾಂಕು ಸೇರುತ್ತದಾ ಅನ್ನೋ ಅನುಮಾನ ಮೂಡುತ್ತಿದೆ…

ಕನ್ನಡ ಚಿತ್ರರಂಗ ಕೂಡಾ ಹೀನಾಯ ಸ್ಥಿತಿ ತಲುಪಿದೆ. ಇನ್ನು ಸಿನಿಮಾ ನಿರ್ಮಾಪಕರೆನಿಸಿಕೊಂಡವರು ಒಂದಷ್ಟು ಬ್ಯಾಂಕು, ಸಹಕಾರ ಸಂಘಗಳಲ್ಲಿ ಎತ್ತಿರುವ ಸಾಲ ಯಾವ ಕಾಲಕ್ಕೆ ತೀರುತ್ತದೋ ಗೊತ್ತಿಲ್ಲ. ಅದು ಕೊರೋನಾ ಸಮಸ್ಯೆಯ ಆರಂಭಿಕ ದಿನಗಳು. ಇನ್ನೂ ಸರ್ಕಾರ ಲಾಕ್ಡೌನ್ ಕೂಡಾ ಅನೌನ್ಸ್ ಮಾಡಿರಲಿಲ್ಲ. ಆಗ ಕನ್ನಡ ಚಿತ್ರರಂಗದಲ್ಲಿ ಫೈನಾನ್ಷಿಯರ್ ಆಗಿ ಗುರುತಿಸಿಕೊಂಡಿದ್ದ, ವಿತರಕನಾಗಿಯೂ ಕಾರ್ಯ ನಿರ್ವಹಿಸುತ್ತಿದ್ದ ಕಪಾಲಿ ಮೋಹನ ಸಾಲ ಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೂಲಗಳ ಪ್ರಕಾರ ಇನ್ನೂರು ಕೋಟಿ ರುಪಾಯಿಗಳಿಗೂ ಅಧಿಕ ಸಾಲ ಕಪಾಲಿ ಮೋಹನ್ ಬೆನ್ನಿಗಿತ್ತಂತೆ. ಸಾಕಷ್ಟು ಸಹಕಾರ ಸಂಘಗಳಲ್ಲಿ ಮೋಹನ್ ಸಾಲ ತೆಗೆದುಕೊಂಡಿದ್ದರು ಅನ್ನೋ ಮಾತಿದೆ. ಚಾಮರಾಜಪೇಟೆಯಲ್ಲಿರುವ ಹೊಟೇಲ್ ಉದ್ಯಮದಾರರ ಸಹಕಾರ ಸಂಘವೊಂದಕ್ಕೇ ಮೋಹನ್ ಕಡೆಯಿಂದ ಸರಿಸುಮಾರು ಇಪ್ಪತ್ತು ಕೋಟಿ ರುಪಾಯಿಗಳಷ್ಟು ಹಣ ಸಂದಾಯವಾಗಬೇಕಿತ್ತಂತೆ.

ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ನೌಕರ, ಕನ್ನಡಪರ ಹೋರಾಟಗಾರ, ಕನ್ನಡ ಸಾಹಿತ್ಯ ಪರಿಷತ್ತಿನ ೨೪ನೇ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ, ಇತ್ತೀಚೆಗಷ್ಟೇ ನಿಧನರಾದ ಪುಂಡಲೀಕ ಹಾಲಂಬಿ ಹೊಟೇಲ್ ಇಂಡಸ್ಟ್ರಿಯಲ್ ಬ್ಯಾಂಕಿಗೆ ನಿರ್ದೇಶಕರಾಗಿ, ಗೌರವ ಕಾರ್ಯದರ್ಶಿಯಾಗಿ ಕೆಲಸ ಮಾಡಿ ನಂತರ ೧೯೯೭ರಲ್ಲಿ ಅಧ್ಯಕ್ಷರಾಗಿದ್ದರು. ವಾರ್ಷಿಕ ಮೂರು ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದ್ದ ಈ ಬ್ಯಾಂಕು ಹಾಲಂಬಿಯವರು ಅಧ್ಯಕ್ಷರಾಗಿ ಬಂದಮೇಲೆ ಮುನ್ನೂರು ಕೋಟಿ ರೂಪಾಯಿಗಳಷ್ಟು ವ್ಯವಹಾರ ಮಾಡುವ ಮಟ್ಟಕ್ಕೆ ಬೆಳೆಯಿತು ಅನ್ನೋ ಹಿರಿಮೆ ಹೊಂದಿದೆ. ಸದ್ಯ ಈ ಬ್ಯಾಂಕಿಗೆ ಶ್ಯಾಮಸುಂದರ ಐತಾಳ್ ಎನ್ನುವವರು ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಪ್ಪತ್ತು ವರ್ಷಗಳ ಹಿಂದೆ ಹೊಟೇಲ್ ಉದ್ಯಮದಾರರ ಸಂಘದ ಚಾಮರಾಜಪೇಟೆ ಶಾಖೆಯ ಮ್ಯಾನೇಜರ್ ಆಗಿದ್ದ ಶ್ಯಾಮ್ ಇವತ್ತು ಇಡೀ ಹೊಟೇಲ್ ಉದ್ಯಮದಾರರ ಸಹಕಾರ ಸಂಘದ ಪವರ್ ಫುಲ್ ಹುದ್ದೆಯಲ್ಲಿದ್ದಾರೆ. ಕನ್ನಡ ಚಿತ್ರರಂಗದ ಕೆಲವು ದೊಡ್ಡ ನಿರ್ಮಾಪಕರು ಇವರ ಆತ್ಮೀಯರಾಗಿದ್ದಾರೆ. ಹೊಟೇಲ್ ಉದ್ಯಮದಾರರ ಸಹಕಾರ ಸಂಘದ ನೂತನ ಕಟ್ಟಡಗಳು, ಹಳೇ ಬಿಲ್ಡಿಂಗುಗಳ ದುರಸ್ತಿ ಕಾರ್ಯವನ್ನು ನಡೆಸುತ್ತಿರೋದು ಕೂಡಾ ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದ ನಿರ್ಮಾಪಕರೊಬ್ಬರು ಎನ್ನುವ ಮಾತಿದೆ. ಸದರಿ ನಿರ್ಮಾಪಕರು ತಮ್ಮ ಮನೆ, ಆಫೀಸಿನ ಕೆಲಸಗಾರರು, ಕ್ಲೀನರುಗಳ ಹೆಸರಿನಲ್ಲೂ ಈ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದು, ಪ್ರತಿಯೊಬ್ಬರ ಹೆಸರಿನಲ್ಲೂ ಬೇಕುಬೇಕಾದಷ್ಟು ಸಾಲ (?) ಎತ್ತಿದ್ದಾರಂತೆ. ಸಾಲ ಪಡೆದು ನಿಯತ್ತಿನಿಂದ ಕಟ್ಟಿದರೆ ಪಡೆದವರು ಯಾರಾದರೇನು ಅಂತಾ ಸುಮ್ಮನಿರಬಹುದು. ವಂಚಿಸುವುದನ್ನೇ ಉದ್ದೇಶವಾಗಿಟ್ಟುಕೊಂಡಾಗ ಪಡೆದದ್ದು ಸಾಲವಾದರೇನು? ಸಹಾಯವಾದರೇನು? ನಂಬಿದವರಿಗೆ ಗುನ್ನಾ ಬೀಳೋದು ಗ್ಯಾರೆಂಟಿ. ಹೀಗಾಗಿ ಸಾಲ ಪಡೆದು ಮರುಪಾವತಿ ಮಾಡದೇ ಇರುವವರ ವಿರುದ್ಧ ಹೊಟೇಲ್ ಉದ್ಯಮದಾರರ ಸಹಕಾರ ಸಂಘ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದೆ. ಈ ಬ್ಯಾಂಕಿಗೆ ಬರೋಬ್ಬರಿ ಅರವತ್ತು ಕೋಟಿ ರೂಪಾಯಿಗಳಷ್ಟು ಬಾಕಿ ಹಣ ಬರಬೇಕಿದ್ದು, ಅದರಲ್ಲಿ ಮುಖ್ಯಪಾಲು ಚಿತ್ರರಂಗಕ್ಕೆ ಸಂಬಂಧಪಟ್ಟವರದ್ದೇ ಆಗಿದೆಯಂತೆ.

ತೀರಾ ಬರ್ಬಾದಾಗಿದ್ದೇನೆ, ಕೈಲಾದಷ್ಟು ಕೊಡ್ತೀನಿ, ಸಾಲದಿಂದ ಮುಕ್ತಿ ನೀಡಿ ಅಂತಾ ಖುದ್ದು ಕಪಾಲಿ ಮೋಹನ ಕೇಳಿಕೊಂಡಿದ್ದರೂ ಬ್ಯಾಂಕು ಒಪ್ಪಲಿಲ್ಲ ಎನ್ನುವ ಮಾತಿದೆ. ಅದು ಎಷ್ಟು ನಿಜವೋ ಗೊತ್ತಿಲ್ಲ. ಆದರೆ ಪಡೆದದ್ದರಲ್ಲಿ ನಯಾಪೈಸೆ ವಾಪಾಸು ಕೊಡದೇ ವಂಚಿಸುವವರ ನಡುವೆ ಒನ್ ಟೈಂ ಸೆಟಲ್ಮೆಂಟ್ ಅಂತಾ ಮರುಪಾವತಿ ಮಾಡಿಸಿಕೊಂಡು ಬಂದದ್ದನ್ನಾದರೂ ಪಡೆಯಬಹುದಲ್ಲವೇ? ಈಗ ಕಪಾಲಿ ಮೋಹನ ಸಾಲ ತೀರಿಸಲು ಆಗದೇ ಪ್ರಾಣ ತೆಗೆದುಕೊಂಡಿದ್ದಾರೆ. ಈಗ ಬ್ಯಾಂಕಾಗಲಿ, ಮತ್ತೊಬ್ಬರಾಗಲಿ ಏನು ಪಡೆಯಲು ಸಾಧ್ಯ…?

CG ARUN

ರಾಮುಡುಗೆ ಸಲಿಂಗಿಯಾಗೋ ಬಯಕೆಯಂತೆ….

Previous article

ಅಮ್ಮ ಕೂಡಾ ಬಿಟ್ಟು ಹೋದಳು…

Next article

You may also like

Comments

Leave a reply

Your email address will not be published. Required fields are marked *