ಕನ್ನಡದ ಸ್ಟಾರ್ ನಟರೊಬ್ಬರ ಹತ್ಯೆಗೆ ಸುಪಾರಿ ಕೊಡಲಾಗಿದೆ ಅನ್ನೋ ಸುದ್ದಿಯೊಂದು ಕೆಲದಿನಗಳಿಂದೀಚೆಗೆ ಸಂಚಲನವನ್ನೇ ಸೃಷ್ಟಿಸಿತ್ತು. ಈ ಸಂಬಂಧವಾಗಿ ರಾಡಿ ಸ್ಲಂ ಭರತ ಮತ್ತು ಶಫಿ ಎಂಬಿಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರಾದರೂ ಆರೋಪಿಗಳು ಏನನ್ನೂ ಬಾಯಿ ಬಿಟ್ಟಿರಲಿಲ್ಲ. ಆದರೀಗ ಅದೇ ಸಿಸಿಬಿ ಅಧಿಕಾರಿಗಳು ಮತ್ತೆ ಮೂವರು ಕ್ರಿಮಿಗಳನ್ನು ಬಲೆಗೆ ಕೆಡವಿಕೊಂಡಿದ್ದಾರೆ. ಅವರಲ್ಲೊಬ್ಬ ಬಾಯಿಬಿಟ್ಟ ಸ್ಫೋಟಕ ಸುದ್ದಿ ಸ್ಯಾಂಡಲ್ ವುಡ್ ಅನ್ನೇ ಬೆಚ್ಚಿಬೀಳಿಸುವಂತಿದೆ!
ಸ್ಲಂ ಭರತನನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದ ಹಿಂಚುಮುಂಚಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟರೊಬ್ಬರ ಕೊಲೆಗೆ ಸುಪಾರಿ ಕೊಡಲಾಗಿದೆ ಅನ್ನೋ ಸುದ್ದಿ ಹಬ್ಬಿಕೊಂಡಿತ್ತಲ್ಲಾ? ಆ ನಟ ರಾಕಿಂಗ್ ಸ್ಟಾರ್ ಯಶ್ ಎಂಬುದೀಗ ಜಾಹೀರಾಗಿದೆ. ಇನ್ನೂ ಆಘಾತಕಾರಿ ವಿಚಾರವೆಂದರೆ, ಈ ಸುಪಾರಿ ಕೊಟ್ಟಿದ್ದು ಸ್ಯಾಂಡಲ್ ವುಡ್ ಗೆ ಸಂಬಂಧಿಸಿದವರೇ ಎಂಬು ಸುಳಿವೂ ಆರೋಪಿಗಳ ಕಡೆಯಿಂದ ಸಿಕ್ಕಿದೆ! ಈಗ್ಗೆ ಎರಡು ದಿನಗಳ ಹಿಂದೆ ಸಿಸಿಬಿ ಅಧಿಕಾರಿಗಳಿಗೆ ಸುಪಾರಿ ತೆಗೆದುಕೊಂಡು ಕೊಲೆಗೆ ಹೊಂಚು ಹಾಕಿರೋ ರೌಡಿಗಳ ಬಗ್ಗೆ ನಿಖರ ಮಾಹಿತಿ ಸಿಕ್ಕಿತ್ತು. ಈ ಸಂಬಂಧವಾಗಿ ಅಖಾಡಕ್ಕಿಳಿದ ಪೊಲೀಸರಿಗೆ ಶೇಶಾದ್ರಿಪುರಂನ ಬಿಡಿಎ ಸಮೀಪದಲ್ಲಿ ತಗುಲಿಕೊಂಡಿದ್ದು ನಿತೇಶ್, ನಿತ್ಯಾನಂದ, ಮಧುಸೂಧನ ಮತ್ತು ಮಹೇಶನ ಗ್ಯಾಂಗು. ಇದರಲ್ಲಿ ಮಹೇಶ ಹೇಗೋ ಪರಾರಿಯಾದರೆ ಉಳಿಕೆ ಮೂವರನ್ನು ಸಿಸಿಬಿ ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದರು.
ಇವರ ಬುಡಕ್ಕೊದೆಯುತ್ತಲೇ ಸ್ಟಾರ್ ನಟನ ಕೊಲೆಗೆ ಸುಪಾರಿ ಕೊಟ್ಟ ಕೇಸಿಗೆ ಮತ್ತೆ ಜೀವ ಬಂದಂತಾಗಿದೆ. ಯಾಕೆಂದರೆ, ತಗುಲಿಕೊಂಡ ಟೀಮಿನಲ್ಲೊಬ್ಬನಾದ ನಿತೇಶ ಅಧಿಕಾರಿಗಳ ಮುಂದೆ ಸ್ಫೋಟಕ ವಿಚಾರವೊಂದನ್ನು ಒದರಿದ್ದ. ತಾವು ರಾಕಿಂಗ್ ಸ್ಟಾರ್ ಯಶ್ ಕೊಲೆಗೆ ಸುಪಾರಿ ಪಡೆದಿರೋದಾಗಿ ಒಪ್ಪಿಕೊಂಡಿದ್ದ ನಿತೇಶ, ಇದನ್ನು ಸ್ಲಂ ಭರತ ಮತ್ತು ಶಫಿ ಎಂಬಾತನ ಇಶಾರೆಯ ಮೇರೆಗೆ ಮಾಡಲು ಮುಂದಾಗಿದ್ದಾಗಿ ಹೇಳಿಕೊಂಡಿದ್ದಾನೆ. ಈ ಸ್ಲಂ ಭರತ ಮತ್ತು ಶಫಿಯನ್ನು ಅದಾಗಲೇ ಪೊಲೀಸರು ಬಂಧಿಸಿ ಬೆಂಡೆತ್ತಿದ್ದಾರೆ. ಅಷ್ಟಕ್ಕೂ ಸ್ಟಾರ್ ನಟನೊಬ್ಬನ ಕೊಲೆಗೆ ಸುಪಾರಿ ಕೊಟ್ಟಿದ್ದಾರೆನ್ನಲಾದ ಕೇಸೊಂದು ಬಿಚ್ಚಿಕೊಂಡಿದ್ದೇ ಇವರಿಬ್ಬರ ಕಾರಣದಿಂದ. ತಿಂಗಳ ಹಿಂದೆ ಬಾರೊಂದರಲ್ಲಿ ಕಠಮಟ್ಟ ಕುಡಿದು ತೂರಾಡುತ್ತಿದ್ದ ಭರತ ಮತ್ತು ಶಫಿ ಸ್ಟಾರ್ ನಟನ ಕೊಲೆ ಸುಪಾರಿಯ ಬಗ್ಗೆ ಮಾತಾಡಿದ್ದರಂತೆ. ಅದು ಬಾತ್ಮೀದಾರರ ಮೂಲಕ ಸಿಸಿಬಿ ಅಧಿಕಾರಿಗಳಿಗೂ ತಲುಪಿಕೊಂಡಿತ್ತು. ತಕ್ಷಣವೇ ಕಾರ್ಯಾಚರಣೆ ಶುರು ಮಾಡಿದ್ದ ಸಿಸಿಬಿ ಪೊಲೀಸರು ಬಂಧಿಸಲು ಹೋದಾಗ ಹುಂಬ ಭರತ ಪೊಲೀಸರ ಮೇಲೇ ದಾಳಿ ನಡೆಸಿದ್ದ. ಅಧಿಕಾರಿಗಳು ಆತನ ದೇಹಕ್ಕೊಂದು ಬುಲ್ಲೆಟ್ಟು ಹೊಕ್ಕಿಸಿದವರೇ ಬಂಧಿಸಿ ಕರೆ ತಂದಿದ್ದರು. ಈ ಬಗ್ಗೆ ಅಮೂಲಾಗ್ರ ತನಿಖೆ ನಡೆಸಿ ಭರತ ಮತ್ತು ಶಫಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದರು.
ಈಗ ಭರತ ಗುಂಡೇಟು ತಿಂದು ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೇನು ಈ ಸುಪಾರಿ ಪ್ರಕರಣದಿಂದ ಬಚಾವಾಗೋ ಸನ್ನಾಹದಲ್ಲಿದ್ದ ಭರತನ ಬಗ್ಗೆ ಆತನ ಚೇಲಾಗಳೇ ಬಾಯಿ ಬಿಟ್ಟಿದ್ದಾರೆ. ಇದೀಗ ಕಾನೂನು ಕ್ರಮಗಳನ್ನು ಅನುಸರಿಸಿ ಮತ್ತೆ ಭರತ ಮತ್ತು ಶಫಿಯನ್ನು ವಶಕ್ಕೆ ಪಡೆಯಲಿದ್ದಾರೆ. ಸೋಮವಾರ ಈ ವಿಚಾರಣೆ ನಡೆಯಲಿದೆ. ಅಂದು ಭರತನ ಬಾಯಿಂದಲೇ ರಾಕಿಂಗ್ ಸ್ಟಾರ್ ಕೊಲೆಗೆ ಸುಪಾರಿ ನೀಡಿದ ಸ್ಯಾಂಡಲ್ ವುಡ್ ನವರ್ಯಾರೆಂಬ ವಿಚಾರವೂ ಜಾಹೀರಾಗೋ ಸಂಭವವಿದೆ.
No Comment! Be the first one.